ಕೋಡಿಂಬಾಡಿಯ ಡಿಜಿಟಲ್ ಗ್ರಂಥಾಲಯ, ಮಾಹಿತಿ ಕೇಂದ್ರದಲ್ಲಿ ಅವ್ಯವಸ್ಥೆ

0

  • ಇಕ್ಕಟ್ಟಾದ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲ…
  • ಮಳೆಯ ನೀರು ಬಿದ್ದು ಪುಸ್ತಕಗಳು ಒದ್ದೆ ಒದ್ದೆ

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯ ಬಳಿ ಕಾರ್ಯ ನಿರ್ವಹಿಸುತ್ತಿರುವ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅವ್ಯವಸ್ಥೆಯ ಕೇಂದ್ರ ಬಿಂದುವಾಗಿದೆ. ಮಳೆಯ ನೀರು ಗ್ರಂಥಾಲಯದ ಒಳಗೇ ಬೀಳುತ್ತಿರುವುದರಿಂದ ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕಗಳು ಒದ್ದೆಯಾಗುತ್ತಿದೆ.‌

 


ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧೀನದಲ್ಲಿ ಕೋಡಿಂಬಾಡಿ ಗ್ರಾಮ‌ ಪಂಚಾಯತಿನ‌ ಹಳೆಯ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ‌ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಜ್ಞಾನಾರ್ಜನೆಗಾಗಿ ಮತ್ತು ಅಕ್ಷರದ ಕುರಿತು ಆಸಕ್ತಿ ಮೂಡಿಸುವುದಕ್ಕಾಗಿ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ. ಹಲವಾರು‌ ಮಂದಿ ಈ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಪುಸ್ತಕ ಮತ್ತು ಪತ್ರಿಕೆ ಓದಲು ಇಲ್ಲಿಗೆ ಸಾರ್ವಜನಿಕರು ನಿತ್ಯ ಭೇಟಿ‌ ನೀಡುತ್ತಿದ್ದಾರೆ. ಗ್ರಂಥಪಾಲಕರಿಂದ ಉತ್ತಮ ಸೇವೆ ದೊರಕುತ್ತಿದೆ ಎಂದು ಓದುಗರು ಶ್ಲಾಘಿಸುತ್ತಾರೆ. ಆದರೆ, ಇಕ್ಕಟ್ಟಾದ ಸ್ಥಳದಲ್ಲಿ ಈ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ಸರಿಯಾಗಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲಿಲ್ಲ. ಹೆಸರಿಗೆ ಮಾತ್ರ ಡಿಜಿಟಲ್ ಗ್ರಂಥಾಲಯ ಎಂದು‌ ಕರೆಯಲ್ಪಡುತ್ತಿದೆ. ವ್ಯವಸ್ಥೆಗಳೆಲ್ಲಾ ಓಬಿರಾಯನ‌ ಕಾಲದ್ದೇ ಇದೆ. ಗ್ರಂಥಾಲಯದ ಜತೆಗೆ ಗ್ರಾಮದ ಜನರಿಗೆ ಮಾಹಿತಿ ನೀಡುವ ಕೇಂದ್ರವಾಗಿಯೂ ಈ ಕೇಂದ್ರ ಸೇವೆ ನೀಡುತ್ತಿದೆ. ಆದರೆ, ಇಂಟರ್ನೆಟ್ ಸೌಲಭ್ಯ ಇಲ್ಲದಂತಾಗಿದೆ.‌ ಡಿಜಿಟಲ್‌ ಲೈಬ್ರರಿಗೆ ಒಂದು‌ ಲ್ಯಾಪ್ ಟಾಪ್‌ ಕಂಪ್ಯೂಟರ್ ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ.‌ ಈಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ‌ ನೀರು ಗ್ರಂಥಾಲಯದ ಕೊಠಡಿಯ ಒಳಗೆ ಬೀಳುತ್ತಿದೆ. ಇದರಿಂದಾಗಿ ಪುಸ್ತಕ ಮತ್ತು ಪುಸ್ತಕ ಓದಲು ಬರುವವರು ಒದ್ದೆ ಆಗುವಂತಾಗಿದೆ. ಸಂಬಂಧಪಟ್ಟವರು‌ ಇತ್ತ ಗಮನ‌ ಹರಿಸಬೇಕು ಮತ್ತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ವಿಸ್ತಾರವಾಗಿರುವ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು‌ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here