ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನಿಂದ ಪತ್ರಿಕಾಗೋಷ್ಠಿ

0

  •  ರೈತರ ಬದುಕು ನಾಶ ಮಾಡಿದ ಕೇಂದ್ರ ಸರ್ಕಾರ ಅಗ್ನಿಪಥ್ ಮೂಲಕ ಯುವ ಜನರ ಬದುಕು ಕಸಿಯಲು ಹೊರಟಿದೆ: ಡಾ. ರಾಜಾರಾಮ್ ಕೆ. ಬಿ.
  •  ನಿರುದ್ಯೋಗ ನಿವಾರಣೆ ಮಾಡುವುದಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಮಾಡಿದ್ದೇನು: ಮುರಳೀಧರ ರೈ ಮಠಂತಬೆಟ್ಟು

ವಿಟ್ಲ: ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ‘ಅಗ್ನಿಪಥ್’ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ, ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು. ಕೃಷಿ ಕಾಯ್ದೆಯ ಮೂಲಕ ರೈತರ ಬದುಕು ನಾಶ ಮಾಡಿದ ಕೇಂದ್ರ ಸರ್ಕಾರ, ಅಗ್ನಿಪಥ್ ಮೂಲಕ ಯುವ ಜನರ ಬದುಕು ಕಸಿಯಲು ಹೊರಟಿದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ. ಹೇಳಿದರು.

ಅವರು ವಿಟ್ಲದ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ ಎಂದವರು ಪ್ರಶ್ನಿಸಿದರು.

ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ. ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ ಎಂದು ಪ್ರಶ್ನಿಸಿದ ಅವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗುವ ಸೈನಿಕರಿಗೆ ಉದ್ಯೋಗದ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಕೇಂದ್ರದ ಬಿಜೆಪಿ ಸರ್ಕಾರ ದಿವಾಳಿಯಾಗಿದೆಯೇ. ನಿಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಲು ಹೋಗಬೇಡಿ ಎಂದರು.

ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಬಾರದು. ಈ ದೇಶದ್ರೋಹಿ, ಜನವಿರೋಧಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತವಾಗಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದವರು ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನ ಪಾಠ ಕಲಿಸಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದು ಹೇಳಿದರು.

ರಾಜಸ್ಥಾನದ ಉದಯಪುರದ ಕನ್ನಯ್ಯ ಲಾಲ್ ಹತ್ಯೆ ಪ್ರಕರಣವನ್ನು ಕೂಡ ನಾವು ಖಂಡಿಸುತ್ತೇವೆ. ಇದೊಂದು ಅತ್ಯಂತ ಹೇಯ ಕೃತ್ಯವಾಗಿದ್ದು ತಪ್ಪಿತಸ್ತರಿಗೆ ಕಠಣ ಶಿಕ್ಷೆಯಾಗಬೇಕೆಂದು ಅವರು ಡಾ. ರಾಜಾರಾಮ್ ಆಗ್ರಹಿಸಿದರು.

ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮುರಳಿಧರ ರೈ ಮಠಂತಬೆಟ್ಟುರವರು ಮಾತನಾಡಿ ಈಗಾಗಲೇ ಲಕ್ಷಾಂತರ ಯುವಕರು ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದಾದರೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ. ದೇಶದಲ್ಲಿ ನಿರುದ್ಯೋಗ ನಿವಾರಣೆ ಮಾಡುವುದಾಗಿ ಹೇಳಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಇಷ್ಟು ವರ್ಷದಲ್ಲಿ ಮಾಡಿದ್ದೇ ನು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಚಂದ್ರ ಆಳ್ವ, ವಕ್ತಾರರಾದ ರಮಾನಾಥ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here