ಪುತ್ತೂರು: ಕವಿತೆಯನ್ನು ಬರೆಯುವಾಗ ಹೊಸದಾಗಿ ಚಿಂತನೆ ಮಾಡಿ ಬರೆಯಬೇಕು. ಕವಿಗೂ ಓದುಗನಿಗೂ ಕವಿತೆಗಳು ಮನಸ್ಸಿಗೆ ಸದಾ ಆನಂದವನ್ನು ನೀಡುತ್ತದೆ ಹಾಗೂ ಕವಿತೆಗಳಲ್ಲಿ ಓದುವ ಕವಿತೆ ಹಾಗೂ ಹಾಡುವ ಕವಿತೆ ಎನ್ನುವ ಎರಡು ವಿಧಗಳನ್ನು ನಾವು ಕಾಣಬಹುದು.ಹಾಡುವ ಕವಿತೆಗಳು ನಮಗೆ ವಿಭಿನ್ನವಾದ ಅನುಭವಗಳನ್ನು ಉಂಟುಮಾಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ವಿವೇಕಾನಂದ ಸಂಶೋಧನಾ ಕೇಂದ್ರ, ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಅನ್ನಪೂರ್ಣ ಎನ್. ಕುತ್ತಾಜೆ ಇವರ ಮೊದಲ ಹೆಜ್ಜೆ ಹೊಂಗನಸಿನೆಡೆಗೆ ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜು ಹಿಂದಿನಿಂದಲೂ ಕವಿತೆ -ಕವನಗಳಿಗೆ ಆಶ್ರಯ ನೀಡಿದೆ. ಇಲ್ಲೇ ಕಲಿತ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅನ್ನಪೂರ್ಣ ಅವರ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಇರುವುದು ಶ್ಲಾಘನೀಯ.ಯುವ ಮನಸ್ಸುಗಳು ಕಾವ್ಯದೆಡೆಗೆ ತೊಡಗಿಸಿಕೊಳ್ಳುವುದು ಅತ್ಯಂತ ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಆದ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಕಾವ್ಯವು ಹುಟ್ಟುವುದು ಭಾವದಿಂದ.ಮೊದಲ ಹೆಜ್ಜೆ ಇಡುವುದು ಬಹಳ ಮುಖ್ಯ.ವಸ್ತುವನ್ನು ಕಾವ್ಯವನ್ನಾಗಿ ರೂಪಾಂತರ ಮಾಡುವುದು ಒಂದು ಕಲೆ.ಕವಿತೆಗೆ ಮಿಡಿತದ ಗುಣವಿದೆ ಅಲ್ಲದೇ ಈ ಜಗತ್ತೇ ಕಾವ್ಯಮಯವಾದದ್ದು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ. ಸಾಹಿತ್ಯ ಮತ್ತು ಕವನವನ್ನು ನಾವು ಎಂದಿಗೂ ಟೀಕೆ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಕಾರ್ಯಕ್ರಮಕ್ಕೆ, ಶುಭಹಾರೈಸಿದರು. ಕೃತಿಕಾರರಾದ ಅನ್ನಪೂರ್ಣ ಎನ್. ಕುತ್ತಾಜೆ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಶಿವಪ್ರಸಾದ್. ಕೆ. ಎಸ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಚೇತನಾ. ಕೆ, ಅಪೇಕ್ಷಾ ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಮೈತ್ರಿ. ಭಟ್ ಕಾರ್ಯಕ್ರಮವನ್ನು ವಂದಿಸಿ, ನಿರ್ವಹಿಸಿದರು.