ಬೆಟ್ಟಂಪಾಡಿ: ಪ್ರಾಥಮಿಕ ಹಂತದ ಚಿಕಿತ್ಸೆ ಮತ್ತು ಸೇವೆಗಳ ‘ಆರೋಗ್ಯ ಮತ್ತು ಕ್ಷೇಮ ಕೇಂದ್ರ’ ಉದ್ಘಾಟನೆ

0

ಬೆಟ್ಟಂಪಾಡಿ: ಇಲ್ಲಿನ ಕಜೆ ನವೋದಯ ವಿದ್ಯಾಸಂಸ್ಥೆಯ ವಸತಿ‌ ಕಟ್ಟಡದಲ್ಲಿ ಬೆಟ್ಟಂಪಾಡಿ ಗ್ರಾಮದ ಆರೋಗ್ಯ ಉಪಕೇಂದ್ರವನ್ನು ಜು. 7 ರಂದು ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ. ಉದ್ಘಾಟಿಸಿದರು.

ಬಳಿಕ ಮಾತನಾಡಿ ಸಾರ್ವಜನಿಕರ ಆರೋಗ್ಯ ವೃದ್ಧಿಸುವಲ್ಲಿ ಈ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಯೋಗ ಕೊಠಡಿಯನ್ನು ಉದ್ಘಾಟಿಸಿದ ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಡಿ. ಮಾತನಾಡಿ ‘ನವೋದಯ ವಿದ್ಯಾಸಂಸ್ಥೆ ವಿದ್ಯೆಯ ಜೊತೆಗೆ ಜನರಿಗೆ ಆರೋಗ್ಯ ನೀಡುವಲ್ಲಿಯೂ ಕಾಳಜಿ ವಹಿಸಿದೆ.‌ ನಮ್ಮ ಕಟ್ಟಡದಲ್ಲಿ ಆರೋಗ್ಯ ಕೇಂದ್ರವನ್ನು ತೆರೆಯಲು ವಿಶೇಷ ಆಸಕ್ತಿ ಹೊಂದಿದ್ದೇವೆ. ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಮಾಡಿಕೊಟ್ಟಿದ್ದೇವೆ. ಜನರಿಗೆ ಹತ್ತಿರವಾಗಿ ಕೇಂದ್ರ ಕೆಲಸ ನಿರ್ವಹಿಸಲಿ’ ಎಂದರು.

ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಮಾತನಾಡಿ ‘ಸರಕಾರದ ಆರೋಗ್ಯ ಸೇವಾ ಕೇಂದ್ರಗಳು ಉತ್ತಮವಾಗಿ ಸೇವೆ ನೀಡಿದರೂ ಜನರಿಗೆ ಸರಕಾರಿ ಎಂದರೆ ಉದಾಸೀನ ಪ್ರವೃತ್ತಿ ಇದೆ. ಅನೇಕರಿಗೆ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಆಶಾ ಕಾರ್ಯಕರ್ತೆಯರು ಜನರಲ್ಲಿ ಈ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡುವ‌ ಕೆಲಸ ಮಾಡಬೇಕೆಂದರು.

ಆರೋಗ್ಯ ಉಪಕೇಂದ್ರದಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಸಮುದಾಯ ಆರೋಗ್ಯಾಧಿಕಾರಿ ರಾಜಶ್ರೀ ಹೊಸಮಣಿಯವರು ‘2018 ರಲ್ಲಿ ಪ್ರಧಾನಿಯವರು ಈ ಯೋಜನೆಗೆ ಚಾಲನೆ ನೀಡಿದ್ದು ಬೆಟ್ಟಂಪಾಡಿ ಯಲ್ಲಿ ಸಮರ್ಪಕ ಕಟ್ಟಡಗಳಿಲ್ಲದೇ ಆರಂಭವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಮಂಜೂರಾತಿಯಾಗಿದೆ. ಬೆಟ್ಟಂಪಾಡಿ ಪಂಚಾಯತ್ ನವರು ಈ ನಿಟ್ಟಿನಲ್ಲಿ ಸಹಕಾರ‌ ನೀಡುತ್ತಿದ್ದಾರೆ. ಪ್ರಧಾನಿಯವರು ಸೂಚಿಸಿದಂತೆ 12 ವಿಧದ ಪ್ರಾಥಮಿಕ ಚಿಕಿತ್ಸೆ ಮತ್ತು ಆರೈಕೆಯ ಸೇವೆಗಳು ಇಲ್ಲಿ‌ ನೀಡಲಾಗುತ್ತದೆ’ ಎಂದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಪ್ರಕಾಶ್ ರೈ ಬೈಲಾಡಿ, ನವೋದಯ ವಿದ್ಯಾಸಮಿತಿಯ ಕಾರ್ಯದರ್ಶಿ ಸಹಕಾರವನ ನಾರಾಯಣ ಭಟ್ ಉಪಸ್ಥಿತರಿದ್ದರು.
ಆಶಾಕಾರ್ಯಕರ್ತೆ ರಾಧಾಮಣಿ ಪ್ರಾರ್ಥಿಸಿದರು. ಆರೋಗ್ಯ ಸಹಾಯಕಿ ಯಶೋಧಾ ಸ್ವಾಗತಿಸಿ ನಿರೂಪಿಸಿದರು. ಇರ್ದೆ ಉಪಕೇಂದ್ರದ ಆರೋಗ್ಯ ಸಹಾಯಕಿ ಪ್ರೇಮಲತಾ ವಂದಿಸಿದರು. ಆಶಾ ಕಾರ್ಯಕರ್ತೆಯರಾದ ಮಮತಾ, ಭವಾನಿ, ಸೀತಮ್ಮ, ಪಂಚಾಯತ್ ಸಿಬಂದಿ‌ ಸಂದೀಪ್ ತಲಪ್ಪಾಡಿ ಸಹಕರಿಸಿದರು.

ಪ್ರಾಥಮಿಕ ಹಂತದ ಚಿಕಿತ್ಸೆಗಳಿಗೆ ಇಲ್ಲಿ ಭೇಟಿ ನೀಡಿ
ಈ ಕೇಂದ್ರದಲ್ಲಿ ಕ್ಯಾನ್ಸರ್ ರೋಗಿಗಳ ಸ್ಕ್ರೀನಿಂಗ್, ಬಿ.ಪಿ., ಶುಗರ್ ಮಾತ್ರೆಗಳು, ಗರ್ಭಿಣಿ – ಬಾಣಂತಿಯರು ಮತ್ತು ಮಕ್ಕಳ ಆರೈಕೆ, ಸಾಂಕ್ರಾಮಿಕ‌ ರೋಗಗಳ ತಡೆಗಟ್ಟುವಿಕೆ, ಹದಿಹರೆಯದವರ ಸಮಸ್ಯೆಗಳಿಗೆ ಸಲಹೆ, ಕಣ್ಣು, ಕಿವಿಗಳ ಸಮಸ್ಯೆಗಳಿಗೆ ಪ್ರಾಥಮಿಕ ಆರೈಕೆ, ವಯಸ್ಸಾದವರ ಆರೈಕೆ, ಸಣ್ಣಪುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ಸೇರಿದಂತೆ 12 ರೀತಿಯ ಪ್ರಾಥಮಿಕ ಹಂತದ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಗುತ್ತದೆ. ಅಲ್ಲದೇ ವಾರಕ್ಕೊಮ್ಮೆ ಯೋಗ ತರಬೇತಿಯೂ ನಡೆಯಲಿದೆ. ಸಾರ್ವಜನಿಕರು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗಡೆ ಇಲ್ಲಿ ಸೇವೆ ಪಡೆಯಬಹುದಾಗಿದೆ. ಪ್ರತೀ 3 ನೇ ಮಂಗಳವಾರ ಮಕ್ಕಳಿಗೆ ಚುಚ್ಚುಮದ್ದು ನಡೆಯಲಿದೆ’ ಎಂದು ಸಮುದಾಯ ಆರೋಗ್ಯಾಧಿಕಾರಿ ರಾಜೇಶ್ರೀ ಹೊಸಮಣಿ ಹೇಳಿದರು.

LEAVE A REPLY

Please enter your comment!
Please enter your name here