ಐಎಮ್‌ಎ-ಕೆಎಸ್‌ಬಿ ಡಾಕ್ಟರ್‍ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಮ್.ಕೆ.ಪ್ರಸಾದ್‌ರವರಿಗೆ ನಾಗರಿಕ ಸನ್ಮಾನ

0

  • ಸ್ವಾರ್ಥ,ದುಡ್ಡಿನ ಆಸೆ ಬಿಡಿ-ಹಿಂದುತ್ವ ಉಳಿಸಿ-ಡಾ.ಎಂ.ಕೆ.ಪ್ರಸಾದ್
  •  ಹಿಂದೂ ಸಮಾಜವನ್ನೇ ಆಸ್ತಿಯನ್ನಾಗಿ ಮಾಡಿದವರು-ಶ್ರೀ ರಾಜಶೇಖರಾನಂದ ಸ್ವಾಮೀಜಿ
  •  ಮಾಡುವ, ಮಾಡಿಸುವ ಗುಣ ಡಾಕ್ಟರ್‌ಗಿದೆ- ಎಸ್.ಅಂಗಾರ
  •  ಡಾ.ಎಂ.ಕೆ.ಪ್ರಸಾದ್ ಅವರು ಕಿಂಗ್ ಮೇಕರ್-ಸಂಜೀವ ಮಠಂದೂರು
  •  ಸಿಂಹದಂತೆ ಶತಾಯುಷಿಯಾಗಿ ಘರ್ಜಿಸಲಿ-ಕುಂಟಾರು ರವೀಶ್ ತಂತ್ರಿ
  • ನಮ್ಮಂತವರ ಸ್ಥಾನಮಾನಕ್ಕೆ ಡಾ.ಎಂ.ಕೆ.ಪ್ರಸಾದ್ ಕಾರಣ-ಪ್ರತಾಪ್‌ಸಿಂಹ ನಾಯಕ್
  •  ಡಾ.ಎಂ.ಕೆ.ಪ್ರಸಾದ್ ಅವರು ಸಮಾಜದಲ್ಲಿ ಅಂಟಿದ ರೋಗಕ್ಕೆ ಸರ್ಜನ್-ಎಂ.ಬಿ.ಪುರಾಣಿಕ್
  •  ಕನಸ್ಸಿನಲ್ಲೂ ಹಿಂದುತ್ವ ಕಾಣುವವರು-ರಾಧಾಕೃಷ್ಣ ಅಡ್ಯಂತಾಯ
  •  ಹೃದಯಾಂತರಾಳದಲ್ಲಿ ಅವರು ಮಾಡುವ ಕೆಲಸ ಶ್ರೇಷ್ಟ-ಡಾ.ಗೌರಿ ಪೈ
  • ನನ್ನ ಗೆಲುವಿಗೆ ಡಾಕ್ಟರ್ ಕಾರಣ-ರಾಜೇಶ್ ನಾಯಕ್
  •  ಕಾವಿ ಧರಿಸಿದ ಸ್ವಾಮಿಗಳು ಮಾಡುವ ಕೆಲಸ ಮಾಡುವ ವೈದ್ಯಗುರು-ಡಾ.ಸುರೇಶ್ ಪುತ್ತೂರಾಯ
  • ಪ್ರಸಾದ್ ಭಂಡಾರಿಯವರಿಗೆ ಸರಿ ಸಾಟಿ ಯಾರೂ ಇಲ್ಲ-ಅರುಣ್ ಕುಮಾರ್ ಪುತ್ತಿಲ

 

ಚಿತ್ರ: ನವೀನ್ ರೈ ಪಂಜಳ

 

ಪುತ್ತೂರು:ಪ್ರತಿಷ್ಠಿತ ಐಎಮ್‌ಎ-ಕೆಎಸ್‌ಬಿ ಡಾಕ್ಟರ್‍ಸ್ ಡೇ ಪ್ರಶಸ್ತಿ ಪುರಸ್ಕೃತರಾದ ಜನಪ್ರಿಯ ವೈದ್ಯ, `ಮುತ್ತಿನ ನಗರಿಯ ಹಿಂದೂ ಹೃದಯ ಸಾಮ್ರಾಟ್’ ಡಾ.ಎಮ್.ಕೆ.ಪ್ರಸಾದ್ ಅವರಿಗೆ ಅಭಿವಂದನಾ ನಾಗರಿಕ ಸನ್ಮಾನ ಕಾರ್ಯಕ್ರಮವು ಡಾ.ಎಮ್.ಕೆ.ಪ್ರಸಾದ್ ಅಭಿವಂದನಾ ವೇದಿಕೆ ವತಿಯಿಂದ ಜು.೧೪ರ ಸಂಜೆ ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.ಸಭಾ ಕಾರ್ಯಕ್ರಮ ಆರಂಭದ ಮೊದಲು ಡಾ.ಎಂ.ಕೆ.ಪ್ರಸಾದ್ ಅವರನ್ನು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸಾಲ್ಮರ ಕ್ರಾಸ್ ಬಳಿಯಿಂದ ತೆರೆದ ಜೀಪಿನಲ್ಲಿ ಚೆಂಡೆ, ನಾಸಿಕ್ ಬ್ಯಾಂಡ್ ಸದ್ದಿನೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಕರೆತಂದು ಸಭೆಗೆ ಸ್ವಾಗತಿಸಲಾಯಿತು.ಸಭಾಂಗಣದ ದ್ವಾರದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರ ನೇತೃತ್ವದಲ್ಲಿ ಮಹಿಳೆಯರು ಆರತಿ ಬೆಳಗಿಸಿ, ತಿಲಕ ಹಚ್ಚಿ ಸ್ವಾಗತಿಸಿದರು.ಬಳಿಕ ನೆರೆದವರು ಪ್ರವೇಶದ್ವಾರದ ಬಳಿಯಿಂದ ವೇದಿಕೆವರೆಗೂ ಅವರಿಗೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಂಡು ಗೌರವಿಸಲಾಯಿತು.ಡಾ.ಎಂ.ಕೆ.ಪ್ರಸಾದ್ ಅವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ವೇದಿಕೆಗೆ ತೆರಳಿದರು.ಬಳಿಕ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

 

ಕಾರ್‍ಯಕ್ರಮದಲ್ಲಿ ಜನಸ್ತೋಮ

ಸ್ವಾರ್ಥ,ದುಡ್ಡಿನ ಆಸೆ ಬಿಡಿ, ಭ್ರಷ್ಟಾಚಾರಿಗಳಾಗ ಬೇಡಿ: ನಾಗರಿಕ ಸನ್ಮಾನ ಸ್ವೀಕರಿಸಿದ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ, ನನಗೆ ಹಿಂದುತ್ವ ಅಂಟಿದ್ದು ಪುತ್ತೂರಿನಲ್ಲಿ.ನನಗೆ ಪ್ರಶಸ್ತಿ ಎಲ್ಲಿಂದ, ಹೇಗೆ ಬಂತು ಎಂದು ಗೊತ್ತಿಲ್ಲ.ನನಗೆ ಪ್ರಶಸ್ತಿ ಬಾರದಿದ್ದರೂ ತೊಂದರೆ ಇಲ್ಲ.ಆದರೆ ಹಿಂದುತ್ವಕ್ಕೆ ತೊಂದರೆ ಆಗಬಾರದು ಎಂದರು.೧೯೯೪ನೇ ಇಸವಿಯಲ್ಲಿ ಒಬ್ಬ ಬಿಜೆಪಿಯವ ಇನ್ನೊಬ್ಬ ಬಿಜೆಪಿಯವನೊಂದಿಗೆ ಸಂತೋಷದಿಂದ ಇರುತ್ತಿದ್ದರು.ಇವತ್ತು ಹಾವು ಮುಂಗುಸಿಯಂತಿದ್ದಾರೆ.ಸ್ವಾರ್ಥ ಬಿಡಬೇಕು.ದುಡ್ಡಿನ ಆಸೆ ಬಿಡಿ.ಹಿಂದುತ್ವ ಮೇಲೆ ಬರಬೇಕು.ಅದಕ್ಕಾಗಿ ಎಲ್ಲರು ಒಟ್ಟಾಗಬೇಕು.ನನಗೆ ನಿಮ್ಮ ಮಾಲೆ ಬೇಡ.ನೀವೆಲ್ಲ ಒಟ್ಟಾಗಿದ್ದರೆ ಸಾಕು. ಬಜರಂಗದಳ, ಜಾಗರಣ ವೇದಿಕೆ, ವಿಶ್ವಹಿಂದು ಪರಿಷತ್ ಬೇರೆ ಬೇರೆ ಅಲ್ಲ.ನಾವೆಲ್ಲ ಒಂದೇ. ಎಲ್ಲಾದರೂ ಒಟ್ಟಾಗದಿದ್ದರೆ ನಮ್ಮ ತುರ್ಪು ಇರಲಿಕ್ಕಿಲ್ಲ ಎಂದು ಎಚ್ಚರಿಸಿದರು.ಇವತ್ತು ಒಬ್ಬ ಒಳ್ಳೆಯ ಕಾರ್ಯಕರ್ತನನ್ನು ಗ್ರಾ.ಪಂ ಅಧ್ಯಕ್ಷ ಮಾಡಿದರೆ ಒಂದು ವರ್ಷದಲ್ಲಿ ಆತ ದುಡ್ಡಿನ ಆಸೆಯಲ್ಲಿ ಅವರು ಭ್ರಷ್ಟರಾಗುತ್ತಾರೆ.ಇದರಿಂದ ಸಮಾಜಕ್ಕೆ ತೊಂದರೆ ಎಂದು ಹೇಳುವ ಮೂಲಕ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಅವರು ವಿರೋಧಿಸಿದರು.
ಒಟ್ಟಿನಲ್ಲಿ ಹಿಂದುತ್ವ ಒಟ್ಟಾಗಬೇಕು.ಡೌನ್ ಆದರೆ ನಮ್ಮದು ಅಫ್ಘಾನಿಸ್ತಾನವಾಗುತ್ತದೆ.ನಿಮ್ಮ ಸ್ವಾರ್ಥಕ್ಕಾಗಿ ನಮ್ಮ ಪ್ರೀತಿಯ ಭಾರತವನ್ನು ಕೈ ಕೊಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ ಡಾ.ಪ್ರಸಾದ್, ಏನೇ ಜಗಳವಿದ್ದರೂ ಆಮೇಲೆ ಮಾಡಿ.ಪಕ್ಷದಲ್ಲಿ ಜಗಳ ಮಾಡಬೇಡಿ.ನೀವೆಲ್ಲ ನನ್ನ ಮಾತಿಗೆ ಬೆಲೆ ಕೊಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದರು.

ದಲಿತರು ಹಿಂದುತ್ವದಲ್ಲಿ ಸೇರಿದಾಗ ನಾವು ಶಕ್ತಿವಂತರಾಗುತ್ತೇವೆ: ಶೇ.18ರಷ್ಟಿರುವ ದಲಿತರು ಹಿಂದುತ್ವದಲ್ಲಿ ಸೇರಿದಾಗ ನಾವು ಶಕ್ತಿವಂತರಾಗುತ್ತೇವೆ.ಇದನ್ನು ಸದಾ ನೆನಪಿನಲ್ಲಿಡಬೇಕು.ಹಾಗಾಗಿ ನಾನು ದಲಿತರ ಕಾಲೋನಿಗೆ ಹೋಗುತ್ತಿದ್ದೆ.ಹಾಲಿನಲ್ಲಿ ಬೆರೆತ ಸಕ್ಕರೆಯಂತೆ ದಲಿತರು ನಮ್ಮೊಂದಿಗೆ ಇರಬೇಕು.ನಮ್ಮ ಗಣೇಶೋತ್ಸವದಲ್ಲಿ ದಲಿತರೇ ತರಕಾರಿ ಹಚ್ಚುವುದು.ನಮ್ಮ ಮದುವೆಗೆ ಅವರು ಅವರ ಮದುವೆಗೆ ನಾವು ಹೋಗುವಂತೆ ಮಾಡಬೇಕು ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು.

ವೇದಿಕೆಯಲ್ಲಿರುವ ಗಣ್ಯರು

ವಿನಯಕುಮಾರ್ ಸೊರಕೆ ಸೋಲು ನನಗೆ ಸಂತೋಷದ ದಿನ: ನಾನು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಗಿನ ಶಾಸಕ ವಿನಯ ಕುಮಾರ್ ಸೊರಕೆ ತುಂಬಾ ತೊಂದರೆ ಕೊಟ್ಟಿದ್ದಾರೆ.ಹಾಗಾಗಿ ನಾನು ಡಿ.ವಿ.ಸದಾನಂದ ಗೌಡರ ಜೊತೆ ರಾಜಕೀಯಕ್ಕೆ ಇಳಿದೆ.ಬಳಿಕ ವಿನಯ ಕುಮಾರ್ ಸೊರಕೆಯನ್ನು ಸೋಲಿಸಿದೆ.ಇದು ನನ್ನ ಜೀವನದ ಅತೀ ಸಂತೋಷದ ಕ್ಷಣ.ಇದೇ ಸಂದರ್ಭದಲ್ಲಿ ನನಗೆ ಕೊಂಕಣಿಯವರು ತುಂಬಾ ಸಹಕಾರ ಮಾಡಿದ್ದಾರೆ ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು.

 

ಭ್ಯವ್ಯ ಮೆರವಣಿಗೆ

ಹಿಂದೂ ಸಮಾಜವನ್ನೇ ಆಸ್ತಿಯನ್ನಾಗಿ ಮಾಡಿದವರು: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಇವತ್ತು ಪುತ್ತೂರಿಗೆ ಪುತ್ತೂರು ಸಂಭ್ರಮ ಪಡುವ ದಿನವಾಗಿದೆ.ಪ್ರತಿಷ್ಠಿತ ಡಾಕ್ಟರ್ಸ್ ಡೇ ಪ್ರಶಸ್ತಿ ಪಡೆದ ಡಾ.ಎಂ.ಕೆ.ಪ್ರಸಾದ್ ಪುತ್ತೂರಿಗೆ ಮಾತ್ರವಲ್ಲ.ನಾವು ಕಂಡಂತೆ ಅವರು ಜಗತ್ತಿಗೆ ವೈದ್ಯ.ಅವರು ತನಗೆ ಆಸ್ತಿ ಮಾಡಿಲ್ಲ ಇಡೀ ಹಿಂದು ಸಮಾಜವನ್ನು ತನ್ನ ಆಸ್ತಿಯನ್ನಾಗಿ ಮಾಡಿದ್ದಾರೆ.ಹಿಂದು ಸಮಾಜಕ್ಕೆ ಸಂಘಟನೆಯ ಚುಚ್ಚು ಮದ್ದು ನೀಡುತ್ತಿದ್ದಾರೆ.ಅವರ ಸಾಧನೆಯೇ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿರುವುದು.ಹಾಗಾಗಿ ಅವರಿಂದಾಗಿ ಅವರಿಗೆ ಒಲಿದ ಪ್ರಶಸ್ತಿಗೆ ಗೌರವ ಬಂದಿದೆ.ಅವರಿಗೆ ಇನ್ನೂ ಹಿಂದೂ ಧರ್ಮದ ಕಾರ್ಯ ಮಾಡಲು ದೇವರು ಶಕ್ತಿನೀಡಲಿ ಎಂದರು.

ಹಿಂದುತ್ವಕ್ಕಾಗಿ ಕೆಲಸ ಮಾಡುವ, ಮಾಡಿಸುವ ಗುಣ ಡಾಕ್ಟರ್‌ಗಿದೆ: ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಮಾತನಾಡಿ ಡಾ.ಎಂ.ಕೆ.ಪ್ರಸಾದ್ ಅವರು ಜಾತಿಯನ್ನು ಉಲ್ಲೇಖ ಮಾಡದೆ ನೀತಿವಂತರಾಗಿ ಶ್ರೇಷ್ಠರಾಗಿದ್ದಾರೆ.ಅವರಿಗೆ ವಿಶೇಷ ಅಭಿನಂದನೆ ಮಾಡಬೇಕಾದ ಕಾರಣ ಏನು ಎಂಬ ಪ್ರಶ್ನೆ ಮುಂದೆ ಬಂದಾಗ ಅವರಲ್ಲಿ ಹಿಂದುತ್ವಕ್ಕೆ ಬೇಕಾಗುವ ಕೆಲಸ ಮಾಡಿಸುವ ಮತ್ತು ಮಾಡುವ ಗುಣವಿದೆ. ಹಿಂದು ಸಮಾಜದ ಕೆಲಸ ಮಾಡಬೇಕಾದರೆ ಅನೇಕ ಹಿರಿಯರ ಕೊಡುಗೆ ಇದೆ.ಇಡೀ ಸಮಾಜ ಅಭಿಮಾನ ಪಡುವ ಕೆಲಸವನ್ನು ಡಾ.ಎಂ.ಕೆ.ಪ್ರಸಾದ್ ಅವರು ಮಾಡಿದ್ದಾರೆ. ಅವರ ಗುರಿ ಮತ್ತು ಪ್ರಯತ್ನದಲ್ಲಿ ನಾವು ಕೂಡಾ ಭಾಗಿಯಾಗಬೇಕೆಂದರು.

ಡಾ.ಎಂ.ಕೆ.ಪ್ರಸಾದ್ ಅವರು ಕಿಂಗ್ ಮೇಕರ್: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ವೈದ್ಯ ದೇವರಿಗೆ ಸಮಾನ ಎಂಬಂತೆ ಅನ್ವರ್ಥ ನಾಮ ಡಾ.ಎಂ.ಕೆ.ಪ್ರಸಾದ್ ಅವರು.ದೇವರ ಕಾರ್ಯ ಎಂದು ರೋಗಿಗಳಲ್ಲಿ ದೇವರನ್ನು ಕಾಣುವ ವೈದ್ಯರಾಗಿ ಡಾ.ಎಂ.ಕೆ.ಪ್ರಸಾದ್ ನಮ್ಮ ಮುಂದೆ ಕಾಣುತ್ತಾರೆ.ಅವರು ವೈದ್ಯರಾಗಿ ಸಮಾಜದ ತೊಡಕಿಗೂ ವೈದ್ಯರಾದರು.ದಲಿತೋದ್ದಾರಕರಾದರು.ಅವರು ಅನೇಕ ನಾಯಕರನ್ನು ಬೆಳೆಸಿದರು.ಒಂದು ಹಂತದಲ್ಲಿ ಅವರು ಕಿಂಗ್ ಆಗಲಿಲ್ಲ.ಕಿಂಗ್ ಮೇಕರ್ ಆದರು.ಡಿ.ವಿ.ಸದಾನಂದ ಗೌಡ, ಮಲ್ಲಿಕಾ ಪ್ರಸಾದ್ ಸೇರಿದಂತೆ ನನ್ನನ್ನು ಶಾಸಕರನ್ನಾಗಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದು ಎಂದರು.ಇವತ್ತು ಅವರಿಗೆ ಐಎಂಎ ಕೊಟ್ಟ ಪ್ರಶಸ್ತಿ ಇಡೀ ಹಿಂದೂ ಸಮಾಜಕ್ಕೆ ಕೊಟ್ಟ ಗೌರವ ಆಗಿದೆ.ಯಾಕೆಂದರೆ ಅವರು ಪ್ರಶಸ್ತಿ ಹಿಂದೆ ಹೋದವರಲ್ಲ.ಇಡೀ ಸಮಾಜದ ಉದ್ದಾರವೇ ಅವರ ಗುರಿಯಾಗಿತ್ತು.ಹಾಗಾಗಿ ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಸಿಂಹದಂತೆ ಶತಾಯುಷಿಯಾಗಿ ಘರ್ಜಿಸಲಿ: ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿಯವರು ಅಭಿನಂದನಾ ಭಾಷಣ ಮಾಡಿದರು.ಎಲ್ಲರೂ ಕಲಿತ ಬಳಿಕ ಸರಕಾರಿ ಸೇವೆ, ಸ್ವಂತ ನರ್ಸಿಂಗ್ ಹೋಮ್ ಇಟ್ಟುಕೊಂಡು ಸ್ವಾರ್ಥಕ್ಕೆ ಹೋಗುತ್ತಾರೆ.ಆದರೆ ಡಾ.ಎಂ.ಕೆ.ಪ್ರಸಾದ್ ಅವರು ತನ್ನ ಸ್ವಾರ್ಥ ನೋಡಲಿಲ್ಲ.ಬದಲಾಗಿ ಅವರು ವೈದ್ಯನೂ ಹೌದು, ಹಿಂದು ಸಮಾಜದ ದೊಡ್ಡ ಸಂಪತ್ತೂ ಹೌದು.ಹಿಂದು ಸಮಾಜ ಮಲಗಿ ನಿದ್ರಿಸುವ ಸಂದರ್ಭದಲ್ಲಿ ಸಮಾಜವನ್ನು ಬಡಿದೆಬ್ಬಿಸುವ ೧೦ ರೂಪಾಯಿ ವೈದ್ಯರೂ ಹೌದು.ಹಿಂದು ಸಮಾಜ ದಾರಿ ತಪ್ಪಿದಾಗ ಸರಿ ಮಾಡುವ ಅವರು ಹಿಂದು ಸಮಾಜಕ್ಕಾಗಿ ದೇವ ಸದೃಶವಾಗಿರುವ `ಮಾತನಾಡುವ ಮಹಾಲಿಂಗ್ವೇಶ್ವರ’ ದೇವರಾಗಿದ್ದಾರೆ.ಡಾ.ಎಂ.ಕೆ.ಪ್ರಸಾದ್ ಅವರ ದಾರಿಯಲ್ಲೇ ಸಮರ್ಥವಾಗಿ ಮುಂದೆ ಹೋಗುತ್ತಿರುವ ಡಾ.ಸುರೇಶ್ ಪುತ್ತೂರಾಯರಂತಹ ಹಲವು ವೈದ್ಯರು ಭವಿಷ್ಯದಲ್ಲಿ ಬೇಕಾಗಿದೆ ಎಂದರು.

ಪುತ್ತೂರಿನಲ್ಲಿ ಡಿ.ವಿ.ಸದಾನಂದ ಗೌಡರು ಗೆದ್ದು ಬಂದಾಗ, ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ರಾಮರಾಜ್ಯ ಸ್ಥಾಪನೆ ಮಾಡಿದಷ್ಟು ಸಂತೋಷ ಆಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಡಾ.ಪ್ರಸಾದ್ ಅವರು ಹೇಳಿದ್ದರು ಎಂದು ರವೀಶತಂತ್ರಿ ಉಲ್ಲೇಖಿಸಿದರು.ಪೂಜ್ಯ ಖಾವಂದರಿಗೆ ಭವಿಷ್ಯತ್‌ನಲ್ಲಿ ದೇಶ ಭಕ್ತ ಜಾಗೃತ ಸಮಾಜದಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾರೆಂಬ ಚಿಂತನೆಯೊಂದಿಗೆ ಎಲ್ಲ ಕಡೆಯಿಂದ ರಾಜಕೀಯ ಮರೆತು ಗೌರವ ಬರುವ ಸಂದರ್ಭದಲ್ಲಿಯೇ, ಹಿರಿಯರ ತ್ಯಾಗದ ಜೀವನಕ್ಕೆ ನಾವು ಮಾಡಿರುವ ಸನ್ಮಾನ ಅದೊಂದು ಅರ್ಥದಲ್ಲಿ ತಾಯಿ ಭಾರತಿಗೆ ಮಾಡಿರುವ ಹಾರಾರ್ಪಣೆಯೊಂದಿಗೆ ಭವಿಷ್ಯತ್‌ನಲ್ಲಿ ಹಿಂದುತ್ವಕ್ಕಾಗಿ ದೃಢವಾದ ಪ್ರತಿಜ್ಞೆ ಮಾಡಬೇಕಾಗಿದೆ.ಅದೇ ರೀತಿ ಡಾ.ಎಂ.ಕೆ.ಪ್ರಸಾದ್ ಅವರು ಯಾವ ರೀತಿ ಸಿಂಹದಂತೆ ಘರ್ಜಿಸುತ್ತಿದ್ದಾರೋ ಅದು ಶತಾಯಷಿಯಾಗಿ ಹಿಂದು ಸಮಾಜದ ಜೊತೆಯಲ್ಲಿ ಘರ್ಜಿಸುವ ಭಾಗ್ಯವನ್ನು ಅವರಿಗೆ ನೀಡಬೇಕು.ನಮಗೆ ಅವರಿಂದ ಇನ್ನಷ್ಟು ಸಮಾಜ ಸೇವೆ ಮಾಡುವ ಮಾರ್ಗದರ್ಶನ ನೀಡಬೇಕು ಎಂದರು.

ನಮ್ಮಂಥವರ ಸ್ಥಾನ ಮಾನಕ್ಕೆ ಡಾ.ಎಂ.ಕೆ.ಪ್ರಸಾದ್ ಕಾರಣ: ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ ಹಿಂದುತ್ವಕ್ಕಾಗಿ ತನ್ನ ಜೀವನವನ್ನು ತಪಸ್ಸಿನ ರೀತಿಯಲ್ಲಿ ಸಮರ್ಪಣೆ ಮಾಡಿದ ಡಾ.ಪ್ರಸಾದ್ ಅವರ ಬಳಿಗೆ ಹೋದವರಿಗೆ, ಸಮಾಜಕ್ಕೆ ದೇಶಕ್ಕೋಸ್ಕರ ಸೇವೆ ಮಾಡು ಎಂಬ ಮಾರ್ಗದರ್ಶನ ಮಾಡುತ್ತಿದ್ದರು.ಈ ನಿಟ್ಟಿನಲ್ಲಿ ವೈಚಾರಿಕವಾಗಿ ಕಂಡ ಕನಸು ಪೂರ್ಣ ರೀತಿಯಲ್ಲಿ ನಮ್ಮಂಥವರು ಸ್ಥಾನ ಮಾನಕ್ಕೆ ಹೋಗಬೇಕಾದರೆ ಅದರಲ್ಲಿ ಪ್ರಸಾದ್ ಭಂಡಾರಿಯವರ ಮಾರ್ಗದರ್ಶನವಿದೆ ಎಂದರು.

ಡಾ.ಎಂ.ಕೆ.ಪ್ರಸಾದ್ ಅವರು ಸಮಾಜಕ್ಕೆ ಅಂಟಿದ ರೋಗಕ್ಕೆ ಸರ್ಜರಿ ಮಾಡಿದ್ದಾರೆ: ವಿಶ್ವಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಅವರು ಮಾತನಾಡಿ ತಾಯಿ ಭಾರತಿ ತೊಂದರೆಗೊಳಗಾದಾಗ ಆ ಸಮಯದಲ್ಲಿ ರಾಷ್ಟ್ರೀಯ ಚಿಂತನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳ ಮೂಲಕ ರಾಷ್ಟ್ರ ಚಿಂತನೆ ತಂದವರು ಡಾ.ಹೆಡ್ಗೇವಾರ್ ಅವರು. ಮುಂದೆ ಭಾಳಾ ಠಾಕ್ರೆ ಹಿಂದುತ್ವ ಬೆಳೆಸಿದರು.ಅದೇ ರೀತಿ ಹಿಂದುತ್ವಕ್ಕೆ ಆಧಾರವಾಗಿ ನಿಂತವರು ಡಾ.ಪ್ರಸಾದ್ ಭಂಡಾರಿಯವರು.ಅವರು ಒಬ್ಬ ಸರ್ಜನ್ ಮಾತ್ರವಲ್ಲ ಸಮಾಜಕ್ಕೆ ಅಂಟಿದ ರೋಗಕ್ಕೆ ಸರ್ಜರಿ ಮಾಡಿದ್ದಾರೆ.ಹಿಂದುತ್ವಕ್ಕಾಗಿ ಎದೆಗಾರಿಕೆಯಿಂದ ನಿಲ್ಲುವ ಏಕ ಮಾತ್ರ ವ್ಯಕ್ತಿ ಅವರು ಎಂದರು.

ಕನಸ್ಸಿನಲ್ಲೂ ಹಿಂದುತ್ವ ಕಾಣುವವರು: ಹಿಂಜಾವೇ ಕರ್ನಾಟಕ ಪ್ರಾಂತ ಪ್ರಶಿಕ್ಷಣ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಅವರು ಮಾತನಾಡಿ ಸಾಧನೆಗೆ ಮತ್ತೊಂದು ಹೆಸರೇ ಡಾ.ಎಂ.ಕೆ ಪ್ರಸಾದ್.ಹಾಗಾಗಿ ಅವರ ಮಾರ್ಗದರ್ಶನದಿಂದ ಸಮಾಜ ಶಕ್ತಿಯುತವಾಗಿದೆ.ಸಮಾಜಕ್ಕೆ ಹೊಸ ಶಕ್ತಿಕೊಟ್ಟವರು ಪ್ರಸಾದ್ ಭಂಡಾರಿಯವರು.ಹಾಗಾಗಿ ಇವತ್ತು ಪ್ರಶಸ್ತಿಯನ್ನು ಬೆನ್ನಟ್ಟಿ ಹೋಗುವ ಕಾಲಘಟ್ಟದಲ್ಲಿ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಬಂದಿದೆ.ಇದು ಅವರ ಸಮಾಜದ ಕೊಡುಗೆಗೆ ಸಂದ ಗೌರವ. ಪ್ರಸಾದ್ ಭಂಡಾರಿಯವರಿಗೆ ಕನಸ್ಸಿನಲ್ಲೂ ಹಿಂದುತ್ವ ಕಾಣುತ್ತದೆ ಎಂದರು.

ಹೃದಯಾಂತರಾಳದಲ್ಲಿ ಅವರು ಮಾಡುವ ಕೆಲಸ ಶ್ರೇಷ್ಟ: ಹಿರಿಯ ವೈದ್ಯೆ ಡಾ.ಗೌರಿ ಪೈ ಅವರು ಮಾತನಾಡಿ ಡಾ.ಎಂ.ಕೆ.ಪ್ರಸಾದ್ ಅವರು ನನ್ನ ತಮ್ಮನ ಹಾಗೆ.ಅವರಲ್ಲಿ ಒಳ್ಳೆಯ ಗುಣವೇ ಇರುವುದು.ವೈದ್ಯಕೀಯ ವೃತ್ತಿ ನಾವು ಒಟ್ಟಿಗೆ ಮಾಡಿzವೆ.ನನ್ನ ಕಷ್ಟಕಾಲದಲ್ಲೂ ಸಹಾಯ ಮಾಡಿದ್ದಾರೆ.ಹೃದಯಾಂತರಾಳದಲ್ಲಿ ಅವರು ಮಾಡುವ ಕೆಲಸ ಯಾರೂ ಮಾಡಲು ಸಾಧ್ಯವಿಲ್ಲ ಎಂದರು.

ನನ್ನ ಗೆಲುವಿಗೆ ಡಾಕ್ಟರ್ ಕಾರಣ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾತನಾಡಿ ನನ್ನ ಗೆಲುವಿಗೆ ಡಾಕ್ಟರ್ ಬಹಳಷ್ಟು ಕೊಡುಗೆ ನೀಡಿದ್ದಾರೆ.ಹಿಂದುತ್ವಕ್ಕೆ ಶಕ್ತಿಯಾಗಿರುವ ಡಾಕ್ಟರ್ ಅವರಿಂದ ಸಮಾಜಕ್ಕೆ ಇನ್ನಷ್ಟು ಶಕ್ತಿ ಸಿಗುವಂತಾಗಲಿ ಎಂದು ಹೇಳಿದರು.

ಕಾವಿ ಧರಿಸಿದ ಸ್ವಾಮಿಗಳು ಮಾಡುವ ಕೆಲಸ ಮಾಡುವ ವೈದ್ಯಗುರು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಕೆ.ಪ್ರಸಾದ್ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡ ವೈದ್ಯರನ್ನು ಗೌರವಿಸುವ ಕಾರ್ಯಕ್ರಮ ಶ್ರೇಷ್ಠ.ಡಾ.ಎಂ.ಕೆ.ಪ್ರಸಾದ್ ಅವರು ವೈದ್ಯನಾಗಿ ಕಿರಿಯ ವೈದ್ಯರ ಕೆಲಸಗಳಿಗೆ ಹುರಿದುಂಬಿಸುವುದರ ಜೊತೆಗೆ ಧಾರ್ಮಿಕವಾಗಿ ಕಾವಿ ಧರಿಸಿದ ಸ್ವಾಮೀಜಿಗಳು ಮಾಡುವ ಕೆಲಸವನ್ನು ಕಾವಿ ಧರಿಸದೆ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು,ಪುತ್ತೂರಿನಲ್ಲಿ ಪ್ರತಿಯೊಬ್ಬ ಹಿಂದು ತಾನೊಬ್ಬ ಹಿಂದು ಎಂದು ಎದೆ ತಟ್ಟಿ ಹೇಳುವ ಧೈರ್ಯ ಕೊಟ್ಟಂತಹ ವ್ಯಕ್ತಿತ್ವ ಅವರದ್ದು, ಹಿಂದು ಧರ್ಮದಲ್ಲಿರುವ ಅನೇಕ ಪಂಗಡಗಳು ವಿಭಿನ್ನತೆಯನ್ನು ಮರೆತು ಒಂದಾಗಬೇಕಂಬ ಅವರ ಮನದಾಸೆಯಂತೆ ಅವರು ಜಾತ್ಯಾತೀತ ಪದಕ್ಕೆ ವಿಶೇಷ ಅರ್ಥ ಕೊಟ್ಟಿದ್ದಾರೆ.ಈ ನಿಟ್ಟಿನಲ್ಲಿ ಹಿಂದು ಸಮಾಜ ತನ್ನೆಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು.ಇದು ಡಾ.ಎಂ.ಕೆ.ಪ್ರಸಾದ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಪ್ರಸಾದ್ ಭಂಡಾರಿಯವರಿಗೆ ಸರಿ ಸಾಟಿ ಯಾರೂ ಇಲ್ಲ: ಅಭಿನಂದನಾ ಸಮಿತಿ ಸಂಚಾಲಕರಲ್ಲೋರ್ವರಾದ ಅರುಣ್ ಕುಮಾರ್ ಪುತ್ತಿಲ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಎಂ.ಕೆ ಪ್ರಸಾದ್ ಅವರು ಸಮಾಜಕ್ಕೆ ಅನುಕರಣೀಯರಾದವರು.ರೋಗಿಯ ಕಾಯಿಲೆ ಗುಣಪಡಿಸುವ ಜೊತೆಗೆ ಸಾರ್ವಜನಿಕ ಗಣೇಶೋತ್ಸವದ ಮೂಲಕ ಇಡೀ ಸಮಾಜದಲ್ಲಿ ಶಕ್ತಿ ಕೇಂದ್ರವಾಗಬೇಕೆಂದು ಮುನ್ನಡೆಸಿದವರು. ಪ್ರಸಾದ ಭಂಡಾರಿಯವರಿಗೆ ಸರಿ ಸಾಟಿ ಪ್ರಸಾದ್ ಭಂಡಾರಿಯವರೇ ಹೊರತು ಬೇರೆ ಯಾರೂ ಇಲ್ಲ.ಇವತ್ತು ಪ್ರಸಾದ್ ಭಂಡಾರಿಯವರ ಕಾರ್ಯವನ್ನು ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅವರು ಮುಂದುವರಿಸುವುದು ಭವಿಷ್ಯದಲ್ಲಿ ಅಗತ್ಯವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ.ಕೊಟೇಚಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷರೂ ಆಗಿರುವ ಅಭಿವಂದನಾ ಸಮಿತಿ ಸಂಚಾಲಕರಲ್ಲೋರ್ವರಾದ ದಿನೇಶ್ ಮೆದು ಅವರು ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಡಾ.ಎಂ.ಕೆ.ಪ್ರಸಾದ್ ಅಭಿವಂದನಾ ಸಮಿತಿ ಸಂಚಾಲಕ ಅಜಿತ್ ರೈ ಹೊಸಮನೆ, ಕೆದಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪ್ರವೀಣ್ ಪಂಚಮುಖಿ ಕೋರ್ಟ್ ರಸ್ತೆ, ಸಮಿತಿ ಕೋಶಾಧಿಕಾರಿ ಚಿನ್ಮಯ ರೈ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ರಾಜೇಶ್ ರೈ ಪರ್ಪುಂಜ, ಅಶೋಕ್ ತ್ಯಾಗರಾಜನಗರ, ಸಂತೋಷ್ ರೈ ಕೈಕಾರ, ಬಾಲಸುಬ್ರಹ್ಮಣ್ಯ ಕೋಟ್ಯಾನ್ ಬಲ್ನಾಡು, ಹರಿಣಿ ಪುತ್ತೂರಾಯ, ದಿನೇಶ್ ಪಂಜಿಗ, ಚಿನ್ಮಯ ರೈ,ಮನೀಶ್ ಕುಲಾಲ್ ಅತಿಥಿಗಳನ್ನು ಗೌರವಿಸಿದರು.ಡಾ.ಎಂ.ಕೆ.ಪ್ರಸಾದ್ ಅವರ ಅಭಿವಂದನಾ ಸನ್ಮಾನ ಪತ್ರವನ್ನು ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ವಾಚಿಸಿದರು. ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು.ದಿನೇಶ್ ಪಂಜಿಗ ವಂದಿಸಿದರು.ಅಭಿವಂದನಾ ವೇದಿಕೆ ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು ಮತ್ತು ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದ ಕೊನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಡಾ.ಎಂ.ಕೆ.ಪ್ರಸಾದ್ ಅವರನ್ನು ಅಭಿನಂದಿಸಿದರು.ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ವಿವಿಧ ಸಂಘ ಸಂಸ್ಥೆಗಳು, ದೇವಸ್ಥಾನ, ದೈವಸ್ಥಾನ, ಭಜನಾ ಮಂಡಳಿ, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ವೈದ್ಯರುಗಳು, ವರ್ತಕರು ಡಾ.ಎಂ.ಕೆ.ಪ್ರಸಾದ್ ಅವರನ್ನು ಅಭಿನಂದಿಸಿದರು.

 

ಹೈಲೈಟ್ಸ್ …..

  • `ಮುತ್ತಿನ ನಗರಿಯ ಹಿಂದೂ ಹೃದಯ ಸಾಮ್ರಾಟ್’-ಸನ್ಮಾನ
  • ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ ಚೆಂಡೆ, ನಾಸಿಕ್ ಬ್ಯಾಂಡ್‌ನ ಸದ್ದು, ಪಟಾಕಿ ಸಿಡಿಸಿ ಸ್ವಾಗತ
  • ದ್ವಾರದಲ್ಲಿ ಆರತಿ ಬೆಳಗಿ ವೇದಿಕೆಗೆ ಸ್ವಾಗತ ವೇದಿಕೆಯುದ್ದಕ್ಕೂ ಸಭೆಯಲ್ಲಿ ನೆರೆದವರಿಂದ ಪುಷ್ಪಾರ್ಚನೆ
  • ಪೇಟ ತೊಡಿಸಿ, ಶಾಲು ಹೊದೆಸಿ, ಬೃಹತ್ ಗಾತ್ರದ ಹಾರಾರ್ಪಣೆ
  • ಬುಟ್ಟಿಯಲ್ಲೇ ಫಲವಸ್ತು, ಅವರಷ್ಟೇ ಎತ್ತರದ ಸನ್ಮಾನ ಪತ್ರ, ಶ್ರೀಕೃಷ್ಣರಾಧೆಯರ ಸ್ಮರಣಿಕೆ ಸಮರ್ಪಣೆ
  • ಸಭಾ ಕಾರ್ಯಕ್ರಮದ ಬಳಿಕ ಸಾವಿರಾರು ಮಂದಿಯಿಂದ ಗೌರವ ಸನ್ಮಾನ

 

ಸುದ್ದಿ ಪತ್ರಿಕೆಯಲ್ಲಿ ಅವರ ಜೀವನ ಓದಿದ್ದೆ

ಇವತ್ತಿನ ಕಾಲದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಆರೋಗ್ಯವಂತನಾಗಬೇಕು.ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕೆಂಬ ವಿಚಾರ ಮುಂದಿಟ್ಟು ವೈದ್ಯ ವೃತ್ತಿಗೆ ನ್ಯಾಯ ಕೊಟ್ಟಿದ್ದರೆ ಅದು ಡಾ.ಎಂ.ಕೆ.ಪ್ರಸಾದ್ ಭಂಡಾರಿಯವರು ಎಂದು ಹೇಳಿದ ಶಾಸಕ ಸಂಜೀವ ಮಠಂದೂರು ಅವರು,10 ರೂಪಾಯಿ ಡಾಕ್ಟರ್ ಎಂಬ ವಿಚಾರದಲ್ಲಿ ಅವರ ಜೀವನ ಸುದ್ದಿ ಪತ್ರಿಕೆಯಲ್ಲಿ ಓದಿದ್ದೆ ಎಂದು ಉಲ್ಲೇಖಿಸಿದರು.

ನಾನು ಮುದುಕ ಆಗಿದ್ದೇನೆ ನನ್ನ ಬದಲಿಗೆ ಇನ್ನು ಅವರು….

ನಾನು ಮುದುಕ ಆಗಿದ್ದೇನೆ.ನನ್ನ ಬದಲಿಗೆ ಇನ್ನು ಅವರು ಎಂದು ಡಾ.ಸುರೇಶ್ ಪುತ್ತೂರಾಯ ಅವರನ್ನು ಡಾ. ಎಂ.ಕೆ.ಪ್ರಸಾದ್ ಅವರು ತೋರಿಸಿದರು.ಈ ವೇಳೆ ಸಭೆಯಲ್ಲಿ ಜೋರಾಗಿ ಕರತಾಡನ ಕಂಡು ಬಂತು.ಮಾತು ಮುಂದುವರಿಸಿದ ಡಾ.ಎಂ.ಕೆ.ಪ್ರಸಾದ್ ಅವರು ವೈದ್ಯ ವೃತ್ತಿ ಬಿಟ್ಟು ಹಿಂದುತ್ವಕ್ಕೆ ಇಳಿಯುತ್ತೇನೆ ಎಂದು ಡಾ.ಸುರೇಶ್ ಪುತ್ತೂರಾಯ ಒಮ್ಮೆ ಹೇಳಿದ್ದರು.ಆಗ ನಾನು ಹೇಳಿದ್ದೆ ಈಗ ಸಮಯ ಸರಿಯಿಲ್ಲ.ನಾನು ಹೇಳುವಾಗ ಇಳಿಯಿರಿ ಎಂದಿದ್ದೆ.ಈಗ ಹಿಂದುತ್ವಕ್ಕೆ ಇಳಿಯಿರಿ.ಇದು ಸರಿಯಾದ ಸಮಯ ಎಂದು ವೇದಿಕೆಯಲ್ಲಿ ಹೇಳಿದರು.ಅದೇ ರೀತಿ ಮಾತು ಮುಂದುವರಿಸಿದ ಅವರು ನಮ್ಮ ಅಂಗಾರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯಕ್ ಅವರು ಬರುವ ವಿಧಾನ ಸಭೆಯಲ್ಲೂ ಇರಬೇಕೆಂದರು. ಡಾ.ಪ್ರಸಾದ್ ಅವರು ತನ್ನ ಹೆಸರು ಉಲ್ಲೇಖಿಸಿದ್ದಕ್ಕೆ ಅಧ್ಯಕ್ಷೀಯ ಮಾತಿನ ಸಂದರ್ಭ ಉತ್ತರಿಸಿದ ಡಾ.ಸುರೇಶ್ ಪುತ್ತೂರಾಯ ಅವರು, ಡಾ.ಪ್ರಸಾದ್ ಅವರು ಬಹುದೊಡ್ಡ ಮಾತನ್ನು ಹೇಳಿದ್ದಾರೆ.ಅವರ ನಂತರ ನಾನು ಎಂದು ತುಂಬ ಪ್ರೀತಿಯಿಂದ ಹೇಳಿದ್ದಾರೆ.ಆದರೆ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.ಡಾ.ಪ್ರಸಾದ್ ಅವರಿಗೆ ಅವರೇ ಸರಿಸಾಟಿ ಎಂದು ಹೇಳಿದರು.

 

ಡಾ.ಎಂ.ಕೆ.ಪ್ರಸಾದ್ ಅವರಷ್ಟೇ ಎತ್ತರದ ಅಭಿವಂದನಾ ಪತ್ರ:

ಡಾ.ಎಂ.ಕೆ.ಪ್ರಸಾದ್ ಮತ್ತು ಅವರ ಪತ್ನಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರನ್ನು ವೇದಿಕೆಯಲ್ಲಿ ವಿರಾಜಮಾನರನ್ನಾಗಿಸಿ, ಸನ್ಮಾನಿಸಲಾಯಿತು.ಪೇಟ, ಶಾಲು, ಹೂವಿನ ಮಾಲಾರ್ಪಣೆ ಮಾಡಿ ಬುಟ್ಟಿ ತುಂಬ ಫಲವಸ್ತು ನೀಡಲಾಯಿತು.ಡಾ.ಎಂ.ಕೆ.ಪ್ರಸಾದ್ ಅವರಷ್ಟೇ ಎತ್ತರದ ಅಭಿವಂದನಾ ಪತ್ರ, ಶ್ರೀಕೃಷ್ಣ ಮತ್ತು ರಾಧೆಯರ ಸ್ಮರಣಿಕೆ, ಭಾರೀ ಗಾತ್ರದ ಹೂವಿನ ಮಾಲೆಯನ್ನು ಗಣ್ಯರು ಹಾಕಿ ಗೌರವಿಸಿದರು.ಮಹಿಳೆಯರು ಮಲ್ಲಿಕಾ ಪ್ರಸಾದ್ ಅವರ ತಲೆಗೆ ಮಲ್ಲಿಗೆ ತೊಡಿಸಿ, ಕುಂಕುಮ ವಿತ್ತು ಗೌರವಿಸಿದರು. ಸನ್ಮಾನ ಪತ್ರವನ್ನು ಬಜರಂಗದಳದ ದಕ್ಷಿಣ ಪ್ರಾಂತದ ಮುರಳಿಕೃಷ್ಣ ಹಸಂತಡ್ಕ ಅವರು ವಾಚಿಸಿದರು.

ಸೋತಾಗಲೂ ಮನೆಗೆ ಬಂದು ಧೈರ್ಯ ತುಂಬಿದ ಏಕೈಕ ವ್ಯಕ್ತಿ:

2013ರಲ್ಲಿ ನಾನು ಚುನಾವಣೆಗೆ ನಿಂತ ವೇಳೆ ನನಗೆ ಧೈರ್ಯ ತುಂಬಿದವರು ಪ್ರಸಾದ್ ಭಂಡಾರಿಯವರು.ಚುನಾವಣೆಯ ಬಳಿಕ ಮತ ಎಣಿಕೆ ಆಗುವ ಮೊದಲ ದಿನ ನನ್ನ ಮನೆಗೆ ಡಾ.ಎಂ.ಕೆ.ಪ್ರಸಾದ್ ಮತ್ತು ಮಲ್ಲಿಕಾ ಪ್ರಸಾದ್ ಅವರು ಬಂದು ಮಾತನಾಡಿದರು.ನನ್ನಲ್ಲೂ ನನ್ನ ತಾಯಿಯಲ್ಲೂ ಮಾತನಾಡಿ ಸಂತೈಸಿ ಹೋದರು.ಆದರೆ ನನಗೆ ಆಗ ಚುನಾವಣೆಯಲ್ಲಿ ನಾನು ಸೋಲುತ್ತೇನೆಂದು ಅರ್ಥ ಆಗಿರಲಿಲ್ಲ.ಆದರೆ ನಾನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಪ್ರಸಾದ್ ಭಂಡಾರಿಯವರಿಗೆ ಗೊತ್ತಿತ್ತು.ಹಾಗಾಗಿ ಸೋಲುವ ವ್ಯಕ್ತಿ ಧೃತಿಗೆಡಬಾರದು ಎಂದು ದೈರ್ಯ ತುಂಬುವ ಹೃದಯ ಶ್ರೀಮಂತಿಕೆ ಪ್ರಸಾದ್ ಭಂಡಾರಿಯರದ್ದು. ಅದೇ ರೀತಿ ಮತ್ತೆ ನಾನು ಗೆಲ್ಲುವ ಸಂದರ್ಭದಲ್ಲಿ ಈಗ ನಿಮ್ಮ ತಾಯಿ ಇರಬೇಕಿತ್ತೆಂದು ಅವರು ಹೇಳಿದ್ದರು.‌

-ಸಂಜೀವ ಮಠಂದೂರು,ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here