ಕೊಡಿಪಾಡಿ ದೇವಾಲಯದಲ್ಲಿ ಬ್ರಹ್ಮರಥ ನಿರ್ಮಾಣಕ್ಕಾಗಿ ಶಿಲ್ಪಿಗೆ ವೀಳ್ಯ ಹಸ್ತಾಂತರ – ಕ್ಷೇತ್ರದ ಅಭಿವೃದ್ಧಿ ಕುರಿತು ಗ್ರಾಮಸ್ಥರ ಸಭೆ

0

ಪುತ್ತೂರು: ಕೊಡಿಪಾಡಿ‌ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಬ್ರಹ್ಮ ರಥದ ಕೆಲಸ ಕಾರ್ಯಗಳನ್ನು ಆರಂಭಿಸುವ ಸಲುವಾಗಿ ಶಿಲ್ಪಿಗೆ ವೀಳ್ಯ ಕೊಡುವ ಕಾರ್ಯಕ್ರಮ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಗ್ರಾಮಸ್ಥರ ಸಭೆಯು ದೇವಾಲಯದ ವಠಾರದಲ್ಲಿ ನಡೆಯಿತು.


ದೇವಾಲಯದ ಮುಂಭಾಗದಲ್ಲಿ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಾಲಯದ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ರಥ ನಿರ್ಮಾಣದ ಶಿಲ್ಪಿ ಹರೀಶ್ ಆಚಾರ್ಯ ಕಲ್ಲಮುಂಡ್ಕೂರು ಕಾರ್ಕಳರವರಿಗೆ ವೀಳ್ಯ ನೀಡಿದರು.

ಬಳಿಕ ನಡೆದ ಗ್ರಾಮಸ್ಥರ ಸಭೆಯನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಪಿ.ರವರು ದೀಪಬೆಳಗಿಸಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ‌ ಅವರು ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಮುಂದಿನ ಒಂಬತ್ತು ತಿಂಗಳೊಳಗಾಗಿ ರಥ ನಿರ್ಮಾಣಗೊಂಡು ಕ್ಷೇತ್ರಕ್ಕೆ ಆಗಮಿಸಲಿದೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಆ ಬಳಿಕ ಬ್ರಹ್ಮಕಲಶೋತ್ಸವವನ್ನು ಅದ್ಧೂರಿಯಾಗಿ ನಡೆಸಲು ನಾವೆಲ್ಲರೂ ಸನ್ನದ್ದರಾಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶೋಕ್ ನಾಯ್ಕ್ ಹಣಿಯೂರು, ಕೃಷ್ಣರಾಜ ಎರ್ಕಾಡಿತ್ತಾಯ, ನವೀನ್ ಪೂಜಾರಿ ಅರ್ಕ, ಅಭೀಷ್ ಕೊಳಕ್ಕಿಮಾರ್, ಸುಜಿತ್ ನಾಯ್ಕ್ ಹಣಿಯೂರು, ದೀರಜ್ ಹಿರ್ಕುಡೆಲು,ಮೋನಪ್ಪ ಮಡಿವಾಳ ಸಹಿತ ಹಲವು ಗ್ರಾಮಸ್ಥರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ ಜೋಯಿಸರವರು ಸಲಹೆ ಸೂಚನೆಗಳನ್ನು ನೀಡಿ ಅಭಿವೃದ್ಧಿ ಕಾರ್ಯಕ್ಕಾಗಿ ತಾನು‌ ವಾಗ್ದಾನ ಮಾಡಿದ ದೇಣಿಗೆಯನ್ನು ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಜನಾರ್ದನ ಕೆ. ಎರ್ಕಡಿತ್ತಾಯರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರು‌ ಸಹಕಾರ ನೀಡುವಂತೆ ಮನವಿ‌ ಮಾಡಿದರು.

ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ ಕೊಳಕ್ಕಿಮಾರ್ ರವರು ಸ್ವಾಗತಿಸಿ ಬ್ರಹ್ಮ ರಥನಿರ್ಮಾಣಕ್ಕೆ ಸಂಬಂಧಿಸಿದಂತೆ ಈವರೆಗೆ ಆದ ಕೆಲಸ ಹಾಗೂ ಇನ್ನು ಮುಂದಿನ ದಿನಗಳಲ್ಲಿ ಆಗಲಿರುವ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಕ್ಷೇತ್ರದ ಅಭಿವೃದ್ಧಿಕಾರ್ಯಗಳಿಗಾಗಿ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ ಗ್ರಾಮಸ್ಥರು ಆ ಮೊತ್ತವನ್ನು ಆದಷ್ಟು ಬೇಗ ಕ್ಷೇತ್ರಕ್ಕೆ ತಲುಪಿಸುವಂತೆ ಮನವಿ‌ ಮಾಡಿದರು.

ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್ ಪ್ರಸಾದ್ ಆನಾಜೆ., ಸುದರ್ಶನ್ ವೈಲಾಯ, ಚಂದ್ರಶೇಖರ, ಲೀಲಾವತಿ ಹಿರ್ಕುಡೆಲು, ಸುಬ್ರಾಯ ನಾಯ್ಕ್ ಕೊಳಕ್ಕಿಮಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹಣಿಯೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೀರಾ ಉದಯ್ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರಿಧರ ಗೌಡ ಗೋಮುಖರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here