ಮಳೆಗಾಲದ ಸವಾಲು ಎದುರಿಸಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧ

0

  • ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ತಂಡ| ಅವಶ್ಯಕ ಔಷಧಿ ದಾಸ್ತಾನು
  •  ಡೆಂಗ್ಯೂ, ಮಲೇರಿಯಾ ತಡೆಗೆ ವಿಶೇಷ ಕ್ರಮ-ಮನೆಮನೆಗೆ ತೆರಳಿ ಜಾಗೃತಿ

ಪುತ್ತೂರು: ಮಳೆಗಾಲ ಆರಂಭಗೊಂಡಿದೆ. ಮಳೆಯ ಜೊತೆಗೆ ಗ್ರಾಮಾಂತರ ಭಾಗಗಳಲ್ಲಿ ಸಾಂಕ್ರಾಮಿಕ ರೋಗದ ಹಾವಳಿಯೂ ಶುರುವಾಗುವ ಆತಂಕ ಎದುರಾಗಿದೆ. ಕೋವಿಡ್‌ನ ಕಂಟಕವೂ ಸಂಪೂರ್ಣ ದೂರವಾಗಿಲ್ಲ. ಈ ನಡುವೆ ಎದುರಾಗುವ ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಪ್ರಯತ್ನಿಸುತ್ತಿವೆ. ಇವುಗಳ ಜೊತೆಗೆ ಆರೋಗ್ಯ ಇಲಾಖೆಯು ಕೂಡ ಕೈಜೋಡಿಸಿಕೊಂಡು ಒಟ್ಟು ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ತಾಲೂಕಿನಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ವಿವಿಧ ಇಲಾಖೆಗಳೊಂದಿಗೆ ಆರೋಗ್ಯ ಇಲಾಖೆಯು ಕೂಡ ಸೇರ್ಪಡೆಗೊಂಡಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು. ಪ್ರವಾಹ, ನೆರೆ ಬಂದ ಸಂದರ್ಭದಲ್ಲಿ ಗಲೀಜು ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತದೆ. ಈ ಕಲುಷಿತ ನೀರನ್ನು ಸೇವಿಸಿದ ಸಂದರ್ಭ ಟೈಫಾಯ್ಡ್, ಅತಿಸಾರ, ಭೇದಿ, ಕಾಲೆರಾ, ಇಲಿಜ್ವರ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನೀರಿನ ಮಾದರಿ ಸಂಗ್ರಹಿಸಿ ಕ್ಲೋರಿನೇಷನ್ ಮಾಡಿ ಲ್ಯಾಬ್‌ಗೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ಬಳಿಕ ನೀರು ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಸರ್ಟಿಫಿಕೇಷನ್ ಮಾಡಿ ಬಳಕೆಗೆ ಒದಗಿಸಲಾಗುತ್ತದೆ. ನೀರಿನ ಮೂಲಗಳ ನೀರು ಕುಡಿಯಲು ಅರ್ಹವಾಗಿಲ್ಲದಿದ್ದರೆ ಆ ಮೂಲಗಳನ್ನು ಬಂದ್ ಮಾಡಲಾಗುತ್ತದೆ. ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎರಡು ತಂಡಗಳನ್ನು ರಚಿಸಲಾಗಿದೆ. ವೈದ್ಯರು, ಆಂಬುಲೆನ್ಸ್, ಹೆಲ್ತ್ ವರ್ಕರ್‍ಸ್, ಫೀಲ್ಡ್ ವರ್ಕರ್‍ಸ್, ಹೆಲ್ತ್ ಎಜುಕೇಟರ್‍ಸ್ ಈ ತಂಡದಲ್ಲಿರುತ್ತಾರೆ. ಪ್ರತೀ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನತೆಗೆ ಸಿಗುವಂತೆ ಇಡಲಾಗುತ್ತದೆ. ಈ ತಂಡವು ದಿನದ ೨೪ ಗಂಟೆಗಳ ಕಾಲವೂ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುತ್ತದೆ. ಅಧಿಕಾರಿಗಳೆಲ್ಲರೂ ಕೇಂದ್ರಸ್ಥಾನದಲ್ಲೇ ಇರಬೇಕೆಂಬ ನಿರ್ದೇಶನವಿದ್ದು, ಎಲ್ಲರೂ ಅದಕ್ಕನುಸಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಗೆ ಬೇಕಾದಷ್ಟು ತುರ್ತು ಔಷಧಗಳನ್ನು ದಾಸ್ತಾನು ಇಡಲಾಗಿದೆ. ನಮ್ಮಲ್ಲಿ ಲಭ್ಯವಿಲ್ಲದೇ ಇರುವುದನ್ನು ಖರೀದಿ ಮಾಡಿಕೊಂಡು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ನಿರ್ವಹಣೆ ತೃಪ್ತಿಕರ: ಮಳೆಯ ಜೊತೆಗೆ ಕಾಡುವ ಸಮಸ್ಯೆ ಎಂದರೆ ಅದು ಡೆಂಗ್ಯೂ. ಇದು ಕಳೆದ ೨೦ ವರ್ಷಗಳಿಂದಲೂ ಕಾಡುತ್ತಿರುವ ಸಮಸ್ಯೆಯಾಗಿದೆ. ಇತ್ತೀಚೆಗೆ ಮಲೇರಿಯಾ ಪ್ರಕರಣಗಳು ಇಳಿಮುಖ ಕಾಣುತ್ತಿವೆ. ಈ ಭಾಗದಲ್ಲಿ ಹೆಚ್ಚು ತೋಟಗಳು, ರಬ್ಬರ್ ಟ್ಯಾಪಿಂಗ್ ಚಿಪ್ಪಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ನಿಯಂತ್ರಣ ಸವಾಲಾಗಿದೆ. ಈ ನಿಟ್ಟಿನಲ್ಲಿ ಮನೆಮನೆಗೆ ಹೋಗಿ ಲಾರ್ವಾ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಸೊಳ್ಳೆಯ ಜಾತಿ ಯಾವುದು ಎನ್ನುವುದನ್ನು ಪತ್ತೆಹಚ್ಚಿ ಆಯಾ ಜಾತಿಯ ಸೊಳ್ಳೆಗಳ ನಿಯಂತ್ರಣದ ಬಗ್ಗೆಯೂ ಮಾಹಿತಿ ನೀಡುವ ಕೆಲಸವಾಗಿದೆ. ಈ ವರ್ಷ ೭೭ ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ೫ ಪ್ರಕರಣಗಳು ಖಚಿತಪಟ್ಟಿವೆ. ಪಾಣಾಜೆಯಿಂದ ೧ ಮಲೇರಿಯಾ ಪ್ರಕರಣ ವರದಿಯಾಗಿದೆ. ಸೊಳ್ಳೆ ಉತ್ಪಾದನಾ ಕೇಂದ್ರಗಳಲ್ಲಿ ರಾಸಾಯನಿಕ ಸಿಂಪಡಣೆ, ಸೊಳ್ಳೆ ಉತ್ಪಾದನಾ ಕೇಂದ್ರಗಳ ನಾಶದ ಬಗ್ಗೆ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಬಾರಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಈಗ ಹವಾಮಾನ ಬದಲಾವಣೆಯಿಂದ ಮಕ್ಕಳಿಗೆ ಬರುವಂತಹ ಸಾಮಾನ್ಯ ಫ್ಲೂ ಇದೆ. ಆದರೆ ಪ್ರತೀ ಪ್ರಕರಣವನ್ನು ಕೂಡ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಪ್ರತಿಯೊಂದನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ.

ಕೋವಿಡ್ ನಿರ್ವಹಣೆಯಲ್ಲಿ ಸಫಲತೆ: ಕೋವಿಡ್‌ಗೆ ಸಂಬಂಧಿಸಿದಂತೆ ಕಳೆದ ೩ ವರ್ಷಗಳಿಂದ ಪುತ್ತೂರಿನಲ್ಲಿ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿರಲಿಲ್ಲ. ಆದರೆ ೨ ದಿನದ ಹಿಂದೆ ೧ ಕೇಸ್ ಬಜತ್ತೂರಿನಲ್ಲಿ ಕಂಡುಬಂದಿದೆ. ವ್ಯಾಕ್ಸಿನೇಷನ್ ೧೦೦% ಆಗಿದೆ. ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ವ್ಯಾಕ್ಸಿನೇಷನ್ ಕೂಡ ನೀಡಲಾಗುತ್ತಿದೆ. ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಕೂಡ ಲಸಿಕೆ ನೀಡಲಾಗುತ್ತಿದೆ. ಈಗ ಶಾಲಾ ಮಕ್ಕಳಿಗೆ ಲಸಿಕೆ ನೀಡುವ ಸವಾಲು ಇದೆ. ಅದನ್ನು ಕೂಡ ಶೇ.೯೮ರಷ್ಟು ಪೂರೈಸಲಾಗಿದೆ. ಪ್ರತಿಯೊಂದು ವರ್ಗದ ವ್ಯಾಕ್ಸಿನೇಷನ್‌ನಲ್ಲೂ ಗುರಿ ಸಾಧಿಸುವಲ್ಲಿ ಸಫಲತೆ ಕಾಣಲಾಗಿದೆ ಎನ್ನುವುದು ಡಾ.ದೀಪಕ್ ರೈ ನೀಡುವ ಮಾಹಿತಿ.

ಸದ್ಯಕ್ಕೆ ಮುಂದಿರುವ ಸವಾಲುಗಳು: ಸದ್ಯದ ಹವಾಮಾನ ಪರಿಸ್ಥಿತಿಯೇ ಆರೋಗ್ಯ ಇಲಾಖೆಗೆ ಮೊತ್ತಮೊದಲ ಸವಾಲು. ಮಳೆ ನಿಂತ ಕೂಡಲೇ ಸೊಳ್ಳೆ ಉತ್ಪಾದನಾ ತಾಣಗಳು ಹೆಚ್ಚುತ್ತವೆ. ಇದರಿಂದ ಮತ್ತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ಸವಾಲು ಕೂಡ ಇದೆ. ಈ ನಿಟ್ಟಿನಲ್ಲಿ ಹಲವು ಕ್ಯಾಂಪ್‌ಗಳನ್ನು ಮಾಡಲಾಗಿದೆ. ಇತ್ತೀಚೆಗೆ ಹೊಸ ಡಯಾಬಿಟಿಸ್, ಹೈಪರ್‌ಟೆನ್ಸಿವ್ ಪೇಷೆಂಟ್‌ಗಳನ್ನು ಗುರುತಿಸಲಾಗಿದೆ. ಈ ನಡುವೆ ಭಾರತವು ಡಯಾಬಿಟಿಸ್‌ನ ರಾಜಧಾನಿ ಎಂದು ಹೆಸರು ಪಡೆದುಕೊಂಡಿದೆ. ಹೀಗಾಗಿ ಇದರಿಂದ ಬಳಲುತ್ತಿರುವವನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಬೇಕಿದೆ. ಪುತ್ತೂರು ತಾಲೂಕಿನಲ್ಲಿ ೩೦ ವರ್ಷ ಮೇಲ್ಪಟ್ಟ ಜನಸಂಖ್ಯೆ ಸುಮಾರು ೨,೨೫,೦೦೦ ಇದೆ. ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಈ ಪೈಕಿ ೭೮% ಸ್ಕ್ರೀನಿಂಗ್ ಮಾಡಲಾಗಿದೆ. ಇದು ಕೂಡ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಅಲ್ಲದೆ, ಕ್ಷಯರೋಗವನ್ನು ನಿರ್ಮೂಲನೆ ಮಾಡುವ ದೊಡ್ಡ ಸವಾಲು ಇದೆ. ಕೇಂದ್ರ ಸರ್ಕಾರವು ೨೦೨೫ರಲ್ಲಿ ಕ್ಷಯರೋಗ ಮುಕ್ತ ಭಾರತ ಮಾಡಬೇಕೆನ್ನುವ ಗುರಿಯನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಕಫ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಲಾಗುತ್ತಿದೆ. ಹೊಸ ಪ್ರಕರಣಗಳನ್ನು ಪತ್ತೆಹಚ್ಚಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಮಲೇರಿಯಾ ಮುಕ್ತ ಭಾರತ ನಿರ್ಮಿಸಬೇಕೆನ್ನುವ ಕನಸು ಕೂಡ ಇದೆ. ಆ ನಿಟ್ಟಿನಲ್ಲಿ ಕೂಡ ಕೆಲಸ ಮಾಡುತ್ತಿzವೆ. ಜೊತೆಗೆ ಗರ್ಭಿಣಿಯರ ಆರೈಕೆಯ ನಿಟ್ಟಿನಲ್ಲಿ ಪ್ರತೀ ಆರೋಗ್ಯ ಉಪಕೇಂದ್ರಗಳಲ್ಲಿ ಕಮ್ಯೂನಿಟಿ ಹೆಲ್ತ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ತಾಯಿ ಮಕ್ಕಳ ಆರೈಕೆ, ಚುಚ್ಚುಮದ್ದು, ಮಕ್ಕಳ ಲಸಿಕೆ ಇತ್ಯಾದಿಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ವಲಸೆ ಕಾರ್ಮಿಕರು, ಅವರ ಮಕ್ಕಳು ಇವರ ಆರೋಗ್ಯದತ್ತ ಗಮನಹರಿಸುವುದು ಇಲಾಖೆಯ ದೊಡ್ಡ ಸವಾಲು ಎನ್ನುತ್ತಾರೆ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು.

ಮುಂದಿನ ಯೋಜನೆಗಳು: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂದರೆ ಅದು ಕೇವಲ ಬಡವರಿಗೆ ಮಾತ್ರ ಎನ್ನುವ ಯೋಚನೆಯಿತ್ತು. ಇದನ್ನು ಹೋಗಲಾಡಿಸುವ ಪ್ರಯತ್ನ ನಡೆಯುತ್ತಿದ್ದು, ಈಗ ಸರಕಾರಿ ಆರೋಗ್ಯ ಕೇಂದ್ರಗಳು ನಮ್ಮೆಲ್ಲರದ್ದು ಎನ್ನುವ ಭಾವನೆ ಬಂದಿದೆ. ಈ ನಿಟ್ಟಿನಲ್ಲಿ ಬರುವ ರೋಗಿಗಳು, ಜನರ ಜೊತೆಗೆ ಹೇಗೆ ವರ್ತಿಸಬೇಕು, ಹೇಗೆ ಸಹಕಾರ ನೀಡಬೇಕು ಎನ್ನುವ ಬಗ್ಗೆ ವೈದ್ಯರು, ದಾದಿಯರಿಗೆ ತರಬೇತಿ ನೀಡಲಾಗಿದೆ. ಕಾಯಕಲ್ಪ ಎನ್ನುವ ಯೋಜನೆ ಜಾರಿಗೆ ಬಂದಿದ್ದು, ಆಸ್ಪತ್ರೆಗಳನ್ನು ಉಪಕರಣಗಳ ಮೂಲಕ ಸಜ್ಜುಗೊಳಿಸಲಾಗುತ್ತಿದೆ. ಸುಮಾರು ೩೪ ರಾಷ್ಟ್ರೀಯ ಯೋಜನಾ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆ ನೀಡಿ, ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಪ್ರತೀ ಪ್ರಜೆಗೂ ಸಿಗುವಂತೆ ಮಾಡಿ ಅನುಕೂಲ ಮಾಡಿಕೊಡಬೇಕೆನ್ನುವ ಕನಸಿದೆ. ಈ ನಡುವೆ ಪ್ರತೀವರ್ಷ ಒಂದೊಂದು ಹೊಸ ಸವಾಲುಗಳು ಎದುರಾಗುತ್ತಿವೆ. ಅವೆಲ್ಲವನ್ನೂ ಎದುರಿಸಿಕೊಂಡು ಇಲಾಖೆ ಮುನ್ನಡೆಯುತ್ತಿದೆ ಎನ್ನುವುದು ಟಿಎಚ್‌ಒ ಡಾ.ದೀಪಕ್ ರೈ ಅವರ ಮಾತು.

ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಕೇವಲ ವೈದ್ಯಾಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಮಾತ್ರ ಮಾಡಲು ಸಾಧ್ಯವಿಲ್ಲ. ಇದಕ್ಕೆ ಜನರ ಸಹಕಾರ ಬೇಕಾಗುತ್ತದೆ. ಕೆಲವೊಂದು ವಿಚಾರಗಳಲ್ಲಿ ಎಷ್ಟೇ ಬಾರಿ ಅರಿವು, ಜಾಗೃತಿ ಮೂಡಿಸಿದರೂ ಜನತೆ ಉದಾಸೀನ ಭಾವ ತೋರಿಸುತ್ತಾರೆ. ಇದನ್ನು ಮಾಡಬಾರದು. ಆರೋಗ್ಯ ಎನ್ನುವುದು ನಮ್ಮ ಹಕ್ಕು. ಅದನ್ನು ನಾವು ಚಲಾಯಿಸಬೇಕು. ಲಸಿಕೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಮ್ಮ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಸರದಲ್ಲಿ ಅಸಮತೋಲನ ಉಂಟಾದಾಗ ಮಾತ್ರ ಅನಾಹುತಗಳಾಗುತ್ತವೆ. ಹೀಗಾಗಿ ತಮ್ಮ ವೈಯಕ್ತಿಕ ಸ್ವಚ್ಛತೆ, ಮನೆಯ ಸ್ವಚ್ಛತೆ ಮತ್ತು ಪರಿಸರದ ಸ್ವಚ್ಛತೆ ಮಾಡಿಕೊಂಡರೆ ಖಂಡಿತಾ ಎಂತಹ ರೋಗವನ್ನು ಕೂಡ ತಡೆಗಟ್ಟಬಹುದು.
ಡಾ.ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿಗಳು, ಪುತ್ತೂರು

LEAVE A REPLY

Please enter your comment!
Please enter your name here