ದ.ಕ.,ಉಡುಪಿಗೆ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲಕ್ಕಿ ವಿತರಣೆಗೆ ಕ್ರಮ-ಸಚಿವ ಕೋಟ ಸಭೆ

0

ಬೆಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲಕ್ಕಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಜಿಲ್ಲೆಗಳ ಜನರಿಗೆ ಕುಚ್ಚಿಗೆ ಅಕ್ಕಿ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು, ವಿಧಾನಸೌಧದಲ್ಲಿ ಈ ಕುರಿತು ಸಭೆ ನಡೆಸಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯದ ನಿಯೋಗ ಈಗಾಗಲೇ ಕೇರಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಇದಕ್ಕಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತೀ ತಿಂಗಳು 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಆಗುತ್ತದೆ. ವರ್ಷಕ್ಕೆ ಸುಮಾರು 18 ಲಕ್ಷ ಕ್ವಿಂಟಾಲ್ ಭತ್ತದ ಅಗತ್ಯ ಬೀಳುತ್ತದೆ. ಜಯ, ಜ್ಯೋತಿ, ಎಂಎಫ್ ೪ರಂತಹ ಭತ್ತದ ತಳಿಗಳಿಂದ ಮಾತ್ರ ಕುಚಲಕ್ಕಿ ಮಾಡಲು ಸಾಧ್ಯವಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಎರಡೂವರೆ ಲಕ್ಷ ಕ್ವಿಂಟಾಲ್ ಭತ್ತ ಮಾತ್ರ ಉತ್ಪಾದನೆಯಾಗುತ್ತಿದೆ.ಇನ್ನುಳಿದದ್ದನ್ನು ಮೈಸೂರು, ಮಂಡ್ಯ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಿಂದ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು. ಆದರೂ ಇದು ಸಾಲದು.ಹೆಚ್ಚುವರಿ ಅಗತ್ಯವಿರುವ ಭತ್ತವನ್ನು ಕೇರಳ ಮತ್ತು ತೆಲಂಗಾಣ ರಾಜ್ಯಗಳಿಂದ ಪಡೆಯಲು ಯೋಜಿಸಲಾಗಿದೆ.ಈ ಸಂಬಂಧ ಈ ವಾರಾಂತ್ಯದಲ್ಲಿ ಮತ್ತೊಂದು ಅಧ್ಯಯನ ತಂಡ ತೆಲಂಗಾಣಕ್ಕೆ ಭೇಟಿ ನೀಡಲಿದೆ.

ಅಧ್ಯಯನ ತಂಡಗಳ ವರದಿ ಆಧರಿಸಿ ಕರಾವಳಿ ಜಿಲ್ಲೆಗಳ ಶಾಸಕರು ಮತ್ತು ಸಂಸದರ ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿಯಾಗಿ ಬರುವ ವರ್ಷದಿಂದಲೇ ಕುಚ್ಚಲಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಹೇಳಿದ್ದಾರೆ.

LEAVE A REPLY

Please enter your comment!
Please enter your name here