ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದೆ ಹಲವು ಸಮಸ್ಯೆಗಳು-ವೈದ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಗ್ರಾಪಂ ಅಧ್ಯಕ್ಷರು

  • ಕೆದಂಬಾಡಿ ಗ್ರಾಪಂ ತ್ರೈಮಾಸಿಕ ಕೆಡಿಪಿ ಸಭೆ

 

ಪುತ್ತೂರು: ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಇತ್ತೀಚೆಗೆ ನಾಯಿ ಕಚ್ಚಿದ ವ್ಯಕ್ತಿಯೋರ್ವರು ಆರೋಗ್ಯ ಕೇಂದ್ರಕ್ಕೆ ಸಂಜೆ ವೇಳೆ ಚುಚ್ಚುಮದ್ದು ತೆಗೆದುಕೊಳ್ಳಲು ಹೋಗಿದ್ದ ಸಮಯ ನಮಗೆ ಮನೆಗೆ ಹೋಗಲು ತಡವಾಯಿತು ನೀವು ನಾಳೆ ಬನ್ನಿ ಎಂದು ಹಿಂದಕ್ಕೆ ಕಳುಹಿಸಿದ ವಿಷಯದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರನ್ನು ಗ್ರಾಪಂ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡ ಘಟನೆ ಕೆದಂಬಾಡಿ ಗ್ರಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು. ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಜು.6 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಕ್ತಿಯೊಬ್ಬರು ನಾಯಿ ಕಚ್ಚಿದೆ ಎಂದು ಸಂಜೆ 4.10 ಸಮಯಕ್ಕೆ ಚುಚ್ಚುಮದ್ದಿಗೆ ರಿಕ್ಷಾದಲ್ಲಿ ತೆರಳಿದ್ದರು ಈ ವೇಳೆ ಆರೋಗ್ಯ ಕೇಂದ್ರದವರು ನಮಗೆ ಮನೆಗೆ ಹೋಗಲು ತಡವಾಯಿತು ನೀವು ನಾಳೆ ಬನ್ನಿ ಎಂದು ವಾಪಸ್ ಕಳುಹಿಸಿದ್ದಾರೆ. ಈ ರೀತಿ ಮಾಡಿದ್ದು ಸರಿಯಾ ಎಂದು ಅಧ್ಯಕ್ಷರು ವೈದ್ಯಾಧಿಕಾರಿ ಡಾ| ಭವ್ಯರವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ.ಭವ್ಯರವರು ನಾವು ಯಾರನ್ನು ಹಿಂದಕ್ಕೆ ಕಳುಹಿಸಿಲ್ಲ, ನಮಗೆ ಆ ವ್ಯಕ್ತಿಯನ್ನು ತೋರಿಸಿ ಎಂದು ಹೇಳಿದರು. ಉತ್ತರ ಉತ್ತರಿಸಿದ ಅಧ್ಯಕ್ಷರು ನಾವು ವ್ಯಕ್ತಿಯನ್ನು ತೋರಿಸುವ ಅಗತ್ಯ ಇಲ್ಲ, ಆ ವ್ಯಕ್ತಿಯನ್ನು ಕರೆದುಕೊಂಡು ಬಂದ ರಿಕ್ಷಾ ಚಾಲಕರೂ ಕೂಡ ನಮಗೆ ಹೇಳಿದ್ದಾರೆ. ನಾವು ಸಂಜೆ ೪.೧೦ ಕ್ಕೆ ಹೋಗಿದ್ದು ಆಗ ಲೇಟಾಯಿತು ನೀವು ನಾಳೆ ಬನ್ನಿ ಎಂದು ಹೇಳಿದ್ದಾರೆ ಬಳಿಕ ನಾವು ಪುತ್ತೂರಿಗೆ ಹೋಗಿ ಚುಚ್ಚುಮದ್ದು ಹಾಕಿಸಿಕೊಂಡು ಬಂದಿದ್ದೇವೆ ಎಂದಿದ್ದಾರೆ ಅಲ್ಲದೆ ಚುಚ್ಚುಮದ್ದು ಹಾಕಿದ ಬಗ್ಗೆ ವೈದ್ಯರ ರಶೀದಿ ಕೂಡ ತೋರಿಸಿದ್ದಾರೆ. ಜನರ ಆರೋಗ್ಯವನ್ನು ಕಾಪಾಡುವ ಆಸ್ಪತ್ರೆಯವರು ಈ ರೀತಿ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ಡಾ.ಭವ್ಯರವರು ನಾವು ಯಾರನ್ನೂ ಹಿಂದಕ್ಕೆ ಕಳುಹಿಸಿಲ್ಲ ಆ ವ್ಯಕ್ತಿಯನ್ನು ನಮಗೆ ತೋರಿಸಿ ಅವರು ಆಸ್ಪತ್ರೆಗೆ ಬಂದಿದ್ದು ಹೌದಾ ಇಲ್ಲವಾ ಎಂದು ನಾವು ನೋಡಿ ಉತ್ತರ ನೀಡುತ್ತೇವೆ ಎಂದರು.
ಆಸ್ಪತ್ರೆಯ ನೀರಿನ ಟ್ಯಾಂಕ್ ಕ್ಲೀನ್ ಮಾಡದೆ ವರ್ಷಗಳೇ ಆಯಿತು!


ಆಸ್ಪತ್ರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ಸ್ವಚ್ಛ ಮಾಡದೆ ಹಲವು ತಿಂಗಳುಗಳೆ ಆಗಿದೆ. ಈ ಹಿಂದೆ ಕೂಡ ಈ ಬಗ್ಗೆ ಆಸ್ಪತ್ರೆಯವರ ಗಮನಕ್ಕೆ ತರಲಾಗಿದೆ ಆದರೂ ಸ್ವಚ್ಛ ಮಾಡಿಲ್ಲ ಯಾಕೆ ಎಂದು ರತನ್ ರೈ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಯವರು ಸ್ವಚ್ಚ ಮಾಡಿಸಲು ನಮ್ಮಲ್ಲಿ ಫಂಡ್ ಇಲ್ಲ ಎಂದರು. ಹಣ ಇಲ್ಲ ಎಂದು ಹೇಳುವುದು ಎಷ್ಟು ಸರಿ? ಸ್ವಚ್ಚತೆ ಕಾಪಾಡುವುದು ನಮ್ಮ ಜವಬ್ದಾರಿ ಆಗಿದೆ. ನಿಮ್ಮಲ್ಲಿ ಹಣ ಇಲ್ಲ ಎಂದಾದರೆ ಪಂಚಾಯತ್‌ಗೆ ವಿಷಯ ತಿಳಿಸಿ ನಾವು ಸ್ವಚ್ಚ ಮಾಡಿಕೊಡುತ್ತೇವೆ ಎಂದರು. ಆಸ್ಪತ್ರೆಯ ಸುತ್ತ ಪೊದೆ ತುಂಬಿ ಹೋಗಿದೆ. ಮೀಟಿಂಗ್ ಹಾಲ್‌ನ ಕಿಟಕಿಯೊಳಗೆ ಬಳ್ಳಿಗಳು ಹಬ್ಬಿಕೊಂಡಿವೆ. ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನಳ್ಳಿಯಲ್ಲಿ ನೀರು ಬರುತ್ತಿಲ್ಲ? ಊರಿಗೆ ಬುದ್ದಿ ಹೇಳುವ ಆಸ್ಪತ್ರೆ ಸಿಬ್ಬಂದಿಗಳು ತಮ್ಮ ಆಸ್ಪತ್ರೆಯ ಸುತ್ತ ಕ್ಲೀನ್ ಇಟ್ಟುಕೊಂಡಿಲ್ಲ ಎಂದು ಸಭೆಯಿಂದ ಕೆಲವು ಮಂದಿ ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ಅಧ್ಯಕ್ಷ ರತನ್ ರೈಯವರು ಮಾತನಾಡಿ, ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮಲ್ಲಿ ಹಣದ ಕೊರತೆ ಇದ್ದರೆ ದಯವಿಟ್ಟು ಪಂಚಾಯತ್ ಗಮನಕ್ಕೆ ತನ್ನಿ ನಾವು ಸ್ವಚ್ಛತೆ ಮಾಡಿಕೊಡುತ್ತೇವೆ ಎಂದರು. ಇದಕ್ಕೆ ವೈದ್ಯಾಧಿಕಾರಿಯವರು ಒಪ್ಪಿಗೆ ಸೂಚಿಸಿದರು.

ಗ್ರಾಮದ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ ಬರುತ್ತಿದೆ
ಗ್ರಾಮದ ಅಭಿವೃದ್ಧಿಯ ವಿಷಯದಲ್ಲಿ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ. ಯಾವುದಾದರೂ ಅಭಿವೃದ್ಧಿ ಕಾಮಗಾರಿಗಳು ಗ್ರಾಮಕ್ಕೆ ಬಂದರೆ ಅರಣ್ಯ ಇಲಾಖೆ ನಡುವಲ್ಲಿ ಬಂದು ಕಾಮಗಾರಿಗೆ ಅಡ್ಡಿ ಪಡಿಸುತ್ತಿದೆ. ಕೆದಂಬಾಡಿ ಗ್ರಾಮಕ್ಕೆ ಮಂಜೂರು ಆಗಿದ್ದ ಕೆಎಂಎಫ್ ಘಟಕ ಕೂಡ ಅರಣ್ಯ ಇಲಾಖೆಯ ಕಾರಣ ಗ್ರಾಮದಿಂದ ರದ್ದಾಗುವಂತಾಗಿದೆ ಎಂದ ಅಧ್ಯಕ್ಷ ರತನ್ ರೈಯವರು, ಗ್ರಾಮದ ಬೋಳೋಡಿಯಲ್ಲಿರುವ ಗೋಮಾಳ ಜಾಗದಲ್ಲಿ ಅರಣ್ಯ ಇಲಾಖೆ ಪ್ಲಾಂಟೇಶನ್ ಮಾಡಿದೆ ಎಂದು ವರದಿ ನೀಡಿದೆ ನಾವು ಕೆಎಂಎಫ್‌ಗೆ ಜಾಗ ನೀಡಲು ಹೋದಾಗ ಅರಣ್ಯ ಇಲಾಖೆ ಇದು ನಮ್ಮ ಪ್ಲಾಂಟೇಶನ್ ಜಾಗ ಎಂದು ಹೇಳಿಕೊಂಡಿದೆ. ಆದರೆ ಇಲ್ಲಿ ರುವ ಜಾಗದಲ್ಲಿ ಅರ್ಧದಷ್ಟು ಜಾಗದಲ್ಲಿ ಮರಗಳೇ ಇಲ್ಲ, ಬೇಕಿದ್ದರೆ ಬಂದು ಪರಿಶೀಲನೆ ಮಾಡಿ, ಪರಿಶೀಲನೆ ಬಳಿಕ ಎಷ್ಟು ಜಾಗದಲ್ಲಿ ಮರಗಳಿವೆ ಮತ್ತು ಎಷ್ಟು ಜಾಗದಲ್ಲಿ ಇಲ್ಲ ಎಂದು ವರದಿ ನೀಡಿದರೆ ಉತ್ತಮ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಕೃಷ್ಣ ಜೋಗಿಯವರು, ನಾವು ೨೦೧೨ ರಲ್ಲಿ ಪ್ಲಾಂಟೇಶನ್ ಮಾಡಿದ್ದೇವೆ. ಎಲ್ಲೋ ಕೆಲವು ಕಡೆಗಳಲ್ಲಿ ಮರಗಳು ಸತ್ತು ನಶಿಸಿ ಹೋಗಿರಬಹುದು ಹಾಗಂತ ಪ್ಲಾಂಟೇಶನ್ ಇದೆ ಎಂದರು. ಯಾವುದಕ್ಕೂ ನೀವು ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಅಧ್ಯಕ್ಷರು ಹೇಳಿದರು.

ಬಿದಿರು ಬೆಳೆಸಿ ಲಾಭ ಗಳಿಸಿ
ಖಾಲಿ ಜಾಗದಲ್ಲಿ ಬಿದಿರು ಬೆಳೆಸುವ ಮೂಲಕ ಲಾಭ ಗಳಿಸಬಹುದು ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ೧ ಎಕ್ಟೆರ್‌ಗೆ ೪೦೦ ಬಿದಿರು ಗಿಡಗಳನ್ನು ನಾಟಿ ಮಾಡಿದರೆ ೩ ವರ್ಷಕ್ಕೆ ೧ ಗಿಡಕ್ಕೆ ೧೨೫ ರೂಪಾಯಿಗಳಂತೆ ೫೦ ಸಾವಿರ ರೂ.ಸಹಾಯಧನ ಪಡೆಯಬಹುದು ಎಂದರು. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾದಿರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಗ್ರಾಮಕ್ಕೆ ಅಂಬೇಡ್ಕರ್ ಭವನ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾದಿರಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ ಸ್ಮಶಾನಕ್ಕೆ ಅನುದಾನ ನೀಡಲು ಕೂಡ ಬರೆಯಲಾಗಿದೆ ಈ ಬಗ್ಗೆ ಮಾಹಿತಿ ಕೊಡಿ ಎಂದು ರತನ್ ರೈಯವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರಲ್ಲಿ ಕೇಳಿಕೊಂಡರು.

ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹಧನ
ಅಂತರ್‌ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದ್ದು ಎಸ್‌ಸಿ ಮತ್ತು ಎಸ್‌ಟಿ ಪಂಗಡದವರು ಅಂತರ್‌ಜಾತಿ ವಿವಾಹವಾದರೆ ೨ ಲಕ್ಷದಿಂದ ೩ ಲಕ್ಷ ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ವಿಠಲ್ ಮಾಹಿತಿ ನೀಡಿದರು. ಎಸ್‌ಸಿ ಮತ್ತು ಎಸ್‌ಟಿ ಪಂಗಡದೊಳಗೆ ವಿವಾಹವಾದರೆ ೨ ಲಕ್ಷ ರೂ.ಪ್ರೋತ್ಸಾಹಧನ ನೀಡಲಾಗುತ್ತಿದೆ ಇದಲ್ಲದೆ ಎಸ್‌ಸಿ, ಎಸ್‌ಟಿಯವರ ೧೦ ಮಂದಿ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ರೂ.೫೦ ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಈ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ತಿಂಗಳಾಡಿ ಸಿಎ ಬ್ಯಾಂಕ್‌ನಲ್ಲಿ ಬ್ಯಾಟರಿ ಸ್ಕೂಟರ್‌ಗೆ ಸಾಲ ಇಲ್ಲ
ಸಹಕಾರ ಸಂಘದ ಬಗ್ಗೆ ಮಾಹಿತಿ ನೀಡಿದ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಿಬ್ಬಂದಿ ಪ್ರೀತಂರವರು, ಸಂಘದಿಂದ ಈಗಾಗಲೇ ೭೨೬ ಮಂದಿಗೆ ಬೆಳೆ ಸಾಲ ನೀಡಲಾಗಿದೆ. ಸಾಲದ ಮಿತಿಯನ್ನು ೧ ಎಕ್ರೆಗೆ ೧.೨೫ ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದರು. ಸಾಲ ಮನ್ನಾದಲ್ಲಿ ೫೨೫ ಮಂದಿ ಇದ್ದು ಇದರಲ್ಲಿ ೪೪೧ ಮಂದಿಗೆ ಸಾಲ ಮನ್ನಾ ಆಗಿದೆ. ೧೨ ಮಂದಿಗೆ ಈಗಾಗಲೇ ಬಿಡುಗಡೆಯಾಗಿದೆ ಉಳಿದಂತೆ ೭೦ ಮಂದಿ ಬಾಕಿ ಇದ್ದಾರೆ ಎಂದು ತಿಳಿಸಿದರು. ತಿಂಗಳಾಡಿ ಸಿಎ ಬ್ಯಾಂಕ್‌ನಿಂದ ಬ್ಯಾಟರಿ ಚಾಲಿತ ಸ್ಕೂಟರ್‌ಗೆ ಸಾಲ ಕೊಡಲಾಗುವುದೇ ಎಂದು ಗ್ರಾಪಂ ಸದಸ್ಯರೊಬ್ಬರು ಕೇಳಿದರು ಇದಕ್ಕೆ ಉತ್ತರಿಸಿದ ಬ್ಯಾಟರಿ ಚಾಲಿತ ಸ್ಕೂಟರ್‌ಗೆ ಸಾಲ ಕೊಡುವ ಬಗ್ಗೆ ಬೈಲಾದಲ್ಲಿ ಇಲ್ಲ ಆದ್ದರಿಂದ ಕೊಡಲಾಗುವುದಿಲ್ಲ ಎಂದು ಸಂಘದ ಸಿಬ್ಬಂದಿತಿಳಿಸಿದರು.

ಗ್ರಾಮದಲ್ಲಿದೆ ೮೫೦ ಎಕರೆ ಸರಕಾರಿ ಜಾಗ!?
ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿದ ಗ್ರಾಮ ಕರಣಿಕರಾದ ಸುಜಾತರವರು, ಕೆದಂಬಾಡಿ ಗ್ರಾಮ ಒಟ್ಟು ೨೨೦೨.೯೨ ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಇದರಲ್ಲಿ ರಸ್ತೆ ಮಾರ್ಜಿನ್, ರಸ್ತೆ,ಗೋಮಾಳ, ಸ್ಮಶಾನ, ನದಿ, ಅರಣ್ಯ ಇತ್ಯಾದಿ ಸೇರಿ ಒಟ್ಟು ೮೫೦.೧೪ ಎಕರೆ ಸರಕಾರಿ ಭೂಮಿ ಇದೆ ಎಂದು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಸುಜಾತ ಮುಳಿಗದ್ದೆ, ಸುಜಾತ, ಜಯಲಕ್ಷ್ಮೀ ಬಲ್ಲಾಳ್, ರೇವತಿ ಬೋಳೋಡಿ ಅಲ್ಲದೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಆರ್‌ಪಿ ನಿರಂಜನ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಗ್ರಾಪಂ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಸುನಂದ ರೈ ವಿಷಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ವಿದ್ಯಾಪ್ರಸಾದ್, ಮೃದುಳಾ, ಶಶಿಪ್ರಭಾ ರೈ ಸಹಕರಿಸಿದ್ದರು.

` ಕೆದಂಬಾಡಿ ಗ್ರಾಪಂ ತ್ರೈಮಾಸಿಕ ಕೆಡಿಪಿ ಸಭೆಗೆ ೮ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದ್ದಾರೆ. ಸುಮಾರು ೨೩ ಇಲಾಖೆಗೆ ಸಭೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಕೆಡಿಪಿ ಸಭೆಗೆ ಎಲ್ಲಾ ಇಲಾಖೆಯವರು ಬಂದು ಮಾಹಿತಿ ನೀಡಿದರೆ ಉತ್ತಮ.’- ರತನ್ ರೈ ಕುಂಬ್ರ, ಅಧ್ಯಕ್ಷರು ಗ್ರಾಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.