ಕೊಳ್ತಿಗೆ:ತೋಟದ ಗೋದಾಮಿನಿಂದ ಕಾಳು ಮೆಣಸು ಕಳ್ಳತನ-ನಾಲ್ಕು ಮಂದಿ ಆರೋಪಿಗಳ ಬಂಧನ

0

  • ಕಾಳು ಮೆಣಸು, ಸಾಗಾಟಕ್ಕೆ ಬಳಸಲಾದ ಕಾರು ವಶ- ಆರೋಪಿಗಳು ನ್ಯಾಯಾಲಯಕ್ಕೆ

ಪುತ್ತೂರು:ಕೊಳ್ತಿಗೆ ಗ್ರಾಮದ ಕುದ್ಕುಳಿಯಲ್ಲಿ ತೋಟದ ಗೋದಾಮಿನಿಂದ ಕಾಳು ಮೆಣಸು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಳ್ತಿಗೆ ನಿವಾಸಿ ಸಹಿತ ನಾಲ್ಕು ಮಂದಿ ಆರೋಪಿಗಳನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ಕಳವು ಮಾಡಲಾದ ಕಾಳು ಮೆಣಸು ಮತ್ತು ಅದರ ಸಾಗಾಟಕ್ಕೆ ಬಳಸಲಾಗಿದ್ದ ಕಾರೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಕಳಂಜಿ ಜೋಗಿ ಬಿ.ಆರ್.ಎಂಬವರ ಮಗ ಮಂಜು ಬಿ.,ಸುಳ್ಯ ಕೊಡಿಯಬೈಲು ಬಾಬು ಎಂಬವರ ಮಗ ಪ್ರವೀಣ, ಜಾಲ್ಸೂರು ಗ್ರಾಂದ ಬರ್ಪೆಡ್ಕ ನಾಗರಾಜ್ ಎಂಬವರ ಮಗ ಪವನ್ ಕುಮಾರ್ ಮತ್ತು ಕೊಳ್ತಿಗೆ ಗ್ರಾಮದ ನೀಟಡ್ಕದ ಕುಂಞಿ ಎಂಬವರ ಮಗ ಅಬ್ದುಲ್ ಬಾಶೀತ್ ಬಂಧಿತ ಆರೋಪಿಗಳು.


ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಗೋದಾಮುನಿಂದ, ೧೦ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ೨೫೦ ಕೆ.ಜಿ ಕಾಳು ಮೆಣಸನ್ನು ಜೂ.೧೫ರಿಂದ ಜು.೩ರ ನಡುವೆ ಕಳ್ಳತನ ಮಾಡಲಾಗಿತ್ತು.ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ ರೂ.೧,೧೮,೭೫೦ ಆಗಿತ್ತು.ಘಟನೆ ಕುರಿತು ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೀಟಡ್ಕದ ಆದಂ ಎಂಬವರು ನೀಡಿದ್ದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಬೆಳ್ಳಾರೆ ಠಾಣಾ ಪೊಲೀಸ್ ಉಪನಿರೀಕ್ಷಕ ರುಕ್ಮ ನಾಯ್ಕರವರು ಸಂಶಯಿತ ಆರೋಪಿಯಗಳ ಬಗ್ಗೆ ಖಚಿತ ಮಾಹಿತಿ ಪಡೆದು ಜು.೪ರಂದು ಅಡ್ಕಾರ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರ್ (ಕೆಎಲ್:೬೦ಡಿ-೭೦೮೯)ನ್ನು ನಿಲ್ಲಿಸಿ ಅದರಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಕಳವು ಮಾಡಿ ಆರೋಪಿ ಪವನ್ ಕುಮಾರ್‌ನ ಮನೆಯಲ್ಲಿ ಬಚ್ಚಿಟ್ಟಿದ್ದ ೧೦ ಗೋಣಿ ಕಾಳು ಮೆಣಸನ್ನು ಹಾಗೂ ಕಾಳು ಮೆಣಸು ಸಾಗಾಟ ಮಾಡಲು ಉಪಯೋಗಿಸಿದ್ದ ಕಾರನ್ನು(ಕೆಎಲ್ ೬೦:ಡಿ-೭೦೮೯)ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕಾರಿನ ಮೌಲ್ಯ ೬೦ ಸಾವಿರ ರೂ.ಗಳಾಗಿದ್ದು ಕಾಳು ಮೆಣಸಿನ ಮೌಲ್ಯ ರೂ.೧,೧೮,೭೫೦ ಎಂದು ಅಂದಾಜಿಸಲಾಗಿದೆ.ಈ ಪ್ರಕಣರದ ಕೃತ್ಯದಲ್ಲಿ ಇನ್ನೊಬ್ಬ ಅಪ್ರಾಪ್ತ ಬಾಲಕನು ಭಾಗಿಯಾಗಿರುತ್ತಾನೆ.ಬಂಧಿತ ಆರೋಪಿಗಳನ್ನು ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕ ಸೋನಾವಣೆ ರಿಷಿಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನಾ ಪಿ.ಕುಮಾರಿರವರ ಆದೇಶದಂತೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿಯವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಳ್ಳಾರೆ ಠಾಣಾ ಎಸ್.ಐ.ರುಕ್ಮ ನಾಯ್ಕ್, ಸಿಬ್ಬಂದಿಗಳಾದ ಎ.ಎಸ್.ಐ ನಾರಾಯಣ, ಹೆಚ್‌ಸಿಗಳಾದ ಬಾಲಕೃಷ್ಣ, ನವೀನ್, ಸತೀಶ, ಪಿಸಿಗಳಾದ ಮಂಜುನಾಥ, ಚಂದ್ರಶೇಖರ, ಪ್ರವೀಣ ಕಮಾರ್, ಶ್ರೀಶೈಲ, ಮಂಜುನಾಥ ಹೆಚ್.ಜೆ ಹಾಗೂ ವಾಹದ ಚಾಲಕರಾದ ಪುರಂದರರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಜಿಲ್ಲಾ ಗಣಕಯಂತ್ರದ ದಿವಾಕರ ಹಾಗೂ ಸಂಪತ್ ಆರೋಪಿಗಳ ಪತ್ತೆಗೆ ಸಹಕರಿಸಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here