ಅಗಲಿದ ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಅಧ್ಯಕ್ಷ ಚೋಮರಿಗೆ ಶ್ರದ್ದಾಂಜಲಿ ಸಮರ್ಪಣೆ

0

ಕಡಬ: ಮನುಷ್ಯನ ಜೀವನ ಎಂಬುದು ಒಂದು ಅಂಕದ ಪರದೆ, ಆ ಪರದೆ ಸರಿಯುವರೆಗೆ ಮಾತ್ರ ನಮ್ಮ ಜೀವನದ ನಾಟಕ ಇರುತ್ತದೆ, ಆದರೆ ಜೀವನವೆಂಬ ನಾಟಕದಲ್ಲಿ ನಾವು ಮಾಡುವ ಪಾತ್ರಗಳು ಮಾತ್ರ ಜನಮಾನಸದಲ್ಲಿ ನೆನಪಾಗಿ ಉಳಿಯುತ್ತದೆ ಎಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ಮುಖ್ಯಗುರು ಯಶವಂತ ರೈ ನುಡಿದರು.


ಅವರು ಜು.8ರಂದು, ಇತ್ತಿಚ್ಚೆಗೆ ನಿಧನ ಹೊಂದಿದ ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ಅಧ್ಯಕ್ಷ ಚೋಮ ನಿಂತಿಕಲ್ಲು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ. ಚೋಮರ ಆರಂಭದ ಬದುಕು ತೀರ ಕಷ್ಟಕರವಾಗಿದ್ದರೂ ಅದನ್ನು ಸಮಾಜದಲ್ಲಿ ತೋರ್ಪಡಿಸಿಕೊಳ್ಳದೆ ಮರ್ದಾಳ ಪರಿಸರದ ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಅವರ ಭಜನೆಯಲ್ಲಿ ಶ್ರದ್ಧೆ, ಭಕ್ತಿ ತುಂಬಿತ್ತು ಭಜನೆಯ ಜೊತೆಗೆ ಮಂಡಳಿಯ ಏಳಿಗೆಗೆ ಶ್ರಮಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದಲ್ಲೂ ಅವರು ನೀಡಿದ ಸೇವೆ ಸ್ಮರಣಿಯವಾದದ್ದು ಅವರ ಜೀವನವು ನಮಗೆ ಪ್ರೇರಣೆಯಾಗಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.

ಮರ್ದಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೋಡಂದೂರು ಮಾತನಾಡಿ, ಚೋಮರವರು ಭಜನೆ ಮಂಡಳಿ ಮಾತ್ರವಲ್ಲದೆ ಯುವಕ ಮಂಡಲ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಬೆರೆತು ತಮ್ಮನ್ನು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು, ಅವರ ಸೇವೆ ಅಪಾರವಾದದ್ದು ಎಂದರು.

ಧಾರ್ಮಿಕ ಮುಂದಾಳು ಸತ್ಯನಾರಾಯಣ ಹೆಗ್ಡೆ ಪುತ್ತಿಲ ಮಾತನಾಡಿ ಮನುಷ್ಯ ಅಳಿದರೂ ಜೀವನದಲ್ಲಿ ಸಮಾಜಕ್ಕೆ ನೀಡಿದ ಸೇವೆ ಕೊಡುಗೆಗಳು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಅಂತಹ ನೆನಪಿಸಬೇಕಾದ ಸೇವೆಯನ್ನು ಚೋಮ ನಿಂತಿಕಲ್ಲು ಭಜನೆಯ ಮೂಲಕ ನೀಡಿದ್ದಾರೆ. ದೇವರ ಕಾರ್ಯದಲ್ಲಿ ಅವರ ನಿಷ್ಠೆ ಶ್ರದ್ಧೆ ಹಾಗೂ ಅವರ ಶ್ರಮ ಭಗವಂತನಿಗೆ ಅರ್ಪಣೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ ಅತ್ಯಡ್ಕ ಮಾತನಾಡಿ, ಮನುಷ್ಯನಿಗೆ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಿ ಬಹು ಬೇಗನೆ ಹೆಸರುಗಳಿಸಬಹುದು. ಒಳ್ಳೆಯ ಕೆಲಸ ಮಾಡಿ ಹೆಸರು ಸಂಪಾದಿಸುವುದು ತುಂಬಾ ಕಷ್ಟ. ಚೋಮರವರು ಧಾರ್ಮಿಕ ಚಟುವಟಿಕೆಯಲ್ಲಿ ಜನರ ತೋರ್ಪಡಿಕೆಗೆ ಕೆಲಸ ಮಾಡದೇ ಶ್ರದ್ಧೆ, ಭಕ್ತಿ ಭಾವನೆದಿಂದ ಕೆಲಸ ಮಾಡಿದ್ದಾರೆ ಇದರಿಂದಾಗಿ ಅವರು ಅಗಲಿದರೂ ಅವರನ್ನು ಜನತೆ ನೆನಪಿಸುವ ಕಾರ್ಯ ಮಾಡಿದೆ. ಇದು ಅವರ ಜೀವನದ ಪ್ರಾಮಾಣಿಕ ಸೇವೆಯನ್ನು ತೋರಿಸುತ್ತದೆ ಎಂದರು. ಮರ್ದಾಳ ಬೀಡು ಅನೂಪ್ ಕುಮಾರ್ ಅವರು ದೀಪ ಬೆಳಗಿಸಿದರು. ವೇದಿಕೆಯಲ್ಲಿ ಮರ್ದಾಳ ಶ್ರೀ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಗಂಗಾಧರ ರೈ ಬಸವಪಾಲು, ಭಜನಾ ಮಂಡಳಿಯ ಹಿರಿಯ ಸದಸ್ಯ ಕೂಸಪ್ಪ ಗೌಡ ಕೋರಡ್ಕ ಉಪಸ್ಥಿತರಿದ್ದರು. ಅಗಲಿದ ಚೋಮ ನಿಂತಿಕಲ್ಲು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮನೋಜ್ ಕೋಡಿಂಕಿರಿ ಸ್ವಾಗತಿಸಿ, ಉದಯಕುಮಾರ್ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜೀವ ಶೆಟ್ಟಿ ಅತ್ಯಡ್ಕ,ತಿರುಮಲೇಶ್ವರ ಕೊಲ್ಯ, ಸುರೇಶ್ ರೈ ನೈಲ, ಪ್ರಮೋದ್ ಕುಮಾರ್, ಆನಂದ ರೈ ನೈತಡ್ಕ, ದೇವಿ ಪ್ರಸಾದ್ ಮರ್ದಾಳ, ಲೋಲಾಕ್ಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here