ಮುರದ ಬಾರ್ ತೆರವುಗೊಳಿಸದಿದ್ದರೆ ಬೃಹತ್ ಧರಣಿ

0

  • ಕಬಕ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಎಚ್ಚರಿಕೆ
  •  ಗ್ರಾಮಸ್ಥರ ಹೋರಾಟಕ್ಕೆ ನಮ್ಮ ಬೆಂಬಲ ಎಂದ ಅಧ್ಯಕ್ಷರು

ಪುತ್ತೂರು:ಪಂಚಾಯತ್ ವ್ಯಾಪ್ತಿಯ ಮುರದಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಬಾರ್‌ನ್ನು ತೆರವುಗೊಳಿಸದಿದ್ದರೆ ಬಾರ್ ಮುಂದೆ ಬೃಹತ್ ಧರಣಿ ನಡೆಸುವುದಾಗಿ ಕಬಕ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಬಾರ್ ವಿರುದ್ಧದ ಗ್ರಾಮಸ್ಥರ ಹೋರಾಟಕ್ಕೆ ನಾವು ಕೈಜೋಡಿಸುವುದಾಗಿ ಅಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ.

 


ಸಭೆಯು ಜು.13ರಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಇತರ ವಿಷಯಗಳ ಚರ್ಚಾ ಸಮಯದಲ್ಲಿ ಗ್ರಾಮಸ್ಥ ಜನಾರ್ದನರವರು ಮಾತನಾಡಿ, ಮುರದಲ್ಲಿ ಹೊಸದಾಗಿ ಪ್ರಾರಂಭಗೊಂಡ ಬಾರ್ ಪಂಚಾಯತ್‌ನ ನಿಯಮಗಳಿಗೆ ವಿರುದ್ದ ವ್ಯವಹರಿಸುತ್ತಿದೆ. ಕಟ್ಟಡವು ಪಂಚಾಯತ್ ನಿಯಮಗಳಿಗೆ ವಿರುದ್ಧವಾಗಿ ನಿರ್ಮಾಣಗೊಂಡಿದೆ. ಆ ಪರಿಸರದಲ್ಲಿ ಸುಮಾರು ೭೦-೮೦ ಮನೆಗಳಿದ್ದ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಗ್ರಾಮಸ್ಥರಯ ಬಾರ್ ಮುಂಭಾಗದ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಹೋಗುವುದರಿಂದ ವಾಹನ ಸಂಚಾರಕ್ಕೂ ಅಡಚನೆ ಉಂಟಾಗುತ್ತಿದೆ. ಬಾರ್‌ನಲ್ಲಿ ಕುಡಿದು ಬಂದ ಜನರು ಅಲ್ಲಿಯೇ ಗಲೀಜು ಉಂಟು ಮಾಡುತ್ತಿದ್ದು ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಬಾರ್ ನಿರ್ಮಾಣವಾಗಿ ಈಗ ಅಲ್ಲಿ ನಮಗೆ ಭಾರವಾಗುತ್ತಿದೆ ಎಂದು ಜನಾರ್ದನರವರು ತಿಳಿಸಿದರು. ಪ್ರತಿ ಕ್ರಿಯಿಸಿದ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಮಾತನಾಡಿ, ಬಾರ್ ನಿರ್ಮಾಣಕ್ಕೆ ಪೂರಕವಾದ ಉತ್ತರ ಪಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯವರನ್ನು ಗ್ರಾಮ ಸಭೆಗೆ ಆಹ್ವಾನಿಸಲಾಗಿದೆ. ಆದರೆ ಅವರು ಬಂದಿಲ್ಲ. ಪಂಚಾಯತ್ ನಿಯಮ ಮೀರಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಅವರಿಗೆ ನೋಟೀಸ್ ಜಾರಿಮಾಡಲಾಗಿದೆ ಎಂದು ತಿಳಿಸಿದರು. ಬಾರ್ ಬಂದ್ ಮಾಡದಿದ್ದರೆ ನಾವು ಬಾರ್ ಮುಂಭಾಗದಲ್ಲಿ ಬೃಹತ್ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದಾಗ ನೀವು ಧರಣಿ ನಡೆಸುವುದಾದರೆ ನಿಮಗೆ ನಮ್ಮ ಬೆಂಬಲವಿದೆ. ಧರಣಿಯಲ್ಲಿ ನಿಮ್ಮ ಜೊತೆ ನಾವೂ ಕುಳಿತುಕೊಳ್ಳುವುದಾಗಿ ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು.

ಅನುದಾನ ವ್ಯರ್ಥವಾಗದಿರಲಿ:
ಮುರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪಂಚಾಯತ್‌ನಿಂದ ನಿರ್ಮಾಣವಾಗಲಿರುವ ಉದ್ಯಾನವನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು ಹೆದ್ದಾರಿ ಬದಿಯಲ್ಲಿ ಉದ್ಯಾನವನ ನಿರ್ಮಾಗೊಂಡು ಮುಂದೆ ರಸ್ತೆ ಅಗಲೀಕರಣದ ವೇಳೆ ಅದನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಅನುದಾನ ವ್ಯರ್ಥವಾಗುತ್ತಿದೆ ಎಂದು ಮಾಜಿ ಸದಸ್ಯ ಪ್ರಶಾಂತ್ ಮುರ ತಿಳಿಸಿದರು. ಪ್ರತಿಕ್ರಿಯಿಸಿದ ಪಿಡಿಓ ಆಶಾ, ಸರಕಾರದ ಸುತ್ತೋಲೆಯಂತೆ ಉದ್ಯಾನವನ ನಿರ್ಮಿಸಲಾಗುತ್ತಿದ್ದು ಅದರಲ್ಲಿ ಅಳವಡಿಸಲಾಗುವ ಎಲ್ಲಾ ಸಾಮಾಗ್ರಿಗಳು ಸ್ಥಳಾಂತರಿಸಲು ಅವಕಾಶ ಇರುವಂತದ್ದಾಗಿದೆ ಎಂದರು. ಸರಕಾರದ ಅನುದಾನ ವ್ಯರ್ಥವಾಗಬಾರದು. ಹೀಗಾಗಿ ಯೋಚಿಸಿ ನಿರ್ಮಿಸುವುದು ಉತ್ತಮ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:
ಬೀದಿನಾಯಿಗಳನ್ನು ನಿಯಂತ್ರಿಸಬೇಕು. ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಗಳನ್ನು ವಿತರಿಸಬೇಕು. ರೈತರಿಗೆ ಕೃಷಿ ಇಲಾಖೆಯಿಂದ ಕಪ್ಪು ಟರ್ಪಾಲು ಬದಲು ಬಿಳಿ ಟರ್ಪಾಲು ನೀಡಬೇಕು. ರಸ್ತೆ ಬದಿ ಹಾಗೂ ವಿದ್ಯುತ್ ತಂತಿಗಳಿಗೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತುರ್ತಾಗಿ ತೆರವುಗೊಳಿಸಬೇಕು. ಶಾಲೆಗಳಲ್ಲಿಯೇ ಮಕ್ಕಳಿಗೆ ಆಧಾರ್ ಕಾರ್ಡ್ ಶಿಬಿರಗಳನ್ನು ಮಾಡಬೇಕು. ಪೋಳ್ಯದಲ್ಲಿ ಮಳೆ ನೀರಿನಿಂದ ಜರಿಯುತ್ತಿದ್ದು ಅದನ್ನು ದುರಸ್ತಿಗೊಳಿಸಬೇಕು. ವಿದ್ಯಾಪುರ ಎಂಟನೇ ಅಡ್ಡ ರಸ್ತೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಅಲ್ಲಿ ದುರ್ವಾಸನೆ ಬರುತ್ತಿದ್ದು ಕೂಡಲೇ ಕ್ರಮಕೈಗೊಳ್ಳಬೇಕು. ನಾವೇ ನೆಟ್ಟು ಬೆಳೆಸಿದ ಮರಗಳನ್ನು ಕಡಿಯಲು ಅನುಮತಿ ಯಾಕೆ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಗ್ರಾಮಸ್ಥರಾದ ಕೊರಗಪ್ಪ ಗೌಡ ಪೋಳ್ಯ, ಪ್ರಶಾಂತ್ ಮುರ, ಜನಾರ್ದನ ಮೊದಲಾದವರು ಸಮಸ್ಯೆ, ಬೇಡಿಕೆಗಳನ್ನು ಸಲ್ಲಿಸಿದರು. ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯರಾದ ಶಾಬಾ ಕೆ., ರಾಜೇಶ್ ಪೋಳ್ಯ, ಉಮ್ಮರ್ ಫಾರೂಕ್, ನಝೀರ್, ಪ್ರೀತಾ, ಶಂಕರಿ ಜಿ.ಭಟ್., ಗೀತಾ, ಪುಷ್ಪಾ, ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಆಶಾ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here