ಏಕ ಬಳಕೆ ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆಗೆ ಸರಕಾರ ಕ್ರಮಕೈಗೊಳ್ಳಲಿ-ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

0

ಪುತ್ತೂರು; ಏಕ ಬಳಕೆಯ ಪ್ಲಾಸ್ಟಿಕ್‌ಗಳ ಕಡಿವಾಣ ಹಾಕಿರುವ ಸರಕಾರ ಇದಕ್ಕೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.

ಸಭೆಯು ಜು.೧೪ ಅಧ್ಯಕ್ಷೆ ಜಯ ಏಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಏಕ ಬಳಕೆಯ ಪ್ಲಾಸ್ಟಿಕ್ ನಿಯಂತ್ರಣದ ಕುರಿತ ಸರಕಾರದ ಸುತ್ತೋಲೆಯನ್ನು ಪಿಡಿಓ ಚಿತ್ರಾವತಿ ಸಭೆಯ ಮುಂದಿಟ್ಟರು. ಈ ಕುರಿತು ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಕೇಂದ್ರಗಳು ಮೊದಲಾದ ಕಡೆಗಳಲ್ಲಿ ಬಿತ್ತಿ ಪತ್ರ ಅಂಟಿಸುವುದು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು. ಸದಸ್ಯ ಶೀನಪ್ಪ ಕುಲಾಲ್ ಮಾತನಾಡಿ, ಪ್ಲಾಸ್ಟಿಕ್ ಪ್ರಾರಂಭವಾಗಿ ಎಷ್ಟೋ ವರ್ಷಗಳು ಕಳೆದಿದೆ. ಇದನ್ನು ಸರಕಾರ ನಿರ್ಬಂಧ ಮಾಡಿ ಜನರಿಗೆ ತೊಂದರೆ ಕೊಡಬಾರದು. ಏಕ ಬಳಕೆಯ ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆಗೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು ಈ ಕುರಿತು ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯಿಸಲಾಗಿದೆ.

ನಿಗದಿಪಡಿಸಿದ ಸ್ಥಳದಲ್ಲಿಯೇ ಸ್ಮಶಾನ ನಿರ್ಮಾಣವಾಗಬೇಕು:
ಪಂಚಾಯತ್ ವ್ಯಾಪ್ತಿಯ ಅಡೆಂಚಿಲಡ್ಕದಲ್ಲಿ ಹಿಂದು ರುದ್ರಭೂಮಿ ಆಕ್ಷೇಪಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಗ್ರಾಮದ ಜನರಿಗೆ ಅತೀ ಅಗತ್ಯವಾಗಿದ್ದ ರುದ್ರಭೂಮಿ ಈಗಾಗಲೇ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿಯೇ ನಿರ್ಮಾಣವಾಗಬೇಕು. ಇದಕ್ಕೆ ಹಿಂದಿನ ತಾಲೂಕು ಆರೋಗ್ಯಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸದೆ ವರದಿ ನೀಡಿದ್ದಾರೆ. ಪರಿಶೀಲನೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಅಲ್ಲಿ ಸರಕಾರದ ಮಾರ್ಗದರ್ಶನದಂತೆ ರುದ್ರಭೂಮಿ ನಿರ್ಮಾಣವಾಗುತ್ತಿದೆ. ಆಕ್ಷೇಪಣೆ ಸಲ್ಲಿಸಿರುವ ವ್ಯಕ್ತಿಯ ಮನೆಯು ಅಲ್ಲಿಂದ ಸುಮಾರು ೫೦೦ ಮೀಟರ್ ದೂರದಲ್ಲಿದೆ. ಅವರಿಗೆ ಇದರಿಂದ ಯಾವುದೇ ತೊಂದರೆಗಳಿಲ್ಲ. ಹೀಗಾಗಿ ಅಲ್ಲಿಯೇ ರುದ್ರ ಭೂಮಿಯನ್ನು ಮುಂದುವರಿಸಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಸಿಂಗಲ್ ಲೇ.ಔಟ್‌ಗೆ ಅನುಮತಿಯಿಲ್ಲ:
ಅನಿಲೆಕೋಡಿಯಲ್ಲಿ ಅವೈಜ್ಞಾನಿಕವಾಗಿ ಬಡಾವಣೆ ನಿರ್ಮಾಣವಾಗುತ್ತಿದೆ. ನಿಯಮ ಮೀರಿ ಅಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ ನಡೆಯುವ ಕಾಮಗಾರಿಯಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಅಲ್ಲಿ ನಡೆಯುವ ಕಾಮಗಾರಿ ಸ್ಥಗಿತಗೊಳಿಸಬೇಕು. ಏಕ ವಿನ್ಯಾಸಕ್ಕೆ ಅನುಮತಿ ನೀಡಬಾರದು ಎಂದು ಸದಸ್ಯರ ಶೀನಪ್ಪ ಕುಲಾಲ್ ಆಗ್ರಹಿಸಿದರು.

ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಕಾಲಾವಕಾಶ ನೀಡಬೇಕು:
ಸದಸ್ಯ ತಿಮ್ಮಪ್ಪ ಪೂಜಾರಿ ಮಾತನಾಡಿ, ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿ ಒಂದು ವರ್ಷದಲ್ಲಿ ಮನೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ರದ್ದುಗೊಳ್ಳುತ್ತದೆ. ಒಂದು ಬಾರಿ ಮನೆ ಮಂಜೂರಾದರೆ ಮತ್ತೆ ೧೫ ವರ್ಷ ಮನೆ ಪಡೆದುಕೊಳ್ಳಲು ಅವಕಾಶವಿರುವುದಿಲ್ಲ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದ್ದು ಈ ಕುರಿತು ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯಿಸಲಾಗಿದೆ.

ಅಸಮರ್ಪಕ ಕಾಮಗಾರಿ:
ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡ ಕೆಆರ್‌ಡಿಸಿಎಲ್ ರಸ್ತೆ ಕಾಂಕ್ರಿಟೀಕರಣವನ್ನ ನಡೆಸಿದ್ದು, ಅವರು ಸಮರ್ಪಕವಾಗಿ ನಿರ್ವಹಿಸಿಲ್ಲ. ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಹೀಗಾಗಿ ಅವರಿಗೆ ಕಾಮಗಾರಿಯ ಬಿಲ್ ಪಾವತಿಸಬಾರುದು ಎಂದು ಸದಸ್ಯರು ಒತ್ತಾಯಿಸಿದರು.

ಪಡಿತರ ಅಕ್ಕಿ ದುರ್ಬಳಕೆ ತಡೆಯಲು ಖಾತೆಗೆ ಹಣ ಜಮೆಯಾಗಲಿ:
ಸರಕಾರ ಉಚಿತವಾಗಿ ನೀಡುವ ಅಕ್ಕಿಯನ್ನು ರೂ.೧೦ಕ್ಕೆ ಮಾರಾಟ ಮಾಡುತ್ತಿದ್ದಾರೆ. ನಂತರ ಅದು ಮಧ್ಯವರ್ತಿಗಳ ಮುಖಾಂತರ ದುಪ್ಪಟ್ಟುಬೆಳೆಗೆ ಮಾರಾಟವಾಗುತ್ತಿದೆ. ಕೆಲವು ಮನೆಗಳಲ್ಲಿ ದನ, ನಾಯಿಗಳಿಗೆ ಬಳಕೆಯಾಗುತ್ತಿದೆ. ಹೀಗಾಗಿ ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿಯ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಬೇಕು. ಶಾಲಾ ಮಕ್ಕಳಿಗೆ ಪುಡಿಯನ್ನು ಹಾಲನ್ನಾಗಿ ನೀಡುವ ಬದಲು ಹೆಚ್ಚು ಪೌಷ್ಠಿಕಾಂಶವುಳ್ಳ ನೈಜ ಹಾಲನ್ನು ನೀಡಬೇಕು ಎಂದು ಸದಸ್ಯ ಶ್ರೀನಿವಾಸ ಪೆರ್‍ವೋಡಿ ಆಗ್ರಹಿಸಿದರು.

ತೆರಿಗೆ ಪರಿಷ್ಕರಣೆ:
ತೆರಿಗೆ ಪರಿಷ್ಕರಣೆಯ ಕುರಿತ ಸುತ್ತೋಲೆಯನ್ನು ಸಭೆಯಲ್ಲಿ ಮಂಡಿಸಿದ ಪಿಡಿಓ ಚಿತ್ರಾವತಿಯವರು, ಪ್ರತಿ ಎರಡು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿರುವ ಅನಧಿಕೃತ, ಅಕ್ರಮ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಬೇಕು ಎಂದು ಸಭೆಯಲ್ಲಿ ಆಗ್ರಹವ್ಯಕ್ತವಾಯಿತು.

ಆ.8 ಗ್ರಾಮಸಭೆ
ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ.೮ರಂದು ಪಡ್ನೂರು ಹಿ.ಪ್ರಾ ಶಾಲೆಯಲ್ಲಿ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸದಸ್ಯರಾದ ರಾಘವೇಂದ್ರ, ಗಿರಿಧರ ಪಂಜಿಗುಡ್ಡೆ, ಸುಪ್ರೀತಾ, ವಿಮಲ, ಸ್ಮಿತಾ, ಗಣೇಶ್ ಹೆಗ್ಡೆ ಹಾಗೂ ಹರಿಣಾಕ್ಷಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿದರು. ಲೆಕ್ಕಸಹಾಯಕಿ ಜಯಂತಿ ವಂದಿಸಿದರು.

LEAVE A REPLY

Please enter your comment!
Please enter your name here