ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಪದಪ್ರದಾನ

0
  • `ಪದ್ಮಶ್ರೀ ಮಹಾಲಿಂಗ ನಾಯ್ಕ್   ಸನ್ಮಾನ
  • ಕುಟುಂಬಿಕರಿಂದ ಹಾರಾರ್ಪಣೆ
  • ಸರಕಾರಿ ಶಾಲೆಗೆ ಸಹಾಯಹಸ್ತ

 

 

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.7ರಂದು ಸಂಜೆ ನೆಹರುನಗರದ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗಿತು.

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಮಾತೃಸಂಸ್ಥೆಯಾಗಿರುವ ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಉಮಾನಾಥ್ ಪಿ.ಬಿರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿ, ರೋಟರಿ ಪುತ್ತೂರು ಕ್ಲಬ್‌ನ ೫೦ನೇ ವರ್ಷದ ಅಂಗವಾಗಿ ರೋಟರಿ ಸ್ವರ್ಣವನ್ನು ಪ್ರಾಯೋಜಿಸಿತ್ತು ಮಾತ್ರವಲ್ಲದೆ ರೋಟರಿ ಸ್ವರ್ಣ ಸೇರಿದಂತೆ ಒಟ್ಟು ನಾಲ್ಕು ಕ್ಲಬ್‌ಗಳ ಉದಯಕ್ಕೆ ಕಾರಣವಾಗಿದೆ. ಕೇವಲ 35 ಜನ ಸದಸ್ಯರಿರುವ ಈ ರೋಟರಿ ಸ್ವರ್ಣವು ಗಮನಾರ್ಹ ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸಿದೆ. 8 ಸಂಖ್ಯೆಗೆ ಕೊನೆಯಿಲ್ಲ ಎಂಬಂತೆ ಪ್ರಸ್ತುತ 8ನೇ ಅಧ್ಯಕ್ಷರಾಗಿರುವ ಪ್ರಾಯದಲ್ಲಿ `ಯುವ’ಕರಂತಿರುವ ಹಿರಿಯರಾದ ವೆಂಕಟ್ರಮಣ ಗೌಡರವರು ೮ ಸಂಖ್ಯೆಗೆ ಕೊನೆಯಿಲ್ಲದಂತೆ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.


ಪುತ್ತೂರು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರರವರು ಮಾತನಾಡಿ, ರೋಟರಿ ಹಾಗೂ ಲಯನ್ಸ್ ಎಂಬ ಸೇವಾ ಸಂಸ್ಥೆಗಳು ಒಂದೇ ನಾಣ್ಯದ ಎರಡು ಮುಖಗಳು. ಎರಡು ಸಂಸ್ಥೆಗಳ ಉದ್ಧೇಶ ಒಂದೇ. ಅದು ಸಮಾಜದಲ್ಲಿನ ಅಶಕ್ತರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದಾಗಿದೆ. ಒಂದರ್ಥದಲ್ಲಿ ಸರಕಾರ ಮಾಡದ ಕಾರ್ಯಗಳನ್ನು ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳು ಮಾಡುತ್ತಾ ಬಂದಿದೆ. ಸಮಾಜದ ಅಭಿವೃದ್ಧಿಗೆ ಕೊಡುವ ದಾನಿಗಳಿದ್ದಾರೆ. ಆದರೆ ತೆಗೆದುಕೊಳ್ಳುವವರು ಇಲ್ಲ. ಆ ಕೆಲಸ ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳು ಮಾಡ್ತಾ ಇದೆ ಎಂದು ಹೇಳಿದರು.


ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈರವರು ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿಯ ಪ್ರಥಮ ಮಹಿಳಾ ಅಧ್ಯಕ್ಷೆ ಜೆನಿಫರ್ ಜೋಸ್‌ರವರ ಧ್ಯೇಯ ವಾಕ್ಯವಾದ `ಇಮ್ಯಾಜಿನ್ ರೋಟರಿ’ಯ ಮುಖಾಂತರ ರೋಟರಿ ಸದಸ್ಯರು ಸಮಾಜಮುಖಿ ಕಾರ್ಯಗಳ ಮಾಡುವ ಮೂಲಕ ಜೀವನದ ಎಲ್ಲಾ ಸ್ತರಗಳ ಉತ್ತುಂಗಕ್ಕೆ ಪ್ರಯತ್ನಿಸಬೇಕಾಗಿದೆ. ಜಿಲ್ಲಾ ಯೋಜನೆಗಳಾದ ಜಲ ಸಿರಿ, ವನ ಸಿರಿ, ಆರೋಗ್ಯ ಸಿರಿ, ವಿದ್ಯಾ ಸಿರಿಯ ಅಭಿವೃದ್ಧಿ ಬಗ್ಗೆ ರೋಟರಿ ಸದಸ್ಯರು ಹೆಚ್ಚೆಚ್ಚು ಕಾರ್ಯೋನ್ಮುಖರಾಗಬೇಕಿದೆ. ಸದಸ್ಯರು ಟಿಆರ್‌ಎಫ್‌ಗೆ ಹೆಚ್ಚೆಚ್ಚು ದೇಣಿಗೆ ನೀಡುವ ಮೂಲಕ ಜಗತ್ತಿನಾದ್ಯಂತ ಸೇವೆ ಮಾಡಲು ಅವಕಾಶವಾಗುತ್ತದೆ ಎಂದರು.

ವಲಯ ಸೇನಾನಿ ಸೆನೋರಿಟಾ ಆನಂದ್‌ರವರು ಕ್ಲಬ್ ಬುಲೆಟಿನ್ `ಸ್ವರ್ಣದೀಪ’ವನ್ನು ಅನಾವರಣಗೊಳಿಸಿ ಮಾತನಾಡಿ, ರೋಟರಿ ಸ್ವರ್ಣದ ಸದಸ್ಯೆಯಾಗಿದ್ದು ಪ್ರಸ್ತುತ ರೋಟರಿ ವಲಯ ಸೇನಾನಿಯಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಅಭಿನಂದನೆಗಳು. ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರು ಮಾಡಿದ ಉತ್ತಮ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಅದರಂತೆ ನೂತನ ಅಧ್ಯಕ್ಷರ ಸಮಾಜಮುಖಿ ಕನಸುಗಳಿಗೆ ಕ್ಲಬ್‌ನ ಸರ್ವ ಸದಸ್ಯರು ಸಹಕಾರ ನೀಡಿದಾಗ ಕ್ಲಬ್ ಮತ್ತಷ್ಟು ಎತ್ತರಕ್ಕೇರಲು ಸಾಧ್ಯವಾಗುತ್ತದೆ ಎಂದರು.

ರೋಟರಿ ಸ್ವರ್ಣದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರು ಸ್ವಾಗತಿಸಿ ಮಾತನಾಡಿ, ನನಗೆ ಇತರ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅನುಭವವಿಲ್ಲ. ಆದ್ದರಿಂದ ಪ್ರತಿಷ್ಠಿತ ರೋಟರಿ ಸಂಸ್ಥೆಯ ಬಗ್ಗೆ ನನಗೆ ಪರಿಕಲ್ಪನೆ ಇರಲಿಲ್ಲ. ಯಾವುದೇ ಪ್ರಶಸ್ತಿ ಸಿಗಬೇಕು ಎಂಬಂತೆ ಕೆಲಸಗಳನ್ನು ಮಾಡದೆ, ಮಾಡಿದ ಕೆಲಸಗಳು ಜನರಿಗೆ ಮುಟ್ಟುವಂತಹ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಕಪಾಟಿನಲ್ಲಿರುವ ಪುಸ್ತಕವನ್ನು ಸಾರ್ವಜನಿಕ ಗ್ರಂಥಾಲಯದಲ್ಲಿ ಇಟ್ಟ ಪರಿಣಾಮ ಇಂದು ನಾನು ಯಾರು ಅಂತ ಸಮಾಜಕ್ಕೆ ಗೊತ್ತಾಗುವಂತೆ ಮಾಡಿದ್ದು ರೋಟರಿಯಾಗಿದೆ. ಆದ್ದರಿಂದ ನಾನು ಸಂತೋಷದಿಂದಲೇ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ ಎಂದರು.

ಕ್ಲಬ್ ಜಿಎಸ್‌ಆರ್ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ರೋಟರಿ ಸ್ವರ್ಣ ಕ್ಲಬ್‌ಗೆ ಪ್ರಸ್ತುತ ಎಂಟರ ಹರೆಯ. ಈಗಾಗಲೇ ಕ್ಲಬ್‌ನ್ನು ಮಹಾಬಲ ಗೌಡ, ಚಂದ್ರಶೇಖರ್ ಮೂರ್ತಿ, ಮನೋಹರ್ ಕುಮಾರ್, ಜಯಂತ್ ಶೆಟ್ಟಿ, ಸುರೇಶ್ ಎಂ, ಸೆನೋರಿಟ ಆನಂದ, ಭಾಸ್ಕರ್ ಕೋಡಿಂಬಾಳರವರು ಯಶಸ್ವಿಯಾಗಿ ಮುನ್ನೆಡೆಸಿದ್ದು ಪ್ರಸ್ತುತ ಹಿರಿಯರಾದ ವೆಂಕಟ್ರಮಣ ಗೌಡರವರು ಎಂಟನೇ ಅಧ್ಯಕ್ಷರಾಗಿ ಕ್ಲಬ್ ಮುನ್ನೆಡೆಸಲು ಸನ್ನದ್ಧರಾಗಿ ನಿಂತಿದ್ದು ಅವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು ಎಂದರು.

ಹೊಸ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಕ್ಲಬ್‌ಗೆ ನಾಲ್ಕು ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಅದರಂತೆ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಸೀತಾರಾಮ ಗೌಡ, ಆಭರಣ ತಯಾರಕ ವಾಸು ಆಚಾರ್ಯ, ಕೃಷಿ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ಪಿ.ಮುಂಗ್ಲಿಮನೆ, ಕೃಷಿಕ ಹಾಗೂ ಪದ್ಮಶ್ರೀ ಜ್ಯುವೆಲ್ಲರ್‍ಸ್‌ನ ಸುಭಾಶ್ ರೈ ಬೆಳ್ಳಿಪ್ಪಾಡಿರವರನ್ನು ಅಸಿಸ್ಟಂಟ್ ಗವರ್ನರ್ ಎ.ಜೆ ರೈಯವರು ರೋಟರಿ ಪಿನ್ ನೀಡಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ಅಧ್ಯಕ್ಷ ಆನಂದ ಗೌಡ ಮೂವಪ್ಪು ನೂತನ ಸದಸ್ಯರನ್ನು ಪರಿಚಯಿಸಿದರು.

ಸನ್ಮಾನ:
ಕಳೆದ ವರ್ಷ ಕ್ಲಬ್ ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಕಾರಣಕರ್ತರಾದ ಕ್ಲಬ್ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹಾಗೂ ಕಾರ್ಯದರ್ಶಿ ಆನಂದ ಗೌಡ ಮೂವಪ್ಪುರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕಿಟ್ ವಿತರಣೆ:
ಯೂತ್ ಸರ್ವಿಸ್‌ನಡಿಯಲ್ಲಿ ಬೋಳಂತಿಮೊಗರು ಸರಕಾರಿ ಶಾಲೆಗೆ ಬ್ಯಾಂಡ್ ವಾದ್ಯದ ಕಿಟ್‌ನ್ನು ಕ್ಲಬ್ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರು ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾರಾಣಿ ಬೈಲಾಡಿರವರಿಗೆ ಹಸ್ತಾಂತರಿಸಿದರು. ಕೈಕಾರ ಸರಕಾರಿ ಶಾಲೆಯ ೫೦ ಮಂದಿ ವಿದ್ಯಾರ್ಥಿಗಳಿಗೆ ಬ್ಯಾಗ್, ಕೊಡೆ, ಫ್ಲಾಸ್ಕ್ ಒಳಗೊಂಡ ಕಿಟ್ ಅನ್ನು ವಿತರಿಸಲಾಯಿತು.

ನೆರವು:
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಕ್ಯಾನ್ಸರ್ ಪೀಡಿತ ರೋಗಿ ಅಬ್ದುಲ್ ರಹಿಮಾನ್ ಎಂಬವರಿಗೆ ಚಿಕಿತ್ಸೆಗೆ ನೆರವಾಗಲೆಂದು ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರು ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುನಿಲ್ ಜಾಧವ್‌ರವರಿಗೆ ದೇಣಿಗೆ ಮೊತ್ತದ ಚೆಕ್‌ನ್ನು ಹಸ್ತಾಂತರಿಸಿದರು.

ಜಿಲ್ಲಾ ಸಮಿತಿಗೆ ಅಭಿನಂದನೆ:
ವಿವಿಧ ರೀತಿಯಲ್ಲಿ ಕೈಜೋಡಿಸಲು ರೋಟರಿ ಜಿಲ್ಲಾ ಸಮಿತಿಗೆ ಆಯ್ಕೆಯಾದ ಕ್ಲಬ್‌ನ ಸದಸ್ಯರಾದ ವಲಯ ಸೇನಾನಿ ಸೆನೋರಿಟ ಆನಂದ್, ಜಯಂತ್ ಶೆಟ್ಟಿ, ಸುರೇಶ್ ಎಂ, ಮಹಾಬಲ ಗೌಡ, ಭಾಸ್ಕರ್ ಕೋಡಿಂಬಾಳ, ದೀಪಕ್ ಬೊಳ್ವಾರುರವರನ್ನು ಗುರುತಿಸಿ ಅವರಿಗೆ ಹೂ ನೀಡಿ ಅಭಿನಂದಿಸಲಾಯಿತು.

ಕುಟುಂಬಿಕರಿಂದ ಹಾರಾರ್ಪಣೆ:
ಕ್ಲಬ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ್ರಮಣ ಗೌಡ ಕಳುವಾಜೆ ದಂಪತಿಯನ್ನು ವೆಂಕಟ್ರಮಣ ಗೌಡರವರ ಮಗ ಜಯಪ್ರಕಾಶ್ ಕಳುವಾಜೆ, ಮಗಳು ಶ್ರೀಮತಿ ಪ್ರತಿಭಾ ದೇವಿ, ಅಳಿಯ ಸಿವಿಲ್ ಇಂಜಿನಿಯರ್ ಎ.ವಿ. ನಾರಾಯಣ, ನಾಲ್ವರು ಮೊಮ್ಮಕ್ಕಳು ಸಹಿತ ಕುಟುಂಬಿಕರು ಹಾರಾರ್ಪಣೆ ಮಾಡುವ ಮೂಲಕ ಶುಭ ಹಾರೈಸಿದರು. ಅಲ್ಲದೆ ಪದ ಪ್ರದಾನ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ ಅಧ್ಯಕ್ಷ ವೆಂಕಟ್ರಮಣ ಗೌಡರವರ ಪತ್ನಿ ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ಪುಷ್ಪಾವತಿ ಕಳುವಾಜೆರವರಿಗೆ ಪತಿ ವೆಂಕಟ್ರಮಣ ಗೌಡರವರೇ ಹೂಹಾರ ಹಾಕಿ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರ ಪತ್ನಿ ಶುಭಲತಾ, ನೂತನ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರ ಪತ್ನಿ ಪುಷ್ಪಾವತಿ ಕಳುವಾಜೆರವರು ಉಪಸ್ಥಿತರಿದ್ದರು. ನಿರ್ಗಮಿತ ಕಾರ್ಯದರ್ಶಿ ಆನಂದ ಗೌಡ ಮೂವಪ್ಪು ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಸುರೇಶ್ ಪಿ ವಂದಿಸಿದರು. ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು ಹಾಗೂ ಶಿಕ್ಷಕಿ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

ಸಾಮಾನ್ಯನಲ್ಲಿ ಸಾಮಾನ್ಯನಾಗಿ ಅಧ್ಯಕ್ಷನಾದ ಹೆಮ್ಮೆ…
ರೋಟರಿ ಎಂಬುದೇ ವಿಶಿಷ್ಟ, ವಿನೂತನ, ವಿಶೇಷ. ರೋಟರಿ ಸಂಸ್ಥೆಯಲ್ಲಿ ಕೃಷಿಕನೂ ಅಧ್ಯಕ್ಷನಾಗಬಹುದು ಎಂಬಂತೆ ಸಾಮಾನ್ಯನಲ್ಲಿ ಸಾಮಾನ್ಯನಾದ ನಾನು ಇದೀಗ ಪ್ರತಿಷ್ಠಿತ ರೋಟರಿ ಸ್ವರ್ಣದ ಅಧ್ಯಕ್ಷನಾದ ಹೆಮ್ಮೆ ನನಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಯಿದೆ ಎಂಬುದನ್ನು ರೋಟರಿ ತೋರಿಸಿಕೊಟ್ಟಿದೆ. ಯೋಜನೆಗಳು ಮಾಡಲು ಆಸೆ, ಕನಸಿದೆ. ಆದರೆ ದೇವರ ಆಶೀರ್ವಾದ ಬೇಕು. ಯೋಜನೆಗಳನ್ನು ಕೇಳಿ ಮಾಡುವುದಲ್ಲ, ಕೇಳದೆ ಮಾಡುವುದು ನನ್ನ ಜಾಯಮಾನವಾಗಿದೆ. ಯೋಜನೆಗಳು ಸಾಕಾರಗೊಳ್ಳಲು ಪ್ರತಿಯೋರ್ವರ ಸಹಕಾರ ಬೇಕು. ಅತಿಥಿಗಳಿಗೆ ಸ್ಮರಣಿಕೆಯಾಗಿ ವೈದ್ಯರಾದ ಎ.ಪಿ ಭಟ್‌ರವರು ಆರೋಗ್ಯ ಸಂಬಂಧ ಬರೆದ `ವೈದ್ಯನ ವಗೈರೆಗಳು’ ಪುಸ್ತಕವನ್ನು ನೀಡಿರುವ ಉದ್ಧೇಶ ಅದರಲ್ಲಿ ಉತ್ತಮ ಆರೋಗ್ಯದ ಟಿಪ್ಸ್‌ಗಳಿವೆ, ಆರೋಗ್ಯ ಕಾಪಾಡಿಕೊಳ್ಳಿ ಎಂಬುದಾಗಿ -ವೆಂಕಟ್ರಮಣ ಗೌಡ ಕಳುವಾಜೆ, ಅಧ್ಯಕ್ಷರು, ರೋಟರಿ ಕ್ಲಬ್ ಸ್ವರ್ಣ

`ಪದ್ಮಶ್ರೀ’ ಸನ್ಮಾನ..
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ೨೦೨೧-೨೨ನೇ ಸಾಲಿನ ಭಾರತ ಸರಕಾರದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾದ ಆಮೈ ಮಹಾಲಿಂಗ ನಾಕ್‌ರವರಿಗೆ ರೋಟರಿ ಸ್ವರ್ಣ ಕ್ಲಬ್ `ರೋಟರಿ ಸ್ವರ್ಣ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವೊಕೇಶನಲ್ ಸರ್ವಿಸ್ ನಿರ್ದೇಶಕ ರಾಮಣ್ಣ ರೈಯವರು ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್   ರವರ‌  ಸನ್ಮಾನ ಪತ್ರ ವಾಚಿಸಿದರು.

ನೂತನ ಪದಾಧಿಕಾರಿಗಳ ಪದ ಪ್ರದಾನ…
ಕ್ಲಬ್‌ನ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ, ಕೋಶಾಧಿಕಾರಿ ಸನತ್ ಕುಮಾರ್ ರೈ ಕುಂಜಾಡಿ, ಉಪಾಧ್ಯಕ್ಷ ಸುಂದರ್ ರೈ ಬಲ್ಕಾಡಿ, ಜೊತೆ ಕಾರ್ಯದರ್ಶಿ ದೇವದಾಸ್ ಪಿ, ಸಾರ್ಜಂಟ್ ಎಟ್ ಆರ್ಮ್ಸ್ ಅಶೋಕ್ ಆಚಾರ್ಯ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಪಬ್ಲಿಕ್ ಇಮೇಜ್ ಪ್ರವೀಣ್ ಕುಮಾರ್ ರೈ, ನಿರ್ದೇಶಕರುಗಳಾದ ಕ್ಲಬ್ ಸರ್ವಿಸ್‌ನ ಆನಂದ ಮೂವಪ್ಪು, ವೊಕೇಶನಲ್ ಸರ್ವಿಸ್‌ನ ರಾಮಣ್ಣ ರೈ, ಕಮ್ಯೂನಿಟಿ ಸರ್ವಿಸ್‌ನ ಸುನಿಲ್ ಜಾಧವ್, ಇಂಟರ್‌ನ್ಯಾಷನಲ್ ಸರ್ವಿಸ್‌ನ ರೋಶನ್ ರೈ ಬನ್ನೂರು, ಯೂತ್ ಸರ್ವಿಸ್‌ನ ದೀಪಕ್ ಬೊಳ್ವಾರ್, ಚೇರ್‌ಮ್ಯಾನ್‌ಗಳಾದ ಉದಯ ಆಚಾರ್ಯ(ಪಲ್ಸ್ ಪೊಲೀಯೊ), ಯಶವಂತ ಗೌಡ ಕಾಂತಿಲ(ಟಿಆರ್‌ಎಫ್), ದೀಪಕ್ ಮಿನೇಜಸ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ವಿಜಯ್ ಡಿ’ಸೋಜ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಸಂಧ್ಯಾ ರಾಣಿ ಬೈಲಾಡಿ(ಟೀಚ್), ವೀರಾ ರೇಶ್ಮಾ ಡಿ’ಸೋಜ(ವಿನ್ಸ್), ಜಯಪ್ರಕಾಶ್ ಜೈನರಗುರಿ(ವೆಬ್), ಮೋಹನ್ ಗೌಡ ನೆಲಪ್ಪಾಲ್(ಸಿಎಲ್‌ಸಿಸಿ), ಎ.ಬಾಬು ಗೌಡ(ವಾಟರ್ ಆಂಡ್ ಸ್ಯಾನಿಟೇಶನ್)ರವರಿಗೆ ಮಾತೃಸಂಸ್ಥೆಯಾಗಿರುವ ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಉಮಾನಾಥ್ ಪಿ.ಬಿರವರು ಪದ ಪ್ರದಾನ ನೆರವೇರಿಸಿದರು. ಸುರೇಂದ್ರ ಆಚಾರ್ಯರವರು ಪದಾಧಿಕಾರಿಗಳನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here