ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಶೀಘ್ರ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಕೇಂದ್ರ ಆರಂಭ

0

ಕಡಬ: ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಜಾರಿಗೆ ತಂದಿರುವ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳು ಶೀಘ್ರ ಪ್ರಯಾಣಿಕರಿಗೆ ಲಭ್ಯವಾಗಲಿದೆ.

 


ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಮೊದಲ ಹಂತದಲ್ಲಿ ನಾಲ್ಕು ರೈಲು ನಿಲ್ದಾಣಗಳಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಗೆ ಅರ್ಜಿ ಆಹ್ವಾನಿಸಿತ್ತು. ಅದರಂತೆ ಮೊದಲನೆಯದಾಗಿ ಮೈಸೂರು ರೈಲು ನಿಲ್ದಾಣದಲ್ಲಿ ಆರಂಭಗೊಂಡಿದೆ. ಎರಡನೇಯದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕೇಂದ್ರ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಆರಂಭವಾಗಲಿದೆ.

ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್‌ಗೆ ಬೆಂಬಲ ಸೂಚಿಸಿದ್ದರು. ಅದರಂತೆ ಇದೀಗ ರೈಲ್ವೇ ಇಲಾಖೆ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆ, ಕರಕುಶಲತೆಯಂತಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ. ಈ ಹಿನ್ನಲೆಯಲ್ಲಿ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮಾರಾಟವಾಗಲಿದೆ.

ಲಭ್ಯವಿರುವ ವಸ್ತುಗಳು;
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡಲು ನೈರುತ್ಯ ರೈಲ್ವೇ ಮೈಸೂರು ವಿಭಾಗದ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಪ್ರಾಯೋಗಿಕ ಮಾರಾಟ ಮಾಡಲು ಅಯ್ಕೆಯಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ |ಡಿ.ವಿರೇಂದ್ರ ಹೆಗ್ಗಡೆ ಅವರ ಕನಸಿನ ಕೂಸಾಗಿರುವ ಸಿರಿ ಸಂಸ್ಥೆಯ ಉತ್ಪನ್ನಗಳು ಕಳೆದ ಎರಡು ದಶಕಗಳಿಂದ ಕರ್ನಾಟಕದಾದ್ಯಂತ ಮನೆ ಮಾತಾಗಿದೆ. ಸಿರಿದಾನ್ಯ, ಕೋಕಂ, ಪುಷ್ಟಿ-ಪೌಷ್ಟಿಕ ಆಹಾರ, ಜೇನು, ಮಿರಿಂಡಾ ಸ್ಕ್ಯಾಷ್, ಉಪ್ಪಿನ ಕಾಯಿ, ಹಪ್ಪಳ, ಸೋಪ್, ಫಿನಾಯಿಲ್, ಅಗರಬತ್ತಿ, ಖಾಧಿ ಶರ್ಟ್, ನೈಟಿ, ಟಾಪ್, ಸ್ಕರ್ಟ್ ಇತ್ಯಾದಿ ಗ್ರಾಮೀಣ ಜನರಿಂದಲೇ ಉತ್ಪಾದನೆ ಮಾಡಲಾದ ವಸ್ತುಗಳು ರೈಲು ನಿಲ್ಧಾಣದಲ್ಲಿ ಲಭ್ಯವಿರಲಿದೆ. ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಸ್ಪರ್ದಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯ ಅತೀ ಹೆಚ್ಚು ಜನರು ಸಂದರ್ಶಿಸುವ ರೈಲು ನಿಲ್ದಾಣಗಳಲ್ಲಿ ಕಡಬ ತಾಲೂಕಿನ ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಒಂದು. ಇಲ್ಲಿಗೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಪ್ರಯಾಣಿಕರು ಆಗಮಿಸಿ ಸಂಚರಿಸುತ್ತಾರೆ ಹಾಗೂ ಇಲ್ಲಿಂದಲೇ ಯಾತ್ರಾ ಕ್ಷೇತ್ರ ಸಂದರ್ಶಿಸುತ್ತಾರೆ. ಆದ್ದರಿಂದ ಇಲ್ಲಿ ಸದಾ ಪ್ರಯಾಣಿಕರ ದಟ್ಟನೆ ಇರುತ್ತಿದ್ದು, ಇಲ್ಲಿನ ಆರಂಭವಾಗಲಿರುವ ಒಂದು ಉತ್ಪನ್ನ ಯೋಜನೆಗೆ ಉತ್ತಮ ಸ್ಪಂಧನೆ ವ್ಯಕ್ತವಾಗುವ ನಿರೀಕ್ಷೆ ಇದೆ. ಸಿರಿ ಉತ್ಪನ್ನಗಳನ್ನು ಇತರೆ ರೈಲ್ವೆ ನಿಲ್ದಾಣಗಳಿಗೂ ವಿಸ್ತರಿಸುವ ಯೋಜನೆ ಇದೆ ಎನ್ನುತ್ತಾರೆ ಸಂಸ್ಥೆಯವರು.

ಶೀಘ್ರ ಆರಂಭ;
ಈಗಾಗಲೇ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸಿರಿ ಸಂಸ್ಥೆಯ ವತಿಯಿಂದ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಅಂಗವಾಗಿ ಕೇಂದ್ರ ಆರಂಭಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ಕೆಲಸ ಕಾರ್ಯಗಳು ನಡೆಯುತ್ತಿದೆ. ಮುಂದಿನ ವಾರದಲ್ಲಿ ಮಾರಾಟ ಕೇಂದ್ರ ಆರಂಭಗೊಳ್ಳುವ ನಿರೀಕ್ಷೆಯನ್ನು ರೈಲ್ವೆ ಅಧಿಕಾರಿಗಳು, ಸಿರಿ ಸಂಸ್ಥೆಯವರು ವ್ಯಕ್ತಪಡಿಸಿದ್ದಾರೆ.

ಶೀಘ್ರ ಮಾರಾಟ ಕೇಂದ್ರ ಪ್ರಾರಂಭ-ತ್ಯಾಗರಾಜ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈರುತ್ಯ ರೈಲ್ವೇ ಮೈಸೂರು ವಿಭಾಗದ ವಾಣಿಜ್ಯ ಅಧಿಕಾರಿ ತ್ಯಾಗರಾಜ್ ಅವರು, ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಅರ್ಜಿ ಆಹ್ವಾನಿಸಿದಂತೆ ಅರ್ಜಿಗಳು ಬಂದಿವೆ. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಶೀಘ್ರ ಮಾರಾಟ ಕೇಂದ್ರ ಆರಂಭವಾಗಲಿದೆ. ವ್ಯಾಪ್ತಿಯ ಇತರೆಡೆ ತೆರೆಯುವ ಸಿದ್ಧತೆಗಳೂ ನಡೆಯುತ್ತಿವೆ.

LEAVE A REPLY

Please enter your comment!
Please enter your name here