ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಾಧಕರಿಗೆ ಅಭಿನಂದನಾ ಸಮಾರಂಭ

0

  • ಸಮಾಜಕ್ಕೆ ಸ್ಪಂದಿಸುವುದು ಪ್ರತಿಯೊಬ್ಬರ ಕರ್ತವ್ಯ : ಡಾ.ದೀಪಕ್ ರೈ

ಪುತ್ತೂರು: ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯವಾದದ್ದು, ಬದುಕಿನ ಕೊನೆಯವರೆಗೂ ಕಲಿಕೆಯ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ಆದರೆ ಶಿಕ್ಷಣ ಪಡೆಯುವುದರೊಂದಿಗೆ ಸಮಾಜಕ್ಕೇನಾದರೂ ನಾವು ಮಾಡುತ್ತೇವೆ ಅನ್ನುವ ಮನಃಸ್ಥಿತಿ ನಮ್ಮಲ್ಲಿ ಒಡಮೂಡಬೇಕು. ಯಾಕೆಂದರೆ ತಾವು ಬಾಳಿ ಬದುಕುವ ಸಮಾಜಕ್ಕಾಗಿ ಸ್ಪಂದಿಸುವುದು ಎಲ್ಲರ ಕರ್ತವ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿ ೨೦೨೧-೨೨ನೇ ಸಾಲಿನ ಪಿಯು ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗಾಗಿ ಶನಿವಾರ ನೆಲ್ಲಿಕಟ್ಟೆಯಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂಜಿನಿಯರ್, ಡಾಕ್ಟರ್ ಆಗಬೇಕೆಂಬ ಕನಸನ್ನು ಅನೇಕರು ಕಾಣುತ್ತಾರೆ. ಆದರೆ ರಾಜಕೀಯ ನಾಯಕರಾಗುವ ಕನಸನ್ನೂ ಕಾಣಬೇಕಿದೆ. ಇಡಿಯ ವ್ಯವಸ್ಥೆಯನ್ನು ಮುನ್ನಡೆಸುವ ನೇತಾರರಾಗುವ ಗುರಿಯನ್ನು ಕೆಲವಾರು ವಿದ್ಯಾರ್ಥಿಗಳಾದರೂ ಇಟ್ಟುಕೊಳ್ಳಬೇಕು. ಉತ್ತಮ ನಾಯಕ ಎಲ್ಲಾ ಬದಲಾವಣೆಗಳಿಗೂ ಕಾರಣನಾಗಬಲ್ಲ. ಭಾರತದಲ್ಲೀಗ ಪ್ರಧಾನಿಯವರ ಉತ್ಕೃಷ್ಟ ನಾಯಕತ್ವ ಎದ್ದು ಕಾಣುತ್ತಿದೆ. ಕೊರೋನಾವನ್ನು ಭಾರತ ಎದುರಿಸಿದ ರೀತಿ ಜಗತ್ತಿಗೇ ಮಾದರಿಯೆನಿಸಿದೆ ಎಂದು ನುಡಿದರು.

ಅಂಕಗಳು ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ದೊರಕಿರಬಹುದು. ಆದರೆ ಭವಿಷ್ಯ ಎಲ್ಲರಿಗೂ ತೆರೆದೇ ಇರುತ್ತದೆ ಎಂಬುದನ್ನು ಮರೆಯಬಾರದು. ಕನಿಷ್ಟ ಅಂಕ ಪಡೆದವನಿಗೂ ಅವಕಾಶಗಳು ಲಭಿಸಬಹುದು. ಆದ್ದರಿಂದ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕಾದದ್ದು ಅತ್ಯಂತ ಅಗತ್ಯ ಎಂದರಲ್ಲದೆ ಮೌಲ್ಯವಿಲ್ಲದ ಶಿಕ್ಷಣಕ್ಕೆ ಅರ್ಥವಿಲ್ಲ. ಭಾರತೀಯ ಮೌಲ್ಯಗಳು ಅತ್ಯುತ್ಕೃಷ್ಟವಾಗಿವೆ. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದುಡ್ಡಿಗಾಗಿ ವಿದೇಶೀಯರ ಗುಲಾಮಗಿರಿ ಮಾಡುವ ಮನಃಸ್ಥಿತಿಯಿಂದ ನಾವು ಹೊರಬರಬೇಕು. ದೇಶದಲ್ಲೇ ಇದ್ದು ಸಾಧಿಸುತ್ತೇನೆ ಎಂಬ ಸ್ಪಷ್ಟ ನಿಲುವನ್ನು ತಾಳಬೇಕು. ಇಂದು ಭಾರತೀಯ ಜ್ಞಾನ ವಿದ್ಯಾರ್ಥಿಗಳೆಂಬ ಚಿನ್ನದ ಬಟ್ಟಲಲ್ಲಿ ವಿದೇಶೀಯರ ಪಾಲಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೇ ಐದನೆಯ ರಾಂಕ್ ಪಡೆದ ಖುಷಿ ರೈ ಹಾಗೂ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಶ್ರೇಯಾ ಅವರನ್ನು ಸನ್ಮಾನಿಸಲಾಯಿತು. ಪರೀಕ್ಷೆ ಬರೆದ ೩೪೮ ಮಂದಿ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ೨೦೦ ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ವಂದಿಸಿದರು. ಉಪನ್ಯಾಸಕಿ ಸುಕನ್ಯಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿಯರಾದ ಅಕ್ಷತಾ, ಕೃತಿ, ಗೀತಾ ಸಿ.ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here