ಬಜತ್ತೂರು ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳ ಮಾರಣ ಹೋಮ, ಅಕ್ರಮ ಸಾಗಾಟ

0

  • ನೆಡುತೋಪುನಿಂದ ಮರ ಕಡಿದು ಡಿಪೋಗೆ ಸಾಗಿಸಲು ಅನುಮತಿ
  • ಸಕ್ರಮದ ಹೆಸರಿನಲ್ಲಿ ನಿರಂತರವಾಗಿ ಬೇರೆ ಜಾತಿಯ ಮರಗಳನ್ನು ಕಡಿದು ಸಾಗಾಟ
  • ಅಕೇಶಿಯಾ ಮರಗಳು ಬೇರೆ ಮಿಲ್‌ಗಳಿಗೆ ಅಕ್ರಮ ಸಾಗಾಟ
  • ಅರಣ್ಯ ಇಲಾಖೆಗೆ ಕೋಟ್ಯಂತರ ರೂಪಾಯಿ ವಂಚನೆ
ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಅಕೇಶಿಯಾ ನೆಡುತೋಪುನಲ್ಲಿರುವ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟ ಮಾಡಲಾಗಿರುವ ಕುರುಹು.

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ.

ಉಪ್ಪಿನಂಗಡಿ: ಸರ್ಕಾರದ ಕಾಡು ಬೆಳೆಸುವ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಅಲ್ಲಲ್ಲಿ ಅಕೇಶಿಯಾ ಮರಗಳ ನೆಡುತೋಪುಗಳನ್ನು ಮಾಡಿ, ಅವುಗಳು ಹೆಮ್ಮರವಾದ ಬಳಿಕ ಅವುಗಳನ್ನು ಕಟಾವು ಮಾಡಿ ಅರಣ್ಯ ಇಲಾಖೆಯ ಡೀಪೊಗೆ ಹಾಕುವ ಸಲುವಾಗಿ ಖಾಸಗಿ ವ್ಯಕ್ತಿಗಳಿಗೆ ಟೆಂಡರು ಕರೆದು ಗುತ್ತಿಗೆ ವಹಿಸಿಕೊಡುತ್ತವೆ. ಆದರೆ ಗುತ್ತಿಗೆದಾರರು ಅದರ ಹೆಸರಿನಲ್ಲಿ ನೆಡುತೋಪುಗಳಲ್ಲಿ ಇರುವ ಬೃಹತ್ ಆಕಾರದ ಬೇರೆ ಜಾತಿ ಮರಗಳನ್ನು ಕಡಿದು ಸಾಗಾಟ ಮಾಡುವ ಅಕ್ರಮ ದಂಧೆಯ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದೆ. ಇಂಥದೊಂದು ಕೃತ್ಯ ಪುತ್ತೂರು ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಬಜತ್ತೂರು ಗ್ರಾಮದ ಹೊಸಗದ್ದೆ ಮತ್ತು ಪೆರಿಯಡ್ಕ ಮಧ್ಯೆ ಇರುವ ಅಕೇಶಿಯಾ ನೆಡುತೋಪುನಲ್ಲಿ ನಡೆಯುತ್ತಿದ್ದು, ಇಲ್ಲಿ ಇದ್ದಂತಹ ಬೃಹತ್ ಗಾತ್ರದ ಹೆಬ್ಬಲಸು ಮತ್ತು ಇತರೇ ಉತ್ತಮ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ವ್ಯಕ್ತವಾಗಿದೆ.

10ಕ್ಕೂ ಅಧಿಕ ಹೆಬ್ಬಲಸು ಮರಗಳ ಮಾರಣ ಹೋಮ:

ಇಲ್ಲಿನ ಅಕೇಶಿಯಾ ನೆಡುತೋಪು ಒಳಗಡೆ ಭಾರೀ ಪ್ರಮಾಣದಲ್ಲಿ ಹೆಬ್ಬಲಸು ಮರಗಳು ಬೃಹದಾಕಾರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದು, ಈ ಪೈಕಿ ಸುಮಾರು 10ಕ್ಕೂ ಅಧಿಕ ಮರಗಳನ್ನು ಕಡಿದು ಸಾಗಾಟ ಮಾಡಲಾಗಿದೆ. ರಾತ್ರಿ ಆಗುತ್ತಿದ್ದಂತೆ ಕಾಡಿನೊಳಗೆ ಹೋಗುವ ಮರಕಳ್ಳರು ಬೆಳಗಾಗುವುದರ ಒಳಗಾಗಿ ಮರಗಳನ್ನು ಕಡಿದು ಹಾಕಿ ಸಾಗಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಅಕೇಶಿಯಾ ನೆಡುತೋಪುನಲ್ಲಿರುವ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟ ಮಾಡಿದ ಬಳಿಕ ಅದರ ಕುರುಹುವನ್ನು ಮಣ್ಣು ಹಾಕಿ ಮುಚ್ಚಿರುವುದು.

ಮಳೆ ಸುರಿಯುತ್ತಿರುವಾಗಲೇ ಕೃತ್ಯ:

ಕಳೆದ 6 ತಿಂಗಳಿನಿಂದ ನೆಡುತೋಪುನಿಂದ ಅಕೇಶಿಯಾ ಮರಗಳ ಕಟಾವು ನಡೆಯುತ್ತಿದ್ದು, ಇದೀಗ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಸಂದರ್ಭದಲ್ಲಿ ಅದರಲ್ಲೂ ರಾತ್ರಿ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಿನಲ್ಲಿ ಟೆಂಪೊ, ಪಿಕ್‌ಅಪ್ ವಾಹನಗಳ ಮೂಲಕ ಮರಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಮರಗಳು ಮೆಲ್ಕಾರು, ಬಿ.ಸಿ. ರೋಡುನಲ್ಲಿರುವ ಮಿಲ್ ಸೇರಿರುವುದಾಗಿ ಹೇಳಲಾಗಿದೆ.

ಮರ ಕಡಿದ ಕುರುಹು ಕಾಣದಂತೆ ಮುಚ್ಚುವುದು:

ಮರ ಕಡಿದು ದಿಮ್ಮಿಗಳಾಗಿ ಮಾಡಿದ ಬಳಿಕ ಅದರ ಬುಡ ಕಾಣದಂತೆ ಅದರ ಮೇಲೆ ಮಣ್ಣು ಯಾ ಸೊಪ್ಪುಗಳನ್ನು ಹಾಕಿ ಮುಚ್ಚಿ ಹಾಕಿರುವುದು ಕಂಡು ಬಂದಿದೆ. ಅದಾಗ್ಯೂ ಬೃಹತ್ ಗಾತ್ರದ ದಿಮ್ಮಿಗಳನ್ನು ಸಾಗಿಸಲಾಗಿ ಉಳಿದ ಸಣ್ಣ ದಿಮ್ಮಿಗಳನ್ನು ಪಕ್ಕದಲ್ಲಿ ಚರಂಡಿ ಪಕ್ಕದ ಪೊದೆಗೆ ಹಾಕಲಾಗಿ ಮರೆಮಾಚಿರುವುದು ಕಂಡು ಬಂದಿದೆ. ಈ ರೀತಿಯಾಗಿ ಮರಗಳ ಮಾರಣ ಹೋಮ ನಡೆಸಿ ಸರ್ಕಾರಕ್ಕೆ, ಅರಣ್ಯ ಇಲಾಖೆಗೆ ವಂಚಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಇರುವ ಕಾಡನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಜರಗಿಸುವ ಬಗ್ಗೆ ಆಗ್ರಹ ವ್ಯಕ್ತವಾಗಿದೆ.

ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಅಕೇಶಿಯಾ ನೆಡುತೋಪುನಲ್ಲಿರುವ ಹೆಬ್ಬಲಸು ಮರಗಳನ್ನು ಕಡಿದು ಮರ ಸಾಗಾಟ ಮಾಡಲಾಗಿ ಸಣ್ಣ ದಿಮ್ಮಿಗಳನ್ನು ಪೊದೆಗೆ ಹಾಕಲಾಗಿ ಮರೆಮಾಚಿರುವುದು.

ಅಕೇಶಿಯಾ ಮರಗಳು ಬೆಂಗಳೂರುಗೆ ಸಾಗಾಟ:

ಅರಣ್ಯ ಇಲಾಖೆ ಮಾಡಿರುವ ಆದೇಶದ ಪ್ರಕಾರ ನೆಡುತೋಪುನಿಂದ ಅಕೇಶಿಯಾ ಮರಗಳನ್ನು ಕಡಿದು ನೆಲ್ಯಾಡಿ ಸಮೀಪ ಮಣ್ಣಗುಂಡಿ ಎಂಬಲ್ಲಿ ಇರುವ ಡಿಪೋಗೆ ಹಾಕಬೇಕು. ಆದರೆ ಇಲ್ಲಿ ಬೃಹತ್ ಗಾತ್ರದ ಮರಗಳು ಮಣ್ಣಗುಂಡಿ ಡಿಪೋಗೆ ಹೋಗದೆ ನೇರವಾಗಿ ಬೆಂಗಳೂರು ಮತ್ತು ಪಿರಿಯಾಪಟ್ಟಣದ ಮಿಲ್‌ಗಳಿಗೆ ಸಾಗಾಟ ಆಗುತ್ತಿರುವ ಬಗ್ಗೆಯೂ ದೂರುಗಳು ವ್ಯಕ್ತವಾಗಿದೆ. ಒಟ್ಟಿನಲ್ಲಿ ನೆಡುತೋಪುನ ಮರಗಳು ಕಳ್ಳರಿಗೆ ಸಾವಿರ, ನೆಟ್ಟವರಿಗೆ ಸಾವಿರ ಎನ್ನುವಂತಾಗಿದ್ದು, ಈ ಮೂಲಕವೂ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ವಂಚನೆ ಆಗುತ್ತಿರುವುದಾಗಿ ಹೇಳಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಿ ಅಕ್ರಮಗಳ ಬಗ್ಗೆ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಟೆಂಡರು ರದ್ದು ಮಾಡಿ ಮರು ಟೆಂಡರು ಕರೆಯುವಂತೆ ಆಗ್ರಹ ವ್ಯಕ್ತವಾಗಿದೆ.

ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಅಕೇಶಿಯಾ ನೆಡುತೋಪುನಲ್ಲಿರುವ ಬೃಹತ್ ಗಾತ್ರದ ಹೆಬ್ಬಲಸು ಮರಗಳು.

99 ಎಕ್ರೆ, 20 ಸಾವಿರಕ್ಕೂ ಅಧಿಕ ಅಕೇಶಿಯಾ ಮರಗಳು ಕಟಾವಿಗೆ ಆದೇಶ

ಬಜತ್ತೂರು ಗ್ರಾಮದ ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಇರುವ 3ನೇ ಬ್ಲಾಕ್‌ನಲ್ಲಿ 99 ಎಕ್ರೆ ಅಕೇಶಿಯಾ ನೆಡುತೋಪು ಇದ್ದು, ಸುಮಾರು 20 ಸಾವಿರಕ್ಕೂ ಅಧಿಕ ಅಕೇಶಿಯಾ ಮರಗಳು ಇದ್ದು, ಇವುಗಳ ಕಟಾವಿಗೆ ಪುತ್ತೂರು ಮೂಲದ ವ್ಯಕ್ತಿಗೆ ಟೆಂಡರು ಆಗಿ ಆದೇಶ ಆಗಿರುತ್ತದೆ. ಇವರು ಕೊಕ್ಕಡ ಮೂಲದ ವ್ಯಕ್ತಿಯೋರ್ವರಿಗೆ ಕಟಾವು ಮಾಡಲು ಗುತ್ತಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇವರೊಳಗೆ ಪೆರಿಯಡ್ಕ, ಮಠ, ನೆಲ್ಯಾಡಿ ಸೇರಿದಂತೆ ೪ ಮಂದಿ ಪಾಲುದಾರರು ಇದ್ದು, ಇವರುಗಳು ಈ ಕೃತ್ಯದ ನೇರ ಭಾಗಿದಾರರು ಎಂದು ಹೇಳಲಾಗಿದೆ.

ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ-ಡಿ.ಎಫ್.ಒ.

ಅಕೇಶಿಯಾ ನೆಡುತೋಪುನಿಂದ ಮರಗಳ ಕಟಾವು ಮಾಡಿ ಡಿಪೋಗೆ ಹಾಕುವುದು ಹೊರತಾಗಿ ಆ ಮೂಲಕ ಏನೇ ಅಕ್ರಮ ನಡೆದರೂ ಅಪರಾಧ ಆಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ.

-ದಿನೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು.

LEAVE A REPLY

Please enter your comment!
Please enter your name here