ಹಿರೇಬಂಡಾಡಿ ಹಾ.ಉ.ಸಹಕಾರಿ ಸಂಘ ‘ನಂದಗೋಕುಲ’ದ ವಿಸ್ತೃತ ಕಟ್ಟಡ, ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ, ಸಂಘದ ಬೆಳ್ಳಿ ಹಬ್ಬ

0

  • ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಪುತ್ತೂರಿನಲ್ಲಿ 15ಎಕ್ರೆ ಜಾಗ; ಸಂಜೀವ ಮಠಂದೂರು
  • ಸಂಘ ಸ್ಥಾಪನೆ ನೆನಪಿಸಿಕೊಂಡ ಮಠಂದೂರು:
  • ಗುಣಮಟ್ಟದಲ್ಲಿ ರಾಜ್ಯದಲ್ಲಿ ನಂ.1 : ಸುಚರಿತ ಶೆಟ್ಟಿ
  • 143ನೇ ಶೀತಲೀಕರಣ ಘಟಕ: ಎಸ್.ಬಿ.ಜಯರಾಮ ರೈ
  • ಪುತ್ತೂರಿನಲ್ಲಿ ಉತ್ಪಾದನಾ ಘಟಕ : ಡಿ.ಅಶೋಕ್

ಹಿರೇಬಂಡಾಡಿ: ಹಾಲು ಉತ್ಪಾದಕರ ಸಹಕಾರಿ ಸಂಘ ಹಿರೇಬಂಡಾಡಿ ಇದರ ‘ನಂದಗೋಕುಲ’ದ ವಿಸ್ತೃತ ಕಟ್ಟಡ, ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ ಮತ್ತು ಸಂಘದ ಬೆಳ್ಳಿಹಬ್ಬ ಕಾರ್ಯಕ್ರಮ ಜು.೧೧ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.


ವಿಸ್ತ್ರತ ಕಟ್ಟಡ ಉದ್ಘಾಟಿಸಿದ ಸಂಘದ ಸ್ಥಾಪಕ ಅಧ್ಯಕ್ಷರೂ ಆದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೈರಿ ಹಾಗೂ ನಂದಿನಿ ಹಾಲಿನ ಹುಡಿ ತಯಾರಿಕಾ ಘಟಕ ಆರಂಭಿಸಲು ಪುತ್ತೂರಿನಲ್ಲಿ ೧೫ ಎಕ್ರೆ ಜಾಗವನ್ನು ಮಂಜೂರುಗೊಳಿಸಲು ಬದ್ಧನಾಗಿರುತ್ತೇನೆ. ಸುಮಾರು ೮೨ ಕೋಟಿ ರೂ.,ವೆಚ್ಚದಲ್ಲಿ ಆರಂಭಗೊಳ್ಳಲಿರುವ ಈ ಘಟಕದಿಂದ ಈ ಭಾಗದ ಯುವಕ, ಯುವತಿಯರಿಗೆ ಉದ್ಯೋಗ ಸಿಗುವಂತಾಗಬೇಕು ಹಾಗೂ ಹಾಲು ಉತ್ಪಾದಕರಿಗೂ ಪ್ರೇರಣೆ ಸಿಗಬೇಕೆಂದು ಹೇಳಿದರು. ರಾಜ್ಯ ಹಾಗೂ ಕೇಂದ್ರ ಸರಕಾರ ಕೃಷಿಕರಿಗೆ ಹಲವಾರು ಯೋಜನೆ ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿತಗೊಂಡ ಸಂದರ್ಭದಲ್ಲಿ ರೈತರ ನೆರವಿಗಾಗಿ ರಾಜ್ಯದಲ್ಲಿ ಸೆಕೆಂಡರಿ ಕೃಷಿ ನಿರ್ದೇಶನಾಲಯ ಆರಂಭಿಸಲಾಗಿದೆ. ಮುಂದಿನ ವರ್ಷದಿಂದ ಮಹಿಳೆಯರಿಗೆ ಸಾಧಕಿ ಕೃಷಿ ಪಂಡಿತ ಪ್ರಶಸ್ತಿ ಘೋಷಿಸಲಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಿದ್ದು ಇದಕ್ಕೆ ಕೆಎಂಎಫ್‌ನಿಂದ ೨೬೦ ಕೋಟಿ ರೂ.,ಹಾಗೂ ರಾಜ್ಯ ಸರಕಾರದಿಂದ ೧೦೦ ಕೋಟಿ ರೂ., ಅನುದಾನ ನೀಡಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು. ಕೊಯಿಲ ಸೇರಿದಂತೆ ರಾಜ್ಯದಲ್ಲಿ ೧೦೦ ಗೋಶಾಲೆ ಸ್ಥಾಪನೆಗೆ ೫೦ ಕೋಟಿ ರೂ., ನಗರ ಪ್ರದೇಶದ ಜನರಿಗಾಗಿ ಪುಣ್ಯಕೋಟಿ ದತ್ತು ಯೋಜನೆ ಆರಂಭಿಸಿದೆ. ಗೋ ತಳಿ ಸಮೃದ್ಧಿಗಾಗಿ ಕೆಎಂಎಫ್ ಮೂಲಕ ೨೦೦೦ ರೈರಿಗೆ ಗೋವು ನೀಡಲು ಅವಕಾಶ ಮಾಡಲಾಗಿದೆ. ಸೆಗಣಿ, ಗಂಜಲ ಹಾಗೂ ಇತರ ಉತ್ಪನ್ನಗಳಿಗೆ ಮಾರುಕಟ್ಟೆಗಾಗಿ ಗೋ ಮಾತಾ ಸಹಕಾರ ಸಂಘ ಆರಂಭಿಸುತ್ತಿದೆ. ಅನುಗ್ರಹ ವಿಮಾ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದ ಶಾಸಕ ಸಂಜೀವ ಮಠಂದೂರುರವರು, ರೈತರಿಗೆ ರಾಜ್ಯ ಸರಕಾರ ಹತ್ತಾರು ಯೋಜನೆ ಜಾರಿಗೆ ತಂದಿದ್ದು ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು. ಸ್ವಾವಲಂಬಿ ಜೀವನ ನಮ್ಮದಾಗಬೇಕೆಂದು ಹೇಳಿದರು.

ಸಂಘ ಸ್ಥಾಪನೆ ನೆನಪಿಸಿಕೊಂಡ ಮಠಂದೂರು:
೩೦ ವರ್ಷದ ಹಿಂದೆ ಹಿರೇಬಂಡಾಡಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಇಲ್ಲಿನ ಹಿರಿಯರು ಪ್ರೇರಣೆ ನೀಡಿದ್ದು ಡಿ.ಎಸ್.ಹೆಗ್ಡೆಯವರು ಸದಸ್ಯತನ ಸಂಗ್ರಹಕ್ಕೆ ಪ್ರೋತ್ಸಾಹಿಸಿದರು. ೧೨ ರೂ.,ಸದಸ್ಯತನ ನೀಡಲು ಜನ ಹಿಂಜರಿಯುತ್ತಿದ್ದರು. ಆದರೂ ಮನೆ ಮನೆಗೆ ಹೋಗಿ ಸದಸ್ಯತನ ಮಾಡಿದ್ದೇವೆ. ಸಿಂಡಿಕೇಟ್ ಬ್ಯಾಂಕ್‌ನಿಂದ ಸಾಲ ಪಡೆದು ಕೋಲಾರದ ಚಿಂತಾಮಣಿಯಿಂದ ಲಾರಿಯಲ್ಲಿ ಹಸುಗಳನ್ನು ತಂದು ಸಾಕಾಣಿಕೆ ಮಾಡಲಾಗಿದೆ. ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಧನಂಜಯ ಕುಮಾರ್‌ರವರು ಸಂಸದರಾಗಿದ್ದ ವೇಳೆ ಅನುದಾನ ನೀಡಿದ್ದಾರೆ. ಆಗ ಶಾಸಕರಾಗಿದ್ದ ಡಿ.ವಿ.ಸದಾನಂದ ಗೌಡರವರ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿದೆ ಎಂದು ಸಂಜೀವ ಮಠಂದೂರುರವರು ನೆನಪಿಸಿಕೊಂಡರು.


ಗುಣಮಟ್ಟದಲ್ಲಿ ರಾಜ್ಯದಲ್ಲಿ ನಂ.1: ಸುಚರಿತ ಶೆಟ್ಟಿ
ಸಾಂದ್ರ ಶೀತಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿಯವರು, ದ.ಕ.ಜಿಲ್ಲೆಯಲ್ಲಿ ೭೩೦ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ೬೮ ಸಾವಿರ ರೈತ ಕುಟುಂಬಗಳಿಂದ ಪ್ರತಿದಿನ ಅಂದಾಜು ೫.೫೦ ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. ಗ್ರಾಹಕರಿಗೆ ಪ್ಯಾಕೇಟ್ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಒಕ್ಕೂಟ ಮಾರಾಟ ಮಾಡುತ್ತಿದೆ. ಗುಣಮಟ್ಟದಲ್ಲಿ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರಾಜ್ಯದಲ್ಲಿ ನಂ.೧ ಸ್ಥಾನದಲ್ಲಿದೆ ಎಂದರು. ಪ್ರಧಾನಿಯವರ ಆತ್ಮನಿರ್ಭರ ಭಾರತದ ಕಲ್ಪನೆಯಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಕಾರ ಕ್ಷೇತ್ರಕ್ಕೆ ಒತ್ತು ನೀಡುತ್ತಿವೆ. ಇದರ ಸದ್ವಿನಿಯೋಗ ಮಾಡುತ್ತೇವೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ ಸುಚರಿತ ಶೆಟ್ಟಿಯವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಶಾಸಕ ಸಂಜೀವ ಮಠಂದೂರುರವರು ಮಾದರಿ ಹೈನುಗಾರರಾಗಿದ್ದಾರೆ ಎಂದು ಶ್ಲಾಘಿಸಿದರು.


೧೪೩ನೇ ಸಾಂದ್ರ ಶೀತಲೀಕರಣ ಘಟಕ: ಎಸ್.ಬಿ.ಜಯರಾಮ ರೈ
ನಾಮಫಲಕ ಅನಾವರಣಗೊಳಿಸಿದ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈಯವರು ಮಾತನಾಡಿ, ಹಿರೇಬಂಡಾಡಿಯಲ್ಲಿ ಆರಂಭಗೊಂಡಿರುವ ಸಾಂದ್ರ ಶೀತಲೀಕರಣ ಘಟಕ ಜಿಲ್ಲೆಯ ೧೪೩ನೇ ಘಟಕವಾಗಿದೆ. ಜಿಲ್ಲೆಯಲ್ಲಿರುವ ೭೩೨ ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ ೪೬೮ ಸಂಘಗಳಿಗೆ ಸ್ವಂತ ಕಟ್ಟಡ ಇದೆ. ರಾಜ್ಯದಲ್ಲಿರುವ ೧೬ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಗಳ ಪೈಕಿ ಗುಣಮಟ್ಟದಲ್ಲಿ ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಂ.೧ ಆಗಿದೆ. ಅಲ್ಲದೇ ಸದಸ್ಯರಿಗೆ ಅತೀ ಹೆಚ್ಚು ದರ ನೀಡುತ್ತಿದ್ದೇವೆ ಎಂದರು. ಸದಸ್ಯರು ಒಕ್ಕೂಟದಿಂದ ಸಿಗುವ ಸವಲತ್ತು ಪಡೆದುಕೊಂಡು ತಾವು ಅಭಿವೃದ್ಧಿ ಹೊಂದುವುದರೊಂದಿಗೆ ಸಂಘ, ಒಕ್ಕೂಟದ ಅಭಿವೃದ್ಧಿಗೂ ಕಾರಣರಾಗಬೇಕೆಂದು ಹೇಳಿದರು.

ಪುತ್ತೂರಿನಲ್ಲಿ ಉತ್ಪಾದನಾ ಘಟಕ : ಡಿ.ಅಶೋಕ್
ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್‌ರವರು ಮಾತನಾಡಿ, ರಾಜ್ಯದಲ್ಲಿ ಪ್ರತಿದಿನ ರೈತರಿಂದ ೯೪ ಲಕ್ಷ ಲೀ.ಹಾಲು ಸಂಗ್ರಹ ಆಗುತ್ತಿದೆ. ಈ ಪೈಕಿ ೫೬ ಲಕ್ಷ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದೆ. ಒಕ್ಕೂಟದಿಂದ ಹೈನುಗಾರರಿಗೆ ಹಾಲು ಕರೆಯುವ ಯಂತ್ರ, ಪಶು ಆಹಾರ ಪೂರೈಕೆ, ಪಶು ವೈದ್ಯಕೀಯ ಸೇವೆ, ಮೇವು ಬಿತ್ತ

 

ನೆ ಬೀಜ, ಮೇವು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್, ವಿಮೆ ಸೇರಿದಂತೆ ರಾಸುಗಳಿಗೆ ಹುಟ್ಟಿನಿಂದ ಸಾವಿನ ತನಕದ ಅಗತ್ಯತೆ ಪೂರೈಕೆ ಮಾಡಲಾಗುತ್ತಿದೆ ಎಂದರು. ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಪುತ್ತೂರಿನಲ್ಲಿ ಜಾಗ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇಲ್ಲಿ ೧.೫೦ ಲಕ್ಷ ಲೀ.ಸಾಮರ್ಥ್ಯದ ಹಾಲು ಸಂಸ್ಕರಣ ಘಟಕ, ೧ ಲಕ್ಷ ಲೀ.ಹಾಲನ್ನು ಹಾಲಿನ ಹುಡಿಯಾಗಿ ಪರಿವರ್ತಿಸುವ ಘಟಕ, ಹಾಲಿನ ಉತ್ಪನ್ನಗಳನ್ನು ತಯಾರಿಸುವ ಘಟಕ ಆರಂಭಿಸುತ್ತೇವೆ. ಈ ಮೂಲಕ ಪುತ್ತೂರಿನಲ್ಲಿ ಸುಸಜ್ಜಿತ ಮಾದರಿ ಡೈರಿ ಹೊಂದುವ ಇರಾದೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಚಂದ್ರಾವತಿ ನೆಹರುತೋಟ ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು

ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ನಿರಂಜನ್ ಬಿ., ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್, ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತರವರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ದ.ಕ.-೨ ಇದರ ಜಿಲ್ಲಾ ನಿರ್ದೇಶಕ ಪ್ರವೀಣ್‌ಕುಮಾರ್, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಡಿ.ಆರ್.ಸತೀಶ್ ರಾವ್, ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಚಂದ್ರಾವತಿ ಜಿ., ಉಪಾಧ್ಯಕ್ಷ ಕೊರಗಪ್ಪ ಗೌಡ, ನಿರ್ದೇಶಕರುಗಳಾದ ಜನಾರ್ದನ ಎ., ಆದಿರಾಜ ಎಸ್., ಇಂದಿರಾ ಪಿ., ಪದ್ಮನಾಭ ಪಿ.,ಕೇಶವ ಗೌಡ, ಡೀಕಯ್ಯ ಗೌಡ, ಲಕ್ಷ್ಮೀಶ, ಗಂಗಾಧರ, ಭವಾನಿ ಶೆಟ್ಟಿ, ಬಾಲಕೃಷ್ಣ ನಾಯ್ಕ್, ಮತ್ತಡಿ, ಕಾರ್ಯನಿರ್ವಾಹಣಾಧಿಕಾರಿ ವಿಶಾಲಾಕ್ಷಿ ಎಚ್., ಕೃ.ಗ.ಕಾರ್ಯಕರ್ತ ಗಣೇಶ ಮಠಂದೂರುರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಹಾಲು ಪರೀಕ್ಷಕ ಸತೀಶ ಜೆ., ಸಹಾಯಕಿ ಆಶಾ ಪಿ.,ಸಹಕರಿಸಿದರು.

ಸಂಘದ ಕಾರ್ಯನಿರ್ವಾಹಣಾಧಿಕಾರಿ ವಿಶಾಲಾಕ್ಷಿ ಎಚ್.,ವರದಿ ವಾಚಿಸಿದರು. ನಿರ್ದೇಶಕ ಜನಾರ್ದನ ಎ.,ಸ್ವಾಗತಿಸಿ, ವಿಶಾಲಾಕ್ಷಿ ಎಚ್.,ವಂದಿಸಿದರು. ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಹರಿಕಿರಣ್ ಕೆ., ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ.,ಕಾರ್ಯಕ್ರಮ ನಿರೂಪಿಸಿದರು. ವನ್ಯ ಹಾಗೂ ಮೌಲ್ಯ ಪ್ರಾರ್ಥಿಸಿದರು. ಮಧ್ಯಾಹ್ನ ಊಟದ ಬಳಿಕ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಸನ್ಮಾನ:
ಸಂಘದ ಸ್ಥಾಪಕ ಅಧ್ಯಕ್ಷರೂ ಆಗಿದ್ದು ೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಶಾಸಕ ಸಂಜೀವ ಮಠಂದೂರು, ಅವರ ಪತ್ನಿ ಹೇಮಾವತಿ ಮಠಂದೂರುರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಜೀವ ಮಠಂದೂರುರವರ ಪುತ್ರ ಶಶಾಂಕ್, ಪುತ್ರಿ ಶ್ರೇಯಾ ಹಾಗೂ ಅಳಿಯ ಪವನ್ ಈ ವೇಳೆ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷರಾದ ಭೀಮ್ ಭಟ್ ಅರ್ತಿಲ, ಚಂದ್ರಶೇಖರ ಮಾಳ, ಕುಂಞಣ್ಣ ಶೆಟ್ಟಿ ಹೆನ್ನಾಳ, ಜನಾರ್ದನ ಅನತಿಮಾರು ಹಾಗೂ ಹಾಲಿ ಅಧ್ಯಕ್ಷೆ ಚಂದ್ರಾವತಿ ನೆಹರುತೋಟ, ನಿವೃತ್ತ ಕಾರ್ಯದರ್ಶಿಗಳಾದ ಸುಂದರ ಪಟಾರ್ತಿ, ಮೋನಪ್ಪ ಸರೋಳಿ, ಹಾಲಿ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ ಹೆಚ್., ಹಾಲು ಪರೀಕ್ಷಕ ಸತೀಶ ಜೆ., ಸಹಾಯಕಿ ಆಶಾ ಪಿ., ಕೃತಕ ಗರ್ಭಧಾರಣಾ ಕಾರ್ಯಕರ್ತ ಗಣೇಶ ಮಠಂದೂರುರವರನ್ನು ಸನ್ಮಾನಿಸಲಾಯಿತು. ಸಂಘದ ವಿಸ್ತೃತ ಕಟ್ಟಡ ನಿರ್ಮಾಣಗೊಳಿಸಿದ ಗುತ್ತಿಗೆದಾರ ಪ್ರತಾಪ್ ಪೆರಿಯಡ್ಕ, ಸಂಘಕ್ಕೆ ಸಹಕಾರ ನೀಡುತ್ತಿರುವ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ| ಡಿ.ಆರ್.ಸತೀಶ್ ರಾವ್, ವಿಸ್ತರಣಾಧಿಕಾರಿ ಮಾಲತಿ ಪಿ.,ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬಹುಮಾನ ವಿತರಣೆ:
2021-22ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದವರ ಪೈಕಿ ದ್ವಿತೀಯ ಸ್ಥಾನ ಪಡೆದ ಕೂಸಪ್ಪ ಗೌಡ ಬಾರ್ಲ ಹಾಗೂ ದ್ವಿತೀಯ ಸ್ಥಾನ ಪಡೆದ ಕವೀಶ್ ಬಾರ್ಲರವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ನಿರ್ದೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಒಕ್ಕೂಟದಿಂದ ನೆರವು:
ಸಾಂದ್ರ ಶೀತಲೀಕರಣ ಘಟಕ ಸ್ಥಾಪನೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ 3 ಲಕ್ಷ ರೂ.,ಅನುದಾನದ ಚೆಕ್ ಅನ್ನು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿಯವರು ಸಂಘಕ್ಕೆ ಹಸ್ತಾಂತರಿಸಿದರು. ಬೆಳ್ಳಿಹಬ್ಬ ಅಂಗವಾಗಿ ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ನೀಡುವ 15 ಸಾವಿರ ರೂ., ಧನ ಸಹಾಯದ ಚೆಕ್ ಅನ್ನು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈಯವರು ಸಂಘಕ್ಕೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here