ಜು.12: ಕಡಬದಲ್ಲಿ ಪುರುಷ ರತ್ನ ಬಯೋ ಪ್ರೊಡ್ಯುಸರ್ ಕಂಪೆನಿಯ ಕಚೇರಿ ಉದ್ಘಾಟನೆ

0

ಕಡಬ: ಭಾರತ ಸರಕಾರದ ಅನುಮತಿ ಹೊಂದಿದ ಅಧಿಕೃತ ರೈತ ಉತ್ಪಾದಕ ಸಂಸ್ಥೆ ಪುರುಷ ರತ್ನ ಬಯೋ ಪ್ರೊಡ್ಯುಸರ್ ಕಂಪೆನಿಯ ಕಚೇರಿಯ ಉದ್ಘಾಟನ ಸಮಾರಂಭವು ಕಡಬದ ಸೈಂಟ್ ಜೋಕಿಮ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಜು. 12 ರಂದು ಉದ್ಘಾಟನೆಗೊಳ್ಳಲಿದೆ ಎಂದು ಕಂಪೆನಿಯ ಆಡಳಿತ ನಿರ್ದೇಶಕ ಕೆಡೆಂಜಿಗುತ್ತು ಪ್ರವೀಣ್‌ಕುಮಾರ್ ಅವರು ತಿಳಿಸಿದರು.

ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೃಷಿ ಆಧಾರಿತ ಇಂಧನ ಭಾರತದ ಸ್ವಾಯತ್ತತೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಆರಂಭಗೊಂಡಿರುವ ಸಂಸ್ಥೆ ಇದಾಗಿದ್ದು, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಶಕ್ತಿಮಾನ್ ಭಾರತ ನಿರ್ಮಾಣದ ಕಲ್ಪನೆಯಂತೆ ಪ್ರಕೃತಿಯ ರಕ್ಷಣೆ ಹಾಗೂ ಪರಿಸರ ಸಮತೋಲನ ಎನ್ನುವ ಮೂಲ ತತ್ವವನ್ನು ಆಧರಿಸಿಕೊಂಡು ದೇಶದ ಪ್ರತಿ ತಾಲೂಕಿನಲ್ಲಿ ಸುಮಾರು ೫೦ ಕೋಟಿ ರೂ. ವೆಚ್ಚದಲ್ಲಿ ನವೀಕರಿಸಬಹುದಾದ ಸಾವಯವ ಬಯೋ ಇಂಧನದ ತಯಾರಿಕಾ ಘಟಕಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಮುಂಬೈಯ ಮೀರಾ ಕ್ಲೀನ್ ಪ್ಯೂಯೆಲ್ಸ್ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪುರುಷ ರತ್ನ ಬಯೋ ಪ್ರೊಡ್ಯುಸರ್ ಕಂಪೆನಿಯು ಕಡಬ ತಾಲೂಕಿನಲ್ಲಿ ಆರಂಭಗೊಳ್ಳುತ್ತಿದೆ. ಕುದ್ಮಾರು ಗ್ರಾಮದಲ್ಲಿ ಸಂಸ್ಥೆಯ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಾಥಮಿಕ ಕೆಲಸ ಕಾರ್ಯಗಳು ಆರಂಭಗೊಂಡಿವೆ.

 

20 ವರ್ಷಗಳ ಸತತ ಪರಿಶ್ರಮದಿಂದ ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದ ವಿನೂತನ ತಂತ್ರಜ್ಞಾನದ ಮೂಲಕ ಮುಖ್ಯ ಕಚ್ಚಾವಸ್ತುವಾಗಿ ನೇಪಿಯರ್ ಹುಲ್ಲಿನ (ಆನೆ ಹುಲ್ಲು) ಜೊತೆಗೆ ಆಹಾರೇತರ ವಸ್ತುಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಜೈವಿಕ ಇಂಧನ ಹಾಗೂ ಜೈವಿಕ ಗೊಬ್ಬರ ತಯಾರಿಸುವುದು, ಇಂಧನ ಉತ್ಪಾದನೆಗೆ ಬೇಕಾಗುವ ನೇಪಿಯರ್ ಹುಲ್ಲನ್ನು ಆಯಾ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರ ಮುಖಾಂತರ ಬೆಳೆಸಿ ಖರೀದಿಸುವುದು, ಜೊತೆಗೆ ಗಾಜು, ಲೋಹ, ಕಲ್ಲು, ಮಣ್ಣು ಇವುಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಮನೆ ತ್ಯಾಜ್ಯಗಳನ್ನು ಖರೀದಿಸಿ ಕಾರ್ಖಾನೆಯಲ್ಲಿ ಕಚ್ಚಾವಸ್ತುಗಳಾಗಿ ಬಳಸುವುದರ ಮುಖೇನ ಪ್ರತೀ ಮನೆಯ ತಿಂಗಳ ಆದಾಯವನ್ನು ಕನಿಷ್ಠ 5000 ರೂ. ಗಳಷ್ಟು ಹೆಚ್ಚಿಸುವ ಉದ್ದೇಶದಿಂದ ಸಂಸ್ಥೆಯು ಕಾರ್ಯನಿರ್ವಹಿಸಲಿದೆ. ಪ್ರತೀ ತಾಲೂಕಿನ ಈ ಕಾರ್ಖಾನೆಗಳ ಮೂಲಕ ಗ್ರಾ.ಪಂ. ಪ್ಯಾಪ್ತಿಯಲ್ಲಿ 1000ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿವಿಧ ರೀತಿಯ ಉದ್ಯೋಗಗಳು ನಿರ್ಮಾಣವಾಗುವುದು. ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅರ್ಹ ರೈತರಿಗೆ ಪ್ರಥಮ ಆದ್ಯತೆ ನೀಡಿ ರೈತರು ಸಾವಯವವಾಗಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಪೂರ್ಣ ಜವಾಬ್ದಾರಿಯನ್ನು ರೈತ ಉತ್ಪಾದನಾ ಸಂಸ್ಥೆಯು ವಹಿಸುವುದು. ಸಾರ್ವಜನಿಕರಿಗೆ ಈ ಸಂಸ್ಥೆಯಲ್ಲಿ ಪಾಲು ಬಂಡವಾಳದಾರರಾಗಿ ಸದಸ್ಯರಾಗಲು ಅವಕಾಶ ಹಾಗೂ ಸದಸ್ಯರಾದವರಿಗೆ ಇಂಧನ, ಅಡುಗೆ ಅನಿಲ, ಗೊಬ್ಬರ, ಸಾವಯವ ಕೃಷಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಪಡೆಯುವ ಅವಕಾಶ ನೀಡುವ ಉದ್ದೇಶದೊಂದಿಗೆ ಸಂಸ್ಥೆಯ ಶೇ. ೨೦ ರಷ್ಟು ವಾರ್ಷಿಕ ಲಾಭಾಂಶವನ್ನು ಆಯಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಮೀಸಲಿಡಲಾಗುವುದು ಎಂದು ಅವರು ವಿವರಿಸಿದರು. ಕಚೇರಿಯ ಉದ್ಘಾಟನ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕಡಬ ಸೈಂಟ್ ಜೋಕಿಮ್ ಚರ್ಚ್‌ನ ಧರ್ಮಗುರು ವಂ| ಅರುಣ್ ವಿಲ್ಸನ್ ಲೋಬೋ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವ ಎಸ್.ಅಂಗಾರ ಅವರು ಅಧ್ಯಕ್ಷತೆ ವಹಿಸಲಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಹಕಾರಿ ರತ್ನ ಕೆ. ಸೀತಾರಾಮ ರೈ ಸವಣೂರು ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಬೆಳಂದೂರಿನ ಟಿ.ಎಸ್.ಆಚಾರ್ಯ ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಿ ಗೌರವಿಸಲಾಗುವುದು ಎಂದು ಪ್ರವೀಣ್‌ಕುಮಾರ್ ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಹ ನಿರ್ದೇಶಕ ಜೋಕಿಂ ಡಿ’ ಸೋಜ ಹಾಗೂ ನಿರ್ದೇಶಕ ವಿಜಯಕುಮಾರ್ ರೈ ಕರ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here