ಸಂಪ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

0

* ಹಾಲಿನ ದರ ಕನಿಷ್ಠ ರೂ.40 ನೀಡಲು ರೈತರ ಆಗ್ರಹ

* ರೂ.3.93ಲಕ್ಷ ಲಾಭ, ಶೇ.15 ಡಿವಿಡೆಂಡ್, ರೂ.1.24 ಬೋನಸ್


ಪುತ್ತೂರು: ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.3.93,241.04 ಲಾಭಗಳಿಸಿದೆ. ಸಂಘ ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಟ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ರೂ.1.24 ಬೋನಸ್ ನೀಡಲಾಗುವುದು. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷ ಮೂಲಚಂದ್ರ ಕೆಯವರು ತಿಳಿಸಿದರು.

ವಾರ್ಷಿಕ ಸಾಮಾನ್ಯ ಸಭೆಯು ಜು.7ರಂದು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ವರದಿ ವರ್ಷದಲ್ಲಿ ಸಂಘದಲ್ಲಿ 11 ಸದಸ್ಯರಿದ್ದು ರೂ.42,200 ಪಾಲು ಬಂಡವಾಳವಿದೆ. ವಾರ್ಷಿಕವಾಗಿ 1,52,108.2 ಲೀಟರ್ ಹಾಲನ್ನು ರೈತರಿಂದ ಖರೀದಿಸಿ, 1,31,622 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 913.40ಲೀ ಹಾಲು ಸ್ಯಾಂಪಲ್ ಹಾಲು ಆಗಿರುತ್ತದೆ. 20,486 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದ್ದು ಇದರಿಂದ ರೂ.9,01,384 ಆದಾಯ ಬಂದಿರುತ್ತದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಣೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಹಾಲಿಗೆ ಕನಿಷ್ಠ ರೂ.40 ನೀಡಲು ಆಗ್ರಹ:

ಹಿಂಡಿಯ ದರ ಏರಿಕೆ, ಅಗತ್ಯ ಸಾಮಾಗ್ರಿಗಳ ಏರಿಕೆ ಸೇರಿದಂತೆ ಹಾಲು ಉತ್ಪಾದನೆ ದುಬಾರಿಯಾಗುತ್ತಿದೆ. ಹಾಲಿನ ದರ ಪೆಟ್ರೋಲ್ ದರದ ಮಾದರಿಯಲ್ಲಿ ಏರಿಕೆ, ಇಳಿಕೆ ಮಾಡಬಾರದು. ರೈತರಿಂದ ಖರೀದಿಸುವ ಹಾಲಿನ ದರ ಏರಿಕೆ ಮಾಡಿ ಉತ್ಪಾದಕರಿಗೆ ಪ್ರತಿ ಲೀಟರ್ ದರ ಕನಿಷ್ಠ ರೂ.40 ದೊರೆಯಬೇಕು ಹಾಗೂ ಸಬ್ಸಿಡಿ ದರದಲ್ಲಿ ನೀಡುವ ರಬ್ಬರ್ ಮ್ಯಾಟ್ ಐದು ವರ್ಷಗಳಿಗೊಮ್ಮೆ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ರೈತರು ಆಗ್ರಹಿಸಿದ್ದು ಈ ಬಗ್ಗೆ ಒಕ್ಕೂಟಕ್ಕೆ ಮನವಿ ಮಾಡುವುದಾಗಿ ನಿರ್ಣಯಕೈಗೊಳ್ಳಲಾಗಿದೆ.

ಆಡಳಿತ ಮಂಡಳಿಗೆ ಅಭಿನಂದನೆ:

ಸಂಘವು ಅಧಿಕ ಲಾಭ ಗಳಿಸಿ ಹಾಲು ಉತ್ಪಾದಕರಿಗೆ ಗರಿಷ್ಟ ಬೋನಸ್ ಹಾಗೂ ಡಿವಿಡೆಂಡ್ ನೀಡುವುದಲ್ಲದೆ ಸತತವಾಗಿ `ಎ’ ಶ್ರೇಣಿಯಲ್ಲಿ ಮುನ್ನಡೆಯುತ್ತಿರುವುದಕ್ಕೆ ಆಡಳಿತ ಮಂಡಳಿಯನ್ನು ಸದಸ್ಯರು ಅಭಿನಂದಿಸಿದರು.

ನಿರ್ದೇಶಕ ವಿಜಯ ಬಿ.ಎಸ್ ಮಾತನಾಡಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ದೇವಸ್ಥಾನದಲ್ಲಿ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ಉಚಿತ ವೈದ್ಯಕೀಯ ಶಿಬಿರ ನಡೆಯುತ್ತಿದ್ದ, ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ದ.ಕ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು ಹಾಗೂ ಹಸುಗಳ ಸಾಕಾಣಿಕೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನ:

ಸಂಘದ ಹಿರಿಯ ಹಾಲು ಹಿರಿಯ ಸದಸ್ಯರಾದ ಕಮಲ ಮರಕ್ಕ ಹಾಗೂ ಮೋನಪ್ಪ ಗೌಡ ಬೈಲಾಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ವಿಶಾಲಾಕ್ಷಿ ಕರಿಮೊಗರು(ಪ್ರ), ಗೀತಾ ಬಾರಿಕೆ(ದ್ವಿ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷ ರಮಾನಂದ ಬಲ್ಯಾಯ, ನಿರ್ದೇಶಕರಾದ ವಿಶ್ವೇಶ್ ಜಿ.ಕೆ., ಹರೀಶ್ ಎಂ., ಶಿವಪ್ರಸಾದ್ ಕೆ., ಆನಂದ ಗೌಡ ಕುಕ್ಕಾಡಿ, ಲಿಂಗಪ್ಪ ಗೌಡ ಕೊಲ್ಯ, ಗಿರಿಜ ಉದಯಗಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಶಂಕರನಾರಾಯಣ ಭಟ್ ಸಪ್ರಾರ್ಥಿಸಿದರು. ವಿಜಯ ಬಿ.ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ರಜತ ವರದಿ ವಾಚಿಸಿದರು. ನಿರ್ದೇಶಕರಾದ ಸಂದೀಪ್ ಬಾರಿಕೆ, ಹೇಮಲತಾ ಕುಕ್ಕಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹಾಲು ಪರೀಕ್ಷಕಿ ಪ್ರೇಮ ಹಾಗೂ ಶರ್ಮಿಳಾ ಸಹಕರಿಸಿದರು.

LEAVE A REPLY

Please enter your comment!
Please enter your name here