ಕೂಟೇಲು ಸೇತುವೆ ಕಾಮಗಾರಿ ವೀಕ್ಷಿಸಿ ಶೀಘ್ರ ಸಂಚಾರಕ್ಕೆ ವ್ಯವಸ್ಥೆಗಾಗಿ ಭರವಸೆ ನೀಡಿದ ಶಾಸಕರು

0

ಬೆಟ್ಟಂಪಾಡಿ: ಕಾಮಗಾರಿ ವಿಳಂಬವಾಗಿ ಜನರಿಗೆ ತೀವ್ರಕರವಾದ ತೊಂದರೆಗೆ ಕಾರಣವಾದ ನಿಡ್ಪಳ್ಳಿ ಕೂಟೇಲು ಸೇತುವೆಯ ಕಾಮಗಾರಿಯನ್ನು ಶಾಸಕ ಸಂಜೀವ ಮಠಂದೂರು ಜು. 11 ರಂದು ವೀಕ್ಷಿಸಿದರು.

ಮಳೆಗಾಲ ಮುಂಚಿತವಾಗಿ ಕಾಮಗಾರಿ ಮುಗಿದು ಲೋಕಾರ್ಪಣೆಯಾಗಬೇಕಿದ್ದ ಸೇತುವೆ ವಿಳಂಬವಾಗಿತ್ತು. ಇದರಿಂದ‌ ಪರ್ಯಾಯ ರಸ್ತೆಯೂ ಸಂಚಾರಕ್ಕೆ ಅಯೋಗ್ಯವಾದ ಪರಿಣಾಮ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ‘ಸುದ್ದಿ ಮಾಧ್ಯಮ’ ಸಮಗ್ರ ವರದಿ ಮಾಡಿ ಶಾಸಕರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಶೀಘ್ರವಾಗಿ ಸ್ಪಂದಿಸಿದ ಶಾಸಕರು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ‌ ಸಾರ್ವಜನಿಕ ಸಂಚಾರಕ್ಕೆ ಮಾಡಿಕೊಡುವಂತೆ ಪಿಡಬ್ಲ್ಯುಡಿ ಇಂಜಿನಿಯರ್ ರವರಿಗೆ ಸೂಚಿಸಿ ಕ್ರಮ ಕೈಗೊಂಡಿದ್ದರು. ಆದರೂ ಮಳೆಗಾಲ ಮುಂಚಿತವಾಗಿ ಸೇತುವೆ ಸಂಚಾರಕ್ಕೆ ಬಳಕೆಯಾಗುಷ್ಟು ಪೂರ್ತಿಯಾಗಿರಲಿಲ್ಲ. ಈ ಮಧ್ಯೆ ಧಾಕಾರಾವಾಗಿ ಸುರಿದ ಮಳೆಯಿಂದಾಗಿ ಸೇತುವೆಯ ಅಕ್ಕಪಕ್ಕದ ತೋಟಗಳಿಗೆ ನೀರುನುಗ್ಗಿ ಲಕ್ಷಾಂತರ ರೂ. ಗಳ‌ ನಷ್ಟಕ್ಕೂ ಕಾರಣವಾಗಿತ್ತು.

ಶಾಸಕರ ಸೂಚನೆಯ ಬಳಿಕ‌ ಒಂದು ತಿಂಗಳಲ್ಲಿ ಇದೀಗ ಸೇತುವೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಎರಡೂ ಬದಿಗಳಿಂದ‌ ಸೇತುವೆಗೆ ರಸ್ತೆ ಸಂಪರ್ಕವನ್ನು ಪೂರ್ಣಗೊಳಿಸಬೇಕಾಗಿದೆ. ಆದರೆ ಮಳೆಗಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಸಂಚಾರಕ್ಕೆ ಶೀಘ್ರ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು. ಇಂಜಿನಿಯರ್ ರವರಲ್ಲಿ ಈ ಬಗ್ಗೆ ಮಾತನಾಡಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸುತ್ತೇನೆ ಎಂದು ಶಾಸಕರು ಹೇಳಿದರು.

ಜಲಾವೃತವಾಗಿದ್ದ ಸ್ಥಳೀಯ ಕೃಷಿ ತೋಟಗಳು: ಸೇತುವೆಯ ಅಪೂರ್ಣ ಕಾಮಗಾರಿ‌ ಕೆಲಸಗಳಿಂದಾಗಿ ಧಾರಾಕಾರ ಮಳೆಯ ಪರಿಣಾಮ ಹೊಳೆಯಲ್ಲಿ ನೀರು ಹೆಚ್ಚಾಗಿ ಸ್ಥಳೀಯ ಸುಮಾರು 7 ಮಂದಿಯ ಕೃಷಿ ತೋಟಗಳಿಗೆ ನೆರೆ ಉಂಟಾಗಿತ್ತು. ಎರಡು ಬಾರಿ ಸಂಪೂರ್ಣ ಅಡಿಕೆ, ಕಾಳುಮೆಣಸು, ತೆಂಗು ಕೃಷಿ ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿತ್ತು. ಈ ಬಗ್ಗೆಯೂ ಶಾಸಕರು ಸ್ಥಳ‌ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್,‌ ಸದಸ್ಯ ಮುರಳೀಕೃಷ್ಣ ಭಟ್ ಮುಂಡೂರು, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ಗೌಡ ಪುಳಿತ್ತಡಿ, ಪ್ರಮುಖರಾದ ಪ್ರಕಾಶ್ ಬೋರ್ಕರ್, ಸ್ಥಳೀಯ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here