ಸಾಕುಪ್ರಾಣಿಗಳನ್ನು ಬೀದಿಗೆ ಬಿಟ್ಟರೆ ಕಟ್ಟಿ ಹಾಕಿ ದಂಡ-ಬಿಡಿಸಿಕೊಳ್ಳದಿದ್ದರೆ ಸಾರ್ವಜನಿಕ ಏಲಂ

0

  • ಬೀದಿ ಸ್ವಚ್ಛತೆಗೆ ಖಡಕ್ ನಿರ್ಣಯ ಕೈಗೊಂಡ ಪಾಣಾಜೆ ಪಂಚಾಯತ್

ಪಾಣಾಜೆ : ಸಾರ್ವಜನಿಕರು ಸಾಕುಪ್ರಾಣಿಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ ಸಾಕಬೇಕು. ಬೀದಿಗೆ ಬಿಟ್ಟರೆ ಕಟ್ಟಿ ಹಾಕಿ ದಂಡ ವಿಧಿಸಲಾಗುವುದು, 3 ದಿನದಲ್ಲಿ ಬಿಡಿಸಿಕೊಂಡು ಹೋಗದಿದ್ದಲ್ಲಿ ಸಾರ್ವಜನಿಕ ಏಲಂ ನಡೆಸಲಾಗುವುದು. ಬೀದಿ ಸ್ವಚ್ಛತೆಯ ವಿಚಾರದಲ್ಲಿ ಪಾಣಾಜೆ ಗ್ರಾಮ‌ ಪಂಚಾಯತ್ ಈ ರೀತಿಯ ಖಡಕ್ ನಿರ್ಣಯ ಕೈಗೊಂಡಿದೆ.

 


ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಅಧ್ಯಕ್ಷತೆಯಲ್ಲಿ ಜು. 14 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅರ್ಲಪದವು ಪ್ರಯಾಣಿಕರ ತಂಗುದಾಣ, ಶಾಲಾ ವಠಾರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸಾಕು ಪ್ರಾಣಿಗಳಿಂದ ಗಲೀಜು, ಪರಿಸರ ಮಾಲಿನ್ಯ ವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ವಾಹನ ಚಾಲಕರಿಗೆ ತೊಂದರೆ ಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿ ಗಂಭೀರ ಚರ್ಚೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿಗಳು ಕಂಡು ಬಂದರೆ ಪಂಚಾಯತ್ ನಲ್ಲಿ ಕಟ್ಟಿಹಾಕಲಾಗುವುದು. ಮಾಲಿಕರು ರೂಪಾಯಿ 1000 ದಂಡ ಕಟ್ಟಿ ತೆಗೆದುಕೊಂಡು ಹೋಗುವುದು. ಮೂರು ದಿನಗಳಲ್ಲಿ ಕೊಂಡು ಹೋಗದೆ ಇದ್ದರೆ ಏಲಂ ಮಾಡುವುದಾಗಿ ನಿರ್ಣಯಿಸಲಾಯಿತು.

ಜುಲೈ 18 ವಾರ್ಡ್ ಸಭೆ, 21 ಗ್ರಾಮ ಸಭೆ
ಜು. 18ರಂದು ಪಂಚಾಯಿತಿ ಸಭಾಂಗಣದಲ್ಲಿ ನಾಲ್ಕು ವಾರ್ಡಗಳ ಸಭೆ ಮತ್ತು ಗ್ರಾಮ ಸಭೆಯು ಜು. 21ರಂದು ನಡೆಸುವುದೆಂದು ತೀರ್ಮಾನಿಸಲಾಯಿತು. ಗ್ರಾಮದ ಪರಾರಿ ಮತ್ತು ಕೊಂದಲಡ್ಕ ಪರಿಸರದ ವಿಕಲಚೇತನರ ಶೀನಪ್ಪ ರೈಯವರ ಮನೆ ಸಂಪರ್ಕ ರಸ್ತೆಯ ತುರ್ತು ದುರಸ್ತಿಗೆ, ಪಾಣಾಜೆ ಗ್ರಾಮದ ಅರ್ಧಮೂಲೆ -ಕಾಟುಕುಕ್ಕೆ ಜಿಲ್ಲಾ ಪಂಚಾಯತ್ ರಸ್ತೆಯ ಮರು ಡಾಮರೀಕರಣಕ್ಕಾಗಿ ಶಾಸಕರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಮನೆ ಕುಸಿತ, ಬಾವಿ ಕುಸಿತ, ಮರ ಬಿದ್ದು ಹಾನಿ, ಗುಡ್ಡ ಜರಿತದಂತಹ ಪ್ರಾಕೃತಿಕ ವಿಕೋಪ ನಷ್ಟ ಸಂಭವಿಸಿದ್ದು ಅಪಾರ ನಷ್ಟಗಳುಂಟಾಗಿವೆ. ಈ ಬಗ್ಗೆ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಮಾಡುವುದೆಂದು ನಿರ್ಣಯಿಸಲಾಯಿತು.
ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಮೈಮುನತ್ತುಲ್ ಮೆಹ್ರಾ , ವಿಮಲ, ಜಯಶ್ರೀ, ಸುಲೋಚನಾ, ನಾರಾಯಣ ನಾಯಕ್, ಮೋಹನ ನಾಯ್ಕ, ಕೃಷ್ಣಪ್ಪ ಪೂಜಾರಿ, ಸುಭಾಸ್ ರೈ ಚಂಬರಕಟ್ಟ ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ವಂದಿಸಿದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here