ಅಕ್ರಮ‌ ಮದ್ಯ ಮಾರಾಟ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು

0

ಪುತ್ತೂರು: ಅಕ್ರಮ‌ ಮದ್ಯ ಸಾಗಾಟ ಪ್ರಕರಣದ ಆರೋಪಿಗೆ ಪುತ್ತೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
೨೦೨೨ರ ಜೂನ್ ೧ರಂದು ಸಂಜೆ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಕುಮಾರ್ ಸಿ. ಕಾಂಬ್ಲೆರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ‌ ಕಡಬ ತಾಲೂಕು ಶಿರಾಡಿ ಗ್ರಾಮದ ಉದನೆ-ಕುದ್ಕೋಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲಾಗಿತ್ತು. ಸಾರ್ವಜನಿಕ ರಸ್ತೆಯಲ್ಲಿ ಓರ್ವ ವ್ಯಕ್ತಿ ತನ್ನ ಕೈಯಲ್ಲಿ ಒಂದು ಪೊಲಿಥಿನ್ ಚೀಲ ಹಿಡಿದುಕೊಂಡು ನಿಂತಿದ್ದನ್ನು ನೋಡಿ ಬೆನ್ನಟ್ಟಿದಾಗ ಆತ ತನ್ನ ಕೈಯಲ್ಲಿದ್ದ ಚೀಲವನ್ನು ಸ್ಥಳದಲ್ಲಿಯೇ ಬಿಟ್ಟು ಅರಣ್ಯ ಪ್ರದೇಶದಲ್ಲಿ ಓಡಿ ಪರಾರಿಯಾಗಿದ್ದ. ಬಿಸಾಡಿ ಹೋದ ಚೀಲದಲ್ಲಿ 180 ಎಂ.ಎಲ್.ನ ಇಂಗ್ಲಿಷ್‌ನಲ್ಲಿ ಒರಿಜಿನಲ್ ಚಾಯ್ಸ್ ಎಂದು ಬರೆದಿರುವ ಟೆಟ್ರಾ ಪ್ಯಾಕ್ 8 ಮತ್ತು 180  ಎಂ.ಎಲ್. ನ ಬ್ಯಾಗ್‌ಪೈಪರ್ ರಮ್ ಟೆಟ್ರಾ ಪ್ಯಾಕ್ 9  ಸೇರಿ ಒಟ್ಟು 17 ಮದ್ಯ ತುಂಬಿದ ಟೆಟ್ರಾ ಪ್ಯಾಕೇಟುಗಳೊಂದಿಗೆ ಪೊಲಿಥಿನ್ ಚೀಲವನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನಪಡಿಸಿದ್ದು ಸ್ವಾಧೀನಪಡಿಸಿಕೊಂಡ ಮದ್ಯದ ಒಟ್ಟು ಅಂದಾಜು ಮೌಲ್ಯ 1190 ಆಗಬಹುದು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ಪದ್ಮನಾಭ ಗೌಡ ಎಂಬವರನ್ನು ಆರೋಪಿಯಾಗಿ ಹೆಸರಿಸಿದ್ದರು.‌ ತಲೆ ಮರೆಸಿಕೊಂಡಿದ್ದ ಆರೋಪಿ ಪದ್ಮನಾಭರವರು ಬಳಿಕ ವಕೀಲ ಮಹೇಶ್ ಕಜೆ ಮೂಲಕ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಪುತ್ತೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here