ರೋಟರಿ ಪುತ್ತೂರು ಯುವ ಪದಪ್ರದಾನ

0
  • ಸ್ವಸ್ಥ ಸಮಾಜದ ಆಶಾಕಿರಣ ರೋಟರಿಯಾಗಿದೆ-ವಿಕ್ರಂ ದತ್ತ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಸಮಾಜದಲ್ಲಿನ ಅನೇಕರ ಉತ್ತುಂಗತೆಯಲ್ಲಿ ಶ್ರಮಿಸುವ ಮೂಲಕ ಕಾಳಜಿ ವಹಿಸುತ್ತಿದೆ. ಒಂದರ್ಥದಲ್ಲಿ ಸ್ವಸ್ಥ ಸಮಾಜದ ಆಶಾಕಿರಣವಾಗಿ ರೋಟರಿ ಸಂಸ್ಥೆಯು ಬೆಳೆದು ನಿಂತಿದೆ ಎಂದು ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತರವರು ಹೇಳಿದರು.


ಜು.10ರಂದು ಸಂಜೆ ಬೊಳ್ವಾರು ಮಹಾವೀರ ವೆಂಚರ್‍ಸ್‌ನಲ್ಲಿ ನಡೆದ 2022-23ನೇ ಸಾಲಿನ ನೂತನ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ರೋಟರಿಗೆ ಭರ್ತಿಯಾದ ಪ್ರತಿ ರೊಟೇರಿಯನ್ಸ್‌ಗಳು ತಮ್ಮ ಹಿತದೊಂದಿಗೆ ಸಮಾಜದಲ್ಲಿನ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗಬೇಕಿದೆ. ನಾವು ನಮ್ಮ ಯಶಸ್ಸಿನ ಹಿಂದೆ ಅನೇಕರು ಇದ್ದಾರೆ ಎಂಬುದನ್ನು ನಾವು ಖಂಡಿತಾ ಮರೆಯಬಾರದು. ಜಿಲ್ಲೆಯ ಉತ್ತಮ ಕ್ಲಬ್ ಆಗಿ ಬೆಳೆದು ನಿಂತಿರುವ ಯುವ ತಂಡವು ಸಮಾಜಕ್ಕೆ ಉತ್ತಮವಾದುದನ್ನೇ ನೀಡುತ್ತಾ ಬಂದಿರುವುದು ಶ್ಲಾಘನೀಯ. ಅಂತರ್ರಾಷ್ಟ್ರೀಯ ರೋಟರಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿರುವ ಜೆನಿಫರ್ ಜೋನ್ಸ್‌ರವರು ಆಯಾ ಕ್ಲಬ್‌ಗಳಲ್ಲಿ ಶೇ.೩೦ ರಷ್ಟಾದರೂ ಮಹಿಳೆಯರು ಸೇರ್ಪಡೆಗೊಳಿಸುವಂತಾಗಬೇಕು ಎನ್ನುವ ಮಾತಿಗೆ ರೋಟರಿ ಯುವ ತಂಡದಲ್ಲಿ ಈಗಾಗಲೇ ಶೇ.೨೨ರಷ್ಟು ಮಹಿಳೆಯರಿರುವುದು ಉತ್ತಮ ವಿಚಾರವಾಗಿದೆ ಎಂದರು.


ಸದಸ್ಯರು ಮೇಜರ್ ಡೋನರ್ ಪದವಿಯನ್ನು ಹೊಂದುವಂತಾಗಲಿ-ಎ.ಜೆ ರೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ಕ್ಲಬ್ ಬುಲೆಟಿನ್ `ರೋಟರಿ ಯುವ ಸಿಂಚನ’ ಅನ್ನು ಅನಾವರಣಗೊಳಿಸಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರೋಟರಿ ಯುವ ಕ್ಲಬ್ ಹೆಗ್ಗುರುತಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ. ರೋಟರಿಯಿಂದ ನಾವು ನಮ್ಮ ಜೀವನದ ಬದಲಾವಣೆಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಜಿಲ್ಲಾ ಪ್ರಾಜೆಕ್ಟ್‌ಗಳಾದ ವನ ಸಿರಿ, ಜಲ ಸಿರಿ, ಆರೋಗ್ಯ ಸಿರಿ ಮತ್ತು ವಿದ್ಯಾ ಸಿರಿಯ ಬಗ್ಗೆ ಕ್ಲಬ್ ಮುನ್ನುಡಿಯಿಡುವಂತಾಗಲಿ. ಕ್ಲಬ್ ಈಗಾಗಲೇ ಟಿಆರ್‌ಎಫ್ ದೇಣಿಗೆಯಲ್ಲಿ ನೂರು ಪ್ರತಿಶತ ಮುಂದಿದ್ದು, ಮುಂದಿನ ದಿನಗಳಲ್ಲಿ ಕ್ಲಬ್‌ನಿಂದ ಸದಸ್ಯರು ಮೇಜರ್ ಡೋನರ್ ಪದವಿಯನ್ನು ಹೊಂದುವಂತಾಗಲಿ ಎಂದರು.


ಸ್ವರ್ಣೋದ್ಯಮಿಗಳಿಂದ ಕ್ಲಬ್‌ಗೆ ಈ ವರ್ಷ ಸ್ವರ್ಣಯುಗ-ಡಾ|ಹರ್ಷಕುಮಾರ್ ರೈ:
ರೋಟರಿ ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ ಮಾಡಾವುರವರು ಮಾತನಾಡಿ, ರೋಟರಿ ಪ್ರಸ್ತುತ ವರ್ಷ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಮಹಿಳೆಯಾಗಿರುವುದು ಕ್ಲಬ್ ಚರಿತ್ರೆಯಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆ ಯುವ ಕ್ಲಬ್‌ದ್ದಾಗಿದೆ. ಯುವ ಕ್ಲಬ್‌ನಲ್ಲಿನ ಅಧ್ಯಕ್ಷರಾಗಿದ್ದವರು ಒಬ್ಬೊಬ್ಬರನ್ನು ಮೀರಿಸುವ ಹಾಗೇ ಮನಸ್ಯ ಹಾಗೂ    ದೇವರು ಕೂಡ ಹೆಮ್ಮೆ ಪಡುವಂತಹ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿರುವುದು ಮತ್ತೊಂದು ಸಾಧನೆಯಾಗಿದೆ. ಸಾಮಾಜಿಕ ಹಾಗೂ ದೂರದೃಷ್ಟಿತ್ವ ಚಿಂತನೆಯುಳ್ಳ ಈ ಯುವ ಕ್ಲಬ್‌ಗೆ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಈರ್ವರೂ ಸ್ವರ್ಣೋದ್ಯಮಿಗಳಾಗಿರುವುದು ಕ್ಲಬ್‌ಗೆ ಈ ವರ್ಷ ಸ್ವರ್ಣಯುಗ ಎಂದೇ ಹೇಳಬಹುದು ಎಂದರು.


ಜಿಲ್ಲೆಯಲ್ಲಿಯೇ ವೈಬ್ರೆಂಟ್ ಕ್ಲಬ್-ಶರತ್ ಕುಮಾರ್ ರೈ:
ರೋಟರಿ ಯುವದ ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈಯವರು ಮಾತನಾಡಿ, ರೋಟರಿ ಯುವದ ಪ್ರಾಯೋಜಿತ ಕ್ಲಬ್‌ನ ನಿರ್ಗಮಿತ ಅಧ್ಯಕ್ಷರಾಗಿರುವ ಮಿತಭಾಷಿ ಭರತ್ ಪೈಯವರ ನೇತೃತ್ವದಲ್ಲಿ ಕ್ಲಬ್ ಉತ್ತಮ ಸಮಾಜಮುಖಿ ಕಾಯಕ್ರಮಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿಯೇ ವೈಬ್ರೆಂಟ್ ಕ್ಲಬ್ ಆಗಿ ಮೂಡಿ ಬಂದಿದೆ. ರೋಟರಿ ಯುವ ಸಂಸ್ಥೆಗೆ ಈಗ ಎಂಟರ ಹರೆಯವಾದರೂ ಮುಂದಿನ ೮೦ ವರ್ಷಗಳಲ್ಲೂ ಕ್ಲಬ್ ಯುವ ತಂಡವಾಗಿಯೇ ಉಳಿಯಲಿದೆ ಎಂದು ಹೇಳಿ ರಾಜೇಶ್ವರಿ ಆಚಾರ್ ನೇತೃತ್ವದ ನೂತನ ತಂಡಕ್ಕೆ ಶುಭ ಹಾರೈಸಿದರು.


ಸದಸ್ಯರ ಪ್ರಾಮಾಣಿಕ ಪ್ರಯತ್ನದೊಂದಿಗೆ ಯಶಸ್ವಿ ಕಾರ್ಯಕ್ರಮ-ಭರತ್ ಪೈ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಭರತ್ ಪೈಯವರು ಸ್ವಾಗತಿಸಿ, ಮಾತನಾಡಿ, ರೋಟರಿಗೆ ಟಿಆರ್‌ಎಫ್‌ಗೆ ದೇಣಿಗೆ, ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ಯುವ ಝೀಲ್, ೧೪ ರೋಟರಿಗಳ ಸಮ್ಮಿಲನ ಕಾರ್ಯಕ್ರಮ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಕ್ಲಬ್ ಸದಸ್ಯರು ಪ್ರಾಮಾಣಿಕ ಪ್ರಯತ್ನದೊಂದಿಗೆ ನನ್ನೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ್ದಾರೆ. ಪ್ರಮುಖವಾಗಿ ನನ್ನೊಂದಿಗೆ ಕೈಜೋಡಿಸಿದ ಕ್ಲಬ್ ಚಾರ್ಟರ್ ಅಧ್ಯಕ್ಷ ರತ್ನಾಕರ್ ರೈ, ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ, ಪ್ರಕಾಶ್ ಗೌಡ, ವಿದ್ಯಾ ಸೇತು ಯೋಜನೆಯ ರೂವಾರಿ ಉಮೇಶ್ ನಾಯಕ್‌ರವರನ್ನು ಅಭಿನಂದನಾರ್ಹರು ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಕ್ಲಬ್‌ಗೆ ಸೇರ್ಪಡೆಗೊಳಿಸಲಾಗಿದ್ದು, ಮಂಗಳೂರು ಹಾಗೂ ಪುತ್ತೂರಿನ ಕಲ್ಲಾರೆಯಲ್ಲಿ ಡೆಂಟಲ್ ಲಾಂಝ್ ಕ್ಲಿನಿಕ್ ಹೊಂದಿರುವ ಡಾ.ಪ್ರಥಮ್ ಶೆಟ್ಟಿ, ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಯದುರಾಜ್, ಕೋಡಿಬೈಲು ಇಂಪೋರ್ಟ್ ಆಂಡ್ ಎಕ್ಸ್‌ಪೋರ್ಟ್‌ನ ಅಜೇಯ್‌ರಾಮ್ ಕೋಡಿಬೈಲು, ಕೋಟಕ್ಕಲ್ ಆರ್ಯವೈದ್ಯ ಶಾಲಾ ಇದರ ಮಾಲಕಿ ಸೋನಾ ಪ್ರದೀಪ್, ಕೋರ್ಟ್‌ರಸ್ತೆಯಲ್ಲಿ ವ್ಯವಹರಿಸುತ್ತಿರುವ ಶ್ರೀ ಗಣೇಶ್ ಇಂಟೀರಿಯರ್‍ಸ್‌ನ ಮಾಲಕ ಗಣೇಶ್ ಮೊಟ್ಟೆತ್ತಡ್ಕ ಇವರ ಪತ್ನಿ ತ್ರಿವೇಣಿ ಗಣೇಶ್‌ರವರನ್ನು ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಪಶುಪತಿ ಶರ್ಮರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.

ಜಿಲ್ಲಾ ಸಮಿತಿಗೆ ಅಭಿನಂದನೆ:
ಜಿಲ್ಲಾ ಸಮಿತಿಯಲ್ಲಿ ಸ್ಥಾನ ಪಡೆದಿರುವ ಕ್ಲಬ್ ಸದಸ್ಯರಾದ ನರಸಿಂಹ ಪೈ(ಪಾಲ್ ಹ್ಯಾರಿಶ್ ಸೊಸೈಟಿ ವೈಸ್ ಚೇರ್‌ಮ್ಯಾನ್), ರತ್ನಾಕರ್ ರೈ(ರೋಟರ್‍ಯಾಕ್ಟ್ ಚೇರ್‌ಮ್ಯಾನ್), ಉಮೇಶ್ ನಾಯಕ್(ಸಿಎಸ್‌ಆರ್ ಕಮಿಟಿ ಕೋ-ಆರ್ಡಿನೇಟರ್), ಚೇತನ್ ಪ್ರಕಾಶ್ ಕಜೆ(ರೋಟರಿ ಸಿಂಗಿಂಗ್ ಐಡಲ್ ವೈಸ್ ಚೇರ್‌ಮ್ಯಾನ್), ಡಾ|ಹರ್ಷಕುಮಾರ್ ರೈ(ವಲಯ ಸೇನಾನಿ), ಪಶುಪತಿ ಶರ್ಮ(ಇ-ಲರ್ನಿಂಗ್ ಕೋ-ಆರ್ಡಿನೇಟರ್), ಸೂರಜ್ ಶೆಟ್ಟಿ(ಯೂತ್ ಎಕ್ಸ್‌ಚೇಂಜ್ ವೈಸ್ ಚೇರ್‌ಮ್ಯಾನ್), ದೀಕ್ಷಾ ರೈ(ಮಹಿಳಾ ಸದಸ್ಯತ್ವ ಅಭಿವೃದ್ಧಿ ಚೇರ್‌ಮ್ಯಾನ್), ಭರತ್ ಪೈ(ಡಿಸ್ಟ್ರಿಕ್ಟ್ ರಿವ್ಯೂಯಿಂಗ್ ರೂರಲ್ ಟೇಕ್ಸ್ ವೈಸ್ ಚೇರ್‌ಮ್ಯಾನ್), ವಿನೀತ್ ಶೆಣೈ(ಟ್ರಾಫಿಕ್ ಅವೇರ್‌ನೆಸ್ ಝೋನಲ್ ಕೋ-ಆರ್ಡಿನೇಟರ್), ದೇವಿಚರಣ್ ರೈ(ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಕೋ-ಆರ್ಡಿನೇಟರ್)ರವರಿಗೆ ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತರವರು ಹೂ ನೀಡಿ ಅಭಿನಂದಿಸಿದರು.

ವಿದ್ಯಾರ್ಥಿಗೆ ಧನ ಸಹಾಯ:
ಯೂತ್ ಸರ್ವಿಸ್‌ನಡಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಗ್ರಾಮೀಣ ಪ್ರತಿಭೆಯಾಗಿರುವ ತಿಂಗಳಾಡಿ ನಿವಾಸಿ ಉದಯ ಕುಮಾರ್ ಹಾಗೂ ಸ್ವಪ್ನ ದಂಪತಿ ಪುತ್ರರಾದ ನಚಿಕೇತ್ ಕುಮಾರ್‌ರವರಿಗೆ ಕ್ಲಬ್ ವತಿಯಿಂದ ಧಬ ಸಹಾಯವನ್ನು ಮಾಡಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ ನೀರ್ಪಾಡಿರವರು ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ:
ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಯಲ್ಲಿ ಆಶ್ರಯತಾಣ, ರೋಟರಿಯು ಸ್ಥಾಪಿಸಿದ ಡಯಾಲಿಸಿಸ್ ಸೆಂಟರ್‌ಗೆ ಆಸ್ಪತ್ರೆಯಲ್ಲಿ ಜಾಗವನ್ನು ನೀಡಿರುವುದು ಮಾತ್ರವಲ್ಲದೆ ವರ್ಷವೂ ಲಕ್ಷಗಟ್ಟಲೇ ವಿದ್ಯುತ್ ಬಿಲ್ಲನ್ನು ಭರಿಸುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಮಹಾವೀರ ಆಸ್ಪತ್ರೆಯ ದಂತ ವೈದ್ಯರಾದ ಡಾ.ಅಶೋಕ್ ಪಡಿವಾಳ್‌ರವರನ್ನು ಗುರುತಿಸಿ ಅವರನ್ನು ಕಮ್ಯೂನಿಟಿ ಸರ್ವಿಸ್ ವತಿಯಿಂದ, ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಪರ್ಲಡ್ಕ ಬಾಲವನ ಈಜುಕೊಳದಲ್ಲಿ ತರಬೇತುದಾರರಾಗಿ ಸೇವೆ ನೀಡುತ್ತಿರುವ ಸೀತಾರಾಮ ಗೌಡರವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷ ಅತ್ಯುತ್ತಮ ಸೇವೆ ನೀಡಿ ನಿರ್ಗಮಿಸಿದ ಅಧ್ಯಕ್ಷ ಭರತ್ ಪೈ, ಕಾರ್ಯದರ್ಶಿ ದೇವಿಚರಣ್ ರೈ ಹಾಗೂ ವಲಯ ಸೇನಾನಿ ಉಮೇಶ್ ನಾಯಕ್, ಪದ ಪ್ರದಾನ ಸಮಾರಂಭಕ್ಕೆ ಆಗಮಿಸಿ ಪದ ಪ್ರದಾನವನ್ನು ನೆರವೇರಿಸಿದ ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತ ದಂಪತಿಯನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರತ್ನಾಕರ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ವಿನೀತ್ ಶೆಣೈಯವರು ಸನ್ಮಾನಿತರನ್ನು ಪರಿಚಯಿಸಿದರು.

ಆಕ್ಸಿಡೆಂಟ್ ವಿದ್ಯಾರ್ಥಿನಿಗೆ ಧನ ಸಹಾಯ:
ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡ ಕು|ವಿಷ್ಣುಪ್ರಿಯ ಎಂಬ ವಿದ್ಯಾರ್ಥಿನಿಗೆ ಕ್ಲಬ್ ಸದಸ್ಯರೊಡಗೂಡಿ ಸಂಗ್ರಹಿಸಿದ ರೂ.೫೦ ಸಾವಿರ ಮೊತ್ತವನ್ನು ಕು|ವಿಷ್ಣುಪ್ರಿಯರವರ ತಂದೆ ಜಯಪ್ರಕಾಶ್ ಬಲ್ಲಾಳ್‌ರವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್ ಸದಸ್ಯೆ ಅನಿಲ ರೈಯವರ ಪುತ್ರಿ ಕು|ದಿಶಾ ಶೆಟ್ಟಿಯವರು ತಮ್ಮ ಜನುಮದಿನದ ಸಂಭ್ರಮಕ್ಕೆ ಸಂಗ್ರಹಿಸಿಟ್ಟ ರೂ.೧೦ ಸಾವಿರ ಮೊತ್ತವನ್ನು ಕು|ವಿಷ್ಣುಪ್ರಿಯರವರ ತಂದೆ ಜಯಪ್ರಕಾಶ್ ಬಲ್ಲಾಳ್‌ರವರಿಗೆ ಹಸ್ತಾಂತರಿಸಿ ಮಾದರಿ ಎನಿಸಿದರು.

ಜೈವಿಕ ಸ್ಯಾನಿಟರಿ ನ್ಯಾಪ್ಕಿನ್ ಹಸ್ತಾಂತರ:
ಭಾರತ ಸರಕಾರವು ಮಹಿಳೆಯರ ಮುಟ್ಟಿನ ನೈರ್ಮಲ್ಯವನ್ನು ಕಾಪಾಡುವಂತಹ ಕಾರ್ಯಕ್ರಮಗಳ ಅಗತ್ಯತೆಗೆ ಹೆಚ್ಚಿನ ಆದ್ಯತೆಯನ್ನು ಖಾತರಿಪಡಿಸಿದೆ. ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರದೇಶದ ಸೋಂಕು, ಗರ್ಭಕಂಠದ ಕ್ಯಾನ್ಸರ್, ಎಚ್‌ಐವಿ-ಏಡ್ಸ್, ಬಂಜೆತನ, ಗರ್ಭಧಾರಣೆಯಲ್ಲಿ ಜಾರುವಿಕೆ ಹಾಗೂ ಇತರ ರೋಗ ಲಕ್ಷಣಗಳಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ವಿಶೇಷವಾಗಿ ಹದಿಹರೆಯದ ಮಕ್ಕಳ ತಾಯಂದಿರಿಗೆ ಅರಿವು ಇಲ್ಲದಿರುವುದು, ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಳಸದೆ ಇರುವುದು, ಪ್ಯಾಡ್‌ಗಳನ್ನು ಬಳಸುವಂತಹ ಸಮಯಾವಧಿ ಬಗ್ಗೆ ಅರಿವು ಇಲ್ಲದಿರುವುದು ಈ ರೋಗ ಲಕ್ಷಣಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪ್ರಾಜೆಕ್ಟ್‌ನಡಿಯಲ್ಲಿ ಪುತ್ತೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀ ಎನ್.ಟಿ ಹಾಗೂ ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಜೆಸ್ಸಿ ಕ್ರಾಸ್ತಾರವರಿಗೆ ಜೈವಿಕ ಸ್ಯಾನಿಟರಿ ನ್ಯಾಪ್ಕಿನ್‌ನ್ನು ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತರವರು ಹಸ್ತಾಂತರಿಸಿದರು.

ಟೀ-ಶರ್ಟ್ ಬಿಡುಗಡೆ:
ರೋಟರಿ ವಲಯ ಸೇನಾನಿ ಡಾ. ಡಾ|ಹರ್ಷಕುಮಾರ್ ರೈ ಯವರ ಪ್ರಯೋಜಕತ್ವದಲ್ಲಿ    ರೋಟರಿ ವತಿಯಿಂದ ನಡೆಯುವ ಜಿಲ್ಲಾ ಹಾಗೂ ವಲಯ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ರೋಟರಿ ಯುವ ತಂಡದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಧರಿಸುವ ಅಧಿಕೃತ ಟೀ-ಶರ್ಟ್‌ಗಳನ್ನು  ಜಿಲ್ಲೆ ೩೧೮೧ ಇದರ ಜಿಲ್ಲಾ ಕಾರ್ಯದರ್ಶಿ(ಇವೆಂಟ್ಸ್) ಎಕೆಎಸ್ ಕೆ.ವಿಶ್ವಾಸ್ ಶೆಣೈಯವರು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಕ್ಲಬ್ ನೂತನ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ತಾಯಿ, ಅತ್ತೆ, ಪತಿಗೆ ಹೂಗುಚ್ಛ ನೀಡುವ ಮೂಲಕ ಆಶೀರ್ವಾದ ಪಡೆದರು. ವೇದಿಕೆಯಲ್ಲಿ ನೂತನ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರ ಪತಿ ಸುಧೀರ್ ಬಿ, ನಿರ್ಗಮಿತ ಅಧ್ಯಕ್ಷ ಭರತ್ ಪೈರವರ ಪತ್ನಿ ನಿವೇದಿತಾ ಪೈ, ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ಉಪಸ್ಥಿತರಿದ್ದರು. ಸುಮನಾ ರಾಂಪ್ರಕಾಶ್ ಪ್ರಾರ್ಥಿಸಿದರು. ನಿರ್ಗಮಿತ ಕಾರ್ಯದರ್ಶಿ ದೇವಿಚರಣ್ ರೈ ವರದಿ ಮಂಡಿಸಿದರು. ಪಲ್ಸ್ ಪೋಲಿಯೋ ಚೇರ್‌ಮ್ಯಾನ್ ಅನಿಲ ರೈ, ರೋಟರಿ ಫೌಂಡೇಶನ್(ಟಿಆರ್‌ಎಫ್) ಚೇರ್‌ಮ್ಯಾನ್ ಚೇತನ್ ಪ್ರಕಾಶ್, ಮಾಜಿ ಅಧ್ಯಕ್ಷ ಸೂರಜ್ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಪೈಯವರು ಅತಿಥಿಗಳ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವಂದಿಸಿದರು. ಕಮ್ಯೂನಿಟಿ ಸರ್ವಿಸ್ ನಿದೇಶಕ ನಿಹಾಲ್ ಶೆಟ್ಟಿ ಹಾಗೂ ಕ್ಲಬ್ ಚಾರ್ಟರ್ ಅಧ್ಯಕ್ಷ ರತ್ನಾಕರ್ ರೈಯವರು ಕಾರ್ಯಕ್ರಮ ನಿರೂಪಿಸಿದರು.

ಕ್ಲಬ್‌ನ್ನು ಸ್ಮರಣೀಯವನ್ನಾಗಿಸಲು ಪ್ರಯತ್ನಿಸುವೆ…
ನನ್ನ ಮೇಲೆ ವಿಶ್ವಾಸವಿಟ್ಟು ಕ್ಲಬ್ ಅಧ್ಯಕ್ಷ ಪದವಿಯನ್ನು ನೀಡಿದ ಸದಸ್ಯರಿಗೆ ಅಭಿನಂದನೆಗಳು. ತಾನು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಲಿದ್ದೇನೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕ್ಲಬ್‌ನ್ನು ಸ್ಮರಣೀಯವನ್ನಾಗಿಸುವ ಪ್ರಯತ್ನ ಮಾಡಲಿದ್ದೇನೆ. ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷರೂ ಓರ್ವ ಮಹಿಳೆಯಾಗಿರುವುದು ಅಭಿಮಾನದ ಸಂಗತಿಯಾಗಿದೆ. ಪ್ರಸ್ತುತ ಹಲವಾರು ರೋಟರಿ ಕ್ಲಬ್‌ಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿರುವುದು ಹೆಗ್ಗಳಿಕೆಯಲ್ಲೊಂದಾಗಿದೆ. ಕಳೆದ ಏಳು ವರ್ಷಗಳಲ್ಲಿ ಯುವ ಕ್ಲಬ್ ಅತ್ತ್ಯುತ್ತಮ ಕೆಲಸಗಳನ್ನು ಮಾಡುತ್ತಾ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ. ನಮ್ಮದು ಸಂತುಲಿತ ಯುವ ತಂಡ, ನನ್ನಲ್ಲಿನ ಯೋಚನೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವತ್ತ ವರ್ಷದುದ್ದಕ್ಕೂ ಎಲ್ಲರ ಸದಾ ಸಹಕಾರದ ನಿರೀಕ್ಷೆ ನನ್ನದಾಗಿದೆ. -ರಾಜೇಶ್ವರಿ ಆಚಾರ್, ಅಧ್ಯಕ್ಷರು, ರೋಟರಿ ಪುತ್ತೂರು ಯುವ

ಡಿಜಿ ಕಾರಂತ್ ಶುಭ ಹಾರೈಕೆ..
ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಪ್ರಕಾಶ್ ಕಾರಂತ್‌ರವರು ಕಾರ್ಯಕ್ರಮದ ಆರಂಭದಲ್ಲಿ ದೇಶದ ಮಾನವೀಯತೆಯ ಅಭಿವೃದ್ಧಿಯ ಸಂಕೇತವಾಗಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ರೋಟರಿ ಕ್ಲಬ್ ಯುವದ ಸಮಾಜಮುಖಿ ಕಾರ್ಯಕ್ರಮಗಳು ಯಶಶ್ವಿಯಾಗಲೆಂದು ಅಧ್ಯಕ್ಷೆಯಾಗಿರುವ ರಾಜೇಶ್ವರಿ ಆಚಾರ್‌ರವರ ತಂಡಕ್ಕೆ ಆನ್‌ಲೈನ್ ಮೂಲಕ ಶುಭ ಹಾರೈಸಿದರು.

ನೂತನ ಪದಾಧಿಕಾರಿಗಳ ಪದ ಪ್ರದಾನ…
ನೂತನ ಪದಾಧಿಕಾರಿಗಳಾದ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಪ್ರಧಾನ ಕಾರ್ಯದರ್ಶಿ ಅಶ್ವಿನಿ ಕೃಷ್ಣ ಮುಳಿಯ, ಕೋಶಾಧಿಕಾರಿ ನರಸಿಂಹ ಪೈ, ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ, ಜೊತೆ ಕಾರ್ಯದರ್ಶಿ ಅಭಿಷ್, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ಪಶುಪತಿ ಶರ್ಮ, ಸಾರ್ಜಂಟ್ ಎಟ್ ಆರ್ಮ್ಸ್ ದೀಕ್ಷಾ ರೈ, ಬುಲೆಟಿನ್ ಎಡಿಟರ್ ದೇವಿಚರಣ್ ರೈ, ನಿರ್ದೇಶಕರುಗಳಾಗಿ ವೊಕೇಶನಲ್ ಸರ್ವಿಸ್‌ನ ವಿನೀತ್ ಶೆಣೈ, ಕಮ್ಯೂನಿಟಿ ಸರ್ವಿಸ್‌ನ ನಿಹಾಲ್ ಶೆಟ್ಟಿ, ಇಂಟರ್‌ನ್ಯಾಷನಲ್ ಸರ್ವಿಸ್‌ನ ಸಚಿನ್ ನಾಯಕ್, ಯೂತ್ ಸರ್ವಿಸ್‌ನ ಸುದರ್ಶನ್ ರೈ, ಚೇರ್‌ಮ್ಯಾನ್‌ಗಳಾಗಿ ಮೆಂಬರ್‌ಶಿಪ್ ಡೆವಲಪ್‌ಮೆಂಟ್‌ನ ಕಾರ್ತಿಕ್ ಪೆರ್‍ವೋಡಿ, ಪಬ್ಲಿಕ್ ಇಮೇಜ್(ವೆಬ್)ನ ಶರತ್, ರೋಟರಿ ಫೌಂಡೇಶನ್(ಟಿಆರ್‌ಎಫ್)ನ ಚೇತನ್ ಪ್ರಕಾಶ್, ಟೀಚ್‌ನ ಸ್ವಸ್ತಿಕಾ ರೈ, ವಿನ್ಸ್‌ನ ರಾಮ್‌ಪ್ರಕಾಶ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್‌ನ ಭರತ್ ಪೈ, ಪಲ್ಸ್ ಪೋಲಿಯೋದ ಅನಿಲ ರೈ, ಕ್ರೀಡೆಯ ಎಲ್ಯಾಸ್ ಪಿಂಟೋ, ಸಿಎಲ್‌ಸಿಸಿನ ಕುಸುಮ್ ರಾಜ್‌ರವರಿಗೆ ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ನಾಮಿನಿಯಾಗಿರುವ ವಿಕ್ರಂ ದತ್ತರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here