ಹಿರಿಯ ಕಾಂಗ್ರೆಸ್ಸಿಗ ಎ.ಬಿ ವೇಗಸ್ ನಿಧನ

0

ಪುತ್ತೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳು, ಪ್ರಸ್ತುತ ಮಂಗಳೂರಿನ ಬೆಂದೂರಿನಲ್ಲಿ ವಾಸ್ತವ್ಯವಿದ್ದ ಎ.ಬಿ ವೇಗಸ್(88ವ.)ರವರು ಅಸೌಖ್ಯದಿಂದ ಜು.16 ರಂದು ನಿಧನ ಹೊಂದಿದ್ದಾರೆ.

ಮೃತ ಎ.ಬಿ ವೇಗಸ್ ರವರ ನಿಜ ನಾಮಧೇಯ ಆಂಟನಿ ಬ್ಯಾಪ್ಟಿಸ್ಟ್ ವೇಗಸ್ ಆಗಿದ್ದು, ಮಂಗಳೂರಿನಲ್ಲಿ ನೆಲೆಸುವ ಮುನ್ನ ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯ ಹೊಂದಿದ್ದರು ಮಾತ್ರವಲ್ಲದೆ ಕೂರ್ನಡ್ಕದಲ್ಲಿ ಕರ್ನಾಟಕ ಕ್ಯಾಶ್ಯೂ ಇಂಡಸ್ಟ್ರೀಯನ್ನು ಮುನ್ನೆಡೆಸಿದ್ದರು. ಪುತ್ತೂರಿನ ಕಾಂಗ್ರೆಸ್ ಪಕ್ಷದಲ್ಲಿ ಕೋಶಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರು ಪಕ್ಷದ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಕಾಂಗ್ರೆಸ್ ಪಕ್ಷದ ಏಳಿಗೆಗೆ ದುಡಿದಿದ್ದರು. ಅಲ್ಲದೆ ಪ್ರಸ್ತುತ ಕಾರ್ಯಾಚರಿಸುತ್ತಿರುವ ಕಾಂಗ್ರೆಸ್ ಪಕ್ಷದ ಕಛೇರಿಯು ಎ.ಬಿ ವೇಗಸ್ ರವರು ಕೋಶಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಉದ್ಘಾಟನೆಗೊಂಡಿತ್ತು.

ಶಿಸ್ತು ಹಾಗೂ ನೇರ ನಡೆ-ನುಡಿಯ ವ್ಯಕ್ತಿತ್ವವುಳ್ಳ ಎ.ಬಿ ವೇಗಸ್ ರವರು ಜನಪರ ಕೆಲಸದ ಸಂದರ್ಭದಲ್ಲಿ ಆಯಾ ಇಲಾಖೆಗಳಿಗೆ ತನ್ನ ನೇರ ಖಡಕ್ ಮಾತಿನಿಂದಲೇ ಬಿಸಿ ಮುಟ್ಟಿಸುತ್ತಿದ್ದರು. ಪುತ್ತೂರಿನಲ್ಲಿ ಈ ಹಿಂದೆ ನಡೆದ ಡಾಮಾರೀಕರಣ ಸಂದರ್ಭದಲ್ಲಿ ಕಳಪೆ ಡಾಮಾರೀಕರಣದ ವಿರುದ್ಧ ಹೋರಾಟಕ್ಕೆ ಧುಮುಕಿದ್ದರು ಕೂಡ. ಮಾತ್ರವಲ್ಲದೆ ಕಾಂಗ್ರೆಸ್ ಕಂಡಂತಹ ನಿಷ್ಠಾವಂತ ರಾಜಕಾರಣಿಗಳಲ್ಲಿ ಎ.ಬಿ ವೇಗಸ್ ಓರ್ವರಾಗಿದ್ದಾರೆ. ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಆರ್ಥಿಕ ಸಮಿತಿಯಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದ ಎ.ಬಿ ವೇಗಸ್ ರವರು ಪತ್ನಿ ಆಗ್ನೇಸ್, ಪುತ್ರರಾದ ಓಸ್ಕರ್, ಓಸ್ವಾಲ್ಡ್, ಪುತ್ರಿಯರಾದ ಓಲ್ಗಾ, ಒಲಿಂಡಾ, ಒಲಿವಿಯಾ, ಅಳಿಯಂದಿರಾದ ಪ್ರವೀಣ್, ಚಾಲ್ಸ್೯, ಸೊಸೆಯಂದಿರಾದ ಲೀಡಿಯಾ, ಅನಿತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here