ಕೃಷಿ ಭೂಮಿ, ಬಾವಿಗೆ ರಸ್ತೆಯ ನೀರು ಹರಿಯುತ್ತಿರುವ ವಿಚಾರ – ವಿಟ್ಲಮುಡ್ನೂರು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆಗೆ ಸಿದ್ಧತೆ

0

ಪಿಡಿಒರಿಂದ ಸಮಸ್ಯೆ ಪರಿಹಾರದ ಭರವಸೆ – ಪ್ರತಿಭಟನೆ ಹಿಂದೆಗೆತ

ವಿಟ್ಲ: ಕೃಷಿ ಭೂಮಿ ಹಾಗೂ ಬಾವಿಗೆ ರಸ್ತೆಯ ನೀರು ಹರಿದು ಹಾನಿಯಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ತನ್ನ ಸಂಬಂಧಿಕರೊಂದಿಗೆ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದ ಹಾಗೂ ಬಳಿಕದ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಹಿಂದಕ್ಕೆ ಕಳುಹಿಸಿದ ಘಟನೆ ಜು.12ರಂದು ನಡೆದಿದೆ.

ವಿಟ್ಲಮುಡ್ನೂರು ಗ್ರಾಮದ ದಡ್ಡಲ್ತಡ್ಕ ಎಂಬಲ್ಲಿನ ಅಂಗನವಾಡಿಯೊಂದಕ್ಕೆ ಕಂಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿದುಕೊಂಡು ನಮ್ಮ ಕೃಷಿ ಭೂಮಿ ಹಾಗೂ ಬಾವಿಗೆ ಸೇರುತ್ತಿದೆ. ಈ ಬಗ್ಗೆ ನಾನು ಹಲವಾರು ಬಾರಿ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ. ಈ ಹಿನ್ನಲೆಯಲ್ಲಿ ನನ್ನ ಕೃಷಿ ಭೂಮಿ ರಕ್ಷಣೆಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ವಿಟ್ಲ ಮುಡ್ನೂರು ಗ್ರಾಮದ ದಡ್ಡಲ್ತಡ್ಕ ದಿ.ಬಟ್ಯ ನಾಯ್ಕ್ ರವರ ಪುತ್ರ ಕೆ. ರಘು ನಾಯ್ಕ್ ರವರು ತಿಳಿಸಿದ್ದಾರೆ. ಇದೇ ವೇಳೆ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಗಮಿಸಿದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕ್ಕಾಡುರವರು ಮಾತನಾಡಿ ಇದೀಗ ಅವರ ಕೃಷಿಭೂಮಿ ಉಳಿವಿಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ. ಹಲವಾರು ಭಾರಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಅವರು ಗ್ರಾ.ಪಂ. ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ದಲಿತ್ ಸೇವಾಸಮಿತಿ ಅವರಿಗೆ ಬೆಂಬಲಸೂಚಿಸಿ ಪ್ರತಿಭಟನೆಗೆ ಆಗಮಿಸಿದೆ. ಆದರೆ ಇಲ್ಲಿಗೆ ಆಗಮಿಸಿದ ವೇಳೆ ಅಭಿವೃದ್ಧಿ ಅಽಕಾರಿ ರಾಘವೇಂದ್ರ ಹೊರಪೇಟೆರವರು ನಮ್ಮೊಂದಿಗೆ ಮಾತುಕತೆ ನಡೆಸಿ ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇವೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಮೈರುಂಡ, ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು. ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ನಾಗೇಶ್ ಮುಡಿಪು, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಪಾಲ್ತಾಜೆ, ಮಾಜಿ ಅಧ್ಯಕ್ಷರಾದ ಗಣೇಶ್ ಸೀಗೆಬಲ್ಲೆ, ಗೌರವ ಸಲಹೆಗಾರರಾದ ಸೋಮಪ್ಪ ಸುರುಳಿಮೂಲೆ, ರಾಮಣ್ಣ ಪಿಲಿಂಜ, ಕುಶಾಲಪ್ಪ ಮೂಡಂಬೈಲು, ಮಹಿಳಾ ಘಟಕದ ಉಪಾಧ್ಯಕ್ಷರಾದ ವಿಮಲ ಸೀಗೆಬಲ್ಲೆ, ವಿಮಲ ಮುಳಿಯ ಹಾಗೂ ಪ್ರೇಮರವರು ಉಪಸ್ಥಿತರಿದ್ದರು.

ಯಾರಿಗೂ ಸಮಸ್ಯೆಯಾಗದ ರೀತಿಯಲ್ಲಿ ಪರಿಹಾರ

ರಘು ನಾಯ್ಕರವರು ನಾಲ್ಕು ದಿನಗಳ ಹಿಂದೆ ಗ್ರಾಮ ಪಂಚಾಯತ್ ಗೆ ದೂರು ನೀಡಿದ ನಂತರ ನಾನು ಹಾಗೂ ಸದಸ್ಯರುಗಳು ಹೋಗಿ ಯಾವರೀತಿ ನೀರು ಹರಿದು ಹೋಗ್ಬೇಕು ಅಂತ ಪರಿಶೀಲನೆ ನಡೆಸಿದ್ದೇವೆ. ನೀರು ಹರಿದು ಹೋಗುವ ವ್ಯವಸ್ಥೆಗೆ ಮೂರ್ನಾಲ್ಕು ಮನೆಯವರ ವಿರೋಧವಿದೆ. ನಾವು ಸಾರ್ವಜನಿಕರೆಲ್ಲರ ಹೇಳಿಕೆಗಳನ್ನು ತೆಗೆದುಕೊಂಡು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಶೇ.70 ನೀರು ತಡೆಯುವ ಕೆಲಸವನ್ನು ಕೂಡಲೇ ಮಾಡುತ್ತೇನೆ ಉಳಿದಿರುವ 30% ಕೆಲಸಗಳನ್ನು ಕ್ರೀಯಾಯೋಜನೆಯ ಮೂಲಕ ಮಾಡಿಕೊಡುತ್ತೇವೆ
ರಾಘವೇಂದ್ರ ಹೊರಪೇಟೆ,

ಅಭಿವೃದ್ಧಿ ಅಧಿಕಾರಿ , ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here