ಮುಂಡೂರು: ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್, ಸ್ಪರ್ಶ ಸಹಾಯವಾಣಿ ಸಹಯೋಗದಲ್ಲಿ ಅಭಿನಂದನಾ ಕಾರ್ಯಕ್ರಮ

0

ಸ್ಪಷ್ಟ ಗುರಿಯಿದ್ದಾಗ ಕನಸುಗಳು ಸಾಕಾರಗೊಳ್ಳುತ್ತದೆ-ದಿವ್ಯಪ್ರಭಾ ಚಿಲ್ತಡ್ಕ

ಪುತ್ತೂರು: ಬಾಲ್ಯದಲ್ಲಿಯೇ ಸ್ಪಷ್ಟ ಗುರಿಯೊಂದಿಗೆ ಮುಂದುವರಿಯುವ ಕನಸುಗಳು ನಮ್ಮನ್ನು ಉನ್ನತೀಕರಣಗೊಳಿಸುತ್ತದೆ. ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆಯೇ ಹೆಚ್ಚಿನ ಗಮನ ಹರಿಸಬೇಕು ಎಂದು ರಾಜ್ಯ ಸಮಾಜ ಕಲ್ಯಾಣ ನಿಗಮ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು. ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸುಳ್ಯ ಹಾಗೂ ಮುಂಡೂರು-ಸರ್ವೆ ಸ್ಪರ್ಶ ಸಹಾಯವಾಣಿ ಸಹಯೋಗದಲ್ಲಿ ಮುಂಡೂರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭ, ಪುತ್ತೂರು ವಿದ್ಯಾಮಾತಾ ಅಕಾಡೆಮಿ ಸಹಯೋಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿ-ಶಿವನಾಥ ರೈ

ಸ್ಪರ್ಷ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗುವ ಸದುದ್ದೇಶ ಇಟ್ಟುಕೊಂಡು ಸರ್ವೆ-ಮುಂಡೂರು ವ್ಯಾಪ್ತಿಯಲ್ಲಿ ಪ್ರಾರಂಭಗೊಂಡ ಸ್ಪರ್ಷ ಸಹಾಯವಾಣಿ ಮೂಲಕ ನೂರಾರು ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಕಿಟ್ ವಿತರಣೆ, ಮನೆ ಬಾಗಿಲಿಗೆ ರೇಷನ್ ವ್ಯವಸ್ಥೆ, ಉಚಿತ ಆಯುಷ್ಮಾನ್ ಶಿಬಿರ ಸೇರಿದಂತೆ ನಾನಾ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲವು ದಾನಿಗಳು ನಮಗೆ ಸಹಕಾರ ನೀಡಿದ್ದಾರೆ. ಇದೀಗ ಕಾಮಧೇನು ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಮ್ಮೂರಿನ ಸಾಧಕ ವಿದ್ಯಾರ್ಥಿಗಳನ್ನು, ಯುವ ಸಾಧಕರನ್ನು, ಶಿಕ್ಷಕರನ್ನು, ಸಂಘ ಸಂಸ್ಥೆಗಳನ್ನು ಗುರುತಿಸುವ ಕಾರ್ಯ ಮಾಡಿದ್ದು ಇದು ಪ್ರತಿಭೆಗಳಿಗೆ ಸ್ಪೂರ್ತಿಯಾಗುತ್ತದೆ ಮುಂದಕ್ಕೂ ವಿವಿಧ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಸನ್ಮಾನ-ಗೌರವಾರ್ಪಣೆ:

ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ 47 ವಿದ್ಯಾರ್ಥಿಗಳನ್ನು, ಪಿಯುಸಿಯಲ್ಲಿ ಸಾಧನೆ ಮಾಡಿದ 27 ವಿದ್ಯಾರ್ಥಿಗಳನ್ನು ಹಾಗೂ ಸ್ನಾತಕೋತ್ತರ ಕ್ಷೇತ್ರದ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರ್ಲಿ ಚಿತ್ರ ಸಾಧಕ ಸತೀಶ್, ಕೃಷಿ ಕ್ಷೇತ್ರದ ಸಾಧನೆಗಾಗಿ ಸುಪ್ರಿಯ ರೈ ಪೊನೋಣಿ, ನಟನಾ ಕ್ಷೇತ್ರದ ಪರವಾಗಿ ರವಿಚಂದ್ರ ರೈ, ಉದಯೋನ್ಮುಖ ನಟ ದೀಕ್ಷಿತ್ ಸೊರಕೆ, ಉದ್ಯಮ ಕ್ಷೇತ್ರದ ನಿತೇಶ್ ಮರಿಯ ಹಾಗೂ ನವನೀತ್, ಶಿಕ್ಷಕರಾದ ಬಿ.ವಿ ಸೂರ್ಯನಾರಾಯಣ ಎಲಿಯ ಹಾಗೂ ಶ್ರೀನಿವಾಸ್ ಎಚ್.ಬಿ, ದೇವಸ್ಥಾನದ ನಿಸ್ವಾರ್ಥ ಕಾರ್ಯಚಟುವಟಿಕೆಗಾಗಿ ಧನಂಜಯ ಕುಲಾಲ್, ವಿವಿಧ ಸಾಧನೆಗಳಿಗಾಗಿ ಧನಂಜಯ ಕುಲಾಲ್ ಕ್ರೀಡಾ ಸಂಘಟನೆಗಾಗಿ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ಧಾರ್ಮಿಕ ಸಂಘಟನೆ ಪರವಾಗಿ ಶ್ರೀ ಆದಿಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯನ್ನು ಗೌರವಿಸಲಾಯಿತು. ಸ್ಪರ್ಧಾ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟ ವಿದ್ಯಾಮಾತಾ ಅಕಾಡೆಮಿ ನಿರ್ದೇಶಕ ಭಾಗ್ಯೇಶ್ ರೈ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಂದ್ರುಶ್ರೀ ಅವರಿಗೆ ಕೆಎಸ್‌ಎ ಮಾಡಲು ವಿದ್ಯಾಮಾತಾ ಅಕಾಡೆಮಿಯಲ್ಲಿ ಉಚಿತ ಕೌನ್ಸಿಲಿಂಗ್ ಮಾಡುವುದಾಗಿ ಭಾಗ್ಯೇಶ್ ರೈ ಘೋಷಿಸಿದರು.

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪ ಎನ್. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ಎಲಿಯ, ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲಾ ಸಂಚಾಲಕಿ ಡಾ.ಯಾದವಿ ಪಿ.ವಿ, ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ, ಪ್ರಗತಿಪರ ಕೃಷಿಕ ಮೋನಪ್ಪ ಕರ್ಕೇರ, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಕಲ್ಪನೆ ಶ್ರೀ ಆದಿ ಮೊಗೆರ್ಕಳ ಸೇವಾ ಸಮಿತಿ ಅಧ್ಯಕ್ಷ ಕರಿಯ ಕೆ.ಎಸ್ ಉಪಸ್ಥಿತರಿದ್ದರು.

ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಗೌಡ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು. ಶಶಿಧರ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here