ಪುತ್ತೂರಿನಲ್ಲಿ ಪ್ರಥಮ ಮೊಟ್ಟೆ ಲೈನ್‌ಸೇಲ್ ಆರಂಭಿಸಿದ ಮನೋಜ್ ಫಾರ್ಮ್ ಸ್ಥಾಪಕ ಚೆನ್ನಿಗಾರ್ ಲಾರೆನ್ಸ್ ಮಸ್ಕರೇನ್ಹಸ್ ನಿಧನ

0

ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮೊಟ್ಟೆ ಲೈನ್‌ಸೇಲ್ ಆರಂಭಿಸಿದ ಮನೋಜ್ ಫಾರ್ಮ್ ಸಂಸ್ಥೆಯ ಸ್ಥಾಪಕ ಚೆನ್ನಿಗಾರ್ ಲಾರೆನ್ಸ್ ಮಸ್ಕರೇನ್ಹಸ್(76ವ)ರವರು ಜು.12ರ ನಸುಕಿನ ಜಾವ ನಿಧನರಾಗಿದ್ದಾರೆ.

ಪುತ್ತೂರು: ದ.ಕ, ಕೊಡಗು, ಕಾಸರಗೋಡು ಜಿಲ್ಲೆಗೆ ಪ್ರಥಮವಾಗಿ ಕೋಳಿ ಮೊಟ್ಟೆಗಳ ಲೈನ್‌ಸೇಲ್‌ನ್ನು ಪರಿಚಯಿಸಿದ ಪುತ್ತೂರು ಕ್ಯಾಂಪ್ಕೋ ಸಂಸ್ಥೆಯ ಸಮೀಪದ ಮನೋಜ್ ಫಾರ್ಮ್ಸ್‌ನ ಸ್ಥಾಪಕರಾಗಿದ್ದ ಚೆನ್ನಿಗಾರು ಲಾರೆನ್ಸ್ ಮಸ್ಕರೇನ್ಹಸ್(76ವ.)ರವರು ಹೃದಯಾಘಾತದಿಂದ ಜು.12 ರಂದು ನಸುಕಿನ ಜಾವ 12.30 ಗಂಟೆಗೆ ನಿಧನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿರುವ ಮೃತ ಚೆನ್ನಿಗಾರು ಲಾರೆನ್ಸ್ ಮಸ್ಕರೇನ್ಹಸ್‌ರವರು ಸಿ.ಎಲ್ ಮಸ್ಕರೇನ್ಹಸ್ ಎಂದೇ ಚಿರಪರಿಚಿತರಾಗಿರುತ್ತಾರೆ. ಕಳೆದ 47 ವರ್ಷಗಳಿಂದ ಮನೋಜ್ ಫಾರ್ಮ್ಸ್ ಎಂಬ ಸಂಸ್ಥೆಯನ್ನು ಮುನ್ನೆಡೆಸುತ್ತಾ ಬಂದಿರುವ ಸಿ.ಎಲ್ ಮಸ್ಕರೇನ್ಹಸ್‌ರವರು ಪರ್ಪುಂಜ ಹಾಗೂ ಕಬಕದಲ್ಲೂ ತಮ್ಮ ಸಂಸ್ಥೆಯನ್ನು ವಿಸ್ತರಿಸಿದ್ದರು. ಸಿ.ಎಲ್ ಮಸ್ಕರೇನ್ಹಸ್‌ರವರು ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಅಂದಿನ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಡೊನ್ ಬೊಸ್ಕೊ ಕ್ಲಬ್‌ನ ಸ್ಥಾಪಕ ಐವರು ಸದಸ್ಯರ ಪೈಕಿ ಸಿ.ಎಲ್ ಮಸ್ಕರೇನ್ಹಸ್‌ರವರೂ ಓರ್ವರಾಗಿರುತ್ತಾರೆ ಮಾತ್ರವಲ್ಲದೆ ಸತತ ಮೂರು ಡೊನ್ ಬೊಸ್ಕೊ ಕ್ಲಬ್‌ನ ಅಧ್ಯಕ್ಷರಾಗಿ ಕ್ಲಬ್ ಮುನ್ನೆಡಿಸಿರುತ್ತಾರೆ.

ಪುತ್ತೂರ‍್ಚೆ ನೆಕೆತ್ರ್ ಸ್ಥಾಪಕರು:

1992ರಲ್ಲಿ ಡೊನ್ ಬೊಸ್ಕೊ ಕ್ಲಬ್‌ನ ಸಿಲ್ವರ್ ಜ್ಯುಬಿಲಿ ಸಂದರ್ಭದಲ್ಲಿ ಸಿ.ಎಲ್ ಮಸ್ಕರೇನ್ಹಸ್‌ರವರ ವಿಶೇಷ ಮುತುವರ್ಜಿಯಿಂದ ‘ಪುತ್ತೂರ‍್ಚೆ ನೆಕೆತ್ರ್’ ಮಾಸ ಪತ್ರಿಕೆಯನ್ನು ಹುಟ್ಟು ಹಾಕಿ, ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಪುತ್ತೂರು ವರ್ತಕ ಸಂಘದ ಸಕ್ರಿಯ ಸದಸ್ಯರಾಗಿ, ದಿ ಕೆಟೆನಿಯನ್ ಅಸೋಸಿಯೇಶನ್‌ನ ಸದಸ್ಯರಾಗಿ ಸಿ.ಎಲ್ ಮಸ್ಕರೇನ್ಹಸ್‌ರವರು ಗುರುತಿಸಿಕೊಂಡಿದ್ದರು. ಉತ್ತಮ ಭಾಷಣಗಾರರಾಗಿದ್ದು ಹಲವಾರು ನಾಟಕ ಹಾಗೂ ಚಲನಚಿತ್ರಗಳಲ್ಲಿಯೂ ಅವರು ಅಭಿನಯಿಸಿರುತ್ತಾರೆ. ಕನ್ನಡ ಹಾಗೂ ಕೊಂಕಣಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಕಲೆ ಹೊಂದಿರುವ ಸಿ.ಎಲ್ ಮಸ್ಕರೇನ್ಹಸ್‌ರವರು ಕೊಂಕಣಿ ನಾಟಕ ಸಭಾದಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿರುತ್ತಾರೆ.

ಮೃತರು ಪತ್ನಿ ನಿವೃತ್ತ ಶಿಕ್ಷಕಿಯಾಗಿರುವ ಜೆಸ್ಸಿ ರೊಡ್ರಿಗಸ್, ಪುತ್ರರಾದ ಮನೋಜ್ ಫಾರ್ಮ್ಸ್‌ನ ವ್ಯವಹಾರ ನೋಡಿಕೊಳ್ಳುತ್ತಿರುವ ಮನೋಜ್ ಮಸ್ಕರೇನ್ಹಸ್, ಮನೋಜ್ ವೆಟ್ ಫಾರ್ಮ್‌ನ ಮಾಲಕ ವಿಜಯ್ ಮಸ್ಕರೇನ್ಹಸ್, ಪುತ್ರಿ ಆಮೇರಿಕದಲ್ಲಿ ನೆಲೆಸಿರುವ ಸುಶ್ಮಾ ಮಸ್ಕರೇನ್ಹಸ್, ಸೊಸೆಯಂದಿರಾದ ಪ್ರಫುಲ್ಲ, ಶುಭ, ಅಳಿಯ ವಿನೋದ್, ಸಹೋದರಿ ಎಮ್ಮಿ ಲೋಬೋ ವಿರಾಜಪೇಟೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

[box type=”note” bg=”#” color=”#” border=”#” radius=”21″]ಜು.13ರಂದು ಅಂತ್ಯಕ್ರಿಯೆ..

 

ನಿಧನರಾದ ಚೆನ್ನಿಗಾರು ಲಾರೆನ್ಸ್ ಮಸ್ಕರೇನ್ಹಸ್‌ರವರ ಅಂತಿಮ ಯಾತ್ರೆಯು ಜು.13 ರಂದು ನಡೆಯಲಿದೆ. ಅಪರಾಹ್ನ 12 ಗಂಟೆಗೆ ಮೃತರ ಪಾರ್ಥೀವ ಶರೀರವನ್ನು ಮೃತರ ಸ್ವಗೃಹಕ್ಕೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಅಪರಾಹ್ನ 3 ಗಂಟೆಗೆ ಮೃತರ ಅಂತಿಮ ಯಾತ್ರೆಯು ಸ್ವಗೃಹವಾದ ಚೆನ್ನಿಗಾರಿನಿಂದ ಹೊರಟು ಪುತ್ತೂರು ಏಳ್ಮುಡಿ ಸಿಮೆತರಿಯಲ್ಲಿ ಅಂತಿಮ ಕ್ರಿಯೆಯ ವಿಧಿವಿಧಾನಗಳು ನಡೆಯಲಿರುವುದು. ಬಳಿಕ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬಲಿಪೂಜೆ ನಡೆಯಲಿರುವುದು  ಎಂದು ಕುಟುಂಬ ಮೂಲಗಳು ತಿಳಿಸಿವೆ.[/box]

LEAVE A REPLY

Please enter your comment!
Please enter your name here