ಮುಂಡೂರು: ಕೆಸರುಮಯವಾದ ಅಂಬಟ-ಬನೇರಿ-ಕಡ್ಯ ರಸ್ತೆ

0

  • ಸಮಸ್ಯೆಯಲ್ಲಿ ಸ್ಥಳೀಯರು-ಡಾಮರೀಕರಣಕ್ಕಾಗಿ ಆಗ್ರಹ

@ಯೂಸುಫ್ ರೆಂಜಲಾಡಿ

 

ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯ ಅಂಬಟ-ಬನೇರಿ-ಕಡ್ಯ ಸಂಪರ್ಕದ ಮಣ್ಣಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇದೀಗ ಕೆಸರುಮಯ ರಸ್ತೆಯಾಗಿ ಮಾರ್ಪಾಡಾಗಿ ಆ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಹಲವಾರು ಮನೆಗಳಿದ್ದು ಇದೇ ರಸ್ತೆಯಾಗಿ ನಿತ್ಯ ಅನೇಕ ವಾಹನಗಳ ಓಡಾಟವೂ ಇದೆ. ಇದೀಗ ಮಳೆಗಾಲವಾಗಿರುವುದರಿಂದ ರಸ್ತೆ ಕೆಸರು ಗದ್ದೆಯಂತಾಗಿದ್ದು ಈ ಭಾಗದ ಜನರು ರಸ್ತೆ ಇದ್ದೂ ಪರಿತಪಿಸುವ ಸನ್ನಿವೇಶ ನಿರ್ಮಾಣವಾಗಿದೆ.

ಇಲ್ಲಿನ ರಸ್ತೆ ಕಾಂಕ್ರೀಟಿಕರಣ ಇಲ್ಲವೇ ಡಾಮರೀಕರಣ ಆಗಬೇಕೆನ್ನುವುದು ಈ ಭಾಗದ ಜನತೆಯ ಬಹು ಕಾಲದ ಬೇಡಿಕೆ. ಈ ರಸ್ತೆ ಕೇವಲ 100 ಮೀ. ಕಾಂಕ್ರಿಟೀಕರಣ ಆಗಿದ್ದು ಉಳಿದ ಸುಮಾರು 1 ಕಿ.ಮೀ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಇಲ್ಲಿನ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಈ ರಸ್ತೆಯಲ್ಲಿ ನಡೆದಾಡಲು ಪರದಾಟ ನಡೆಸುತ್ತಿರುವುದು ಮಾಮೂಲಿ ಎಂಬಂತಾಗಿದೆ.

ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ:
ಇಲ್ಲಿನ ರಸ್ತೆ ಕಾಂಕ್ರಿಟೀಕರಣಕ್ಕಾಗಿ ಹಲವಾರು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವರ್ಷಂಪ್ರತಿ ಸ್ಥಳೀಯರೇ ಸೇರಿಕೊಂಡು ಶ್ರಮದಾನ ಮಾಡುತ್ತಿದ್ದು ಈ ಬಾರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಇದು ೧೯೬೦ರಿಂದ ಪಂಚಾಯತ್ ರಸ್ತೆಯಾಗಿ ಊರ್ಜಿತದಲ್ಲಿದ್ದರೂ ಯಾವುದೇ ನಿರ್ವಹಣೆಯನ್ನು ಮಾಡದೆ ಹಲವಾರು ವರ್ಷಗಳೇ ಕಳೆದಿವೆ. ಈ ಭಾಗದ ಮನೆಗಳಲ್ಲಿ ಮಕ್ಕಳು-ವಯಸ್ಕರಿದ್ದು, ಅನಾರೋಗ್ಯ ಅಥವಾ ತುರ್ತು ಸಂದರ್ಭಗಳಲ್ಲಿ ತೆರಳಬೇಕಾದರೆ ಕಷ್ಟಪಡಬೇಕಾಗಿದೆ. ಆಟೋ ರಿಕ್ಷಾದವರೂ ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ, ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಮ್ಮ ರಸ್ತೆ ಸಮಸ್ಯೆಯನ್ನು ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂಡೂರು-ಅಂಬಟ-ಬನೇರಿ-ಕಡ್ಯ ರಸ್ತೆಗೆ ಕಾಂಕ್ರಿಟೀಕರಣವನ್ನು ಮಾಡಿಕೊಡಿ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here