ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ, ಸನ್ಮಾನ

0

  • ನಿವ್ವಳ ಲಾಭ ರೂ.2,11,472 , ಶೇ.15 ಡಿವಿಡೆಂಟ್, ಲೀ.0.69 ಪೈಸೆ ಬೋನಸ್

ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಜು.09ರಂದು ಪರ್ಪುಂಜದಲ್ಲಿರುವ ಸಂಘದ ಕಛೇರಿಯ ಎದುರು ಭಾಗದ ರಾಜ್ ಕಾಂಪ್ಲೆಕ್ಸ್ನ ವಠಾರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಸಭಾಧ್ಯಕ್ಷತೆ ವಹಿಸಿ ಸಭೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು ಸಭೆಯ ನೋಟೀಸ್ ಹಾಗೂ ಸಭಾ ನಡವಳಿಕೆಗಳನ್ನು ಓದಿ ದೃಢಿಕರಿಸಿದರು. 2021-22 ನೇ ಸಾಲಿನ ವರದಿಯನ್ನು ನಿರ್ದೇಶಕ ಜೈರಾಜ್ ಭಂಡಾರಿ ಡಿಂಬ್ರಿಯವರು ಓದಿದರು. ಸಂಘವು ಹಾಲು ಉತ್ಪಾದಕ ಸದಸ್ಯರಿಂದ ರೂ.43,79,081 ಮೌಲ್ಯದ 1,47,368 ಲೀಟರ್ ಹಾಲನ್ನು ಖರೀದಿಸಿ ಅದರಲ್ಲಿ ರೂ.43,83,274 ಮೌಲ್ಯದ 1,42,359 ಲೀಟರ್ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಹಾಗೂ ರೂ.4,65,300 ಮೌಲ್ಯದ 10575 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಸಂಘವು 2021-22 ನೇ ಸಾಲಿನಲ್ಲಿ 1160 ಚೀಲ ಪಶು ಆಹಾರ ಮಾರಾಟ, 750 ಕೆಜಿ ಲವಣ ಮಿಶ್ರಣ ಮಾರಾಟ, ಗೋಧಾರ್ ಶಕ್ತಿ ಮಾರಾಟ, ಕರುಗಳ ಹಿಂಡಿ ಮಾರಾಟ ಹಾಗೂ ನೆಕ್ಕುಬಿಲ್ಲೆ ಮಾರಾಟದಲ್ಲಿ ಒಟ್ಟು ವ್ಯಾಪಾರ ಲಾಭ ರೂ.5,65,233.27 ಮಾಡಿರುತ್ತದೆ ಎಂದರು. ವರದಿ ಸಾಲಿನಲ್ಲಿ ಹಾಲು ವ್ಯಾಪಾರ ಹಾಗೂ ಪಶು ವ್ಯಾಪಾರದಲ್ಲಿ ಹಾಗೂ ಇತರ ಆದಾಯ ಸೇರಿ ಒಟ್ಟು ರೂ.6,25,799.16 ಲಾಭ ಗಳಿಸಿ ಅದರಲ್ಲಿ ಆಡಳಿತ ವೆಚ್ಚ ಮತ್ತು ಖರ್ಚು ಸೇರಿ ಒಟ್ಟು ರೂ.4,14,326.80 ಕಳದು ನಿವ್ವಳ ಲಾಭ ರೂ.2,11,472.36 ಗಳಿಸಿದೆ ಎಂದರು.


ನಿವ್ವಳ ಲಾಭ ವಿಲೇವಾರಿ ಮತ್ತು ವಿತರಣೆ ಬಗ್ಗೆ ಮಾತನಾಡಿದ ಅಧ್ಯಕ್ಷರು ಸಂಘವು ಸದಸ್ಯರಿಗೆ ಶೇ.15 ಡಿವಿಡೆಂಟ್ ಹಾಗೂ ಲೀಟರ್ ಹಾಲಿನಲ್ಲಿ 0.69ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ನಾಗೇಶ್‌ರವರು ಮಾತನಾಡಿ, ಎಲ್ಲಾ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದರು. ಜಾನುವಾರುಗಳಿಗೆ ಬರುವ ರೋಗಗಳಿಗೆ ಹೆಚ್ಚಾಗಿ ಆಯುರ್ವೇದಿಕೆ ಔಷಧಿಗಳನ್ನು , ಹೋಮಿಯೋಪತಿ ಔಷಧಿಗಳನ್ನು ಬಳಸಿದರೆ ಉತ್ತಮ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಆಂಟಿಬಯೋಟಿಕ್ ಔಷಧಿಗಳನ್ನು ನೀಡಬೇಕು ಎಂದರು. ಗುಣಮಟ್ಟದ ಹಾಲನ್ನು ಸಂಘಗಳಿಗೆ ನೀಡುವಂತೆ ಅವರು ವಿನಂತಿಸಿಕೊಂಡು ಜಾನುವಾರುಗಳ ಆರೈಕೆಯ ಬಗ್ಗೆ ವಿವಿಧ ಮಾಹಿತಿ ನೀಡಿದರು.


ಸಾಧಕ ವಿದ್ಯಾರ್ಥಿಗಳಿಗೆ/ ಹಾಲು ಒಕ್ಕೂಟದ ಉಪಾಧ್ಯಕ್ಷರಿಗೆ ಸನ್ಮಾನ
ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷರಾಗಿರುವ ಎಸ್.ಬಿ.ಜಯರಾಮ ರೈಯವರಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರವನ್ನು ನಿರ್ದೇಶಕ ಜೈರಾಜ್ ಭಂಡಾರಿ ವಾಚಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಬಿ.ಜಯರಾಮ ರೈಯವರು, ಹಾಲು ಉತ್ಪಾದಕರ ಸಂಘದಿಂದ ದೊರೆತ ಮೊದಲ ಸನ್ಮಾನವಾಗಿದೆ. ಇದು ನನಗೆ ಬಹಳಷ್ಟು ಸಂತೋಷ ತಂದಿದೆ ಎಂದರು. ಸಂಘದ ಬೆಳವಣಿಗೆಗೆ ರೈತರು ಪ್ರಮುಖ ಕಾರಣರಾಗಿದ್ದಾರೆ. ರೈತರು ಎಷ್ಟೇ ಹಾಲನ್ನು ಸಂಘಕ್ಕೆ ಒದಗಿಸಿದರೂ ಅದನ್ನು ಒಕ್ಕೂಟ ಖರೀದಿಸಲು ಸಿದ್ಧವಾಗಿದೆ ಎಂದ ಅವರು ರೈತರಿಲ್ಲದಿದ್ದರೆ ಸಂಘವೇ ಇಲ್ಲ ಆದ್ದರಿಂದ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದ ಅವರು ಒಕ್ಕೂಟದಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡಲಾಗುವುದು ಎಂದು ತಿಳಿಸಿದರು.
ಪಿಯುಸಿಯಲ್ಲಿ ೫೮೮ ಅಂಕ ಪಡೆದ ರಾಜೀವ ಶೆಟ್ಟಿ ಮತ್ತು ಸರೋಜರವರ ಪುತ್ರಿ ಅಶ್ವಿಜಾ, ಎಸ್‌ಎಸ್‌ಎಲ್‌ಸಿಯಲ್ಲಿ ೬೦೬ ಅಂಕ ಪಡೆದ ಮಿತ್ರದಾಸ ರೈ ಮತ್ತು ರೂಪಾ ರೈಯವರ ಪುತ್ರಿ ಸಾನ್ವಿ ರೈ, ೫೫೪ ಅಂಕ ಪಡೆದ ಅನಿಲ್ ರೈ ಬಾರಿಕೆ ಮತ್ತು ದಿವ್ಯಾ ರೈಯವರ ಪುತ್ರ ಅದ್ವಿತ್ ರೈ, ೬೨೧ ಅಂಕ ಪಡೆದ ರಾಜೀವ ಶೆಟ್ಟಿ ಮತ್ತು ಸರೋಜರವರ ಪುತ್ರಿ ಧನುಜರವರುಗಳನ್ನು ಈ ಸಂದರ್ಭದಲ್ಲಿ ಶಾಲು, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ, ನಗದು ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.


ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ
ಸಂಘಕ್ಕೆ ಅತೀ ಹೆಚ್ಚು ಹಾಕಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿನಯ ಕುಮಾರ್ ಪ್ರಥಮ ಬಹುಮಾನ ಪಡೆದುಕೊಂಡರೆ, ರಾಮಣ್ಣ ಗೌಡ ದ್ವಿತೀಯ ಬಹುಮಾನ ಹಾಗೂ ಸುಧಾಕರ ಆಳ್ವ ಕಲ್ಲಡ್ಕ ತೃತೀಯ ಬಹುಮಾನ ಪಡೆದುಕೊಂಡರು. ಉಳಿದಂತೆ ೫ ಸಾವಿರ ಲೀಟರ್‌ಗಿಂತ ಹೆಚ್ಚು ಹಾಲು ಹಾಕಿದವರಲ್ಲಿ ಶ್ಯಾಮ್‌ಸುಂದರ ರೈ ಕೊಪ್ಪಳ, ನಾರಾಯಣ ಪೂಜಾರಿ, ರಾಜೇಶ್ ಶೆಟ್ಟಿ ಕಲ್ಲಡ್ಕ, ವೀರಪ್ಪ ಮೂಲ್ಯ, ಚಂದ್ರಶೇಖರ್ ರೈ, ಚಂದ್ರಶೇಖರ್ ಗೌಡ, ಸದಾಶಿವರವರುಗಳು ಬಹುಮಾನ ಪಡೆದುಕೊಂಡರು. ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ನಿರ್ದೇಶಕಿ ಕಸ್ತೂರಿ ಟಿ.ಶೆಟ್ಟಿ ಕೂರೇಲು ಪ್ರಾರ್ಥಿಸಿದರು. ವೇದಿಕೆಯಲ್ಲಿ ನಿರ್ದೇಶಕ, ಸಂಘದ ಸ್ಥಾಪಕ ಅಧ್ಯಕ್ಷ ನಾರಾಯಣ ರೈ ಬಾರಿಕೆ, ನಿರ್ದೇಶಕರುಗಳಾದ ಮಿತ್ರದಾಸ ರೈ ಡೆಕ್ಕಳ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ ಉಪಸ್ಥಿತರಿದ್ದರು. ನಿರ್ದೇಶಕ ಶ್ಯಾಮ್‌ಸುಂದರ್ ರೈ ಕೊಪ್ಪಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕ ವಂದಿಸಿದರು. ಹಾಲು ಪರೀಕ್ಷಕಿ ಬೇಬಿ ಪರ್ಪುಂಜ ಸಹಕರಿಸಿದ್ದರು. ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ಮಂಜಣ್ಣ ಪೂಜಾರಿ ಮತ್ತು ಫೋಟೋಗ್ರಾಫರ್ ಶಿವಪ್ರಸಾದ್ ಆಳ್ವರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಘದ ಕಟ್ಟಡಕ್ಕೆ ಜಾಗ ಬೇಕಾಗಿದೆ
ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಹೈನುಗಾರಿಕೆಯಿಂದ ಯಾವುದೇ ರೀತಿಯಲ್ಲೂ ನಷ್ಟ ಉಂಟಾಗಲು ಸಾಧ್ಯವಿಲ್ಲ, ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ಮಾಡಿದರೆ ಎಲ್ಲಾ ವಿಧದಲ್ಲೂ ಲಾಭ ಪಡೆಯಬಹುದಾಗಿದೆ ಎಂದರು. ಪರ್ಪುಂಜ ಸಂಘವು ಎಲ್ಲಾ ವಿಧದಲ್ಲೂ ಉತ್ತಮ ಸಂಘವಾಗಿ ಗುರುತಿಸಿಕೊಂಡಿದ್ದು ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದೆ ತೊಂದರೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ೩ ಸೆಂಟ್ಸ್ ಜಾಗವಾದರೂ ಬೇಕಾಗಿದೆ. ಸಂಘದಲ್ಲಿ ಹಣವಿದ್ದರೆ ಜಾಗ ಇಲ್ಲದೆ ಇರುವುದರಿಂದ ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ನಿರ್ಮಾಣವಾದರೆ ಮುಂದೆ ಬಿಎಂಸಿ,ಹಾಲು ಮಾರಾಟ ಕೇಂದ್ರ ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರ ಮಾಡಬೇಕೆಂಬ ಯೋಜನೆಗಳಿವೆ. ಪರ್ಪುಂಜ ಆಸುಪಾಸಿನಲ್ಲಿ ಯಾರಾದರೂ ಜಾಗ ಕೊಡುವವರಿದ್ದಾರೆ ಸಂಘವನ್ನು ಸಂಪರ್ಕಿಬಹುದು ಎಂದು ಹೇಳಿದರು.

“ ಸಂಘಕ್ಕೆ ಸ್ವಂತ ಕಟ್ಟಡಕ್ಕೆ ನಿವೇಶನ ಖರೀದಿ, ಹಾಲು ಸಂಗ್ರಹಣೆಯನ್ನು ಹೆಚ್ಚಿಸಲು ಅಗತ್ಯ ಕ್ರಮ, ಒಕ್ಕೂಟದಿಂದ ಅನುದಾನದ ಬಗ್ಗೆ ಮಾಹಿತಿ ಕಾರ್ಯಕ್ರಮ ಮುಂದಿನ ಯೋಜನೆ ಆಗಿದೆ. ಸಂಘದ ಬೆಳವಣಿಗೆಯಲ್ಲಿ ಪಾಲುದಾರರಾಗಿರುವ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಬಯಸುತ್ತೇವೆ.’‘-ರಾಧಾಕೃಷ್ಣ ರೈ ಬೂಡಿಯಾರ್, ಅಧ್ಯಕ್ಷರು ಪರ್ಪುಂಜ ಹಾ.ಉ.ಸ.ಸಂಘ

LEAVE A REPLY

Please enter your comment!
Please enter your name here