ರಾಜ್ಯ ಸಭೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ: ಟ್ವಿಟ್ ಮೂಲಕ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

0

ಪುತ್ತೂರು:ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮೀಣಾಭಿವೃದ್ಧಿಯ ಹರಿಕಾರ ಪದ್ಮವಿಭೂಷಣ ರಾಜರ್ಷಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಮೂಲಕ ಮೋದಿ ಸರ್ಕಾರ ಖಾವಂದರ ಸಮಾಜಮುಖಿ ಕೆಲಸಗಳಿಗೆ ಬಹುದೊಡ್ಡ ಗೌರವ ಸಲ್ಲಿಸಿದೆ.ಪ್ರಧಾನಿ ನರೇಂದ್ರ ಮೋದಿಯವರೇ ಟ್ವೀಟ್ ಮೂಲಕ ಈ ವಿಷಯ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಗೆ ಕೇಂದ್ರ ಸರಕಾರ ರಾಜ್ಯಸಭೆಗೆ ನಾಮನಿರ್ದೇಶನದ ಗೌರವವನ್ನು ನೀಡಿದೆ.ಗ್ರಾಮೀಣಾಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ರುಡ್‌ಸೆಟ್, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಮಾಡುತ್ತಿರುವ ಡಾ|ಹೆಗ್ಗಡೆಯವರ ಸಾಧನೆಗೆ ಸಂದ ಗೌರವ ಇದಾಗಿದೆ.

ಧಾರ್ಮಿಕ ಕ್ಷೇತ್ರವಾಗಿ ಧರ್ಮಸ್ಥಳದ ಚತುರ್ವಿಧ ದಾನ ಪರಂಪರೆಯನ್ನು ಮತ್ತಷ್ಟು ಮೇಲ್ಮಟ್ಟಕ್ಕೇರಿಸಿದ್ದು ಮಾತ್ರವಲ್ಲದೇ, ಧರ್ಮೋತ್ಥಾನ ಟ್ರಸ್ಟ್ ಮೂಲಕ ಸಾವಿರಾರು ಧಾರ್ಮಿಕ ಕ್ಷೇತ್ರಗಳ ಏಳಿಗೆಗೆ ಕಾರಣರಾಗಿರುವುದಲ್ಲದೆ ಸಮಾಜದ ಸರ್ವತೋಮುಖ ಏಳಿಗೆಯನ್ನೇ ಬಯಸುತ್ತಾ ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸುತ್ತಿರುವ ‘ಮಾತನಾಡುವ ಮಂಜುನಾಥ’ ಎಂದೇ ಪ್ರಸಿದ್ಧರಾಗಿರುವ ಡಾ|ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಮೋದಿ ಸರ್ಕಾರಕ್ಕೆ ಹೊಸ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಡಾ|ಹೆಗ್ಗಡೆಯವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಡಾ|ಹೆಗ್ಗಡೆಯವರ ಪರಿಚಯ: ನವೆಂಬರ್ 25, 1948ರಂದು ಜನಿಸಿದ ವೀರೇಂದ್ರ ಹೆಗ್ಗಡೆಯವರು 20 ವರ್ಷದವರಿರುವಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದರು. ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿರುವ ಡಾ|ಹೆಗ್ಗಡೆಯವರು ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು. ಧರ್ಮಸ್ಥಳಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಜೊತೆಗೆ ವಸತಿ ಸಹಿತ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ.

ವಿದ್ಯಾಭ್ಯಾಸ: ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಜಿರೆಯಲ್ಲಿ ಪ್ರೌಢ ಶಿಕ್ಷಣ, ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ.ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ, ಸೈಂಟ್ ಜೋಸೆ- ಶಾಲೆಯಲ್ಲಿ ಶಿಕ್ಷಣ.1963ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆ ಬಳಿಕ ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ಶಿಕ್ಷಣ ಪ್ರವೇಶ ಪಡೆದು ಬಳಿಕ ಕಾಮರ್ಸ್ ಬೇಡವೆಂದು ಪಿಯುಸಿ ಬಳಿಕ ಕಲಾ ವಿಭಾಗವನ್ನು ಪ್ರವೇಶಿಸಿದ್ದರು.ನಂತರ ಬಿ.ಎ.ಪದವೀಧರರಾದರು.ಕಾನೂನು ಪದವಿ ಪಡೆಯುವ ಅವರ ಆಸೆಗೆ ಅರ್ಧಕ್ಕೆ ತೆರೆ ಬಿತ್ತು.ಅವರ ಬದುಕಿನಲ್ಲಿ ಅದು ಮಹತ್ವದ ತಿರುವು.ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ಗುರಿಯಾದರು.ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ತೊಡಗಿಸಿಕೊಂಡರು.1968ರಲ್ಲಿ ರತ್ನವರ್ಮ ಹೆಗ್ಗಡೆ ನಿಧನರಾದರು.ಆಮೇಲೆ ಅದೇ ವರ್ಷ ಅ.24ರಂದು ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಯಾಗಿ ನೇಮಕಗೊಂಡರು.ತಮ್ಮ 20ನೇ ವಯಸ್ಸಿನಲ್ಲಿಯೇ ಅವರು ಧರ್ಮಸ್ಥಳ ಶ್ರೀ ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.

ಗ್ರಾಮೀಣಾಭಿವೃದ್ಧಿಯ ಹರಿಕಾರ: ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಡಾ|ವೀರೇಂದ್ರ ಹೆಗ್ಗಡೆಯವರು ‘ಗ್ರಾಮೀಣಾಭಿವೃದ್ಧಿಯ ಹರಿಕಾರ’ ಎಂದೂ ಜನಪ್ರಿಯರಾಗಿದ್ದಾರೆ.1982ರಲ್ಲಿ ಆರಂಭಿಸಲ್ಪಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ 28 ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದಲ್ಲಿಯೂ ಲಕ್ಷಾಂತರ ಕುಟುಂಬಗಳು ಸ್ವಾವಲಂಬಿ, ಸ್ವಾಭಿಮಾನಿ ಜೀವನ ನಿರ್ವಹಿಸುವಂತೆ ಅನುಕೂಲತೆ ಕಲ್ಪಿಸಿಕೊಡಲಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಅದೆಷ್ಟೋ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ನಿರುಪಯುಕ್ತವಾಗಿರುವ ಸಾರ್ವಜನಿಕ ಕೆರೆಗಳ ಹೂಳೆತ್ತುವ ಕಾರ್ಯಕ್ರಮವನ್ನೂ ಯೋಜನೆಯ ಮೂಲಕ ಹಮ್ಮಿಕೊಂಡು ಕೆರೆಗಳನ್ನು ಉಪಯುಕ್ತಗೊಳಿಸುವ ಕೆಲಸವೂ ನಡೆಯುತ್ತಿದೆ.

ಮದ್ಯವರ್ಜನ ಶಿಬಿರ: ಜನಜಾಗೃತಿ ವೇದಿಕೆ ಮೂಲಕ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಈಗಾಗಲೇ ಸಾವಿರಾರು ಮಂದಿಯನ್ನು ಮದ್ಯಮುಕ್ತರನ್ನಾಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಕೊಂಡೊಯ್ಯುವ ಕೆಲಸವೂ ಡಾ|ಹೆಗ್ಗಡೆಯವರ ಯೋಚನೆಯಂತೆ ಯಶಸ್ವಿಯಾಗಿ ನಡೆಯುತ್ತಿದೆ.ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.

ಸಾಮೂಹಿಕ ವಿವಾಹ: 1972ರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ಆರಂಭಿಸಿದ್ದು ಈಗಾಗಲೇ ಸಾವಿರಾರು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿ ಯಶಸ್ವಿ ಜೀವನ ನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಪ್ರತಿವರ್ಷ ಸುಮಾರು ಐನೂರರಷ್ಟು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಾರೆ.
ಆರೋಗ್ಯ ಕ್ಷೇತ್ರಕ್ಕೆ ಡಾ|ಹೆಗ್ಗಡೆಯವರ ಕೊಡುಗೆ: ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ.ಸಂಚಾರಿ ಆಸ್ಪತ್ರೆಗಳು, ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮಂಗಳೂರು), ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಮಂಗಳೂರಿನ ಎಸ್.ಡಿ.ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸಂಸ್ಥೆಗಳು,ಕಾರ್ಯಕ್ರಮಗಳನ್ನು ಡಾ|ಹೆಗ್ಗಡೆಯವರು ನಡೆಸುತ್ತಾ ಬಂದಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆಅಪಾರ ಕೊಡುಗೆ: ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ.ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ, ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ.ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.

ಕಲೆ, ಸಂಸ್ಕೃತಿಯ ಉಳಿವಿಗೆ ಯೋಜನೆ: ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನದ ಉಳಿವು, ಬೆಳವಣಿಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳ ಸ್ಥಾಪನೆ ಮಾಡಿದ್ದು ಇತರ ಕಲೆ, ಸಂಸ್ಕೃತಿಯ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಧರ್ಮೋತ್ಥಾನ ಟ್ರಸ್ಟ್ ಮೂಲಕ ದೇವಾಲಯಗಳ ಜೀರ್ಣೋದ್ಧಾರ: ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು 1991ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ.ಧರ್ಮೋತ್ಥಾನ ಟ್ರಸ್ಟ್ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ.ಪೂಜೆ ನಡೆಯುವ ದೇವಸ್ಥಾನಕ್ಕೆ ಮೊದಲ ಆದ್ಯತೆ.ಈಗ ಈ ಸಂಖ್ಯೆ 171 ದಾಟಿದೆ.ಇವುಗಳಲ್ಲಿ ೧೫೪ ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ.

ಪರಿಹಾರ ಕಾರ್ಯಕ್ರಮಗಳು: ಧರ್ಮಸ್ಥಳ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಡಾ|ಹೆಗ್ಗಡೆಯವರು ಉತ್ತರ ಕರ್ನಾಟಕದಲ್ಲಿ ಕ್ಷಾಮ ಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1974ರ ಪ್ರವಾಹ ಮತ್ತು ಗದಗ್‌ನಲ್ಲಿ 1992ರಲ್ಲಿ ಪ್ರವಾಹ ಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದ್ದರು.ಮಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ಪ್ರವಾಹದ ಸಮಯದಲ್ಲೂ ಪುನರ್ನಿರ್ಮಾಣಕ್ಕಾಗಿ ಅಗತ್ಯ ನೆರವು ಒದಗಿಸಿದ್ದರು.

ಡಾ|ಹೆಗ್ಗಡೆಯವರಿಗೆ ಸಂದ ಗೌರವ, ಪ್ರಶಸ್ತಿಗಳು: ಡಾ|ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ, ಗೌರವಗಳನ್ನು ನೀಡಿ ಅಭಿನಂದಿಸಿವೆ.2015ರಲ್ಲಿ ಭಾರತ ಸರಕಾರದಿಂದ ಅತ್ಯುನ್ನತ ನಾಗರಿಕ ಪದವಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.1985ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು 1993ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರಿಂದ ರಾಜರ್ಷಿ ಗೌರವ ಡಾ|ಹೆಗ್ಗಡೆಯವರಿಗೆ ಸಂದಿವೆ.ಅನೇಕ ಧಾರ್ಮಿಕ ಮಠಗಳು ಇವರಿಗೆ ಧರ್ಮರತ್ನ, ಧರ್ಮಭೂಷಣ,ಅಭಿನವ ಚಾವುಂಡರಾಯ,ಪರೋಪಕಾರ ಧುರಂಧರ ಮೊದಲಾದ ಬಿರುದುಗಳನ್ನು ನೀಡಿ ಗೌರವಿಸಿವೆ.1994ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯೂ ಡಾ|ಹೆಗ್ಗಡೆಯವರಿಗೆ ದೊರಕಿತ್ತು.ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.2004ರಲ್ಲಿ ಇವರಿಗೆ ಕನ್ನಡದ ಟಿವಿ ಚಾನೆಲ್ ವರ್ಷದ ಕನ್ನಡಿಗ ಗೌರವ ಲಭಿಸಿದೆ. 2013ರಲ್ಲಿ ಮಧ್ಯಪ್ರದೇಶದ ಇಂಧೋರ್ ನಗರದ ಶ್ರೀ ಅಹಿಲೋತ್ಸವ ಸಮಿತಿ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ. 2011ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ ಕರ್ನಾಟಕ ಸರಕಾರ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ನೀಡಿ ಪುರಸ್ಕರಿಸಿದೆ. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಪ್ರತಿವರ್ಷ ನೀಡುವ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ 2011ನೇ ಸಾಲಿನಲ್ಲಿ ಡಾ| ಹೆಗ್ಗಡೆಯವರಿಗೆ ದೊರೆತಿದೆ. ಡಾ|ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್’ ಸಂಸ್ಥೆಯು ನೀಡುವ ಜಾಗತಿಕ ಹಸಿರು ಆಸ್ಕರ್ ಎಂದೇ ಪರಿಗಣಿಸಲಾದ 2012ರ ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿತ್ತು.ಖಾಸಗಿ ವಾಹಿನಿಯಾದ ಜೀ ಕನ್ನಡ ವಾಹಿನಿಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯೂ ಡಾ|ಹೆಗ್ಗಡೆಯವರಿಗೆ ದೊರೆತಿದೆ. ಏಷ್ಯಾ ವನ್ ಸಂಸ್ಥೆ ಕೊಡಮಾಡುವ ಆರನೇ ಆವೃತ್ತಿಯ 2020-21ರ ಸಾಲಿನ ‘ಏಷ್ಯಾದ ಶ್ರೇಷ್ಠ ನಾಯಕರು’ ಗೌರವವೂ ಡಾ|ಹೆಗ್ಗಡೆಯವರಿಗೆ ಸಂದಿದೆ

ಪ್ರಧಾನಿ ಅಭಿನಂದನೆ

ಸಂಸತ್ ಮೇಲ್ಮನೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.‘ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥಿಸಲು, ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತು.ಅವರು ಖಂಡಿತವಾಗಿಯೂ ಸಂಸದೀಯ ಕಲಾಪಗಳನ್ನು ಉತ್ಕೃಷ್ಟಗೊಳಿಸುತ್ತಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here