ಮುಂದುವರಿದ ಮಳೆ ಅಬ್ಬರ; ಜು.8, 9ರಂದು ರೆಡ್ ಅಲರ್ಟ್; ಉಪ್ಪಿನಂಗಡಿಯಲ್ಲಿ ನೆರೆಭೀತಿ

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಜುಲೈ 8 ಮತ್ತು 9ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಿದೆ. 1 ವಾರದಿಂದ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ದ.ಕ.ಜಿಲ್ಲೆಯ ಜೀವನದಿಗಳಾದ ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು ನೆರೆ ಭೀತಿಯೂ ಆವರಿಸಿದೆ. ಮಳೆಗೆ ಪುತ್ತೂರು ಹಾಗೂ ಕಡಬ ತಾಲೂಕಿನ ಅಲ್ಲಲ್ಲಿ ಹಾನಿ ಸಂಭವಿಸಿರುವುದು ವರದಿಯಾಗಿದೆ.

ಉಪ್ಪಿನಂಗಡಿಯಲ್ಲಿ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ

ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ : ವಿಪರೀತ ಮಳೆಯಾಗುತ್ತಿರುವುದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡೆಲ್ ಅಽಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಽಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆಯೂ ಸೂಚಿಸಲಾಗಿದೆ. ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಽಸಿದ ಯಾವುದೇ ಸಮಸ್ಯೆಗಳಿಗೆ ಟೋಲ್ ಫ್ರೀ ಸಂಖ್ಯೆ ಕಂಟ್ರೋಲ್ ರೂಂ-1077/0824-2442590ಗೆ ಸಂಪರ್ಕಿಸಬಹುದಾಗಿದೆ.

ಉಪ್ಪಿನಂಗಡಿಯಲ್ಲಿ ನದಿ ನೀರು ಏರಿಕೆ: ಉಪ್ಪಿನಂಗಡಿ: ಈ ಭಾಗದಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗೆ ತನಕ 114.2 ಮಿ.ಮೀ. ಮಳೆಯಾಗಿದ್ದು, ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರದಲ್ಲಿ ನೀರ ಹರಿವು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಗುರುವಾರ ರಾತ್ರಿ 11 ಗಂಟೆಯ ವೇಳೆಗೆ ನೀರಿನ ಮಟ್ಟ ಮತ್ತೆ ಏರಿಕೆಯಾಗಿದೆ. ಆದರೆ ಸಂಗಮ ಕ್ಷೇತ್ರವೆಂದು ಪ್ರಸಿದ್ಧವಾದ ಉಪ್ಪಿನಂಗಡಿಯು ಮಳೆಗಾಲದಲ್ಲಿ ನೆರೆ ಪೀಡಿತವಾಗುವ ಪ್ರದೇಶವೂ ಆಗಿದ್ದು, ಯಾವಾಗ ಉಭಯ ನದಿಗಳು ಉಕ್ಕೇರಿ ಹರಿಯುತ್ತವೆಯೋ ಎಂಬ ಭಯ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ನದಿ ಉಗಮ ಪ್ರದೇಶದಲ್ಲಿ ಹಾಗೂ ಉಪ್ಪಿನಂಗಡಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿವೆ. ಗುರುವಾರ ಮಧ್ಯಾಹ್ನದ ಬಳಿಕ ನದಿ ನೀರಿನಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನಿನ್ನೆ ಆರೂವರೆ ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡರೆ, ಗುರುವಾರ ಸಂಜೆಯಾಗುತ್ತಲೇ 11 ಮೆಟ್ಟಿಲುಗಳು ಕಾಣಿಸಿಕೊಂಡಿವೆ. ರಾತ್ರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದು, 7 ಮೆಟ್ಟಿಲು ಮಾತ್ರ ಕಾಣಿಸಿಕೊಂಡಿದೆ. ಶಂಭೂರು ಅಣೆಕಟ್ಟು ಆಧಾರಿತ ಜಲ ಮಾಪಕದಲ್ಲಿ ನೀರಿನ ಮಟ್ಟ 28.0 ಆಗಿದೆ. ಆದರೂ ಈ ನದಿಗಳು ಯಾವಾಗ ಉಕ್ಕೇರುತ್ತವೆ ಎಂಬುದು ಮಾತ್ರ ಹೇಳಲು ಆಗುವುದಿಲ್ಲ. ಕಳೆದ ಎರಡು ವರ್ಷದಲ್ಲಿ ಶಾಂತವಾಗಿ ಹರಿದಿದ್ದ ನದಿಗಳು ಮಾತ್ರ ಈ ಬಾರಿ ಜುಲೈ ಆರಂಭದಲ್ಲೇ ನೆರೆ ಭೀತಿಯನ್ನು ಸೃಷ್ಟಿಸಿವೆ.

ಶಾಲಾ- ಕಾಲೇಜುಗಳಿಗೆ 2 ದಿನ ರಜೆ

ಪುತ್ತೂರು: ದ.ಕ. ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಸೇರಿದಂತೆ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ 8 ಮತ್ತು 9ರಂದು ಎರಡು ದಿನಗಳ ಕಾಲ ರಜೆ ಘೋಷಿಸಿ ಜಿಲ್ಲಾಽಕಾರಿ ಡಾ.ಕೆ.ವಿ. ರಾಜೇಂದ್ರರವರು ಆದೇಶಿಸಿದ್ದಾರೆ. ಪ್ರಸ್ತುತ ನೀಡಿರುವ ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾ ದಿನಗಳಂದು ಸರಿದೂಗಿಸಿಕೊಂಡು ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಸಂಗಮದ ನಿರೀಕ್ಷೆಯಲ್ಲಿ ಜನತೆ

ನೆರೆ ಬಂದು ಸಂಗಮವಾದಾಗ ದೇವಾಲಯದ ರಥ ಬೀದಿಯ ಪರಿಸರ

ಲಭ್ಯ ದಾಖಲೆಯ ಪ್ರಕಾರ 1974ರಂದು ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ನೆರೆ ಬಂದು ಸಂಗಮವಾಗಿತ್ತು. ಬಳಿಕ 1997, 2008 ಹಾಗೂ 2009 ಹಾಗೂ 2013ರಲ್ಲಿ ಸಂಗಮವಾಗಿತ್ತು. ಆ ಬಳಿಕ ಸಂಗಮವಾಗಿದ್ದು 2018 ರಲ್ಲಿ ಆ ಬಾರಿ ಮಾತ್ರ ಆಗಸ್ಟ್ 14 ಮತ್ತು 16ರಂದು ಎರಡು ಬಾರಿ ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿದ್ದು, ಇದೇ ಮೊದಲಾಗಿತ್ತು. ಬಳಿಕ 2019ರಲ್ಲಿಯೂ ಸಂಗಮವಾಗಿದ್ದು, ಆದಿನ ಆಗಸ್ಟ್ 9ರಂದು ಆದ ಸಂಗಮ 10ರಂದೂ ಮುಂದುವರಿದಿತ್ತು. ಹಿರಿಯರ ಪ್ರಕಾರ ಅಂದಿನ ನೆರೆ ಮಾತ್ರ 1974 ಅತೀ ದೊಡ್ಡ ನೆರೆಯನ್ನು ನೆನಪಿಸಿತ್ತಂತೆ.

ಸಂಗಮವೆಂದರೇನು?: ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ಒಳಹರಿವಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನಿತ್ಯ ಸಂಗಮವಾಗುತ್ತದೆ. ಆದರೆ ಮಳೆಗಾಲದಲ್ಲಿ ದೇವಾಲಯದ ಎಡ ಹಾಗೂ ಬಲ ಭಾಗದಿಂದ ಬಂದ ಉಭಯ ನದಿಯ ನೀರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಅಂಗಣಕ್ಕೆ ಹೊಕ್ಕು ಅಲ್ಲಿನ ಧ್ವಜ ಸ್ತಂಭವನ್ನು ಸ್ಪರ್ಶಿಸಿದಾಗ ಪವಿತ್ರ ಸಂಗಮ ಘಟಿಸುತ್ತದೆ. ಬಳಿಕ ದೇವಾಲಯದ ಅರ್ಚಕರು ಗಂಗಾಪೂಜೆ ಮಾಡಿ ನೀರಾಂಜನ ತೇಲಿ ಬಿಡುತ್ತಾರೆ. ಆಗ ಬೇರೆ ಬೇರೆ ಕಡೆಗಳಿಂದ ನೂರಾರು ಭಕ್ತರು ಬಂದು ಸಂಗಮ ಸ್ನಾನ ಮಾಡುತ್ತಾರೆ. ಸಂಗಮ ಘಟಿಸಿತ್ತೆಂದರೆ ಇಲ್ಲಿನ ಪಂಜಳ, ಹಿರ್ತಡ್ಕ -ಮಠ, ಹಳೆಗೇಟು, ಕೂಟೇಲು, ಕಡವಿನ ಬಾಗಿಲು, ದೇವಸ್ಥಾನ ಹೀಗೆ ನದಿ ಪಾತ್ರದ ಪ್ರದೇಶಗಳಲ್ಲದೆ, ನದಿಯನ್ನು ಸಂಪರ್ಕಿಸುವ ತೋಡುಗಳ ಬಳಿಯಿರುವ ಪ್ರದೇಶಗಳೂ ಸಂಪೂರ್ಣ ಜಲಾವೃತಗೊಳ್ಳುತ್ತವೆ. ಅಪಾಯದ ಭೀತಿಯನ್ನು ತಂದೊಡ್ಡುತ್ತವೆ. ಹಲವು ಮನೆಗಳಿಗೆ ನೀರು ನುಗ್ಗುತ್ತದೆ.

ಪ್ರತಿ ಮಳೆಗಾಲದಲ್ಲಿಯೂ ನದಿಗಳಲ್ಲಿ ಉತ್ತಮ ನೀರು ಬರಲಿ. ಇಲ್ಲಿ ಸಂಗಮವಾಗಲಿ ಎಂಬ ಇಚ್ಚೆ ಕೆಲವರದ್ದಾದರೆ, ಮಳೆಗಾಲದಲ್ಲಿ ಉಭಯ ನದಿಗಳು ಬೋರ್ಗರೆಯದೇ ಶಾಂತವಾಗಿ ಪಶ್ಚಿಮಾಭಿಮುಖವಾಗಿ ಹರಿಯಲಿ ಎಂಬ ಪ್ರಾರ್ಥನೆ ನೆರೆ ಭಾದಿತ ಪ್ರದೇಶದ ಜನರದ್ದಾಗಿದೆ. ನೆರೆ ಬಂದಾಗ ಸೆಲಿ, ನೀರಾಟ ಹೀಗೆ ಮೋಜಿನಾಟ ಒಂದೆಡೆಯಾದರೆ, ಸಾಮಾನು ಸರಂಜಾಮುಗಳನ್ನು ಬೇರೆಡೆ ಸಾಗಿಸುವ, ನಾಳಿನ ಬದುಕಿನ ಬಗ್ಗೆ ಚಿಂತಿಸುತ್ತಾ ಸಾಗುವ ನೆರೆ ಭಾದಿತ ಪ್ರದೇಶದ ಜನರ ನೋವಿನ ದೃಶ್ಯ ಇನ್ನೊಂದೆಡೆಯಾಗಿದೆ. ಆದ್ದರಿಂದ ನದಿ ನೀರಿನ ಬಗ್ಗೆ ಜುಲೈ, ಆಗಸ್ಟ್ ತಿಂಗಳಲ್ಲಿ ಕಟ್ಟೆಚ್ಚರವಾಗಿಯೇ ಇರಬೇಕಾದ ಸ್ಥಿತಿ ಇಲ್ಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.