ಕೋಳಿ ಮೊಟ್ಟೆ ತಿಂದಿದ್ದಕ್ಕೆ ಆಕ್ರೋಶಗೊಂಡು ಹೆಬ್ಬಾವು ಕೊಂದು ದುಷ್ಕೃತ್ಯ ಎಸಗಿದ್ದ ಆರೋಪಿಗಳು

0

ಪುತ್ತೂರು: ಮನೆಯಲ್ಲಿದ್ದ ಕೋಳಿಮೊಟ್ಟೆಯನ್ನು ಹೆಬ್ಬಾವು ತಿಂದಿದೆ ಎಂದು ಆಕ್ರೋಶಗೊಂಡು ಇಬ್ಬರು ಕಿಡಿಗೇಡಿಗಳು ಹೆಬ್ಬಾವನ್ನು ಕೊಂದು ಅರಣ್ಯ ಇಲಾಖೆಯ ಕಚೇರಿಯ ಬಾಗಿಲಿಗೆ ನೇತು ಹಾಕಿದ್ದಾರೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. 

ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ ಮತ್ತು ಕೊಳ್ತಿಗೆ ಗ್ರಾಪಂ ಬಿಲ್ ಕಲೆಕ್ಟರ್ ಜಯ ಹೆಬ್ಬಾವನ್ನು ಕೊಂದು ನೇತು ಹಾಕಿದ ಆರೋಪಿಗಳು. ಕೆಲದಿನಗಳ ಹಿಂದೆ ಧನಂಜಯ ಅವರ ಮನೆಯಲ್ಲಿನ ಕೋಳಿಗೂಡಿನಿಂದ ಮೊಟ್ಟೆಯನ್ನು ಹೆಬ್ಬಾವೊಂದು ತಿಂದು ಹಾಕಿತ್ತು. ಜು. 5 ರಂದು ಈ ಘಟನೆ ಬೆಳಕಿಗೆ ಬಂದಿತ್ತು. ರಾತ್ರಿ ಧನಂಜಯ ಮತ್ತು ಜಯ ಇಬ್ಬರು ಮನೆಗೆ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹೆಬ್ಬಾವನ್ನು ನೋಡಿದ್ದಾರೆ. ಇದೇ ಹೆಬ್ಬಾವು ನಮ್ಮ ಮನೆಯ ಕೋಳಿಮೊಟ್ಟೆಯನ್ನು ತಿಂದಿದೆ ಎಂದು ಧನಂಜಯ ಹೇಳಿದ್ದಾನೆ. ಕೂಡಲೇ ಸಂಪ್ಯ ಗ್ರಾಮಾಂತರ ಠಾಣೆಗೆ ಕರೆ ಮಾಡಿ ಇಲ್ಲಿ ಹೆಬ್ಬಾವು ಇದೆ ಕೂಡಲೇ ಬನ್ನಿ ಎಂದು ತಿಳಿಸಿದ್ದು ನೀವು ಬಾರದೇ ಇದ್ದರೆ ಕೊಲ್ಲುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಹೆಬ್ಬಾವನ್ನು ಕೊಲ್ಲುವುದು ಅಪರಾಧವಾಗಿದೆ ಅದನ್ನು ಕಾಡಿಗೆ ಬಿಡಿ ಎಂದು ಪೊಲೀಸರು ಎಚ್ಚರಿಕೆಯನ್ನು ಕೊಟ್ಟಿದ್ದರು. ಆದರೆ ಸುಮ್ಮನಾಗದ ಇಬ್ಬರು ಸೇರಿಕೊಂಡು ಹೆಬ್ಬಾವಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಅರೆ ಜೀವದಲ್ಲಿರುವಾಗಲೇ ಅದರ ತಲೆಯ ಭಾಗಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ನೇತು ಹಾಕಿದ್ದರು. ಬೆಳಿಗ್ಗೆ ಹೆಬ್ಬಾವು ಸತ್ತು ಹೋಗಿತ್ತು. ಹೆಬ್ಬಾವು ಬಾಗಿಲಿಗೆ ಕಟ್ಟಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದರು. ಹೆಬ್ಬಾವು ಕೊಂದ ಆರೋಪಿಗಳನ್ನು ಜು. 5 ರಂದು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here