`ಪ್ಲಾಸ್ಟಿಕ್ ನಿಷೇಧ ಆದೇಶ ಎಲ್ಲರೂ ಪಾಲನೆ ಮಾಡಬೇಕು’-ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್

0

  •  ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಬೇಕು
  • ರಾಜ್ಯದಲ್ಲೇ ಮಾದರಿಯಾಗಿರುವ ಬಯೋ- ಸಿಎನ್‌ಜಿ ಘಟಕ ಶೀಘ್ರ ಲೋಕಾರ್ಪಣೆ
  •  ಕೌನ್ಸಿಲ್ ಸಭಾಂಗಣ, ಪುರಭವನಕ್ಕೆ ಧ್ವನಿವರ್ಧಕ ಅಳವಡಿಕೆ
  •  ನಗರಸಭೆಗೆ ಇಂಟರ್ನ್‌ಶಿಪ್‌ಗೆ ನಾಲ್ವರ ನೇಮಕಕ್ಕೆ ಅವಕಾಶ

ಪುತ್ತೂರು:ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿರುವ ಕೇಂದ್ರ ಮತ್ತು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.ಈ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಹೇಳಿದರು.

ಜು.೮ರಂದು ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾದಂತೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ.ಅದೇ ರೀತಿ ೨೦೧೬ರಲ್ಲಿ ಆಗಿನ ಪುರಸಭೆ ಮುಖಾಂತರ ಸಂಘ ಸಂಸ್ಥೆಗಳು, ಎನ್‌ಜಿಒ, ಶಾಲಾ ಕಾಲೇಜುಗಳಿಂದ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ಮತ್ತು ಮನೆಮನೆಗೆ ಕರಪತ್ರ ಮಾಡುವ ಕೆಲಸ ಮಾಡಲಾಗಿತ್ತು.ಈ ಸಂದರ್ಭ ವ್ಯಾಪಾರಸ್ಥರು ಮತ್ತು ವರ್ತಕರು ಸಮಯಾವಕಾಶ ಬೇಕೆಂದು ಕೇಳಿದ್ದರು.ಬಟ್ಟೆ ಕೈ ಚೀಲ ಮಾಡಿ ಕೊಡುವ ಕೆಲಸ ಮಾಡಲಾಗಿತ್ತು.ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಸೂಚನೆ ನೀಡಿದೆ.ಇದನ್ನು ಹಂತಹಂತವಾಗಿ ಎಲ್ಲರೂ ಪಾಲಿಸಬೇಕು ಎಂದರು.ಪ್ಲಾಸ್ಟಿಕ್ ಉತ್ಪಾದಕ ಘಟಕಗಳೇ ನಿಲ್ಲುವಂತಹ ವ್ಯವಸ್ಥೆ ಮುಂದೆ ನಡೆಯಲಿದೆ ಎಂದ ಅವರು, ಪ್ಲಾಸ್ಟಿಕ್ ನಿಷೇಧ ಕುರಿತು ವರ್ತಕರ ಸಭೆಯನ್ನು ನಡೆಸಲಾಗಿದೆ.ಅಂಗಡಿಗೆ ಪ್ಲಾಸ್ಟಿಕ್ ಕೊಂಡು ಹೋಗುವ ಗ್ರಾಹಕರಿಗೂ ದಂಡ ವಿಧಿಸಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.ಅದರಂತೆ ಸಂತೆ ಮಾರ್ಕೆಟ್‌ನಲ್ಲಿ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ಕೊಡುವ ಕೆಲಸ ಮಾಡಿದ್ದೇವೆ.ಇದೀಗ ಪ್ಲಾಸ್ಟಿಕ್ ನಿಷೇಧ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕೆಂದು ಅಧ್ಯಕ್ಷರು ಹೇಳಿದರು.


ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲರ ಸಹಕಾರ ಬೇಕು: ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ, ೨೦೧೬ರಲ್ಲೇ ರಾಜ್ಯ ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿತ್ತು.ಆದರೆ ಬೇರೆ ರಾಜ್ಯಗಳಿಂದ ಆಮದಾಗುತ್ತಿದ್ದ ಪ್ಲಾಸ್ಟಿಕ್‌ನಿಂದಾಗಿ ನಿಲ್ಲಿಸಲು ಕಷ್ಟಕರವಾಗಿತ್ತು.ಈಗ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ.ಜು.೧ರಿಂದ ಅನುಷ್ಠಾನ ಮಾಡುವಂತೆ ಎಲ್ಲಾ ರಾಜ್ಯಕ್ಕೆ ಆದೇಶ ಹೊರಡಿಸಲಾಗಿದೆ. ಹಾಗಾಗಿ ಈಗಾಗಲೇ ಹಲವಾರು ಸಭೆ ಆಯೋಜನೆ ಮಾಡಲಾಗಿದೆ.ಜಾಗೃತಿ ಮೂಡಿಸಿದ ಬಳಿಕ ದಂಡ ಪ್ರಯೋಗ ನಡೆಯಲಿದೆ.ಪ್ಲಾಸ್ಟಿಕ್ ಬಳಕೆ ನಗರ ವ್ಯಾಪ್ತಿಯಲ್ಲಿ ಕಂಡು ಬಂದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.ವಶ ಪಡಿಸಿಕೊಂಡ ಸೊತ್ತುಗಳನ್ನು ಪರಿಸರ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡಲಾಗುತ್ತದೆ.ದಂಡವನ್ನು ಈಗಾಗಲೇ ಪ್ರಾರಂಭ ಮಾಡಬೇಕಾಗಿತ್ತು.ಆದರೆ ಈಗ ಇರುವಂತಹ ವಸ್ತುಗಳನ್ನು ವಿಲೇವಾರಿ ಮಾಡಿದ ಬಳಿಕ ದಂಡ ವಿಧಿಸಲುzಶಿಸಿದ್ದು ಅಲ್ಲಿಯವರೆಗೆ ಕಾಲಾವಕಾಶ ನೀಡಲಾಗಿದೆ.ಪುತ್ತೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲರು ಸಹಕಾರ ನೀಡಬೇಕು ಎಂದರಲ್ಲದೆ ೫೦ ಮೈಕ್ರೋನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ಪಡೆಯಲಾಗುವುದು ಎಂದರು.ನಗರಸಭಾ ಸದಸ್ಯ ಶಕ್ತಿ ಸಿನ್ಹ ಅವರು ಮಾತನಾಡಿ ಪ್ಲಾಸ್ಟಿಕ್ ಮೈಕ್ರೋನ್ ಪರೀಕ್ಷೆಗೆ ನಮ್ಮಲ್ಲಿ ಸಲಕರಣೆ ಇಲ್ಲದೆ ಹೇಗೆ ದಂಡ ವಿಧಿಸುವುದು ಎಂದು ಪ್ರಶ್ನಿಸಿದರು.ಉತ್ತರಿಸಿದ ಪೌರಾಯುಕ್ತರು ಈ ಮೈಕ್ರೋನ್ ದಂಡ ಪ್ರಯೋಗ ಪ್ಲಾಸ್ಟಿಕ್ ಉತ್ಪಾದಕರಿಗೆ.ಪುತ್ತೂರಿನಲ್ಲಿ ಪ್ಲಾಸ್ಟಿಕ್ ಉತ್ಪಾದಕರು ಇಲ್ಲ.೫೦ ಮೈಕ್ರೋನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಹುಪದರ ಪ್ಯಾಕೇಜಿಂಗ್ ತಯಾರಿಸುವಲ್ಲಿ ಇರುತ್ತದೆ ಎಂದರು. ಉತ್ಪಾದಕರೇ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಿದಾಗ ಅಂಗಡಿಗಳಿಗೆ ಪ್ಲಾಸ್ಟಿಕ್ ಸರಬರಾಜು ಆಗುವುದಿಲ್ಲ ಎಂದ ಅಧ್ಯಕ್ಷರು, ಈಗಾಗಲೇ ಕೆಲವೊಂದು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೊಡುವುದಿಲ್ಲ.ಅದೇ ರೀತಿ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸದಸ್ಯರು ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು ಎಂದರು.ಘನ ತ್ಯಾಜ್ಯ ವಿಲೇವಾರಿಗೆ ಹೋಗುವಾಗ ಅಲ್ಲಲ್ಲಿ ಒಂದಷ್ಟು ಮನೆಗಳಲ್ಲಿ ಪ್ಲಾಸ್ಟಿಕ್ ನೇತಾಡುವುದು ಕಂಡು ಬಂದಿದೆ.ಇದನ್ನು ಸದಸ್ಯರು ಗಮನಿಸಿ ಜಾಗೃತಿ ಮೂಡಿಸಿ ಎಂದು ಅಧ್ಯಕ್ಷರು ಸಲಹೆ ನೀಡಿದರು.ಸದಸ್ಯ ಪದ್ಮನಾಭ ನಾಯ್ಕ್ ಅವರು ಬಿಸ್ಕೆಟ್ ಪ್ಯಾಕೆಟ್‌ಗಳಿಗೆ ಬರುವ ಪ್ಲಾಸ್ಟಿಕ್ ಕವರ್‌ಗಳು ೫೦ ಮೈಕ್ರೋನ್ ಇದೆ ಎಂದು ಪ್ರಸ್ತಾಪಿಸಿದರು.

ರಾಜ್ಯದಲ್ಲೇ ಮಾದರಿಯಾಗಿರುವ ಬಯೋ- ಸಿಎನ್‌ಜಿ ಘಟಕ ಶೀಘ್ರ ಲೋಕಾರ್ಪಣೆ : ನಗರಸಭೆಯ ಬನ್ನೂರು ನೆಕ್ಕಿಲದಲ್ಲಿರುವ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಸ್ಥಳದಲ್ಲಿ ಈಗಾಗಲೇ ಸ್ವಚ್ಛ ಭಾರತ ಟ್ರಸ್ಟ್(ರೋಟರಿ ಈಸ್ಟ್)ವತಿಯಿಂದ ಬಯೋ-ಸಿಎನ್‌ಜಿ ಘಟಕ ಸ್ಥಾಪನೆಯ ಕಾಮಗಾರಿ ನಡೆಯುತ್ತಿದ್ದು, ಇನ್ನೇನು ಮೂರು ನಾಲ್ಕು ತಿಂಗಳಲ್ಲಿ ಅದು ಲೋಕಾರ್ಪಣೆಯಾಗಲಿದೆ.ಈ ಘಟಕದಲ್ಲಿ ಉತ್ಪತ್ತಿಯಾಗುವ ಬಯೋಗ್ಯಾಸ್ ಅನ್ನು ನಗರಸಭೆಯ ವಾಹನಗಳಿಗೆ ಬಳಸಬಹುದಾಗಿದೆ.ಇದು ರಾಜ್ಯದಲ್ಲೇ ಮಾದರಿಯಾಗಲಿದೆ ಎಂದು ಅಧ್ಯಕ್ಷರು ಹೇಳಿದರು.ಪೌರಾಯುಕ್ತರು ಮಾತನಾಡಿ ಸಿಎನ್‌ಜಿಯನ್ನು ನಗರಸಭೆಯ ವಾಹನಗಳಿಗೆ ಬಳಸುವ ನಿಟ್ಟಿನಲ್ಲಿ ಡೀಸೆಲ್ ಕಿಟ್‌ನೊಂದಿಗೆ ಸಿಎನ್‌ಜಿ ಕಿಟ್ ಅಳವಡಿಸಲು ಅನುಮೋದನೆಗಾಗಿ ಸಭೆಯಲ್ಲಿ ಪ್ರಸ್ತಾಪಿಸಿದರು.ಘಟಕದಲ್ಲಿ ಮೊದಲನೆ ಹಂತದಲ್ಲಿ ನಗರಸಭೆಯಿಂದ ಬರುತ್ತಿರುವ ೬ ಟನ್ ಹಸಿ ಕಸವನ್ನು ಸಂಸ್ಕರಣೆ ಮಾಡುವುದು.ಇಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ನ್ನು ಮಾರಾಟ ಮಾಡಬಹುದು.ಅವರು ಅದನ್ನು ಮಾರಾಟ ಮಾಡುವ ಮೊದಲು ನಮ್ಮ ಕರಾರು ಪತ್ರದಂತೆ, ಮೊದಲನೆ ಹಂತದಲ್ಲಿ ನಗರಸಭೆಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ೨೦ ಡೀಸೆಲ್ ವಾಹನಗಳಿವೆ.೧೭ ವಾಹನಗಳು ಘನತ್ಯಾಜ್ಯ ಸಂಗ್ರಹಣೆಗೆ ಹೋಗುತ್ತದೆ.ಎರಡು ವಾಹನ ಡಂಪಿಂಗ್ ಯಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ.ಹಾಗಾಗಿ ೧೭ ವಾಹನಳಿಗೆ ಸಿಎನ್‌ಜಿ ಕಿಟ್ ಅಳವಡಿಸುವುದು, ಒಂದು ವಾಹನಕ್ಕೆ ಕಿಟ್ ಅಳವಡಿಸಲು ರೂ.೨.೫ ಲಕ್ಷ ವೆಚ್ಚ ತಗಲುತ್ತದೆ ಎಂದು ಪ್ರಸ್ತಾಪಿಸಿದರು.ಡಿಸೇಲ್‌ಗೆ ಹೋಲಿಕೆ ಮಾಡಿದರೆ ಸಿಎನ್‌ಜಿಯಲ್ಲಿ ಅಧಿಕ ಮೈಲೇಜ್ ಸಿಗುತ್ತದೆ.ಇದನ್ನು ನಮ್ಮಲ್ಲಿ ಅಳವಡಿಸಿದರೆ ರಾಜ್ಯದಲ್ಲಿ ಪ್ರಥಮ ಸಾಧನೆಯಾಗುತ್ತದೆ ಎಂದವರು ಹೇಳಿದರು.ಸದಸ್ಯ ಮಹಮ್ಮದ್ ರಿಯಾಜ್ ಅವರು ಮಾತನಾಡಿ ಸಿಎನ್‌ಜಿ ಇಂಧನದಿಂದ ಘನ ವಾಹನದ ಪಿಕಪ್ ಕಡಿಮೆ ಆಗಬಹುದು.ಹಾಗಾಗಿ ಆರಂಭದಲ್ಲಿ ಎಲ್ಲಾ ವಾಹನಕ್ಕೆ ಕಿಟ್ ಅಳವಡಿಸುವುದು ಬೇಡವೆಂದರು.ಆರಂಭದಲ್ಲಿ ಎರಡು ವಾಹನಗಳಿಗೆ ಕಿಟ್ ಅಳವಡಿಸುವ ಕುರಿತು ಪೌರಾಯುಕ್ತರಿಗೆ ಅಧ್ಯಕ್ಷರು ತಿಳಿಸಿದರು.

ಕೌನ್ಸಿಲ್ ಸಭಾಂಗಣ, ಪುರಭವನಕ್ಕೆ ಧ್ವನಿವರ್ಧಕ ಅಳವಡಿಕೆ: ಪುತ್ತೂರು ನಗರಸಭೆ ಕೌನ್ಸಿಲ್ ಸಭಾಂಗಣ ಮತ್ತು ಪುರಭವನಕ್ಕೆ ಧ್ವನಿವರ್ಧಕ ಅಳವಡಿಕೆ ಕುರಿತು ರೂ.೧೧ ಲಕ್ಷದ ಅಂದಾಜು ಪಟ್ಟಿಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಸದಸ್ಯರು ಒಮ್ಮತದಿಂದ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು.

ಜಲಸಿರಿ ಪೈಪ್ ಅಳವಡಿಕೆಯಿಂದ ರಸ್ತೆಯಲ್ಲಿ ಗುಂಡಿ: ಜಲಸಿರಿ ಪೈಪ್ ಅಳವಡಿಸಿ ಸರಿಯಾಗಿ ರಸ್ತೆಯನ್ನು ದುರಸ್ತಿಗೊಳಿಸದೆ ರಸ್ತೆಯೆಲ್ಲಾ ಗುಂಡಿಗಳಾಗಿದೆ.ಚೇತನಾ ಆಸ್ಪತ್ರೆಯ ಬಳಿ ಮತ್ತು ಧನ್ವಂತರಿ ಆಸ್ಪತ್ರೆಯ ಬಳಿ ಗುಂಡಿಗಳಾಗಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸದಸ್ಯ ಭಾಮಿ ಅಶೋಕ್ ಶೆಣೈ ಪ್ರಸ್ತಾಪಿಸಿದರು.ಅಧ್ಯಕ್ಷರು ಮಾತನಾಡಿ,ಜಲಸಿರಿಯ ಪೈಪ್ ಅಳವಡಿಕೆ ಬಳಿಕ ರಸ್ತೆ ದುರಸ್ತಿಗೊಳಿಸದಿರುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.ಮನೋಹರ್ ಕಲ್ಲಾರೆ ಅವರು ವಾರ್ಡ್‌ನ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು.

ವಿಪತ್ತು ನಿರ್ವಹಣೆ ಉತ್ತಮ ಸ್ಪಂದನೆ: ನಗರಸಭೆಯಿಂದ ಅಧ್ಯಕ್ಷರ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡಿದ್ದು, ಸಮಿತಿಯಿಂದ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ನೀಡಲಾಗುತ್ತಿದೆ ಎಂದು ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದರು.

ನಗರಸಭೆಗೆ ನಾಲ್ವರನ್ನು ಇಂಟರ್ನ್‌ಶಿಪ್ ನೇಮಕಕ್ಕೆ ಅವಕಾಶ: ರಾಜ್ಯದಲ್ಲಿ ಮಹಾನಗರ ಪಾಲಿಕೆ ಮತ್ತು ನಗರ ಸಭೆಯಲ್ಲಿ ಮಾನವ ಸಂಪನ್ಮೂಲ ಕಡಿಮೆ ಆಗಿದೆ.ಹಾಗಾಗಿ ಸರಕಾರ ಅರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್ ಪ್ರೋಗ್ರಾಮ್ ಮೂಲಕ ಪಿಯುಸಿ ಅಥವಾ ಪದವಿ ಆಗಿ ಕೆಲಸದ ಹುಡುಕಾಟದಲ್ಲಿವವರನ್ನು ಇಂಟರ್ನ್‌ಶಿಪ್ ಮೂಲಕ ನೇಮಕ ಮಾಡಲು ಅವಕಾಶ ನೀಡಿದೆ.ನೇಮಕಗೊಂಡವರನ್ನು ಮೂರು ತಿಂಗಳಿನಿಂದ ೧ ವರ್ಷದ ತನಕ ಇಂಟರ್ನ್‌ಶಿಪ್‌ನಲ್ಲಿ ಇಟ್ಟು ಕೊಳ್ಳಬಹುದು.ಬಳಿಕ ಅವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.ಈ ಅವಧಿಯಲ್ಲಿ ಅವರಿಗೆ ರೂ.೬ ಸಾವಿರದಿಂದ ೭ ಸಾವಿರದ ತನಕ ಗೌರವ ಧನ ನೀಡಲಾಗುತ್ತದೆ. ನಗರಸಭಗೆ ೪ ಮಂದಿಯನ್ನು ನೇಮಕ ಮಾಡಲು ಅವಕಾಶವಿದೆ.ಇಂಜಿನಿಯರ್, ಕಂದಾಯ, ಆರೋಗ್ಯ ಇಲಾಖೆಯಲ್ಲಿ ಅವರನ್ನು ಬಳಸಿಕೊಳ್ಳಬಹುದು.ಒಂದು ವರ್ಷದ ಬಳಿಕ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕು.ಅಭ್ಯರ್ಥಿಗಳು ಅರ್ಬನ್ ಇಂಟರ್ನ್‌ಶಿಪ್ ಪ್ರೋಗ್ರಾಮ್ ಅಡಿಯಲ್ಲಿ ನೋಂದಾವಣೆ ಆಗಬೇಕೆಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ಸುಂದರ ಪೂಜಾರಿ ಬಡಾವು, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಶಕ್ತಿ ಸಿನ್ಹ, ಪದ್ಮನಾಭ ನಾಯ್ಕ ಪಡೀಲು, ಪಿ.ಜಿ.ಜಗನ್ನಿವಾಸ ರಾವ್, ಕೆ.ಸಂತೋಷ್ ಕುಮಾರ್ ಬೊಳುವಾರು, ನವೀನ್ ಕುಮಾರ್ ಎಂ, ಭಾಮಿ ಅಶೋಕ್ ಶೆಣೈ, ಇಂದಿರಾ ಪಿ, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಇಸುಬು, ಮಹಮ್ಮದ್ ರಿಯಾಜ್, ಶೀನಪ್ಪ ನಾಯ್ಕ, ಪೂರ್ಣಿಮ, ಕಾರ್ಯಪಾಲಕ ಇಂಜಿನಿಯರ್ ಅರುಣ್, ಇಂಜಿನಿಯರ್ ಶ್ರೀಧರ್, ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರಲಕ್ಷ್ಮೀ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ರವೀಂದ್ರ ಅವರು ಸಭಾ ನಡಾವಳಿ ಮಂಡಿಸಿದರು.

ಪ್ಲಾಸ್ಟಿಕ್ ಬಳಕೆಗೆ ದಂಡದ ವಿವರ

ಯಾವುದೇ ಗಾತ್ರದ ಅಥವಾ ದಪ್ಪದ, ಹೊಸದಾಗಿ ತಯಾರಿಸಿದ ಕೈ ಚೀಲ ಅಥವಾ ಯಾವುದಾದರೂ ಮರುಬಳಕೆಯ ಪ್ಲಾಸ್ಟಿಕ್ ತಯಾರಿಸುವವರಿಗೆ ಮತ್ತು 50 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಹಾಳೆ ಅಥವಾ ಅದೇ ತರಹದ ವಸ್ತು, ಅದಲ್ಲದೆ ಬಹು ಪದರದ ಪ್ಲಾಸ್ಟಿಕ್‌ನಿಂದ ಮಾಡಿದ ಪ್ಯಾಕೇಜಿಂಗ್ ಮತ್ತು ಕವರ್ ಪ್ಯಾಕೇಜಿಂಗ್, ಸುತ್ತುವಿಕೆಗೆ ಬಳಸುವ ಹಾಳೆಗಳ ಸರಕುಗಳಿದ್ದಲ್ಲಿ ಆರಂಭದಲ್ಲಿ ಉತ್ಪನ್ನಗಳ ವಶಪಡಿಸುವುದು, ಘಟಕ ಮುಚ್ಚುವುದು, ಪರವಾನಿಗೆ ರದ್ದು ಮಾಡುವುದು, ಪ್ರತಿ ಟನ್ ಚೀಲಗಳನ್ನು ತಯಾರಿಸಿದಲ್ಲಿ 1ನೇ ಬಾರಿಗೆ ರೂ.5 ಸಾವಿರ, 2ನೇ ಬಾರಿ ಉಲ್ಲಂಘನೆಗೆ ರೂ.10 ಸಾವಿರ,3ನೇ ಬಾರಿ ಉಲ್ಲಂಘನೆಗೆ ರೂ.20 ಸಾವಿರ ಮತ್ತು 4ನೇ ಬಾರಿಗೆ ಮೊಕದ್ದಮೆ ದಾಖಲಿಸುವುದು.ಚಿಲ್ಲರೆ ವ್ಯಾಪಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಮೂಲಕ ಉಲ್ಲಂಘನೆ ಮಾಡಿದರೆ 1ನೇ ಬಾರಿಗೆ ರೂ.2 ಸಾವಿರ ದಂಡ, 2ನೇ ಬಾರಿ ರೂ.5 ಸಾವಿರ ದಂಡ, 3ನೇ ಬಾರಿಗೆ ರೂ.10 ಸಾವಿರ ದಂಡ, 4ನೇ ಬಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದು.ಬೀದಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮಾರಾಟ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದರೆ 1ನೇ ಬಾರಿಗೆ ರೂ.200, 2ನೇ ಬಾರಿಗೆ ರೂ.500, 3ನೇ ಬಾರಿಗೆ ರೂ.1 ಸಾವಿರ, ೪ನೇ ಬಾರಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು.

ಸಿಎನ್‌ಜಿ ಗ್ಯಾಸ್ ಉತ್ಪತ್ತಿಯಲ್ಲಿ ಕೆ.ಜಿಗೆ  ರೂ. 1 ನಗರ ಸಭೆಗೆ

ರಾಜ್ಯದಲ್ಲೇ ಬಯೋಗ್ಯಾಸ್ ನಿರ್ಮಾಣ ಖಾಸಗಿ ವತಿಯಿಂದ ಚಿಕ್ಕಬಳ್ಳಾಪುರದಲ್ಲಿದೆ.ಅದು ಬಿಟ್ಟರೆ ಪುತ್ತೂರು ನಗರಸಭೆಯಿಂದ ರೋಟರಿ ಈಸ್ಟ್ ವತಿಯಿಂದ ಆಗಲಿದೆ.ಸುಮಾರು ಅಂದಾಜು ರೂ. 4 ಕೋಟಿ ವೆಚ್ಚದಲ್ಲಿ ಬಯೋ-ಸಿಎನ್‌ಜಿ ಘಟಕ ಶೀಘ್ರವಾಗಿ ಆಗಲಿದೆ.ಅಲ್ಲಿ ಉತ್ಪತ್ತಿಯಾದ ಗ್ಯಾಸ್‌ನಲ್ಲಿ ಕೆ.ಜಿಗೆ ರೂ.1ನ್ನು ನಗರಸಭೆಗೆ ಅವರು ಕೊಡಲಿದ್ದಾರೆ.ಈ ಉತ್ಪತ್ತಿಯಾದ ಗ್ಯಾಸ್ ಅನ್ನು ಆರಂಭದಲ್ಲಿ ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಬಳಸಲಾಗುತ್ತದೆ.ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ

LEAVE A REPLY

Please enter your comment!
Please enter your name here