ಚೌಡೇಶ್ವರಿ ದೇವಸ್ಥಾನದ ಜಾಗ ಕಬಳಿಕೆಗೆ ಸಂಬಂಧಿಸಿ ವರದಿ ಸಲ್ಲಿಸದ ಆರೋಪ ; ತಹಶೀಲ್ದಾರ್ ಅಜಿತ್ ರೈ ವಿರುದ್ಧ ವಾರೆಂಟ್

0

ಪುತ್ತೂರು: ದೇವಸ್ಥಾನದ ಜಾಗ ಕಬಳಿಕೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸದ ಆರೋಪದಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಆಗಿರುವ ಪುತ್ತೂರು ಮೂಲದ ಅಜಿತ್ ಕುಮಾರ್ ರೈಯವರಿಗೆ ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯವು 25 ಸಾವಿರ ರೂ.ದಂಡ ವಿಧಿಸಿ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ.

2011 ರಲ್ಲಿ ಬಾಳಪ್ಪ ಹಂದಿಗುಂದ ತಹಶೀಲ್ದಾರ್ ಆಗಿದ್ದ ವೇಳೆ ದೇವಸ್ಥಾನಕ್ಕೆ ಸೇರಿದ ಸರಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಬಗ್ಗೆ ಬೆಳತ್ತೂರು ಪರಮೇಶ್ ಎಂಬವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಪ್ರಸ್ತುತ ತಹಶೀಲ್ದಾರ್ ಆಗಿರುವ ಸೊರಕೆ ಅಜಿತ್ ರೈ ಎಂಬವರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ ತಹಶೀಲ್ದಾರ್ ಹಾಜರಾಗದ ಹಿನ್ನೆಲೆಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯ ವಾರಂಟ್ ಜಾರಿ ಮಾಡಿದ್ದು, ಜು.19 ರ ಮೊದಲು 25 ಸಾವಿರ ರೂ. ದಂಡದ ಜೊತೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೆ.ಆರ್. ಪುರ ಪೊಲೀಸ್ ಠಾಣೆಗೆ ಆದೇಶ ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವೂ ನ್ಯಾಯಾಲಯವು ತಹಶೀಲ್ದಾರ್‌ಗೆ ದಂಡ ವಿಧಿಸಿ ಬಂಧನ ವಾರೆಂಟ್ ಜಾರಿ ಮಾಡಿತ್ತು. ಬೆಳತ್ತೂರು ಗ್ರಾಮದ ಸರ್ವೆ ನಂಬರ್ 57 ರ ಚೌಡೇಶ್ವರಿ ದೇವಾಲಯಕ್ಕೆ ಸೇರಿದ 2 ಎಕರೆ 26 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ಆರೋಪಿಸಿದ್ದರು.

LEAVE A REPLY

Please enter your comment!
Please enter your name here