ಭಾರಿ ಗಾಳಿ ಮಳೆ: ನೆಲ್ಯಾಡಿಯಲ್ಲಿ ವ್ಯಾಪಕ ಕೃಷಿ, ಮನೆಗಳಿಗೆ ಹಾನಿ

0

ನೆಲ್ಯಾಡಿ: ಜು.14ರಂದು ಮಧ್ಯಾಹ್ನದ ವೇಳೆಗೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ನೆಲ್ಯಾಡಿ ಭಾಗದಲ್ಲಿ ವ್ಯಾಪಕ ಕೃಷಿ ಹಾನಿಯಾಗಿದೆ. ಕೆಲವು ಕಡೆಗಳಲ್ಲಿ ಮನೆ, ಕೊಟ್ಟಿಗೆ ಮೇಲೆ ಮರಬಿದ್ದು ಹಾನಿಯಾಗಿದೆ. ಕೊಲ್ಯೊಟ್ಟು ಎಂಬಲ್ಲಿ ಮನೆಯೊಂದರ ಸಿಮೆಂಟ್ ಶೀಟ್ ಗಾಳಿಗೆ ಸಂಪೂರ್ಣ ಹಾರಿಹೋಗಿದ್ದು ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು, ಪಡ್ಪಗುಡ್ಡೆ ಭಾಗದಲ್ಲಿ ಕೃಷಿ ಹಾಗೂ ಮನೆಗಳಿಗೆ ಹಾನಿಯಾಗಿದೆ. ಕೊಲ್ಯೊಟ್ಟು ನಿವಾಸಿ ಶ್ರೀಮತಿ ಬೇಬಿ ಪೂಜಾರಿ ಎಂಬವರ ವಾಸದ ಮನೆಯ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಈ ವೇಳೆ ಮನೆಯಲ್ಲಿದ್ದ ಬೇಬಿ ಹಾಗೂ ನೆರೆ ಮನೆಯ ಸಾಂತಮ್ಮ ಎಂಬವರು ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಮಳೆಯ ನೀರು ಮನೆಯೊಳಗೆ ಸುರಿದು ಪಾತ್ರೆ, ಬಟ್ಟೆ ಹಾಗೂ ಇತರೇ ಸಾಮಾಗ್ರಿಗಳು ಒದ್ದೆಯಾಗಿವೆ. ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್‌ರವರ ನೇತೃತ್ವದಲ್ಲಿ ಮನೆಗೆ ಮತ್ತೆ ಸಿಮೆಂಟ್ ಹಾಕಲಾಗಿದೆ.

ಕೊಲ್ಯೊಟ್ಟು ನಿವಾಸಿ ಕೃಷ್ಣಪ್ಪ ನಾಯ್ಕ್ ಎಂಬವರ ಮನೆಯ ಹಂಚು, ಸಿಮೆಂಟ್ ಶೀಟ್‌ಗಳೂ ಗಾಳಿಗೆ ಹಾರಿ ಹೋಗಿವೆ. ಸಂಕಪ್ಪ ನಾಯ್ಕ್ ಎಂಬವರ ಮನೆಗೆ ಮರ ಬಿದ್ದು ಸಿಮೆಂಟ್, ಶೌಚಾಲಯಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಈ ಭಾಗದ ಹಲವು ಮನೆಗಳಿಗೆ ಗಾಳಿ ಮಳೆಯಿಂದ ಹಾನಿ ಸಂಭವಿಸಿದೆ.

ಪಡ್ಪಗುಡ್ಡೆಯಲ್ಲಿ ಧರೆಗುರುಳಿದ ಅಡಿಕೆ ಮರ:

ನೆಲ್ಯಾಡಿ ಗ್ರಾಮದ ಪಡ್ಪಗುಡ್ಡೆ ನಿವಾಸಿ ಜೋಸೆಫ್ ಡಿ.ಸೋಜ ಎಂಬವರ ಅಡಿಕೆ ತೋಟದಲ್ಲಿ ಸುಮಾರು 150ಕ್ಕೂ ಹೆಚ್ಚು ಫಲಭರಿತ ಅಡಿಕೆ ಮರಗಳು ಗಾಳಿ ಮಳೆಗೆ ಮುರಿದು ಬಿದ್ದಿವೆ. ಸ್ಥಳಕ್ಕೆ ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಇಕ್ಬಾಲ್, ರೇಷ್ಮಾ ಶಶಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ನೆಲ್ಯಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ಗಾಳಿ ಮಳೆಗೆ ಅಡಿಕೆ, ತೆಂಗು, ರಬ್ಬರ್ ಮರಗಳು ಮುರಿದು ಬಿದ್ದಿದ್ದು ವ್ಯಾಪಕ ನಷ್ಟ ಸಂಭವಿಸಿದೆ. ನೆಲ್ಯಾಡಿ ಗ್ರಾ.ಪಂ.ಪಿಡಿಒ ಮಂಜುಳ ಎನ್., ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here