ವಿವೇಕಾನಂದ ಕಾಲೇಜಿನಲ್ಲಿ ಮಾನ್ಸೂನ್ ಚೆಸ್ ಟೂರ್ನ್‌ಮೆಂಟ್ ಉದ್ಘಾಟನೆ

0

  • ಚದುರಂಗ ಉತ್ತಮ ಜೀವನ ಶೈಲಿಯನ್ನು ರೂಪಿಸುತ್ತದೆ-ಸುದರ್ಶನ್ ಕುಮಾರ್

 

ಪುತ್ತೂರು : ಚದುರಂಗ ಆಟ ಹಾಗೂ ಮಾನವನ ಜೀವನ ಶೈಲಿಗೆ ತುಂಬಾ ಹೋಲಿಕೆ ಇದೆ. ಒಮ್ಮೆ ಚದುರಂಗ ಆಡಲು ಆರಂಭಿಸಿದರೆ, ಉತ್ತಮ ಜೀವನ ಶೈಲಿಯನ್ನು ಚದುರಂಗ ಆಟವೇ ರೂಪಿಸುತ್ತದೆ. ಚದುರಂಗದಲ್ಲಿ ರಾಜನ ಪಾತ್ರ ಪ್ರಮುಖವಾಗಿದ್ದರೂ ಕೂಡಾ ರಾಣಿಯ ಪಾತ್ರವು ಜೊತೆಗಿದ್ದರೆ ಹೆಚ್ಚು ಬಲ. ಅಂತೆಯೇ ನಮ್ಮ ಜೀವನದಲ್ಲಿಯೂ ಪುರುಷರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಮಹಿಳೆಯರು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ನ್ಯಾಯವಾದಿ ಸುದರ್ಶನ್ ಕುಮಾರ್ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ 41ನೇ ಮಾನ್ಸೂನ್ ಚೆಸ್ ಟೂರ್ನ್‌ಮೆಂಟ್ ಉದ್ಘಾಟಿಸಿ ಮಾತನಾಡಿದರು. ಚದುರಂಗ ಸ್ಫರ್ಧೆಯು ನಮ್ಮೊಳಗೆ ಏಕಾಗ್ರತೆಯನ್ನು ಹೆಚ್ಚಿಸಲು ಬಹಳಷ್ಟು ಸಹಾಯವಾಗುತ್ತದೆ. ಹಾಗಾಗಿ ಕ್ರೀಡಾಳುಗಳು ನಿತ್ಯವೂ ಚೆಸ್ ಆಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ಚದುರಂಗದ ಆಟಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ರಾಜರುಗಳು ಸೇರಿಕೊಂಡು ಆಟವನ್ನು ಆಡುತ್ತಿದ್ದರು. ನಂತರ ಅಂತರಾಷ್ಟ್ರೀಯ ಚೆಸ್‌ಪಟು ವಿಶ್ವನಾಥ್ ಆನಂದ್‌ರಿಂದಾಗಿ ಈ ಆಟವು ಮತ್ತಷ್ಟು ಪ್ರಚಲಿತವಾಯಿತು. ಪ್ರಸ್ತುತ ಭಾರತ ದೇಶಕ್ಕೆ ಚೆಸ್ ಕ್ರೀಡೆಯಲ್ಲಿ ನಾಲ್ಕನೇಯ ಸ್ಥಾನಮಾನವನ್ನು ಗಳಿಸಿದೆ. ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವನ್ನು ಆಡಿ ದೇಶವನ್ನು ಮೊದಲನೇ ಸ್ಥಾನಕ್ಕೆ ತರಬೇಕು ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ ಚದುರಂಗದ ಆಟವನ್ನು ಆಡುತ್ತಿದ್ದಂತೆ ಏಕಾಗ್ರತೆಯು ಹೆಚ್ಚುತ್ತದೆ ಮತ್ತು ಇದು ಒಂದು ಮೆದುಳಿನ ಆಟವೆಂದೇ ಹೇಳಬಹುದು ಎಂದರು. ಕಾರ್‍ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೋ.ಶಿವಪ್ರಸಾದ್ ಕೆ.ಎಸ್, ಹಾಗೂ ಮಂಗಳೂರಿನ ಡೆರಿಕ್ ಚೆಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡೆರಿಕ್ ಪಿಂಟೋ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಡಾ.ಜ್ಯೋತಿ ಕುಮಾರಿ ವಂದಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್ ನಿಡ್ಪಳ್ಳಿ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here