ಪುತ್ತೂರು: ಶತಮಾನದ ಹಿಂದೆ ಪ್ರಾರಂಭಗೊಂಡ ದ.ಕ.ಜಿಲ್ಲಾ ವಿದ್ಯಾ ಸಂಘ ರಿ ಸುಳ್ಯ ಇದರ ಆಶ್ರಯದಲ್ಲಿರುವ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಪ್ರಸ್ತುತ ವರ್ಷ ನಡೆದ ಕ್ಯಾಂಪಸ್ ಸಂದರ್ಶನದ ಆಯ್ಕೆಯಲ್ಲಿ ಸಂಸ್ಥೆಯಿಂದ ಶೇ.100 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 1986ರಲ್ಲಿ ಕೊಂಬೆಟ್ಟಿನಲ್ಲಿ ಆಸುಪಾಸಿನ ಸಾಮಾನ್ಯ ವರ್ಗದವರಿಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಅನುದಾನಿತ ಸಂಸ್ಥೆಯಾಗಿರುವ ಇಲ್ಲಿ ಪ್ರಸ್ತುತ ಡ್ರಾಫ್ಟ್ಮನ್, ಸಿವಿಲ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ಮುಂತಾದ ಘಟಕಗಳಿದ್ದು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಿಂದ ಲ್ಯಾಬ್ಗಳು, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಅನುಭವಿ ಅಧ್ಯಾಪಕ ವೃಂದ ಕೆಲಸ ನಿರ್ವಹಿಸುತ್ತಿದೆ. ತರಬೇತಿಯ ಪ್ರತಿ ಅಂತಿಮ ವರ್ಷದಲ್ಲಿ ಉದ್ಯೋಗ ಭರವಸೆ ನೀಡುವ ಅಂಗವಾಗಿ ಕ್ಯಾಂಪಸ್ ಅಧಿಕಾರಿ ಹರೀಶ್ ಬಿ.ಕೆ ನೇತೃತ್ವದಲ್ಲಿ ಕ್ಯಾಂಪಸ್ ಸಂದರ್ಶನವನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಪ್ರಸ್ತುತ ವರ್ಷ ಬೆಂಗಳೂರಿನ ಭಾರತ್ ಇಲೆಕ್ಟ್ರಾನಿಕ್ಸ್, ಅಲ್ಬಿಗ್ರೀನ್ ಡ್ರೈನ್ ಇಲೆಕ್ಟ್ರಿಕ್, ಟೋಯೋಟಾ ಕಿರ್ಲೊಸ್ಕರ್ ಮೆಷಿನರಿ, ಮಂಗಳೂರಿನ ಧರ್ಮರಾಜ್ ಅಸೋಸಿಯೇಟ್ಸ್ ಮುಂತಾದ ಸಂಸ್ಥೆಗಳಿಗೆ ನಮ್ಮ ಸಂಸ್ಥೆಯ ಎಲ್ಲಾ 64 ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಾಗಿರುತ್ತಾರೆ ಎಂದು ಹೇಳಿದರು.
ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರವಾಗಿ ಮಾನ್ಯತೆ ಪಡೆದಿದೆ:
ಸಂಸ್ಥೆಯು ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದ್ದು, ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನೀಡಲಾಗುವ ವಿದ್ಯಾರ್ಥಿ ವೇತನ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡುವ ಸೌಲಭ್ಯಗಳು ಸಿಗುತ್ತವೆ. ಜೊತೆಗೆ ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರವಾಗಿ ಈ ಸಂಸ್ಥೆ ಮಾನ್ಯತೆ ಪಡೆದಿದೆ ಎಂದು ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ ಅವರು ತಿಳಿಸಿದರು.
ಐಟಿಐ ಮಾಡಿದವರಿಗೆ ಬಹಳಷ್ಟು ಅವಕಾಶವಿದೆ:
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ. ಇಂತಹ ಕೈಗಾರಿಕೆಗಳಿಗೆ ಐಟಿಐ ಬೆನ್ನೆಲುಬು. ಆದರೆ ಗ್ರಾಮಾಂತರ ಭಾಗದಲ್ಲೂ ಇವತ್ತು ಐಟಿಬಿಟಿಯನ್ನೇ ಜನ ನಂಬಿರುವಂತಹದ್ದು, ಆದರೆ ಐಟಿಐ ಮಾಡಿದರೂ ಅವಕಾಶವಿದೆ ಎಂದು ಜನರು ಅರಿಯಬೇಕಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಚಿದಾನಂದ ಬೈಲಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರು ಮತ್ತು ಜೊತೆ ಕಾರ್ಯದರ್ಶಿಯಾಗಿರುವ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ನಿರ್ದೇಶಕರು ಮತ್ತು ಖಜಾಂಜಿಯಾಗಿರುವ ಮಾಧವ ಗೌಡ ಬೆಳ್ಳಾರೆ ಉಪಸ್ಥಿತರಿದ್ದರು.