ಪುತ್ತೂರಿನಲ್ಲಿ ನವೀಕೃತಗೊಂಡ ಯೂನಿಯನ್ ಬ್ಯಾಂಕ್ ಮುಖ್ಯ ಶಾಖೆ, ಎಟಿಎಂ ಉದ್ಘಾಟನೆ

0

  • ಸರಕಾರ ಘೋಷಿಸಿದ ಸಾಲ ಯೋಜನೆಗಳಿಗೆ ಬ್ಯಾಂಕ್ ಸಹಕಾರ ಅಗತ್ಯ- ಎ.ಸಿ. ಗಿರೀಶ್‌ನಂದನ್
  • ಗ್ರಾಹಕರಿಗೆ ತೊಂದರೆ ಮುಕ್ತ ಬ್ಯಾಂಕ್ – ರವೀಂದ್ರ ಬಾಬು
  • ಗ್ರಾಹಕ ಸ್ನೇಹಿಯಾಗಿ ಕೆಲಸ ನಿರ್ವಹಿಸಲಿದೆ- ಮಹೇಶ್

 

ಪುತ್ತೂರು: ಭಾರತದಲ್ಲಿನ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ   ಯೂನಿಯನ್ ಬ್ಯಾಂಕ್ ನೊಂದಿಗೆ ಏಪ್ರಿಲ್ 2020 ರಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನಗೊಂಡ ಬಳಿಕ ಇದೀಗ ಪುತ್ತೂರಿನ ವೆಂಕಟ್ರಮಣ ಟವರ್‌ನಲ್ಲಿ ಯೂನಿಯನ್ ಬ್ಯಾಂಕ್ ಮುಖ್ಯ ಶಾಖೆ ನವೀಕೃತಗೊಂಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಜು.16ರಂದು ನಡೆಯಿತು. ಸಹಾಯಕ ಕಮೀಷನರ್ ಡಾ. ಗಿರೀಶ್‌ನಂದನ್ ಎಂ ಅವರು ನವೀಕೃತ ಶಾಖೆ ಮತ್ತು ಎಟಿಎಂ ಅನ್ನು ಉದ್ಘಾಟಿಸಿದರು.


ಸರಕಾರ ಘೋಷಿಸಿದ ಸಾಲ ಯೋಜನೆಗಳಿಗೆ ಬ್ಯಾಂಕ್ ಸಹಕಾರ ಅಗತ್ಯ:
ಯೂನಿಯನ್ ಬ್ಯಾಂಕ್ ಮತ್ತು ಎಟಿಎಂ ಉದ್ಘಾಟಿಸಿದ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಎಂ ಅವರು ಸಭೆಯಲ್ಲಿ ಮಾತನಾಡಿ ಎರಡು ವರ್ಷಗಳ ಕೋವಿಡ್ ಸಂದರ್ಭದಲ್ಲಿ ಬ್ಯಾಂಕ್‌ಗ ಪಾತ್ರ ಬಹಳ ಪ್ರಮುಖವಾಗಿತ್ತು. ಎಲ್ಲಾ ಬ್ಯಾಂಕ್‌ಗಳು ಚೆನ್ನಾಗಿ ಕೆಲಸ ನಿರ್ವಹಿಸಿ ಜನರ ಸಂಕಷ್ಟವನ್ನು ದೂರ ಮಾಡುವಲ್ಲಿ ಸಹಕಾರ ನೀಡಿದ್ದಾರೆ. ಇದೀಗ ಕೋವಿಡ್ ಬಳಿಕ ವ್ಯವಹಾರಗಳಿಗೆ ಸಾಲ ನೀಡುವ ಪ್ರಕ್ರಿಯೆ ಬ್ಯಾಂಕ್‌ಗಳು ಮಾಡುತ್ತಿವೆ. ಬಹಳಷ್ಟು ಸರಕಾರದ ಸಾಲ ಯೋಜನೆಗಳು ಘೋಷಣೆಯಾಗುತ್ತವೆ. ಇದನ್ನು ಅನುಷ್ಠಾನ ಮಾಡುವಲ್ಲಿ ಬ್ಯಾಂಕ್‌ಗಳ ಸಹಕಾರ ಬೇಕು. ಮುಂದಿನ ದಿನ ಸರಕಾರದ ಯೋಜನೆ ಕುರಿತ ಸಾಲ ನೀಡುವ ಪ್ರಕ್ರಿಯೆಗೆ ಬ್ಯಾಂಕ್‌ಗಳ ಮುಖ್ಯಸ್ಥರನ್ನು ಕರೆಸಿ ಮಾಹಿತಿ ನೀಡಲಾಗುವುದು ಎಂದರು.


ಗ್ರಾಹಕರಿಗೆ ತೊಂದರೆ ಮುಕ್ತ ಬ್ಯಾಂಕ್:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಯೂನಿಯನ್ ಬ್ಯಾಂಕ್‌ನ ಮಹಾವಲಯದ ಮುಖ್ಯಪ್ರಬಂಧಕ ರವೀಂದ್ರ ಬಾಬು ಅವರು ಮಾತನಾಡಿ ಸರಕಾರಿ ಸ್ವಾಮ್ಯದ ನಮ್ಮ ಬ್ಯಾಂಕ್ ಭಾರತದಾದ್ಯಂತ ೯೫೦೦ ಶಾಖೆಗಳನ್ನು ಹೊಂದಿದೆ. ಅದೇ ರೀತಿ ಮಂಗಳೂರು ವಲಯಕ್ಕೆ ಸಂಬಂಧಿಸಿ ೮ ಪ್ರಾದೇಶಿಕ ವಲಯ ಹೊಂದಿದ್ದು ೫೨೦ ಶಾಖೆಗಳನ್ನು ಹೊಂದಿದ್ದು, ೭೧ ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ಪುತ್ತೂರು ಪ್ರಧಾನ ಶಾಖೆ ನವೀಕರಣಗೊಂಡಿದ್ದು, ೨೫೦ ಕೋಟಿ ವ್ಯವಹಾರ ನಡೆಸುತ್ತಿದೆ. ತನ್ನ ಗ್ರಾಹಕರಿಗೆ ತೊಂದರೆ-ಮುಕ್ತ ಬ್ಯಾಂಕಿಂಗ್ ಅನುಭವಕ್ಕಾಗಿ ಅನೇಕ ಸೇವೆಗಳನ್ನು ನೀಡುವ ಮೂಲಕ ಸಾಮಾಜಿಕ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದೆ. ಸಾಮಾನ್ಯ ವಲಯದವರಿಗೂ ಈ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ ಎಂದರು. ಗ್ರಾಹಕರೆಲ್ಲ ನಮ್ಮ ಬ್ಯಾಂಕ್‌ನ ಆರ್ಥಿಕ ಪಾಲುದಾರರಾಗಿ ಸಹಕಾರ ನೀಡಿ. ಬ್ಯಾಂಕ್‌ನ ಸೇವೆಯಿಂದ ಸಮಸ್ಯೆ ಅಥವಾ ತೊಂದರೆ ಆದಲ್ಲಿ ನೇರ ನನಗೆ ಮಾಹಿತಿ ನೀಡಿ. ನನ್ನ ಮೊಬೈಲ್ ನಂಬರ್ ಎಲ್ಲಾ ಶಾಖೆಯ ಫಲಕಗಳಲ್ಲೂ ಇದೆ ಎಂದರು.

ಗ್ರಾಹಕ ಸ್ನೇಹಿಯಾಗಿ ಕೆಲಸ ನಿರ್ವಹಿಸಲಿದೆ:
ಯೂನಿಯನ್ ಬ್ಯಾಂಕ್ ಮಂಗಳೂರು ಮುಖ್ಯ ಕಚೇರಿ ಪ್ರಬಂಧಕ ಮಹೇಶ್ ಅವರು ಮಾತನಾಡಿ ಪುತ್ತೂರು ಶಾಖೆಗೆ ೫೦ ವರ್ಷ ತುಂಬುವ ಸಂದರ್ಭದಲ್ಲಿ ಬ್ಯಾಂಕ್ ನವೀಕರಣಗೊಂಡು ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡುವಲ್ಲಿ ಮುಂದೆ ಬಂದಿದೆ. ಗ್ರಾಹಕರಿಗೆ ಮನೆಗೆ ಬಂದಂತಹ ಅನುಭವ ನಮ್ಮ ಶಾಖೆಯಲ್ಲಿ ಇದೆ ಎಂಬ ಮಾತನ್ನು ಗ್ರಾಹಕರಿಂದ ಕೇಳಲ್ಪಟ್ಟೆ. ಅದೇ ರೀತಿ ಮನೆಗೆ ಬಂದ ಅತಿಥಿಗಳಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಉತ್ತಮ ಸೇವೆ ದೊರಕುತ್ತಿದೆ. ಇಂತಹ ಉತ್ತಮ ಸೇವೆಯನ್ನು ಗುರುತಿಸಿ ಅತ್ಯುತ್ತಮ ಬ್ಯಾಂಕ್ ಎಂದು ಪ್ರಧಾನಮಂತ್ರಿಯವರಿಂದ ಶಹಭಾಶ್‌ಗಿರಿ ಸಿಕ್ಕಿದೆ. ಬ್ಯಾಂಕ್ ಮೂಲಕ ಮುದ್ರಸಾಲ, ಸಾಮಾಜಿಕ, ಫಸಲ್ ಬಿಮಾ ಯೋಜನೆ, ಸುರಕ್ಷಾ ಯೋಜನಗಳ ಸಾಲ ನೀಡುವುದಲ್ಲದೆ ಮನೆ ಮನೆಗೆ ಹೋಗಿ ಸೌಲಭ್ಯ ಕೊಡುವ ಪರಿಪಾಟ ಹೊಂದಿದೆ. ಈ ಭಾರಿ ಮೂರು ಹೊಸ ಯೋಜನೆ ಬ್ಯಾಂಕ್ ಮೂಲಕ ನೀಡಲಾಗಿದೆ. ಅದರಲ್ಲಿ ಮಹಿಳೆಯರಿಗೆ ರೂ. ೫೦ಲಕ್ಷದ ತನಕ ವೈಯುಕ್ತಿಕ ಸಾಲ, ಸರಕಾರದ ಗೈಡ್ ಲೈನ್ ಪ್ರಕಾರ ರೂ. ೭ ಲಕ್ಷದ ಸಾಲ ನೀಡಲು ಅವಕಾಶವಿದ್ದರೂ ಮೆಡಿಕಲ್ ಶಿಕ್ಷಣಕ್ಕೆ ರೂ. ೪೦ಲಕ್ಷದ ತನಕ ಸಾಲ ಯೋಜನೆ ಮೂಲಕ ಬ್ಯಾಂಕ್ ಒಂದು ಹೆಜ್ಜೆ ಮುಂದಿಟ್ಟಿದೆ. ವಿದೇಶ ಶಿಕ್ಷಣದಲ್ಲೂ ರೂ. ೫೦ಲಕ್ಷ ಸಾಲ ಯೋಜನೆ, ಮನೆ ಸಾಲ ನೀಡುವ ಮೂಲಕ ಗ್ರಾಹಕ ಸ್ನೇಹಿ ಬ್ಯಾಂಕ್ ಅಗಿ ಮೂಡಿ ಬಂದಿದೆ ಎಂದರು. ಪುತ್ತೂರಿನಲ್ಲಿ ೪ ಶಾಖೆಗಳಿದ್ದು, ಎಲ್ಲಾ ಶಾಖೆಗಳಲ್ಲೂ ಸಿಬ್ಬಂದಿಳಿಂದ ಉತ್ತಮ ಸೇವೆ ಸಿಗಲಿದೆ ಎಂದರು.

ಸನ್ಮಾನ:
ಬ್ಯಾಂಕ್‌ನ ಹಿರಿಯ ಗ್ರಾಹಕರಾಗಿರುವ ಕೆ ಆರ್ ಶೆಣೈ, ಡಾ. ಗೌರಿ ಪೈ, ರಾಧಾಕೃಷ್ಣ ನಾಕ್, ರಾಜಗೋಪಾಲ್ ಸಗ್ರಿತ್ತಾಯ, ಡಾ.ಜೆ.ಸಿ ಅಡಿಗ ಅವರನ್ನು ಬ್ಯಾಂಕ್ ಮೂಲಕ ಸನ್ಮಾನಿಸಲಾಯಿತು. ಗ್ರಾಹಕರ ಪೈಕಿ ಕೆ ಆರ್ ಶೆಣೈ, ಡಾ.ಜೆ ಸಿ ಅಡಿಗ, ವಾಮನ್ ಪೈ, ಯಾಕೂಬ್ ಮುಲಾರ್, ರಾಧಾಕೃಷ್ಣ ನಾಕ್ ಅನಿಸಿಕೆ ವ್ಯಕ್ತಪಡಿಸಿದರಲ್ಲದೆ ಬ್ಯಾಂಕ್ ಸೇವೆ ಕುರಿತು ಸಲಹೆ ನೀಡಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಇನ್ನೂ ಹೆಚ್ಚಿನ ಕಾರ್ಯ ಬ್ಯಾಂಕ್ ಮೂಲಕ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು. ಬೊಳುವಾರು ಶಾಖಾ ಪ್ರಬಂಧಕ ಬಾವೇಶ್ ಅತಿಥಿಗಳನ್ನು ಗೌರವಿಸಿದರು. ಪುತ್ತೂರು ಶಾಖೆಯ ಪ್ರಬಂಧಕ ಸುರೇಶ್ ಸ್ವಾಗತಿಸಿದರು. ಉಪ್ಪಿನಂಗಡಿ ಶಾಖೆಯ ನಾಗರಾಜ್ ವಂದಿಸಿದರು. ಉಮಾ ಕಾರ್ಯಕ್ರಮ ನಿರೂಪಿಸಿದರು. ಸಂತ ಪಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ ಅಂಟಿನಿ ಪ್ರಕಾಶ್ ಮೊಂತೆರೊ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಆರ್‌ಹೆಚ್‌ಸೆಂಟರ್‌ನ ಮಾಲಕ ಗೋಪಾಲ್ ಭಟ್, ಸ್ನೇಹಾಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್, ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರ ಪುತ್ರಿ ಅಶ್ವಿನಿ, ಸುರೇಂದ್ರ ಕಿಣಿ, ಸಚ್ಚಿದಾನಂದ, ರಮಾನಂದ ನಾಯಕ್ ಸೇರಿದಂತೆ ಹಲವಾರು ಮಂದಿ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಂಧ್ರ ಮತ್ತು ಕಾರ್ಪೋರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಂಡಾಗ ಕೋವಿಡ್ ಸಮಯ. ಆಗ ಬ್ಯಾಂಕ್ ಸೇವೆಯಲ್ಲಿ ಅನಾನುಕೂಲತೆ ಆಗಿರುವುದು ನಿಜ. ಈಗ ಎಲ್ಲವೂ ಸರಿಯಾಗಿದೆ. ಬ್ಯಾಂಕ್ ಸೇವೆಯಲ್ಲಿ ಸಣ್ಣ ಸಮಸ್ಯೆ ಇದ್ದರೂ ನನಗೆ ಮೆಸೆಜ್ ಹಾಕಿ. ನಿಮ್ಮ ಕುಂದುಕೊರತೆ ಸರಿಪಡಿಸಲು ಪ್ರಯತ್ನ ಮಾಡುತ್ತೇವೆ.-ಮಹೇಶ್, ಯೂನಿಯನ್ ಬ್ಯಾಂಕ್ ಮಂಗಳೂರು ಮುಖ್ಯ ಕಚೇರಿ ಪ್ರಬಂಧಕ

LEAVE A REPLY

Please enter your comment!
Please enter your name here