ಜು.16: ಆಲಂತಾಯದಲ್ಲಿ ತಹಶೀಲ್ದಾರ್ ಗ್ರಾಮವಾಸ್ತವ್ಯ-ಪೂರ್ವಭಾವಿ ಸಭೆ

0


ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಂತಾಯ ಗ್ರಾಮದಲ್ಲಿ ಜು.೧೬ರಂದು ಕಡಬ ತಹಶೀಲ್ದಾರ್ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಜು.೧೨ರಂದು ಗೋಳಿತ್ತೊಟ್ಟು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಬ ತಹಶೀಲ್ದಾರ್ ಅನಂತಶಂಕರರವರು, ಗ್ರಾಮದ ಕುಂದುಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ೩ನೇ ಶನಿವಾರ ತಾಲೂಕಿನ ೧ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯುತ್ತಿದೆ. ಜುಲೈ ತಿಂಗಳ ಗ್ರಾಮವಾಸ್ತವ್ಯ ಜು.೧೬ರಂದು ಆಲಂತಾಯ ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುವುದು. ಸಭೆಗೆ ಹೈವೇ ಇಂಜಿನಿಯರ್, ಅರಣ್ಯ, ಸಾಮಾಜಿಕ ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಯಲು ನಿರ್ಧರಿಸಲಾಯಿತು.



ಶಾಲೆಯ ಜಾಗ ಮಂಜೂರು:
ಆಲಂತಾಯ ಸರಕಾರಿ ಶಾಲೆಗೆ ಸೇರಿದ ಜಾಗದಲ್ಲಿ ತಲಾ ೯ ಸೆಂಟ್ಸ್ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಆಗಿದೆ ಎಂದು ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ನೀಲಪ್ಪ ನಾಯ್ಕ್‌ರವರು ತಹಶೀಲ್ದಾರ್‌ರವರ ಗಮನ ಸೆಳೆದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.

ತೋಟಕ್ಕೆ ನುಗ್ಗಿದ ನೀರು:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಇದರ ಪರಿಣಾಮ ನಮ್ಮ ತೋಟಕ್ಕೆ ನೀರು ನುಗ್ಗಿ ಅಡಿಕೆ ಗಿಡಗಳು ಹಾನಿಗೊಂಡಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸತೀಶ್ ರೈ ಕೊಣಾಲುಗುತ್ತು ಹಾಗೂ ಸುಬ್ರಹ್ಮಣ್ಯ ಭಟ್‌ರವರು ತಹಶೀಲ್ದಾರ್‌ಗೆ ಮನವಿ ಮಾಡಿದರು. ಇತರೇ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್‌ರವರ ಗಮನ ಸೆಳೆದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಉಪಾಧ್ಯಕ್ಷೆ ಶೋಭಾಲತಾ ಕೋಲ್ಪೆ, ಪಿಡಿಒ ಜಗದೀಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಎಪಿಎಂಸಿ ಮಾಜಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಗ್ರಾ.ಪಂ.ಸದಸ್ಯರಾದ ಕೆ.ಬಾಬು ಪೂಜಾರಿ, ಶಿವಪ್ರಸಾದ್, ಬಾಲಕೃಷ್ಣ ಅಲೆಕ್ಕಿ, ನೋಣಯ್ಯ ಗೌಡ, ಹೇಮಲತಾ, ಶೃತಿ ಪಿ., ಗುಲಾಬಿ, ಸವಿತಾ ಆಲಂತಾಯ, ಸಂಧ್ಯಾ, ವಾರಿಜಾಕ್ಷಿ, ವಿ.ಸಿ.ಜೋಸೆಫ್, ಪದ್ಮನಾಭ, ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಪಾಲೇರಿ, ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಸುಲ್ತಾಜೆ, ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ಗ್ರಾಮಸ್ಥರಾದ ವೆಂಕಪ್ಪ ಗೌಡ, ಶೇಖರ ಗೌಡ ಅನಿಲ, ನಾಸಿರ್ ಹೊಸಮನೆ, ಅಬ್ದುಲ್ಲಾ ಕುಂಞಿ ಕೊಂಕೋಡಿ, ನೇಮಣ್ಣ ಪೂಜಾರಿ ಪಾಲೇರಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ ಸ್ವಾಗತಿಸಿ, ಗೋಳಿತ್ತೊಟ್ಟು ಗ್ರಾ.ಪಂ.ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು. ಗ್ರಾಮಕರಣಿಕರಾದ ಪ್ರೇಮಾ ಮ್ಯಾಗೇರಿ, ಗ್ರಾಮ ಸಹಾಯಕರಾದ ಆನಂದ ಗೌಡ, ನವ್ಯಶ್ರೀ ಸಹಕರಿಸಿದರು.

LEAVE A REPLY

Please enter your comment!
Please enter your name here