ವೃತ್ತಿಯನ್ನು ಪ್ರೀತಿಸಿದಾಗ ಶ್ರದ್ಧೆ, ಪ್ರಾಮಾಣಿಕ ಕೆಲಸ ;  ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಎಸ್.ಎನ್. ಜಗದೀಶ್

0

ಪುತ್ತೂರು: ವೃತ್ತಿಯನ್ನು ಪ್ರೀತಿಸಿದಾಗ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲು ಸಾಧ್ಯ. ವೃತ್ತಿಯನ್ನು ಪ್ರೀತಿಸದ ವ್ಯಕ್ತಿಯಿಂದ ಉತ್ತಮ ಜೀವನ ನಿರ್ವಹಿಸಲು ಸಾಧ್ಯವಿಲ್ಲ ಎಂದು ಎಸ್‌ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಪುತ್ತೂರು ಶಾಖೆಯ ನಿವೃತ್ತ ಹಿರಿಯ ವ್ಯವಸ್ಥಾಪಕ ಜಗದೀಶ್ ಎಸ್.ಎನ್. ಹೇಳಿದರು.

ಸನ್ಮಾನ: ಜಗದೀಶ್ ಎಸ್.ಎನ್. ದಂಪತಿಗೆ ಸಾರ್ವಜನಿಕ ಅಭಿನಂದನೆ ಮಾಡಲಾಯಿತು.

ಪುತ್ತೂರು ಎಸ್‌ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಪುತ್ತೂರು ಶಾಖೆಯ ಹಿರಿಯ ವ್ಯವಸ್ಥಾಪಕರಾಗಿದ್ದ ಜಗದೀಶ್ ಎಸ್.ಎನ್. ಅವರು ಇತ್ತೀಚೆಗೆ ನಿವೃತ್ತಿಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜ, ವಿಶ್ವಕರ್ಮ ಮಹಿಳಾ ಮಂಡಳಿ ನೇತೃತ್ವದಲ್ಲಿ ಜುಲೈ ೧೧ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

1984ರಲ್ಲಿ ಎಸ್‌ಕೆಜಿಐ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದೆ. ಆಗ ಅಲ್ಲಿ ಕೆಲ ಸಮಸ್ಯೆಗಳಿತ್ತು. ಇದನ್ನು ಎದುರಿಸಲು ಕಷ್ಟಪಡುತ್ತಿದ್ದಾಗ ತನಗೆ ಸಹಾಯ ಮಾಡಿದವರು ಉರಗ ತಜ್ಞ ಡಾ. ರವೀಂಧ್ರನಾಥ್ ಐತಾಳ್ ಅವರು. ಗಣಿತದಲ್ಲಿ ಹಿಂದಿದ್ದ ನನಗೆ ಬ್ಯಾಂಕ್ ಕೆಲಸದಲ್ಲಿಯೂ ಅವರೇ ಮಾರ್ಗದರ್ಶನ ಮಾಡಿದರು. ಇದರಿಂದಾಗಿ ಬ್ಯಾಂಕ್ ಕೆಲಸದಲ್ಲಿ ತಾನು ಯಶಸ್ವಿಯಾಗಿ 37 ವರ್ಷ 8 ತಿಂಗಳು ಯಶಸ್ವಿಯಾಗಿ ಪೂರೈಸುವಂತಾಯಿತು ಎಂದರು.

ಬ್ಯಾಂಕ್ ಕೆಲಸದ ಜೊತೆಗೆ ರೋಟರ‍್ಯಾಕ್ಟ್ ಕ್ಲಬ್‌ಗೂ ಸೇರಿಕೊಂಡೆ. ಯಾವುದೋ ಮೂಲೆಯಲ್ಲಿ ಕುಳಿತುಕೊಂಡಿದ್ದ ನಾವುಗಳು, ಚಿದಾನಂದ ಬೈಲಾಡಿ ಅವರು ಅಧ್ಯಕ್ಷರಾದ ಸಂದರ್ಭ 8 ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರ‍್ಯಾಕ್ಟ್ ಜಿಲ್ಲೆಯಲ್ಲೇ ಪುತ್ತೂರು ಕ್ಲಬ್ ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವಂತಾಯಿತು. ಮುಂದೆ ಚಿದಾನಂದ ಬೈಲಾಡಿ ಮೊದಲಾದವರ ಸಲಹೆಯಂತೆ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದೆ ಎಂದು ಸ್ಮರಿಸಿಕೊಂಡರು.

ಉತ್ತಮ ಹಿರಿಯ ವ್ಯವಸ್ಥಾಪಕ: ಉಪೇಂದ್ರ ಆಚಾರ್ಯ

ಮಂಗಳೂರು ಎಸ್‌ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ ಮಾತನಾಡಿ, ಅಬ್ದುಲ್ ಕಲಾಂ ಅವರು ಪೈಲೆಟ್ ಪರೀಕ್ಷೆಯಲ್ಲಿ ಫೈಲಾದ ಕಾರಣ ಅತ್ಯುತ್ತಮ ವಿಜ್ಞಾನಿಯಾದರು. ಅದೇ ರೀತಿ ಎಸ್.ಎನ್. ಜಗದೀಶ್ ಅವರು ಶಿಕ್ಷಕರಾಗಿದ್ದರೆ ಇಂದು ಎಸ್‌ಕೆಜಿಐ ಬ್ಯಾಂಕ್‌ಗೆ ಒಬ್ಬ ಉತ್ತಮ ವ್ಯವಸ್ಥಾಪಕನನ್ನು ಕಳೆದುಕೊಳ್ಳಬೇಕಿತ್ತು. ಬ್ಯಾಂಕ್‌ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಅವರ ಬದುಕು, ಆಯಾಸ ರಹಿತವಾಗಿರಲಿ ಎಂದು ಹಾರೈಸಿದರು.

ಲೆಕ್ಕಾಚಾರದಲ್ಲಿ ಪಕ್ಕಾ ವ್ಯಕ್ತಿ: ಆನಂದ ಆಚಾರ್ಯ

ಮಂಗಳೂರು ಎಸ್‌ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಆನಂದ ಆಚಾರ್ಯ ಮಾತನಾಡಿ, ಸೊಸೈಟಿಯ ಕಾರ್ಯದೊತ್ತಡದ ನಡುವೆ ಸಂಘದಲ್ಲೂ ಸಕ್ರೀಯರಾಗಿದ್ದ ಜಗದೀಶ್ ಎಸ್.ಎನ್. ಅವರು ಲೆಕ್ಕಾಚಾರದಲ್ಲಿ ಪಕ್ಕಾ ವ್ಯಕ್ತಿ. ಅವರ ಪ್ರೇರಣೆಯಿಂದಲೇ ನಾವಿಂದು ಸೊಸೈಟಿಯ ಉಪಾಧ್ಯಕ್ಷನಾಗುವಂತಾಗಿದೆ ಎಂದರು.

ಇತರರಿಗೆ ಮಾದರಿ ವ್ಯಕ್ತಿ: ಯಜ್ಞೇಶ್ವರ

ಮಂಗಳೂರು ಎಸ್‌ಕೆಜಿಐ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಮಾತನಾಡಿ, ಜಗದೀಶ್ ಎಸ್.ಎನ್. ಅವರು 37 ವರ್ಷ 8 ತಿಂಗಳು ನಿರ್ವಹಿಸಿದ ಕರ್ತವ್ಯ ಇತರರಿಗೆ ಮಾದರಿ. ಪ್ರಾಮಾಣಿಕ ವ್ಯಕ್ತಿಯಾಗಿರುವ ಇವರ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂದರು.

ವೇದಿಕೆ ಹತ್ತಲು ಕಾರಣರಾದರು: ಇಂದಿರಾ ಪುರುಷೋತ್ತಮ್

ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ, ಪುತ್ತೂರು ನಗರಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಮಾತನಾಡಿ, ಜಗದೀಶ್ ಎಸ್.ಎನ್. ಅವರ ಪ್ರೋತ್ಸಾಹದಿಂದಲೇ ತಾನು ವೇದಿಕೆ ಹತ್ತುವಂತಾಯಿತು. ಇಂದು ಹಲವು ಚಟುವಟಿಕೆಗಳಲ್ಲಿ ತೊಡಗಲು ಕಾರಣವಾಯಿತು ಎಂದರು.

ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ ಕಾಣಿಯೂರು ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಪ್ರಕಾಶ್, ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯಾಶ್ರೀ ಉಪಸ್ಥಿತರಿದ್ದರು. ಇದೇ ಸಂದರ್ಭ ಎಸ್.ಎನ್. ಜಗದೀಶ್ ಹಾಗೂ ಅವರ ಪತ್ನಿ ಉಷಾ ಜಗದೀಶ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಜಗದೀಶ್ ಎಸ್.ಎನ್. ಅವರ ಪುತ್ರ ಸಂಜನ್ ಜೊತೆಗಿದ್ದರು.

ಗಣೇಶ್, ಗುರುಸೇವಾ ಪರಿಷತ್‌ನ ಪುತ್ತೂರು ವಲಯ ಅಧ್ಯಕ್ಷ ವಿ. ಪುರುಷೋತ್ತಮ ಆಚಾರ್ಯ, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ವಿಶ್ವಕರ್ಮ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಉಷಾ ಸದಾನಂದ್, ವಿಶ್ವಕರ್ಮ ಯುವ ಸಮಾಜದ ಕೋಶಾಧಿಕಾರಿ ವಸಂತ ಆಚಾರ್ಯ, ಹರ್ಷಿತ್ ಜ್ಯುವೆಲ್ಲರ‍್ಸ್‌ನ ಗಂಗಾಧರ ಆಚಾರ್ಯ, ಎಸ್‌ಕೆಜಿಐ ಬ್ಯಾಂಕ್‌ನ ಉಷಾನಾಗೇಶ್ ಅನಿಸಿಕೆ ವ್ಯಕ್ತಪಡಿಸಿ, ಜಗದೀಶ್ ಎಸ್.ಎನ್. ಅವರಿಗೆ ಶುಭಹಾರೈಸಿದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ. ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಉಷಾ ಸದಾನಂದ್ ವಂದಿಸಿದರು. ವಿಶ್ವಕರ್ಮ ಯುವ ಸಮಾಜದ ಸಾಂಸ್ಕೃತಿಕ ಕಾರ್ಯದರ್ಶಿ ಬಿ.ವಿ. ಕಿಶನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here