ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪರಿಸರ ರಕ್ಷಣೆಯ ಕುರಿತು ವಿಶೇಷ ಉಪನ್ಯಾಸ

0

  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ನರೇಂದ್ರ ರೈ ದೇರ್ಲ

 

ಪುತ್ತೂರು:ಸಮಸ್ತ ಜೀವ ಕುಲಕ್ಕೂ ಆಸರೆ ನೀಡಿದ, ಅಡಿಗಡಿಗೆ ಮಾನವನ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಭೂಮಿಯ ರಕ್ಷಣೆ ನಮ್ಮ ಇಂದಿನ ಆಧ್ಯತೆಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಧರಿತ್ರಿಯ ಉಳಿವಿಗೆ ಸಹಾಯಕವಾಗುತ್ತದೆ ಎಂದು ಸಾಹಿತಿ, ಅಂಕಣಕಾರ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಹೇಳಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಇಕೋ ಕ್ಲಬ್ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ, ಪಕೃತಿ ನಮಗೆ ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ, ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಜಗತ್ತಿನಲ್ಲಿ ಬುದ್ದಿವಂತ ಜೀವಿಯಾಗಿರುವ ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿಕೆ ರವೀಂದ್ರ ರವರು ಮಾತನಾಡಿ, ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದ್ದಾಗಿದೆ. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಯಿಸಿಲ್ಲ. ಜೂ. 5ರಂದು ಹಲವೆಡೆ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದು ಇನ್ನೂ ಆಚರಣೆಗೆ ಮಾತ್ರ ಸೀಮಿತವಾಗಿದೆ. ನಮ್ಮ ಜೀವನದಲ್ಲಿ ಪರಿಸರದ ಪಾತ್ರವು ಬಹುಮುಖ್ಯವಾಗಿದೆ. ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಜೊತೆಗೆ ಪ್ರಕೃತಿಯ ಜೊತೆಗೆ ವಿದ್ಯಾರ್ಥಿಗಳು ಬೇರೆಯಬೇಕು ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಹೇಳಿ, ಕಾನೂನು ವಿದ್ಯಾರ್ಥಿಗಳು ಯಾವ ರೀತಿ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳ ಅಧ್ಯಯನದ ಮೂಲಕ ಪರಿಸರ ಉಳಿಸಲು ಪ್ರಯತ್ನಿಸಿ ಎಂದು ಕರೆ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಘಟಕದ ಸಂಯೋಜಕ ಲಕ್ಷ್ಮಿಕಾಂತ ರೈ ಅನಿಕೂಟಲ್ ಪ್ರಾಸ್ತವಿಕ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ಹೊರ ತರಲಾದ ಜ್ಞಾನಬಿಂಬ ಭಿತ್ತಿಪತ್ರಿಕೆಯ ‘ನಮ್ಮ ಪರಿಸರ’ ಎಂಬ ವಿಶೇಷ ಅವೃತ್ತಿಯನ್ನು ಡಾ. ನರೇಂದ್ರ ರೈ ದೇರ್ಲ ರವರು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ., ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಇಕೋ ಕ್ಲಬ್ ಘಟಕದ ಸಂಯೋಜಕರಾದ ಎಂ.ಕೆ ನವೀನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರೇಖಾ ಕೆ, ಕಾನೂನು ಸಹಾಯಕ ಪ್ರಾಧ್ಯಾಪಕರಾದ ಸಂಗೀತಾ ಎಸ್ ಎಂ,  ಸುಭಾಷಿನಿ ಜೆ, ಕೌಶಿಕ್ ಸಿ,  ಶ್ರೀರಕ್ಷಾ, ಸುಧೀರ್ ತೋಳ್ಪಾಡಿ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಗೀತಾಗೌರಿ, ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿ ಶ ಸಂಧ್ಯಾ ಪಿ.ಎಂ, ಕಂಪ್ಯೂಟರ್ ಸಹಾಯಕ  ತಿಲಕ್ ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕ ತೇಜಸ್ ಸ್ವಾಗತಿಸಿ, ಇಕೋ ಕ್ಲಬ್ ವಿದ್ಯಾರ್ಥಿ ಸ್ವಯಂಸೇವಕ ಕಾರ್ತಿಕ್ ವಂದಿಸಿದರು. ವಿದ್ಯಾರ್ಥಿನಿ ಕು.ವೃಂದಾ ಹಾಗೂ ಕು. ಸೀಮಾಂತಿನಿ ಪ್ರಾರ್ಥಿಸಿ, ವಿದ್ಯಾರ್ಥಿನಿ ಕು. ಶಾಫಿಯಾ ಕಾರ್ಯಕ್ರಮ ನಿರೂಪಿಸಿದರು.

“ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರವಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬ ಮನುಷ್ಯನ ಬದುಕೂ ಪಂಚ ಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಪರಿಸರವಿಲ್ಲದೆ ಬದುಕಿಲ್ಲ ಎಂಬುದನ್ನು ಒಪ್ಪುವುದಾದರೆ ಕನಿಷ್ಠಪಕ್ಷ ನಮ್ಮ ಉಳಿವಿಗಾದರೂ ಅಥವಾ ನಮ್ಮ ಮುಂದಿನ ಪೀಳಿಗೆಗಾಗಿ ನಾವು ಭೂಮಿಯನ್ನು ಉಳಿಸಲೇಬೇಕಾಗುತ್ತದೆಡಾ. ನರೇಂದ್ರ ರೈ ದೇರ್ಲ ಸಾಹಿತಿ, ಅಂಕಣಕಾರ

LEAVE A REPLY

Please enter your comment!
Please enter your name here