ಮೈಸೂರಿನ ಫೊಟೋಗ್ರಾಫರ್ ಕೊಲೆ ಪ್ರಕರಣದ ತನಿಖೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ

0

ಪುತ್ತೂರು:8ತಿಂಗಳ ಹಿಂದೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಕೊಲೆ ಪ್ರಕರಣದ ತನಿಖೆಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಮಂಗಳೂರಿನ ಹಿರಿಯ ಕಾನೂನು ಅಧಿಕಾರಿ ಕೆ.ಶಿವಪ್ರಸಾದ್ ಆಳ್ವ ಅವರನ್ನು ನಿಯೋಜಿಸಲಾಗಿದೆ.


ಈ ಪ್ರಕರಣದಲ್ಲಿ ಸಂಬಂಧಪಟ್ಟ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಪುತ್ತೂರು ಮೂಲದ ಕೆ.ಶಿವಪ್ರಸಾದ್ ಆಳ್ವ ಅವರನ್ನು ನಿಯೋಜಿಸಿ ಸರ್ಕಾರದ ಅಧೀನ ಕಾರ್ಯದರ್ಶಿ(ಪೊಲೀಸ್ ಸೇವೆಗಳು-ಬಿ)ಒಳಾಡಳಿತ ಇಲಾಖೆಯ ಬಾಣದರಂಗಯ್ಯ ಎನ್.ಆರ್.ಅವರು ಆದೇಶಿಸಿದ್ದಾರೆ.

೨2021ರ ನವೆಂಬರ್ 18ರಂದು ಕುಂಜೂರುಪಂಜಕ್ಕೆಂದು ಬಂದಿದ್ದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಅವರು ನಾಪತ್ತೆಯಾಗಿದ್ದರು.ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ವಾಸ ಮಾಡಿಕೊಂಡಿದ್ದು ಮೈಸೂರಿನಲ್ಲಿ ಫೊಟೋಗ್ರಾಫರ್ ಆಗಿ ವೃತ್ತಿ ನಿರ್ವಹಿಸುತ್ತಾ ಜನಪ್ರಿಯರಾಗಿದ್ದ ಮಂಗಳೂರು ಮೂಲದ ಜಗದೀಶ್(58ವ.)ಅವರನ್ನು ನೆಟ್ಟಣಿಗೆಮುಡ್ನೂರು ಗ್ರಾಮದ ಪಟ್ಲಡ್ಕ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ, ಆತನ ಮಗ ಪ್ರಶಾಂತ್, ಪತ್ನಿ ಜಯಲಕ್ಷ್ಮೀ ಮತ್ತು ಹತ್ತಿರದ ಮನೆಯ ಸಂಜೀವ ಗೌಡ ಪಟ್ಲಡ್ಕ ಅವರ ಮಗ ಜೀವನ್ ಪ್ರಸಾದ್ ಸೇರಿ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಮನೆ ಸಮೀಪದ ಕಾಡು ಪ್ರದೇಶದಲ್ಲಿ ಗುಂಡಿ ತೆಗೆದು ಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.ಈ ಕುರಿತು ಮೃತರ ಅಣ್ಣ, ಮಂಗಳೂರು ತಾಲೂಕು ಕಾವೂರು ಗ್ರಾಮದ ಶಿವನಗರ ಮುಲ್ಲಕಾಡು ಸಿಂಧೂರ ಮನೆ ದಿ.ಶಂಭು ಶೆಟ್ಟಿಯವರ ಮಗ ಶಶಿಧರ(60ವ.)ಅವರು ನೀಡಿರುವ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿರುವ ಸರಕಾರಿ ರಕ್ಷಿತಾರಣ್ಯ ಜಾಗದಲ್ಲಿ ಜಗದೀಶ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.ಈ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಅನಿಲೆ ಜಯರಾಜ್ ರೈ ಎಂಬವರನ್ನು ಪೊಲೀಸರು ಬಂಧಿಸಿದ್ದು ಅವರು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

LEAVE A REPLY

Please enter your comment!
Please enter your name here