- ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಛೇರಿ ಮುಂದೆ ನಡೆಯಲಿರುವ ಧರಣಿಯಲ್ಲಿ ಪಾಲ್ಗೊಳ್ಳಲು ಸಭೆಯಲ್ಲಿ ನಿರ್ಧಾರ
ಪುತ್ತೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ಇದರ ಸಾಮಾನ್ಯ ಸಭೆ ಜು.10 ರಂದು ಪುತ್ತೂರು ಜೈನಬಸದಿ ಸಭಾಭವನದಲ್ಲಿ ನಡೆಯಿತು.
ಇತ್ತೀಚಿಗೆ ನಿಧನ ಹೊಂದಿದ ಅಸೋಸಿಯೇಶನ್ ಸದಸ್ಯರಿಗೆ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯ ಸಮಿತಿಯ ಆಂತರಿಕ ಲೆಕ್ಕಪರಿಶೋಧಕ ರಘುನಾಥ್ ಬಿ.ರವರು ಮಾತನಾಡಿ ಟೈಲರ್ಸ್ ವೃತ್ತಿಬಾಂಧವರ ಬೇಡಿಕೆ ಈಡೇರಿಸುವಿಕೆಗಾಗಿ ರಾಜ್ಯ ಸಮಿತಿ ವತಿಯಿಂದ ಜು.೨೬ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನಾ ಮೆರವಣಿಗೆಯೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗುವುದು ಎಂದು ತಿಳಿಸಿದರು. ನಮ್ಮ ಪ್ರಮುಖ ಬೇಡಿಕೆಯಾದ ಭವಿಷ್ಯನಿಧಿ ಹಾಗೂ ೬೦ ವರ್ಷ ಪ್ರಾಯದ ಟೈಲರುಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡುವಲ್ಲಿ ಸರಕಾರ ಮೀನ ಮೇಷ ಎಣಿಸುವುದನ್ನು ಮನಗಂಡು ರಾಜ್ಯ ಸಮಿತಿಯ ಸಭೆಯ ತೀರ್ಮಾನದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜು.೨೬ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕ್ಷೇತ್ರ ಸಮಿತಿಗೆ ಒಳಪಟ್ಟ ಎಲ್ಲಾ ವಲಯದಿಂದ ಹೆಚ್ಚಿನ ಸದಸ್ಯರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯೆ ಚಿತ್ರ ಬಿ.ಸಿ. ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಸಾವಿತ್ರಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಸುಜಾತ ಉಪಸ್ಥಿತರಿದ್ದರು.
ವಲಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಜೊತೆ ಕಾರ್ಯದರ್ಶಿ ಸಾವಿತ್ರಿ ವರದಿ ವಾಚಿಸಿ ವಂದಿಸಿದರು. ಕೋಶಾಧಿಕಾರಿ ಸುಜಾತ ಲೆಕ್ಕಪತ್ರ ಮಂಡನೆ ಮಾಡಿದರು.