ಬೆಟ್ಟಂಪಾಡಿ: ನವೋದಯ ಪ್ರೌಢಶಾಲೆಯಲ್ಲಿ ಗುರುವಂದನೆ – ಅಭಿನಂದನೆ

0


ಬೆಟ್ಟಂಪಾಡಿ: ನವೋದಯ ಆಡಳಿತ ಮಂಡಳಿಯ ವತಿಯಿಂದ ಇಲ್ಲಿನ ನವೋದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಂದನೆ – ಅಭಿನಂದನಾ ಕಾರ್ಯಕ್ರಮ ಜು. 2 ರಂದು ನಡೆಯಿತು. ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಡಿ.ಎಂ. ಬಾಲಕೃಷ್ಣ ಭಟ್ ಘಾಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಿದರು. ‘ಪುತ್ತೂರು ತಾಲೂಕಿನ ಅನುದಾನಿತ ಶಾಲೆಗಳಲ್ಲಿ 100% ಫಲಿತಾಂಶ ಬಂದ ಶಾಲೆಗಳು ಕೇವಲ 3, ಅದರಲ್ಲಿ ನಮ್ಮ ನವೋದಯ ಪ್ರೌಢಶಾಲೆಯೂ ಒಂದು, ನಮ್ಮ ಶಾಲೆಯ ಈ ವರ್ಷದ ಗುಣಾತ್ಮಕ ಫಲಿತಾಂಶ 88.75% , ಮತ್ತು ಸತತ 7 ವರ್ಷಗಳಿಂದ NMMS ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುತ್ತಿರುವ ಬೆಟ್ಟಂಪಾಡಿ ಕ್ಲಸ್ಟರ್ ನ ಏಕೈಕ ಪ್ರೌಢಶಾಲೆ ನಮ್ಮದು, ಈ ರೀತಿಯ ಉತ್ತಮ ಸಾಧನೆಗಾಗಿ ಅವಿರತ ಶ್ರಮವಹಿಸಿ ಉತ್ತಮ ಫಲಿತಾಂಶ ತಂದುಕೊಟ್ಟು ನಮ್ಮ ನವೋದಯ ವಿದ್ಯಾ ಸಂಸ್ಥೆಯ ಕೀರ್ತಿಗೆ ಕಾರಣರಾದ ಶಾಲಾ ಶಿಕ್ಷಕ ವೃಂದದವರಿಗೆ ವಿಶೇಷ ಗೌರವ ಸಲ್ಲಬೇಕು’ ಎಂದು ಹೇಳಿ ಶ್ಲಾಘಿಸಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೆಹರುನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ‌ ವಿಶ್ವೇಶ್ವರ ಭಟ್ ಬಂಗಾರಡ್ಕರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ‘ಗ್ರಾಮೀಣ ಪ್ರದೇಶದ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ತುಂಬಾ ಸಂತೋಷದ ವಿಷಯ. 1947ರಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಗ್ರಾಮೀಣ ಪ್ರದೇಶದ ಶೈಕ್ಷಣಿಕ ಬೆಳವಣಿಗೆಗೆ, ಎಷ್ಟೋ ಜನ ಹಿರಿಯರು, ದಾನಿಗಳ ಸಹಕಾರದಿಂದ ಇಂತಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ, ಮತ್ತು ಆ ಕಾಲದಲ್ಲಿ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದ ಗ್ರಾಮೀಣ ಶಿಕ್ಷಣ‌ ಸಂಸ್ಥೆಗಳಿಗೆ ಸರ್ಕಾರ ಅನುದಾನವನ್ನು ನೀಡುತ್ತಾ ಬಂದಿದೆ. ದ.ಕ ಜಿಲ್ಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಅನುದಾನಿತ ಶಾಲೆಗಳಿವೆ. ಹಲವಾರು ವರ್ಷಗಳಿಂದ ಈ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಹೊಸ ಶಿಕ್ಷಕರ ನೇಮಕಾತಿಯೇ ಆಗದಿರುವುದು ಗ್ರಾಮೀಣ ಶಾಲೆಗಳ ಪಾಲಿನ ದೊಡ್ಡ ದುರಂತ. ಅನಿವಾರ್ಯವಾಗಿ ಆಡಳಿತ ಮಂಡಳಿಯೇ ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ದಾನಿಗಳ ಸಹಕಾರವನ್ನು ಪಡೆಯಲು ಹರಸಾಹಸ ಪಡುವಂತಾಗಿದೆ. ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಅನುದಾನಿತ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂಬ ಆಶಯ ವ್ಯಕ್ತಪಡಿಸಿದರು.


ಶಾಲಾ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ, ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ರೈ ಇವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ, ಹಾಗೂ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಪುತ್ತೂರು ವಿವೇಕಾನಂದ‌ ವಿದ್ಯಾಸಂಸ್ಥೆಯ ಸದಸ್ಯ,‌ನವೋದಯ ವಿದ್ಯಾಸಮಿತಿ ಸದಸ್ಯರೂ ಆದ ಮಹಾದೇವ ಶಾಸ್ತ್ರಿ ಮಣಿಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ನವೋದಯ ವಿದ್ಯಾ ಸಮಿತಿಯ ಕಾರ್ಯದರ್ಶಿಯಾಗಿದ್ದ, ದಿ. ವಿದ್ವಾನ್ ಡಿ ಶಂಕರ ಭಟ್ ಅವರ ಹಿರಿಯ ಪುತ್ರ ಶಾಲಾ ಹಿರಿಯ ವಿದ್ಯಾರ್ಥಿ, ಬೆಂಗಳೂರಿನಲ್ಲಿ ಉನ್ನತ ಚುನಾವಣಾಧಿಕಾರಿ ಹುದ್ದೆಯಲ್ಲಿರುವ ಶಂಭು ಭಟ್ ದೇವಮಣಿ, ಇವರು ನವೋದಯ‌ ವಿದ್ಯಾಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಊರ ಪರವೂರ ಎಲ್ಲ ಹಿರಿಯರನ್ನೂ ಸ್ಮರಿಸಿ, ಎಲ್ಲಾ ವಿದ್ಯಾರ್ಥಿಗಳು ಕೂಡ ತಮ್ಮ ಮುಂದಿನ ಜೀವನದಲ್ಲಿ ಉನ್ನತ ಸಾಧನೆ ಮಾಡಿ ತಾವು ಕಲಿತ ಈ ಶಾಲೆಯನ್ನು ಸಂರಕ್ಷಿಸುವಲ್ಲಿ ಪ್ರಧಾನಪಾತ್ರ ನಿರ್ವಹಿಸಲು ಕರೆ ನೀಡಿದರು. ಪುತ್ತೂರಿನ ಹಿರಿಯ ಉದ್ಯಮಿ ವಾಮನ ಪೈ
ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನೂ ಅಭಿನಂದಿಸಿ,ವಿಶೇಷವಾಗಿ ಶಾಲಾ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿ, ತನ್ನ ವತಿಯಿಂದ ಶಾಲಾ ವೇದಿಕೆಗೆ ಟೈಲ್ಸ್ ಅಳವಡಿಸಿಕೊಡುವ ಭರವಸೆಯನ್ನಿತ್ತರು.

ಶಾಲಾ ಸಂಚಾಲಕ ಡಾl ಶ್ರೀಕೃಷ್ಣ ಭಟ್ ಅವರು ಎಲ್ಲರಿಗೂ ಶುಭಹಾರೈಸಿದರು, ವಿದ್ಯಾ ಸಮಿತಿಯ ಕಾರ್ಯದರ್ಶಿ ಸಹಕಾರವನ ನಾರಾಯಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

613 ಅಂಕಗಳೊಂದಿಗೆ ರಾಜ್ಯಕ್ಕೆ 13 ನೇ Rank ಪಡೆದು, ಶಾಲೆಗೆ ಪ್ರಥಮ ಸ್ಥಾನ ಪಡೆದು ದಾಖಲೆ ಮಾಡಿರುವ ಕು. ಶ್ವೇತಾ ಇವರನ್ನು 1,000/ ₹ ನಗದು ಪುರಸ್ಕಾರ, ಸ್ಮರಣಿಕೆ ನೀಡಿ, ಶಾಲು ಹಾಕಿ ಗೌರವಿಸಲಾಯಿತು.

599 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಪಡೆದು ಕನ್ನಡ, ಸಂಸ್ಕೃತ, ವಿಜ್ಞಾನ, ಹಾಗೂ ಸಮಾಜ ವಿಜ್ಞಾನ ಈ 4 ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದು ಶಾಲಾ ಇತಿಹಾಸದಲ್ಲಿ ದಾಖಲೆ ಮಾಡಿರುವ ಕು. ಲಿಖಿತಾಳನ್ನು 7,000/ ₹ ನಗದು ಪುರಸ್ಕಾರ ಸ್ಮರಣಿಕೆ ನೀಡಿ ಶಾಲು ಹಾಕಿ ಗೌರವಿಸಲಾಯಿತು.
598 ಅಂಕಗಳೊಂದಿಗೆ ಕು. ಅನ್ವಿತಾ (ಕನ್ನಡ 125 ಅಂಕ- 500/₹ ನಗದು ಪುರಸ್ಕಾರ)ಮತ್ತು ಕು. ವಿಭಾ ಜೆ ಇವರು ಶಾಲೆಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಕೌಶಿಕ್, ಅಭಿಲಾಷ್,ಆಯಿಷತ್ ಫರ್ಜಾನ (ಹಿಂದಿ 100ಅಂಕ-500/₹ ನಗದು ಪುರಸ್ಕಾರ),ಫಾತಿಮತ್ ಫರ್ಹಾನ, ಅನಿರುದ್ಧ ಶರ್ಮ,ಬಿ, ಇವರು A+ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇವರನ್ನು ಸ್ಮರಣಿಕೆ ಹಾಗೂ ಶಾಲು ಹಾಕಿ ಗೌರವಿಸಲಾಯಿತು. ವಿನೀತ್ ಕುಮಾರ್ ಡಿ., ಅಮೃತಾ ಕೆ ಆರ್. (ಹಿಂದಿ 100 ಅಂಕ-500/ ₹ನಗದು ಪುರಸ್ಕಾರ) ,ರೋಶಿಕಾ, ಪುಣ್ಯಶ್ರೀ, ಫಾತಿಮತ್ತುಲ್ ನಾಸಿಯಾ(ಹಿಂದಿ 100 ಅಂಕ-500/₹ ನಗದು ಪುರಸ್ಕಾರ), ಯಕ್ಷಿತ್, ಲವಿಕಾ,ಜಿ . ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ನಿವೇದಿತಾ ( ಸಂಸ್ಕೃತ- 100 ಅಂಕ 500/₹ ನಗದು ಪುರಸ್ಕಾರ) , ಪ್ರಥಮ ಶ್ರೇಣಿಯಲ್ಲಿ 19 ಮಂದಿ ಮತ್ತು ದ್ವಿತೀಯ ಶ್ರೇಣಿಯಲ್ಲಿ 6 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಾಲೆಗೆ ಪೂರ್ಣ 100% ಫಲಿತಾಂಶಕ್ಕೆ ಕಾರಣರಾದ ಎಲ್ಲಾ 41 ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ಅಧ್ಯಕ್ಷರು, ಮುಖ್ಯ ಅತಿಥಿಗಳು, ಶಾಲಾ ಸಂಚಾಲಕರು ಮತ್ತು ಹಿರಿಯರು, ಸ್ಮರಣಿಕೆ ನೀಡಿ ಶಾಲು ಹಾಕಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ, ಕುಮಾರಿ ಅನ್ವಿತಾ ಈ ಗ್ರಾಮೀಣ ಶಾಲೆಯಲ್ಲಿ ನಮಗೆ ಯಾವುದೇ ಕೋಚಿಂಗ್ ಕೂಡ ಅಗತ್ಯವಿಲ್ಲದಂತೆ ಪರಿಣಾಮಕಾರಿಯಾಗಿ ಸಿಕ್ಕಿದ ಶಾಲಾ ತರಗತಿಪಾಠಗಳು, ಮತ್ತು ಹೆಚ್ಚುವರಿ ಪಾಠಗಳು ನಮ್ಮೆಲ್ಲರ ಈ ಸಾಧನೆಗೆ ಕಾರಣ. ಇಲ್ಲಿನ ಗುರುವೃಂದದವರು, ಆಡಳಿತ ಮಂಡಳಿಯವರು ಮತ್ತು ಶಿಕ್ಷಕರಕ್ಷಕ ಸಂಘದವರು ,ಪೋಷಕರು, ಎಲ್ಲರೂ ಉತ್ತಮ ಸಹಕಾರವನ್ನು, ಮಾರ್ಗದರ್ಶನವನ್ನು ನೀಡಿರುತ್ತಾರೆ.ಈ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ ನಾವು ನಿಜವಾಗಿಯೂ ಧನ್ಯರು ಎಂದು ಅನಿಸಿಕೆಯನ್ನು ವ್ಯಕ್ತಪಡಿಸಿದರು.

NMMS – ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವರ್ಷಕ್ಕೆ12,000/ ದಂತೆ ನಾಲ್ಕು ವರ್ಷಗಳ ಕಾಲ ಒಟ್ಟು 48,000/ ರೂಪಾಯಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿಗೆ ಕಾರಣರಾಗಿರುವ 9ನೇ ತರಗತಿಯ ವಿದ್ಯಾರ್ಥಿಗಳಾದ ಶ್ರವಣ್ ಎನ್(ಶಾಲಾ ಪ್ರಥಮ,ತಾಲೂಕಿನಲ್ಲಿ 6ನೇ ಜಿಲ್ಲೆಯಲ್ಲಿ11ನೇ ಸ್ಥಾನ,1000/₹ ನಗದು ಪುರಸ್ಕರ)ಆಯಿಷತ್ ಸಹಲ, ಯಶಸ್ವಿ, ತೇಜಸ್ ಮತ್ತು ಶಿಲ್ಪ ಇವರನ್ನು ಕೂಡ ಈ ಸಂದರ್ಭದಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮೆಡ್ರಾಸ್ ಇದರ ವತಿಯಿಂದ ಫೆಬ್ರವರಿ ತಿಂಗಳಲ್ಲಿ ನಡೆದ ” ಹಿಂದಿ ರಾಷ್ಟ್ರಭಾಷಾ ಪರೀಕ್ಷೆ ” ಯಲ್ಲಿ ರಾಜ್ಯಕ್ಕೆ 1 st Rank ಪಡೆದ 10ನೇ ತರಗತಿಯ ವಿಧ್ಯಾರ್ಥಿನಿ ಕು, ವಂದನಾ ಬಿ. ರವರನ್ನು 1,000/ ನಗದು ಪುರಸ್ಕಾರ, ಸ್ಮರಣಿಕೆಯೊಂದಿಗೆ ಶಾಲು ಹಾಕಿ ಆಭಿನಂದಿಸಲಾಯಿತು. ಇವರಿಗೆ ಮಾರ್ಗದರ್ಶನ ನೀಡಿದ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಮನೋಹರ್ ರವರ ಕೊಡುಗೆಯನ್ನು ಸ್ಮರಿಸಲಾಯಿತು.


ಗುರುವಂದನೆ
100 % ಫಲಿತಾಂಶಕ್ಕೆ ಕಾರಣರಾಗಿರುವ ಶಾಲೆಯ ಎಲ್ಲಾ ಗುರುವೃಂದದವರನ್ನು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಶಾಲು ಹಾಕಿ ಹೂ ನೀಡಿ ಗೌರವಿಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.


22 ವರ್ಷ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಸುಮಾರು 10 ವರ್ಷಗಳ ಕಾಲ ಮುಖ್ಯಗುರುಗಳಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಕಳೆದ ವರ್ಷ ಸೇವಾ ನಿವೃತ್ತಿಗೊಂಡಿರುವ ಶಾಲಾ ಪ್ರಥಮ ಮಹಿಳಾ ಮುಖ್ಯಗುರು ಮಾಲತಿ ಬಿ. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಗ್ರಾಮೀಣ ಮಕ್ಕಳ ಸಾಧನೆಯ ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು. ಸತತ 2 ವರ್ಷಗಳಿಂದ ಯಾವುದೇ ಮಗುವಿಗೂ ಗ್ರೇಸ್ ಅಂಕಗಳಿಲ್ಲದೆ ಅವರಾಗಿಯೇ ಉತ್ತೀರ್ಣರಾಗಿ 100% ಫಲಿತಾಂಶ ಬಂದಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ಶಾಲಾ ಸಭಾಂಗಣಕ್ಕೆ ಅವಶ್ಯಕತೆ ಇರುವ ಚೆಯರ್‌‌ಗಳನ್ನು ಖರೀದಿಸಲು ಕೊಡುಗೆಯಾಗಿ 25000 ರೂ. ಗಳ ಚೆಕ್ ನ್ನು ಅಧ್ಯಕ್ಷರಿಗೆ ನೀಡಿದರು.


ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಇತ್ತೀಚೆಗೆ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಇವರನ್ನು ಶಾಲು ಹೊದೆಸಿ ಹೂ ನೀಡಿ ಗೌರವಿಸಲಾಯಿತು.

ಗಣಿತವಿಷಯದ ಗೌರವ ಶಿಕ್ಷಕಿಯಾಗಿ ಒಂದು ವರ್ಷ ಕರ್ತವ್ಯ ನಿರ್ವಹಿಸಿ 100 % ಫಲಿತಾಂಶಕ್ಕೆ ಶ್ರಮಿಸಿದ ಕು. ದೀಕ್ಷಾ ಇವರನ್ನು ಕೂಡ ಸ್ಮರಣಿಕೆ ಹೂ ನೀಡಿ ಶಾಲುಹೊದೆಸಿ ಗೌರವಿಸಲಾಯಿತು.


ಮುಖ್ಯ ಗುರುಗಳಾದ ಪುಷ್ಪಾವತಿ ಎಸ್, ಶಿಕ್ಷಕಿಯರಾದ ಪ್ರವೀಣ ಕುಮಾರಿ , ಸುಮಂಗಲಾ ಕೆ, ಮತ್ತು ಭುವನೇಶ್ವರಿ ಎಂ. ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಪ್ರವೀಣಕುಮಾರಿ ಸ್ವಾಗತಿಸಿ, ಸುಮಂಗಲಾ ಕೆ ವಂದಿಸಿದರು. ಶಿಕ್ಷಕರಾದ ರಾಧಾಕೃಷ್ಣ ಇವರು ನಿವೃತ್ತ ಮುಖ್ಯಗುರುಗಳ ಅಭಿನಂದನಾ ಪತ್ರವನ್ನು ವಾಚಿಸಿದರು. ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ,‌ ನವೋದಯ ವಿದ್ಯಾಸಮಿತಿಯ ಸದಸ್ಯ ಬಟ್ಯಮೂಲೆ ಶ್ರೀಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶೋಭಾ ಬಿ., ರೇವತಿ, ಯಸ್ತಿತಾ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು. ಪೋಷಕ ವೃಂದದವರು ಹಾಗೂ ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ಸಿಹಿಯೂಟದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here