ಪುಣಚ: ಮಳೆಗೆ ಕೊಚ್ಚಿ ಹೋದ ಮಡ್ಯಾರಬೆಟ್ಟು ಸೇತುವೆ- ಜನಸಂಚಾರಕ್ಕೆ ತೊಂದರೆ

0

ಪುತ್ತೂರು: ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಪುಣಚ ಗ್ರಾಮದ ದೇವಿನಗರ- ಕಲ್ಲಾಜೆ-ಮಡ್ಯಾರುಬೆಟ್ಟು- ಅಜೇರು ಮೂಲಕ ಸಾರ್ಯ ಹೋಗುವ ರಸ್ತೆಯ ಮಡ್ಯಾರ ಬೆಟ್ಟು ಎಂಬಲ್ಲಿ ನಿರ್ಮಿಸಿರುವ ಸೇತುವೆ ಕೊಚ್ಚಿ ಹೋಗಿದ್ದು ಜನಸಂಚಾರಕ್ಕೆ ತೊಂದರೆಯುಂಟಾಗಿದೆ. ಬಂಟ್ವಾಳ ತಾಲ್ಲೂಕು ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದಲ್ಲಿ 2013-14ರಲ್ಲಿ 3 ಲಕ್ಷ ಜಿಲ್ಲಾ ಪಂಚಾಯತ್ ಅನುದಾನ ಮತ್ತು 5  ಲಕ್ಷ ಎಂಪಿ ಫಂಡ್ ನಿಂದ ಅನುದಾನ ಬಿಡುಗಡೆಯಾಗಿ ನಿರ್ಮಾಣವಾದ ಸೇತುವೆ ಇದಾಗಿದೆ. ಸೇತುವೆ ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ ಆಜೇರುವಿನಿಂದ ಪುಣಚಕ್ಕೆ ಬರುವವರಿಗೆ ಅಲ್ಲದೆ ಕಲ್ಲಾಜೆಯಿಂದ ಸಾಜ ರಸ್ತೆಯ ಮೂಲಕ ಪುತ್ತೂರು ಇತರ ಪ್ರದೇಶಗಳಿಗೆ ಸಂಚರಿಸುವವರಿಗೆ ಅಲ್ಲದೆ ಮಲ್ಯ ,ಅನಗುಡ್ಡೆ, ಸಾರ್ಯ ಮತ್ತಿತರ ಭಾಗದ ಜನರಿಗೆ ಪೇಟೆಗೆ ಬರಲು ತುಂಬಾ ತೊಂದರೆಯುಂಟಾಗಿದೆ. ಮುಖ್ಯವಾಗಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದಾಗಿದೆ.


ಕಳಪೆ ಕಾಮಗಾರಿ-ಗ್ರಾಮಸ್ಥರ ಆರೋಪ
ಈ ಸೇತುವೆ ನಿರ್ಮಾಣವು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಇದರಿಂದಲೇ ಮಳೆ ನೀರಿಗೆ ಕೊಚ್ಚಿ ಕೊಂಡು ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತೋಡಿನ ಎರಡು ಬದಿಗೆ ಕಗ್ಗಲ್ಲಿನ ತಡೆಗೋಡೆ ಕಟ್ಟಿ ೪ ಫೀಟ್‌ನ ೨ಸಾಲು ಸಿಮೆಂಟ್ ಪೈಪ್ ಗಳನ್ನು ಹಾಕಿ ಸೇತುವೆಯ ಮೇಲಿನ ಗುಡ್ಡದಿಂದ ಸೇತುವೆಯ ನಡುವೆ ಮಣ್ಣು ತುಂಬಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸೇತುವೆಗೆ ಹಾಕಿದ್ದ ಪೈಪುಗಳಲ್ಲಿ ನೀರು ಹೋಗಲು ಸಾಧ್ಯವಾಗದೆ ಪಕ್ಕದ ತೋಟದಲ್ಲಿ ಹೋಗುತ್ತಿತ್ತು. ಪ್ರಸ್ತುತ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಬಂದು ನೀರು ಹರಿದು ಹೋಗಲು ಅವಕಾಶ ವಿಲ್ಲದೆ ಸೇತುವೆ ಕೊಚ್ಚಿ ಕೊಂಡು ಹೋಗಿದೆ. ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂದಿರುವ ಗ್ರಾಮಸ್ಥರು ಈ ಬಗ್ಗೆ ಕೂಡಲೇ ಜನಪ್ರತಿನಿಧಿಗಳು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.

ಭಾರೀ ಮಳೆಯ ಪರಿಣಾಮ ಕಲ್ಲಾಜೆ ಸೇತುವೆಯ ಬದಿಯು ಭಾಗಶಃ ಕುಸಿದಿದ್ದು ಮಡ್ಯಾರಬೆಟ್ಟು ಎಂಬಲ್ಲಿನ ಸೇತುವೆಯು ಸಂಪೂರ್ಣ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಇಲ್ಲದಂತಾಗಿದೆ. ಆಜೇರು ಭಾಗದಿಂದ ಬರುವ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದುದರಿಂದ ಈ ಸಮಸ್ಯೆಯನ್ನು ಮನಗಂಡು ಅತೀ ಶೀಘ್ರವಾಗಿ ಸ್ಪಂದನೆ ನೀಡುವುದರ ಮೂಲಕ ರಸ್ತೆ ಸಂಪರ್ಕಕ್ಕೆ ಅವಕಾಶ, ಅನುದಾನ ಕಲ್ಪಿಸುವುವಂತೆ ಶಾಸಕ ಸಂಜೀವ ಮಠಂದೂರುರವರಿಗೆ ಮನವಿ ಮಾಡಲಾಗಿದೆ. ರಾಮಕೃಷ್ಣ ಮೂಡಂಬೈಲು, ಅಧ್ಯಕ್ಷರು ಪುಣಚ ಗ್ರಾಪಂ

ಮಡ್ಯಾರಬೆಟ್ಟುವಿನಲ್ಲಿ ನಿರ್ಮಿಸಿರುವ ಸೇತುವೆ ಅವೈಜ್ಞಾನಿಕ, ಕಳಪೆಯಾಗಿದೆ. ಸರಿಯಾಗಿ ನೀರು ಹರಿದು ಹೋಗಲು ಸಾಧ್ಯವಾಗದೇ ಇರುವುದರಿಂದ ಸೇತುವೆ ಕೊಚ್ಚಿ ಹೋಗಿದೆ. ಸರಿಯಾದ ರೀತಿಯಲ್ಲಿ ಸೇತುವೆ ನಿರ್ಮಾಣ ಮಾಡಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ, ಸೇತುವೆ ಇಲ್ಲದೆ ಈ ಭಾಗದ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಇದಕ್ಕೆ ಯಾರು ಹೊಣೆ?.ವೆಂಕಟರಮಣ ಪುಣಚ, ಕಾರ್ಯದರ್ಶಿ ನಾಗರೀಕ ಹಿತರಕ್ಷಣಾ ವೇದಿಕೆ ಪುಣಚ

LEAVE A REPLY

Please enter your comment!
Please enter your name here