ಕಡಬದಲ್ಲಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಕಡಬ ಶಾಖೆ ಶುಭಾರಂಭ

0

  • ಶ್ರಮಕ್ಕೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ-ವಂ.ಅರುಣ್ ವಿಲ್ಸನ್ ಲೋಬೊ

 

ಕಡಬ: ಜೀವನದಲ್ಲಿ ಶ್ರಮಕ್ಕೆ ಖಂಡಿತಾ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ, ಆದರೆ ನಮ್ಮ ವ್ಯವಹಾರಗಳು ಪ್ರಾಮಾಣಿಕವಾಗಿರಬೇಕು ಎಂದು ಕಡಬ ಸಂತ ಜೋಕಿಮರ ದೇವಾಲಯದ ಧರ್ಮಗುರು ವಂ. ಅರುಣ್ ವಿಲ್ಸನ್ ಲೋಬೋ ಅವರು ಹೇಳಿದರು.


ಅವರು ಜು.9ರಂದು ಕಡಬದ ಶ್ರೀ ದೇವಿ ಸಂಕೀರ್ಣದಲ್ಲಿ ನಡೆದ, ಉಪ್ಪಿನಂಗಡಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಕಡಬ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ, ಆಶೀರ್ವಚನ ನೀಡಿದರು. ಮನುಷ್ಯನಿಗೆ ಹುಟ್ಟುವಾಗ ಬಡತನ ಇರಬಹುದು, ಆದರೆ ಸಾಯುವಾಗ ಬಡತನ ಇರಬಾರದು, ಯಾಕೆಂದರೆ ಆತನಿಗೆ ದೇವರು ಕೈ ಕಾಲು ಕೊಟ್ಟಿದ್ದಾರೆ, ದುಡಿಯಬೇಕು, ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ದೇವರ ದಯೆ ಇದೆ ಅಂತೆಯೇ ವ್ಯವಹಾರದಲ್ಲಿ ಕೂಡ ಪಾರದರ್ಶಕತೆ ಇದ್ದರೆ ಅಭಿವೃದ್ದಿ ಪಥದಲ್ಲಿ ಸಾಗುತ್ತದೆ ಎಂದ ಅವರು, ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಈಗಾಗಲೇ ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಉತ್ತಮ ಅಡಿಪಾಯ ಇದ್ದು ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ, ಇನ್ನು ಮುಂದೆ ಕಡಬ ಜನತೆಗೆ ಈ ಸಂಘದ ಪ್ರಯೋಜನ ಸಿಗಲಿದೆ ಎಂದು ಹೇಳಿ ಶುಭಹಾರೈಸಿದರು.

ಶಾಖಾ ಕಛೇರಿಯನ್ನು ಉದ್ಘಾಟಿಸಿದ ಸಹಕಾರಿ ಸಂಘದ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ಅವರು ಮಾತನಾಡಿ, ನಮ್ಮ ಸಂಘವು ಉಪ್ಪಿನಂಗಡಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಮುಂದೆ ಕಡಬದ ಜನತೆಗೆ ನಾವು ನಮ್ಮ ಸೇವೆ ನೀಡಲಿzವೆ ಎಂದು ಹೇಳಿ, ಇಲ್ಲಿ ಶಾಖಾ ಕಛೇರಿ ಪ್ರಾರಂಭಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ವಂ.ಅಬೆಲ್ ಲೋಬೊ ಅವರು ಮಾತನಾಡಿ, ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಭಿವೃದ್ದಿಗೆ ದೇವರ ಅನುಗ್ರಹ ಇರಲಿ, ಉತ್ತಮ ಸೇವೆಯನ್ನು ನೀಡಿ ಸಂಘವು ಇನ್ನಷ್ಟು ಶಾಖೆಯನ್ನು ತೆರೆಯಲಿ ಎಂದು ಆಶೀರ್ವದಿಸಿದರು. ಮರ್ದಾಳ ಸಂತ ಮೇರಿ ಸಿರಿಯನ್ ಅರ್ಥೋಡೊಕ್ಸ್ ಚರ್ಚ್‌ನ ಧರ್ಮಗುರು ವಂ. ಮ್ಯಾಥ್ಯೂ ಜೋನ್ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ಸಹಕಾರಿ ಸಂಘ ಸ್ಥಾಪನೆ ಉತ್ತಮ ಬೆಳವಣಿಗೆ, ಇದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕಡಬ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಬೆಳೆಯುತ್ತಿರುವ ಕಡಬದಲ್ಲಿ ಹೆಚ್ಚು ಹೆಚ್ಚು ಉದ್ಯಮಗಳು ಪ್ರಾರಂಭವಾಗುತ್ತಿರುವುದು ಒಂದು ಉತ್ತಮ ಬೆಳವಣಿಗೆ, ವ್ಯವಹಾರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದಾಗ ಯಶಸ್ಸು ಖಂಡಿತಾ, ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.


ನಿತ್ಯ ನಿಧಿ ಠೇವಣಿ ಸಂಗ್ರಹಕ್ಕೆ ಚಾಲನೆ ನೀಡಿದ ಮಾಜಿ ಜಿ.ಪ. ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಸಹಕಾರಿ ಸಂಘಗಳನ್ನು ಮುನ್ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ, ಕಡಬ ತಾಲೂಕು ಕೇಂದ್ರವಾದ ಬಳಿಕ ಕಡಬಕ್ಕೆ ವಿವಿಧ ಹಣಕಾಸು ಸಂಸ್ಥೆಗಳು ಬಂದಿದೆ. ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿ ಹಾರೈಸಿದರು. ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ. ಅವರು ಎಲ್ಲರೂ ಕೈ ಜೋಡಿಸಿದಾಗ ಯಾವುದೇ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ, ಕಡಬದಲ್ಲಿ ಈಗಾಗಲೇ ೩೫ಕ್ಕಿಂತಲೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ, ಸಂಘದ ಅಭಿವೃದ್ದಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆತು ಸಂಘವು ಅಭಿವೃದ್ಧಿಯತ್ತ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಮೈಸೂರು ವಿಭಾಗದ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಮಾತನಾಡಿ ಶುಭ ಹಾರೈಸಿದರು. ಶ್ರೀ ದೇವಿ ಸಂಕೀರ್ಣದ ಮಾಲಕ ರಾಮಚಂದ್ರ ಕೆ. ದೀಪ ಬೆಳಗಿಸಿದರು. ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಪ್ರೆಡ್ ವಿ. ಡಿಸೋಜ ವರದಿ ವಾಚಿಸಿ, ವಂದಿಸಿದರು. ಉಪಾಧ್ಯಕ್ಷ ಜೆರೊಂ ಬ್ರಾಗ್ಸ್, ನಿರ್ದೇಶಕರಾದ ರೋಬರ್ಟ್ ಡಿಸೋಜ, ಸೆಬಾಸ್ಟಿಯನ್ ಲೋಬೊ, ಹೆನ್ರಿ ಲೋಬೊ, ಸಿಲ್ವಸ್ಟರ್ ವೇಗಸ್, ಮ್ಯಾಕ್ಸಿಂ ಲೋಬೊ, ಐರಿನ್ ಲೋಬೊ, ಫೆಲ್ಸಿ ಡಿ ಸೋಜ, ಗ್ರೆಗರಿ ಲೋಬೊ, ವಿನ್ಸೆಂಟ್ ಕೆ. ಮಿನೇಜಸ್, ಕಡಬ ಶಾಖಾಧಿಕಾರಿ ಸಿಜು.ಟಿ. ಅವರುಗಳು ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ಸ್ವಾಗತಿಸಿದರು, ವಿನ್ಸೆಂಟ್ ಕೆನ್ಯೂಟ್ ಮಿನೇಜಸ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಶ್ರೇಯಾ ಸಿ.ಪಿ. ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಪ್ರಥಮ ಠೇವಣಿ ಪತ್ರ ವಿತರಣೆ ಮತ್ತು ನಿತ್ಯನಿಧಿ ಸಂಗ್ರಹ ಹಾಗೂ ಎಸ್.ಬಿ. ಖಾತೆಗಳಿಗೆ ಚಾಲನೆ ನೀಡಲಾಯಿತು.

ಸನ್ಮಾನ: ಕಾರ್ಯಕ್ರಮದಲ್ಲಿ ಅಬ್ಬಾಸ್ ಕಡಬ, ಸಂಘದ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್, ಹಿರಿಯ ನಿರ್ದೇಶಕ ರೋಬರ್ಟ್ ಡಿ ಸೋಜ ಅವರನ್ನ ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here