ಸವಣೂರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ

0

ಸವಣೂರಿಗೆ ಆಧಾರ್‌ತಿದ್ದುಪಡಿ ಕೇಂದ್ರ, ಇನ್ನೊಂದು ಬ್ಯಾಂಕ್‌ ಬೇಕು-ನಿರ್ಣಯ

ಸವಣೂರು : ಮೂರು ಗ್ರಾಮಗಳ ವ್ಯಾಪ್ತಿ ಹೊಂದಿರುವ ಸವಣೂರು ಗ್ರಾ.ಪಂ.ನ ಕೇಂದ್ರ ಸ್ಥಾನದಲ್ಲಿ ಆಧಾರ್‌ಕಾರ್ಡ್‌ ತಿದ್ದುಪಡಿ ಕೇಂದ್ರ ಹಾಗೂ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ಬೇಕು ಎಂಬ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ.ಸಾಮಾನ್ಯ ಸಭೆಯ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗಿರಿಶಂಕರ ಸುಲಾಯ ಅವರು ಹೆಚ್ಚು ಜನಸಂಖ್ಯೆ ಇರುವ ಸವಣೂರಿಗೆ ಅಗತ್ಯವಾಗಿ ಆಧಾರ್‌ತಿದ್ದುಪಡಿ ಕೇಂದ್ರ ಬೇಕು. ಜೊತೆಗೆ ಸವಣೂರಿಗೆ ಹೊಸದೊಂದು ರಾಷ್ಟ್ರೀಕೃತ ಬ್ಯಾಂಕ್‌ ಬೇಕು. ಈಗಿರುವ ಬ್ಯಾಂಕಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದ್ದು, ಈ ನಿಟ್ಟಿನಲ್ಲಿ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ ಬೇಕೆಂದು ಸರಕಾರಕ್ಕೆ ಬರೆದುಕೊಳ್ಳುವಂತೆ ಹೇಳಿದರು.

ಪುಣ್ಚಪ್ಪಾಡಿ ಶಾಲೆಗೆ ಹೋಗುವ ಮಕ್ಕಳಿಗೆ ದಾರಿಯಿಲ್ಲ

ಪುಣ್ಚಪ್ಪಾಡಿ ಸರಕಾರಿ ಶಾಲೆಗೆ ಹೋಗುವ 7 ಮಕ್ಕಳಿಗೆ ದಾರಿಯಿಲ್ಲದೇ ಶಾಲೆಗೆ ಹೋಗಲು ಸಮಸ್ಯೆಯಾಗಿದೆ. ಮಕ್ಕಳು ಶಾಲೆಗೆ ಸುತ್ತು ಬಳಸಿ ಹೋಗುವಂತಾಗಿದೆ. ಕೂಡಲೇ ಸಮಸ್ಯೆ ಪರಿಹರಿಸುವಂತೆ ಸದಸ್ಯ ಬಾಬು ಎನ್‌ಹೇಳಿದರು.

ಉಪ್ಪಳಿಗೆ ಅಂಬೇಡ್ಕರ್‌ಭವನ ದುರಸ್ತಿ ಪಡಿಸಿ

ಪಾಲ್ತಾಡಿ ಗ್ರಾಮದ ಉಪ್ಪಳಿಗೆಯ ಅಂಬೇಡ್ಕರ್‌ ಭವನಕ್ಕೆ ಗಾಳಿ-ಮಳೆಗೆ ಮರಬಿದ್ದು ಹಾನಿಯಾಗಿದೆ. ಕೂಡಲೇ ಇದನ್ನು ದುರಸ್ತಿ ಪಡಿಸುವಂತೆ ಸದಸ್ಯ ಭರತ್‌ ರೈ ಕಲಾಯಿ ಹೇಳಿದರು.

ಪಾಲ್ತಾಡಿ ಶಾಲಾ ಬಳಿಯಿರುವ ವಿದ್ಯುತ್‌ ಪರಿವರ್ತಕದ ಪಕ್ಕವಿರುವ ಮರವನ್ನು ತೆರವು ಮಾಡುವಂತೆ ಸದಸ್ಯ ತಾರಾನಾಥ ಸುವರ್ಣ ಹೇಳಿದರು. ಮಾಡಾವು-ಉಪ್ಪಳಿಗೆ-ದೇವಳಿಕೆಯ ವಿದ್ಯುತ್‌ ಮಾರ್ಗದ ಹಳೆಯ ತಂತಿಗಳನ್ನು ತೆರವು ಮಾಡುವಂತೆ ಸದಸ್ಯ ಭರತ್‌ ರೈ ಹೇಳಿದರು. ಉಪ್ಪಳಿಗೆ-ಕಲ್ಲಗಂಡಿ-ಪಾಲ್ತಾಡಿ ರಸ್ತೆಯನ್ನು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಅನುದಾನದಲ್ಲಿ ಅಭಿವೃದ್ದಿ ಪಡಿಸಲು ಬರೆದುಕೊಳ್ಳುವಂತೆ ತಾರಾನಾಥ ಸುವರ್ಣ ಹೇಳಿದರು.

ಪ.ಜಾ, ಪ.ಪಂ. ಭೂಪರಿವರ್ತನೆ ಸಮಸ್ಯೆ

ಸದಸ್ಯ ಬಾಬು ಎನ್.ಮಾತನಾಡಿ, ಪ.ಜಾ, ಪ.ಪಂ.ದವರಿಗೆ ಭೂ ಪರಿವರ್ತನೆ, ಪರಭಾರೆಗೆ ಅವಕಾಶ ಮಾಡಿಕೊಡುವಂತೆ ನಿರ್ಣಯಿಸಿ ಸರಕಾರಕ್ಕೆ ಬರೆದುಕೊಳ್ಳಬೇಕೆಂದು ಹೇಳಿದರು. ಉಚಿತ ವಿದ್ಯುತ್‌ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಇನ್ನೂ ಒಂದು ತಿಂಗಳು ಮುಂದುವರಿಸಬೇಕು.

ಮಾಂತೂರು ಅಂಗನವಾಡಿ ಬಳಿ ಅಪಾಯಕಾರಿ ಮರವಿದ್ದು, ಅದನ್ನು ತೆರವು ಮಾಡಬೇಕು. ಮಾಂತೂರು ಅಂಬೇಡ್ಕರ್‌ ಭವನಕ್ಕೆ ಆವರಣ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಸವಣೂರು-ಬೆಳ್ಳಾರೆ ಮಾರ್ಗದಲ್ಲಿ ಸಂಜೆ 5.30ರ ಬಳಿಕ ಯಾವುದೇ ಬಸ್‌ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗುತ್ತಿದ್ದು, ಈ ಹಿಂದೆ ಇದ್ದ ಬಸ್‌ ವ್ಯವಸ್ಥೆ ಮತ್ತೆ ಆರಂಭಿಸಬೇಕು ಎಂದು ಬಾಬು ಎನ್‌ ಹೇಳಿದರು.

ಪಾಲ್ತಾಡಿಯ ಮಂಜುನಾಥನಗರಕ್ಕೆ ಮೊಬೈಲ್‌ ಟವರ್‌ ಬೇಕೆಂದು ಸದಸ್ಯೆ ಸುಂದರಿ ಬಿ.ಎಸ್‌ ಹೇಳಿದರು.

9/11 ಮಾಡಲು ಈ ಹಿಂದಿನಂತೆ ಗ್ರಾ.ಪಂ.ಗೆ ಅವಕಾಶ ನೀಡುವಂತೆ ಆದೇಶ ಹೊರಡಿಸುವಲ್ಲಿ ಕಾರಣರಾದ ಸಂಸದರಿಗೆ, ಸಚಿವರಿಗೆ, ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಸದಸ್ಯ ಸತೀಶ್‌ ಅಂಗಡಿಮೂಲೆ ಹೇಳಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಕಟ್ಟಡ ನಿರ್ಮಾಣ ಅವಕಾಶವಿದ್ದು, ಗ್ರಾ.ಪಂ.ಗೆ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಬರೆದುಕೊಳ್ಳಬೇಕು ಎಂದು ಸತೀಶ್‌ ಆಂಗಡಿಮೂಲೆ ಹೇಳಿದರು.

ಸದಸ್ಯೆ ಯಶೋದಾ ಮಾತನಾಡಿ, ಸವಣೂರು-ಪುಣ್ಚಪ್ಪಾಡಿ-ಮಾಡಾವು ರಸ್ತೆಯನ್ನು ಅಗಲೀಕರಣ ಮಾಡಿ ಚರಂಡಿ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಬರೆದುಕೊಳ್ಳುವಂತೆ ಹೇಳಿದರು.

ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಡಿವೈಡರ್‌ ಅಳವಡಿಸುವಂತೆ, ಆರೇಲ್ತಡಿ ಸರಕಾರಿ ಶಾಲೆಗೆ ಕೊಠಡಿ ಮಂಜೂರಾತಿಗಾಗಿ ಇಲಾಖೆಗೆ ಬರೆದುಕೊಳ್ಳುವಂತೆ ಸದಸ್ಯ ತೀರ್ಥರಾಮ ಕೆಡೆಂಜಿ ಹೇಳಿದರು.

ಮೆಸ್ಕಾಂ ಪಕ್ಕವೇ ತಂತಿ ನೇತಾಡುತ್ತಿದೆ !

ಸವಣೂರಿನ ಮಾಂತೂರಿನಲ್ಲಿರುವ ಮೆಸ್ಕಾಂ ಸಬ್‌ ಸ್ಟೇಷನ್‌ ಬಳಿಯಲ್ಲಿ ವಿದ್ಯುತ್‌ ತಂತಿ ನೇತಾಡುತ್ತಿದೆ, ಇದನ್ನು ಬದಲಾಯಿಸಬೇಕು, ಲೋಕೋಪಯೋಗಿ ರಸ್ತೆಯ ಚರಂಡಿಯನ್ನು ದುರಸ್ತಿ ಪಡಿಸಬೇಕು.94c ಫಲಾನುಭವಿಗಳ ಗ್ರಾಮವಾರು ಪಟ್ಟಿ ನೀಡುವಂತೆ, ಸವಣೂರು-ಪುತ್ತೂರು ಮುಖ್ಯರಸ್ತೆಯ ಪಣೆಮಜಲಿನಲ್ಲಿರುವ ತಿರುವನ್ನು ತೆರವು ಮಾಡುವಂತೆ ಸದಸ್ಯ ಎಂ.ಎ.ರಫೀಕ್‌ ಹೇಳಿದರು.

ಸದಸ್ಯ ಅಬ್ದುಲ್‌ ರಝಾಕ್‌ ಕೆನರಾ ಮಾತನಾಡಿ, ಶಾಂತಿನಗರದಲ್ಲಿರುವ ಹಳೆಯ ನೀರಿನ ಟ್ಯಾಂಕ್‌ ತೀರಾ ಶಿಥಿಲಾವಸ್ಥೆಗೆ ತಲುಪಿದ್ದು ಅದನ್ನು ಕೂಡಲೇ ತೆರವು ಮಾಡಬೇಕು, ಇಲ್ಲದಿದ್ದಲ್ಲಿ ಅಪಾಯ ಸನ್ನಿಹಿತ ಎಂದರು.

ಸವಣೂರಿನ ಸರಕಾರಿ ಶಾಲೆ ಮಾದರಿ ಶಾಲೆಯಾಗಿ ಆಯ್ಕೆಯಾಗಿದ್ದು, ಹಾಸ್ಟೆಲ್‌ ಮಂಜೂರಾಗುವ ಸಾಧ್ಯತೆ ಇದೆ ಎಂದು ಗಿರಿಶಂಕರ ಸುಲಾಯ ಹೇಳಿದರು.

ಪುಣ್ಚಪ್ಪಾಡಿ ಮಕ್ಕಳ ಪಾರ್ಕ್‌ ನ ಜಾಗದ ಗಡಿಗುರುತು ಮಾಡಬೇಕು, ಗ್ರಾ.ಪಂ.ನ ಕುಡಿಯುವ ನೀರಿನ ಬಿಲ್‌ ಮನ್ನಾ ಮಾಡಬೇಕು, ಹಲವು ಜನರಿಗೆ ಹೊಸ ರೇಶನ್‌ ಕಾರ್ಡ್‌ ಅದರೂ ಪಡಿತರ ದೊರಕುತ್ತಿಲ್ಲ ಎಂದು ಹೇಳುತ್ತಿದ್ದು, ಕಾರ್ಡ್‌ ಮಾಡಿಸಿ ಆಹಾರ ಇಲಾಖೆಯಲ್ಲಿ ನೊಂದಣಿ ಮಾಡಿಸಿದರೆ ಮಾತ್ರ ಪಡಿತರ ದೊರಕುವುದು ಇಂತಹ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗಬೇಕು, 94c, ಬೆಳಕು, ಅಕ್ರಮ-ಸಕ್ರಮ ಉತ್ತಮ ಯೋಜನೆಯಾಗಿದ್ದು, ಇದಕ್ಕಾಗಿ ಸರಕಾರವನ್ನು ಅಭಿನಂದಿಸುವುದಾಗಿ ಗಿರಿಶಂಕರ ಸುಲಾಯ ಹೇಳಿದರು.

ಘರ್‌ ಘರ್‌ ಝಂಡಾ ಉತ್ತಮವಾಗಿ ನಡೆಯಬೇಕು

ಪ್ರತಿಯೊಬ್ಬರ ಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜ ಹಾರಿಸುವ ಘರ್‌ ಘರ್‌ ಝಂಡಾ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಯಶಸ್ವಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು, ಜೋಡುಕಾವಲು ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಬೇಕು, ಕುಮಾರಮಂಗಲ-ಬಾಳೆ ಹಿತ್ಲುವಿನಲ್ಲಿ ವಿದ್ಯುತ್‌ ತಂತಿ ಬದಲಾವಣೆ ಮಾಡಬೇಕು ಎಂದು ಗಿರಿಶಂಕರ ಸುಲಾಯ ಹೇಳಿದರು.

ಮಕ್ಕಳಿಗೆ 5 ದಿನ ಮಾತ್ರ ಶಾಲೆ ಸಾಕು

ಶಾಲಾ ಮಕ್ಕಳಿಗೆ 5 ದಿನ ಮಾತ್ರ ಶಾಲೆಗಳಿಗೆ ಬರುವಂತಹ ನಿಯಮ ಬರಲಿ, ಸವಣೂರು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕೆಂದು ಗಿರಿಶಂಕರ ಸುಲಾಯ ಹೇಳಿದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್‌ ರಝಾಕ್‌, ಚೆನ್ನು ಮಾಂತೂರು, ಎಂ.ಎ.ರಫೀಕ್‌, ಸತೀಶ್‌ ಅಂಗಡಿಮೂಲೆ, ಸುಂದರಿ ಬಿ.ಎಸ್.‌, ತೀರ್ಥರಾಮ ಕೆಡೆಂಜಿ, ಹರೀಶ್‌ ಕೆ.ಜಿ, ತಾರಾನಾಥ ಸುವರ್ಣ, ಭರತ್‌ ರೈ, ಚೇತನಾ ಪಾಲ್ತಾಡಿ, ವಿನೋದಾ ಸಿ.ರೈ, ಚಂದ್ರಾವತಿ ಸುಣ್ಣಾಜೆ, ಯಶೋಧಾ, ಜಯಶ್ರೀ , ಆಯಿಶತ್‌ ಸಬೀನಾ, ಬಾಬು ಎನ್, ಇಂದಿರಾ ಬೇರಿಕೆ ಪಾಲ್ಗೊಂಡಿದ್ದರು.

ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿ, ಸಿಬಂದಿ ಪ್ರಮೋದ್‌ ಕುಮಾರ್‌ ರೈ ವಂದಿಸಿದರು. ಜಯಶ್ರೀ, ಜಯಾ ಕೆ. ಸಹಕರಿಸಿದರು.

LEAVE A REPLY

Please enter your comment!
Please enter your name here