ಕಾಣಿಯೂರು, ಬೆಳಂದೂರು, ಚಾರ್ವಾಕ ಸುತ್ತಮುತ್ತ ಮುಂದುವರಿದ ವರುಣದ ಆರ್ಭಟ

0

  • ಶಾಂತಿಮೊಗರು ಕುಮಾರಧಾರ ನದಿಯಲ್ಲಿ ಮೈದುಂಬಿ ಹರಿಯಿತು ನೀರು-  ಕಾಣಿಯೂರು- ಮಾದೋಡಿ ರಸ್ತೆ ಬ್ಲಾಕ್- ಕೃಷಿ ತೋಟಗಳಿಗೂ ನುಗ್ಗಿದ ನೀರು..

 

ಕಾಣಿಯೂರು : ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಣಿಯೂರು ಸುತ್ತ ಮುತ್ತಲಿನ ಪ್ರದೇಶದ ನದಿಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೃಷಿ ತೋಟಗಳು ಜಲಾವೃತಗೊಂಡಿದೆ. ಕುಮಾರಧಾರಾ ನದಿಯಲ್ಲಿ ಮೈದುಂಬಿ ನೀರು ಹರಿಯುತ್ತಿದ್ದು, ಜು 5ರಂದು ಅಪಾಯಕಾರಿ ಮಟ್ಟವನ್ನು ತಲುಪಿದೆ. ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ನೀರಿನ ಪ್ರವಾಹ ಹೆಚ್ಚಾಗಿದ್ದು, ಶಾಂತಿಮೊಗರು ಎಂಬಲ್ಲಿ ನದಿಯ ನೆರೆ ನೀರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಹೊರಗಿನ ಅಂಗಣದ ಸಮೀಪದವರೆಗೂ ನದಿಯಲ್ಲಿ ನೀರು ಧುಮ್ಮುಕ್ಕಿ ಹರಿಯುತ್ತಿದ್ದು, ತೋಡೆಗೋಡೆ ಇಲ್ಲದೇ ಧರೆ ಕುಸಿಯುವ ಭೀತಿ ಎದುರಾಗಿದೆ. ಇಲ್ಲಿನ ಕೃಷಿ ತೋಟಗಳಿಗೂ ನೀರು ನುಗ್ಗಿದೆ. ನದಿ ಪಾತ್ರದಲ್ಲಿರುವ ಮನೆಯವರು ನೀರಿನ ಮಟ್ಟ ಏರುತ್ತಿರುವುದನ್ನು ಕಂಡು ಆತಂಕಕ್ಕೀಡಾಗಿದ್ದಾರೆ. ಶಾಂತಿಮೊಗರು ಸೇತುವೆ ಬಳಿ ನೀರು ನೋಡಲೆಂದೆ ಜನ ತಂಡೊಪತಂಡವಾಗಿ ಆಗಮಿಸುತ್ತಿದ್ದಾರೆ.

ಹೊಳೆ ಬದಿಯಲ್ಲಿಯೇ ಅಪಾಯಕಾರಿ ತಿರುವು…ಆತಂಕದಲ್ಲಿ ಪ್ರಯಾಣಿಕರು…
ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಣಿಯೂರು- ಮಾದೋಡಿ ರಸ್ತೆ ಬ್ಲಾಕ್ ಆಗಿದೆ. ಮಳೆಗಾಲ ಆರಂಭ ಆಯಿತೆಂದರೆ ಈ ರಸ್ತೆ ಯಾವ ಹೊತ್ತಿಗೆ ಬ್ಲಾಕ್ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕಾಣಿಯೂರು – ಮಾದೋಡಿ – ಪೆರುವಾಜೆ- ಬೆಳ್ಳಾರೆ ಹಾಗೂ ಕಾಣಿಯೂರು -ನೀರಜರಿ-ಅಬೀರ ಸಂಪರ್ಕ ರಸ್ತೆಯ ಮೂಲಕ ಸಂಚಾರಿಸುವ ಅದೇಷ್ಟೋ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಕಾಣಿಯೂರಿನಿಂದ ಸ್ವಲ್ಪ ದೂರದಲ್ಲಿಯೇ ರೈಲ್ವೆ ಸೇತುವೆಯ ಕೆಲಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇರುವ ಹೊಳೆಯಲ್ಲಿ ನೀರು ಹರಿದು ಹೋಗುತ್ತಿದ್ದು. ಪ್ರತಿ ಭಾರಿಯು ಮಳೆಗಾಲದಲ್ಲಿ ರಸ್ತೆಯು ಮುಳುಗಡೆಯಾಗುವುದು ಸಾಮಾನ್ಯ. ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದ ಬಂದ ವಿಪರಿತ ನೆರೆ ನೀರಿಗೆ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ. ಈ ಸಂಪರ್ಕ ರಸ್ತೆಯಲ್ಲಿ ತಿರುವು ಕೂಡ ಇದ್ದು ರಾತ್ರಿ ಹೊತ್ತು ಮಳೆಗಾಲದಲ್ಲಿ ಸಂಪರ್ಕಿಸಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ವಾಹನಗಳು ಮಾತ್ರವಲ್ಲ ಸಾರ್ವಜನಿಕರು ತೆರಳುವ ದಾರಿಯೂ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಳೆಗಾಲದಲ್ಲಿ ರಸ್ತೆಯು ಮುಳುಗುವುದರಿಂದ ಆತಂಕದಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇಲ್ಲಿಯಾದ್ದಾಗಿದೆ.

ಕೃಷಿ ತೋಟಕ್ಕೂ ನುಗ್ಗಿದ ನೀರು: ಕಾಣಿಯೂರು, ಬೆಳಂದೂರು, ಚಾರ್ವಾಕ, ಖಂಡಿಗ, ನಾಣಿಲ ಹಾಗೂ ದೋಳ್ಪಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ನದಿಯ ನೆರೆನೀರು ಬಂದು ಕೃಷಿ ತೋಟ ಮುಳುಗಡೆಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಪಕ್ಕದಲ್ಲಿರುವ ಕೃಷಿ ತೋಟಗಳೂ ಜಲಾವೃತಗೊಂಡಿರುವ ದೃಶ್ಯ ಕಾಣುತ್ತಿವೆ.

LEAVE A REPLY

Please enter your comment!
Please enter your name here