ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಆಶ್ರಯದಲ್ಲಿ ನವೋದಯ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ, ಕೋವಿಡ್-19ನಿಂದ ಮೃತಪಟ್ಟ ಸದಸ್ಯರ ಬೆಳೆ ಸಾಲ ಪರಿಹಾರ ಮೊತ್ತ ವಿತರಣಾ ಕಾರ್ಯಕ್ರಮ

0

ಮಹಿಳೆಯರ ಸ್ವ-ಉದ್ಯೋಗಕ್ಕೆ ನವೋದಯ ಸ್ವಸಹಾಯ ಸಂಘದ ಮೂಲಕ ಉತ್ತೇಜನ-ಶಶಿಕುಮಾರ್ ರೈ ಬಾಲ್ಯೊಟ್ಟು


ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ನವೋದಯ ಸ್ವಸಹಯ ಸಂಘದ ಸದಸ್ಯರೊಳಗೆ ಯಾವುದೇ ಬೇಧಬಾವ ಇರಬಾರದು, ನಾವೆಲ್ಲರೂ ಒಂದೇ ಎನ್ನುವ ಭಾವನೆಯ ದೃಷ್ಟಿಯಿಂದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮುಂದಾಳತ್ವದಲ್ಲಿ ಸ್ವಸಹಾಯ ತಂಡಗಳ ಸದಸ್ಯರಿಗೆ ಸೀರೆ ವಿತರಿಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ಆಗದಂತಹ ಅತ್ಯುನ್ನತ ವ್ಯವಸ್ಥೆ ನವೋದಯ ಸ್ವಸಹಾಯ ಸಂಘಗಳ ಮೂಲಕ ಆಗುತ್ತಿದ್ದು ಮಹಿಳೆಯರ ಸ್ವ ಉದ್ಯೋಗಕ್ಕೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇವುಗಳ ವತಿಯಿಂದ ಜು.7ರಂದು ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನವೋದಯ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ ಹಾಗೂ ಕೋವಿಡ್-19ನಲ್ಲಿ ಮೃತಪಟ್ಟ ಸಂಘದ ಸದಸ್ಯರ ಗರಿಷ್ಠ ರೂ.1 ಲಕ್ಷ ಬೆಳೆ ಸಾಲ ಪರಿಹಾರ ಮೊತ್ತ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ರೈತರಿಗೆ ಕೃಷಿ ಮಾಹಿತಿ, ರಸ ಗೊಬ್ಬರ ಮಾಹಿತಿ ನೀಡುವ ಮೂಲಕ ಕೇವಲ ಸಾಲ ನೀಡುವುದು, ವಸೂಲಾತಿ ಮಾಡುವುದು ಇವಿಷ್ಟೇ ನಮ್ಮ ಕೆಲಸವಲ್ಲ ಎಂಬುವುದನ್ನು ಮುಂಡೂರು ಪ್ರಾಥಮಿಕ ಕೃ.ಪ.ಸ.ಸಂಘ ತೋರಿಸಿಕೊಟ್ಟಿದ್ದು ಇದಕ್ಕಾಗಿ ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಬಾಲ್ಯೊಟ್ಟು ಹೇಳಿದರು.

ನವೋದಯದಿಂದ ಮಹತ್ತರ ಬದಲಾವಣೆ-ಯಾಕೂಬ್ ಮುಲಾರ್

ಸ್ವಾಗತಿಸಿ ಪ್ರಸ್ತಾವನೆಗೈದ ಮುಂಡೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನವೋದಯ ಸ್ವಸಹಾಯ ಸಂಘವು ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಮತ್ತು ಮಹಿಳಾ ಸಶಕ್ತೀಕರಣಕ್ಕೆ ಕಾರಣವಾಗಿದ್ದು ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಕನಸಿನಂತೆ ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಮಹಿಳೆಯರೂ ಸಮಾಜದ ಮುಂಚೂಣಿಯಲ್ಲಿರಬೇಕು-ಸೊರಕೆ

ಅಧ್ಯಕ್ಷತೆ ವಹಿಸಿದ್ದ ಮುಂಡೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ನವೋದಯ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗುತ್ತಿದ್ದು ಮಹಿಳೆಯರೂ ಸಮಾಜದ ಮುಂಚೂಣಿಯಲ್ಲಿ ಗುರುತಿಸಿಕೊಂಡಾಗ ಸ್ವಂತ ಅಭಿವೃದ್ಧಿ ಜೊತೆಗೆ ಊರಿನ ಅಭಿವೃದ್ಧಿಯೂ ಆಗುತ್ತದೆ. ಇದಕ್ಕೆ ಕೇಂದ್ರ ಸಹಕಾರಿ ಬ್ಯಾಂಕ್ ಪೂರಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮವಸ್ತ್ರ ವಿತರಣೆ:

ನವೋದಯ ಸ್ವಸಹಾಯ ಮಹಿಳಾ ಗುಂಪಿನ 25 ತಂಡಗಳಿಗೆ ಸಮವಸ್ತ್ರ ವಿತರಿಸಲಾಯಿತು. ನವೋದಯ ಸ್ವಸಹಾಯ ಸಂಘದ ಪುತ್ತೂರು ತಾಲೂಕು ಮೇಲ್ವಿಚಾರಕರಾದ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

ಬೆಳೆ ಸಾಲ ಪರಿಹಾರ ಮೊತ್ತ ವಿತರಣೆ:

ಕೋವಿಡ್-19ನಲ್ಲಿ ಮೃತಪಟ್ಟ ಸಂಘದ ಮೂವರು ಸದಸ್ಯರಿಗೆ ಬಿಡುಗಡೆಯಾಗಿದ್ದ ಬೆಳೆ ಸಾಲ ಪರಿಹಾರ ಮೊತ್ತವನ್ನು ಮೃತ ಸದಸ್ಯರ ಕುಟುಂಬಸ್ಥರಿಗೆ ವಿತರಿಸಲಾಯಿತು.

ಡಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಶರತ್, ಮುಂಡೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಆನಂದ ಪೂಜಾರಿ, ಕೊರಗಪ್ಪ ಸೊರಕೆ, ವಸಂತ ಬಿ.ಎನ್, ಮೋಹಿನಿ ಪಜಿಮಣ್ಣು, ಗುಲಾಬಿ ಎನ್ ಶೆಟ್ಟಿ ಕಂಪ, ಪದ್ಮಯ್ಯ ನಾಯ್ಕ ಬಂಡಿಕಾನ, ಸುಧೀರ್‌ಕೃಷ್ಣ ಪಡ್ಡಿಲ್ಲಾಯ, ಶರಣ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಡೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ವಂದಿಸಿದರು. ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು. ನವೋದಯ ಸ್ವಸಹಾಯ ಸಂಘದ ಪ್ರೇರಕಿ ಕುಸುಮಾವತಿ ಹಾಗೂ ವಿವಿಧ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here